ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಿಯ ಕೌಶಲಕ್ಕೆ ಪರಾಕ್‌

Last Updated 5 ಮಾರ್ಚ್ 2019, 20:00 IST
ಅಕ್ಷರ ಗಾತ್ರ

‘ಉರಿ: ದಿ ಸರ್ಜಿಕಲ್ ಸ್ಟ್ರೈಕ್‌’ ಚಿತ್ರದ ಶಕ್ತಿ ಏನು ಎಂದು ಕೇಳಿದರೆ ವಿಕಿ ಕೌಶಲ್‌ ಎಂದು ಅನಾಯಾಸವಾಗಿ ಹೇಳಬಹುದು.

ಸರ್ಜಿಕಲ್‌ ಸ್ಟ್ರೈಕ್‌ ಎಂಬ ಮಿಂಚಿನ ಕಾರ್ಯಾಚರಣೆಯನ್ನು ಗಡಿಭಾಗದಲ್ಲಿ ಖುದ್ದು ನೋಡುತ್ತಿದ್ದೇವೆ ಎಂಬ ಭಾವ ನೋಡುಗರಲ್ಲಿ ಬರುತ್ತದೆ.ಇದರಲ್ಲಿ ತಾಂತ್ರಿಕ ಅಂಶಗಳ ಪಾಲು ಇದ್ದರೂ ವಿಕಿಯ ಆವೇಶಭರಿತ ನಟನೆಯೇ ಅಂತಹ ಚಿತ್ರಣವನ್ನು ನೋಡುಗರಲ್ಲಿ ಕಟ್ಟಿಕೊಡುತ್ತದೆ.

ವಿಕಿಯ ಕೌಶಲಪೂರ್ಣ ನಟನೆ, ಪಾತ್ರದ ಒಳಹೊಗುವ ರೀತಿ, ವೃತ್ತಿಪರತೆಯ ಬಗ್ಗೆ ಬಾಲಿವುಡ್‌ ಮತ್ತೊಮ್ಮೆ ಮಾತನಾಡುತ್ತಿದೆ. ಈ ಚರ್ಚೆ ಶುರುವಾಗಿರುವುದು ನಿರ್ದೇಶಕ ಶೂಜಿತ್‌ ಸರ್ಕಾರ್‌ ಅವರಿಂದ.

ಶೂಜಿತ್‌ ನಿರ್ದೇಶನದ ‘ಉಧಮ್‌ ಸಿಂಗ್‌’ ಮುಂದಿನ ತಿಂಗಳು ಸೆಟ್ಟೇರಲಿದೆ. ಹೆಸರಾಂತ ನಟ ಇರ್ಫಾನ್‌ ಖಾನ್‌ ಅವರು ಉಧಮ್‌ ಸಿಂಗ್‌ ಪಾತ್ರಕ್ಕಾಗಿ ಸಹಿ ಹಾಕಿಯೂ ಆಗಿತ್ತು. ಆದರೆ ಶೂಜಿತ್ ಈಗ ಮನಸ್ಸು ಬದಲಾಯಿಸಿದ್ದಾರೆ. ತಮ್ಮ ಚಿತ್ರದ ನಾಯಕನಾಗಲು ಇರ್ಫಾನ್‌ಗಿಂತ ವಿಕಿಯೇ ಹೆಚ್ಚು ಸೂಕ್ತ ಎಂಬುದು ಅವರ ನಿಲುವು. ತಡಮಾಡದೇ ಅವರು ವಿಕಿಯ ಕಾಲ್‌ಶೀಟ್‌ ಕೂಡಾ ಪಡೆದಿದ್ದಾರೆ.

‘ವಿಕಿ ಅವರಂತಹ ನಟರು ನನಗೆ ಬೇಕು. ಅವರ ಮನೋಬಲ, ಪಾತ್ರವನ್ನು ಆವಾಹಿಸಿಕೊಳ್ಳುವ ರೀತಿ, ವೃತ್ತಿಪರತೆ ನನಗೆ ತುಂಬಾ ಹಿಡಿಸಿತು. ಹಾಗಾಗಿ ಈ ಬದಲಾವಣೆ ಮಾಡಿಕೊಂಡೆ’ ಎಂಬುದು ಶೂಜಿತ್‌ ಕೊಡುವ ಸಮರ್ಥನೆ.

‘ಉಧಮ್‌ ಸಿಂಗ್’ ಚಿತ್ರದ ಕತೆಯೂ ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುವಂತಹುದು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ರಾಷ್ಟ್ರೀಯ ನಾಯಕರನ್ನು ನೆನಪಿಸಿಕೊಡುವ ಕಥಾವಸ್ತುವನ್ನು ‘ಉಧಮ್‌ ಸಿಂಗ್‌’ ಒಳಗೊಂಡಿದೆ. ಉಧಮ್‌ ಸಿಂಗ್‌, ಪಂಜಾಬ್‌ ಮೂಲದ ಕ್ರಾಂತಿಕಾರಿ ನಾಯಕ. 1940ರಲ್ಲಿ ಪಂಜಾಬ್‌ನಲ್ಲಿ ಬ್ರಿಟಿಷ್‌ನ ಲೆಫ್ಟಿನೆಂಟ್‌ ಗವರ್ನರ್‌ ಆಗಿದ್ದ ಮೈಕೆಲ್‌ ಡಾಯರ್‌ ಅವರನ್ನು ಹತ್ಯೆ ಮಾಡಿಜಲಿಯನ್‌ವಾಲಾಭಾಗ್‌ ನರಮೇಧಕ್ಕೆ ಪ್ರತೀಕಾರ ತೀರಿಸಿಕೊಂಡವನು ಉಧಮ್‌. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಕತೆ ಮತ್ತು ಪಾತ್ರಕ್ಕೆ ಅದೇ ಪ್ರಾಂತ್ಯದವರಾದ ವಿಕಿ ಕೌಶಲ್‌ ನೆಲದ ಸೊಗಡಿನೊಂದಿಗೆ ಪಾತ್ರಕ್ಕೆ ಜೀವ ತುಂಬಬಲ್ಲರು ಎಂಬುದು ಶೂಜಿತ್‌ ವಿಶ್ವಾಸ.

ವಿಕಿಯ ಬಹುದೊಡ್ಡ ಶಕ್ತಿ ನಟನಾ ಕೌಶಲ. ವಿಕಿ ನಾಯಕನಟರಾಗಿರುವ ಚಿತ್ರಕ್ಕೆ ಹೂಡಿದ ಬಂಡವಾಳವನ್ನು ವಾಪಸ್‌ ಪಡೆಯಲು ಯಾವುದೇ ಆತಂಕ ಪಡಬೇಕಿಲ್ಲ ಎಂಬ ವಿಶ್ವಾಸ ನಿರ್ಮಾಪಕರಲ್ಲಿದೆ. ಉಧಮ್‌ ಸಿಂಗ್‌ ಚಿತ್ರಕ್ಕೆ ಬಂಡವಾಳ ಹೂಡಲಿರುವ ರಾನಿ ಲಾಹಿರಿ ಅವರ ಅಭಿಪ್ರಾಯವೂ ವಿಭಿನ್ನವಾಗಿಲ್ಲ.ಒಬ್ಬ ನಟನ ಬಗ್ಗೆ ನಿರ್ಮಾಪಕರು, ನಿರ್ದೇಶಕರು ಇಂತಹ ಅಭಿಪ್ರಾಯ ಹೊಂದುವುದೆಂದರೆ ಯಶಸ್ಸಿನ ಹಾದಿಯಲ್ಲಿ ದಾಪುಗಾಲು ಎಂದೇ ಅರ್ಥ.

‘ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌’ನ ಅಭೂತ ಯಶಸ್ಸಿನ ನಂತರ ಕಾಲ್‌ಶೀಟ್‌ ಕೇಳಿ ಕರೆ ಮಾಡುವ ನಿರ್ಮಾಪಕರ ಸಂಖ್ಯೆ ಹೆಚ್ಚುತ್ತಿದೆಯಂತೆ. ಕೆಲವು ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಉಮೇದು ವಿಕಿಗೂ ಇದೆ. ಶೂಜಿತ್‌ ಸರ್ಕಾರ್‌, ವಿಕಿ ಪಟ್ಟಿಯಲ್ಲಿದ್ದ ನಿರ್ದೇಶಕ. ಶೂಜಿತ್‌ ಸಿನಿಮಾದ ವಸ್ತು ಮತ್ತು ಕತೆಯನ್ನು ದುಡಿಸಿಕೊಳ್ಳುವ ರೀತಿ ಅವರಿಗಿಷ್ಟ. ಹಾಗಾಗಿ ಇರ್ಫಾನ್‌ ಖಾನ್‌ ಅವರಿಂದ ಕಿತ್ತು ತಮ್ಮ ಕೈಗಿಟ್ಟ ಕಾಲ್‌ಶೀಟ್‌ ಬಗ್ಗೆ ವೃತ್ತಿಪರ ಧೋರಣೆಯನ್ನೇ ವಿಕಿ ಕೂಡಾ ವ್ಯಕ್ತಪಡಿಸಿದ್ದಾರೆ. ಅಂದರೆ, ತಕ್ಷಣ ಕಾಲ್‌ಶೀಟ್‌ಗೆ ಸಹಿ ಹಾಕಿಬಿಟ್ಟಿದ್ದಾರೆ!

ಒಂದೇ ಬಗೆಯ ಪಾತ್ರಗಳನ್ನು ಮಾಡುವುದನ್ನು ವಿಕಿ ಇಷ್ಟಪಡುವುದಿಲ್ಲ. ಪಾತ್ರ ಮತ್ತು ಕಥೆ ವಿಭಿನ್ನವಾಗಿದ್ದಾಗಲೇ ಪ್ರಯೋಗಶೀಲರಾಗಿರಲು ಸಾಧ್ಯ ಎಂಬುದು ಅವರಿಗೆ ಗೊತ್ತು. ಪ್ರತಿ ಚಿತ್ರ ಮತ್ತು ಪಾತ್ರವನ್ನೂ ಅನನುಭವಿ ನಟನಷ್ಟೇ ಮುಗ್ಧತೆಯಿಂದ ಸ್ವೀಕರಿಸಿ, ಪ್ರಬುದ್ಧತೆಯಿಂದ ನಟಿಸುವುದು ವಿಕಿ ಸ್ಟೈಲ್‌.ಹೀಗಿರುವಾಗ, ವಿಕಿಯ ನಟನಾ ಕೌಶಲಕ್ಕೆ ನಿರ್ದೇಶಕರು, ನಿರ್ಮಾಪಕರು ಪರಾಕ್‌ ಎಂದಿರುವುದರಲ್ಲಿ ಹೆಚ್ಚುಗಾರಿಕೆಯೇನೂ ಇಲ್ಲ ಬಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT