ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ತೀರ್ಪು ನೀಡಿದ ಮದ್ರಾಸ್‌ ಹೈಕೋರ್ಟ್‌

18 ಬಂಡಾಯ ಶಾಸಕರ ಅನರ್ಹತೆ ಪ್ರಕರಣ
Last Updated 14 ಜೂನ್ 2018, 19:24 IST
ಅಕ್ಷರ ಗಾತ್ರ

ಚೆನ್ನೈ: ಎಐಎಡಿಎಂಕೆಯ 18 ಬಂಡಾಯ ಶಾಸಕರ ಅನರ್ಹತೆ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್ ದ್ವಿಸದಸ್ಯ ಪೀಠ ಗುರುವಾರ ಭಿನ್ನ ತೀರ್ಪು ನೀಡಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ, ಕೋರ್ಟ್‌ ತೀರ್ಪಿನಿಂದ ನಿರಾಳವಾಗಿದೆ.

ವಿಧಾನಸಭೆ ಸ್ಪೀಕರ್‌ ಪಿ.ಧನಪಾಲ್‌ ಅವರು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ್ದರು. ಸ್ಪೀಕರ್‌ ತೀರ್ಮಾನವನ್ನು ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಎತ್ತಿಹಿಡಿದರು. ಆದರೆ, ಮತ್ತೊಬ್ಬ ನ್ಯಾಯಮೂರ್ತಿ ಎಂ.ಸುಂದರ್‌ ಅವರು ಸ್ಪೀಕರ್‌ ತೀರ್ಪು ಒಪ್ಪದೆ, ವಜಾಗೊಳಿಸಿದರು.

ಇಬ್ಬರು ನ್ಯಾಯಾಧೀಶರು ಭಿನ್ನ ತೀರ್ಪು ನೀಡಿದ್ದರಿಂದ ವಿಚಾರಣೆಯನ್ನು ಮೂರನೇ ನ್ಯಾಯಮೂರ್ತಿಗೆ ವರ್ಗಾವಣೆ ಮಾಡಲಾಯಿತು.

ಪ್ರಕರಣದ ಹಿನ್ನೆಲೆ: ಜೈಲು ಶಿಕ್ಷೆ ಅನುಭವಿಸುತ್ತಿರುವ ವಿ.ಕೆ.ಶಶಿಕಲಾ ಮತ್ತು ಅವರ ಸೋದರಳಿಯ ಟಿ.ಟಿ.ವಿ.ದಿನಕರನ್ ಅವರಿಗೆ ನಿಷ್ಠರಾಗಿದ್ದ 18 ಶಾಸಕರು ಮುಖ್ಯಮಂತ್ರಿ ಪಳನಿಸ್ವಾಮಿಗೆ ನೀಡಿದ್ದ ಬೆಂಬಲವನ್ನು 2017ರ ಆಗಸ್ಟ್‌ 22ರಂದು ಹಿಂತೆಗೆದುಕೊಂಡಿದ್ದರು.

ಬಂಡಾಯ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಎಐಎಡಿಎಂಕೆ ಪಕ್ಷದ ಮುಖ್ಯಸಚೇತಕ ಎಸ್‌.ರಾಜೇಂದಿರನ್‌ ಅವರು ವಿಧಾನಸಭೆ ಸ್ಪೀಕರ್‌ಗೆ ದೂರು ನೀಡಿದ್ದರು. ದೂರು ಆಧರಿಸಿ ಸ್ಪೀಕರ್‌ ಪಿ.ಧನಪಾಲ್‌, ಸೆಪ್ಟೆಂಬರ್‌ನಲ್ಲಿ ಎಲ್ಲ 18 ಶಾಸಕರನ್ನು ಅನರ್ಹಗೊಳಿಸಿದ್ದರು.

**

ಮೂರನೇ ನ್ಯಾಯಮೂರ್ತಿಗೆ ಹೊಣೆ

ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್‌ ಅವರು ಬಂಡಾಯ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆ ಇದೆ.

‘ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಮೂರ್ತಿಯೊಬ್ಬರು ಹೊಸದಾಗಿ ನಡೆಸಿ, ತೀರ್ಮಾನಿಸಲಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಪ್ರಕಟಿಸಿದರು.

ಮದ್ರಾಸ್‌ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವವರಲ್ಲಿ ಕರ್ನಾಟಕ ಮೂಲದ ಹುಲುವಾಡಿ ಜಿ.ರಮೇಶ್‌ ಅವರು ಹಿರಿಯ ನ್ಯಾಯಮೂರ್ತಿ ಎನಿಸಿದ್ದಾರೆ.

**

ಈ ಪ್ರಕರಣದಲ್ಲಿ ಮೂರನೇ ನ್ಯಾಯಾಧೀಶರು ಹೊಸದಾಗಿ ವಿಚಾರಣೆ ಆರಂಭಿಸಬೇಕಾದ ಅಗತ್ಯವಿಲ್ಲ. ಒಂದು ತಿಂಗಳಲ್ಲಿ ತೀರ್ಪು ನೀಡಬಹುದು

–ಟಿ.ಎನ್‌.ವಲ್ಲಿನಾಯಗಂ, ವಕೀಲ

**

ಅಂಕಿ ಅಂಶ (ಕಲಾವಿದರಿಂದ ಪಟ್ಟಿ ಮಾಡಿಸಲು) / ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ

ಪಕ್ಷ / ಶಾಸಕರು

ಎಐಎಡಿಎಂಕೆ; 116

ಡಿಎಂಕೆ; 89

ಕಾಂಗ್ರೆಸ್‌; 8

ಐಯುಎಂಎಲ್‌; 1

ಸ್ಪೀಕರ್‌; 1

ಎಎಂಎಂಕೆ; 1

ಅನರ್ಹ ಶಾಸಕರು; 18

ಒಟ್ಟು; 234

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT