ಗುರುವಾರ , ಡಿಸೆಂಬರ್ 5, 2019
20 °C

ದಕ್ಷಿಣದ ತಿರಸ್ಕಾರ ನೋವುಂಡವಿದ್ಯಾ ಬಾಲನ್‌

Published:
Updated:

ನಟಿ ವಿದ್ಯಾಬಾಲನ್‌ ಅವರ ಬಾಲಿವುಡ್‌ ಪಯಣ ಹೂವಿನ ಹಾಸಿಗೆಯಲ್ಲ. ಹಲವು ಬ್ಲಾಕ್‌ ಬಸ್ಟರ್‌ ಸಿನಿಮಾಗಳನ್ನು ಅವರು ನೀಡಿದ್ದರೂ, ವೃತ್ತಿಜೀವನದ ಆರಂಭದಲ್ಲಿ ಅವರು ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದ್ದರು. ತಮ್ಮ 14 ವರ್ಷದ ವೃತ್ತಿಪಯಣದಲ್ಲಿ ಅವರು ತಾವು ಅನುಭವಿಸಿದ ಕಹಿಘಟನೆಗಳ ಬಗ್ಗೆ ಸಂದರ್ಶನವೊಂದರಲ್ಲಿ ಇತ್ತೀಚಿಗೆ ಮಾತನಾಡಿದ್ದಾರೆ. 

2005ರಲ್ಲಿ ವಿದ್ಯಾಬಾಲನ್‌ ನಟನೆಯ ‘ಪರಿಣೀತಾ’ ಹಿಟ್‌ ಆದ ನಂತರ ಅವರಿಗೆ ಒಂದರ ಹಿಂದೆ ಒಂದರಂತೆ ಅವಕಾಶಗಳು ಬರತೊಡಗಿದವು. 2017ರಲ್ಲಿ ಬಿಡುಗಡೆಯಾದ ‘ತುಮ್ಹಾರಿ ಸುಲು’ ಚಿತ್ರವು ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತು. ಈಗ ಆಗಸ್ಟ್‌ 15ರಂದು ಬಿಡುಗಡೆಯಾಗಿರುವ ‘ಮಿಷನ್‌ ಮಂಗಲ್‌’ ಸಿನಿಮಾವು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸದ್ಯ ಅವರ ಕೈಯಲ್ಲಿ ಬಾಲಿವುಡ್‌ ಸಿನಿಮಾಗಳಲ್ಲದೇ, ಎರಡು–ಮೂರು ದಕ್ಷಿಣ ಭಾರತದ ಸಿನಿಮಾಗಳಿವೆ.

‘ಆರಂಭದಲ್ಲಿ ನಾನು ಅನೇಕ ದಕ್ಷಿಣ ಭಾರತದ ಸಿನಿಮಾಗಳಿಂದ ತಿರಸ್ಕೃತಗೊಂಡೆ. ನಾನು ನಟಿಯಾಗಿ ಆಯ್ಕೆಯಾದ ಪಾತ್ರಕ್ಕೆ ಬಳಿಕ ಮತ್ತೊಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಒಂದು ತಮಿಳು ಚಿತ್ರಕ್ಕೆ ನಾನು ಆಯ್ಕೆಯಾಗಿದ್ದೆ. ಆದರೆ ಮತ್ತೆ ಗೊತ್ತಾಯಿತು ಆ ಚಿತ್ರದ ನಾಯಕಿ ನಾನಲ್ಲ ಎಂದು. ನಾವು ನಿರ್ಮಾಪಕದ ಕಚೇರಿಗೆ ಹೋದೆವು. ಅವರು ಸಿನಿಮಾದ ಕ್ಲಿಪ್ಪಿಂಗ್‌ ತೋರಿಸಿ, ‘ಅವಳನ್ನು ಸರಿಯಾಗಿ ನೋಡು, ಅವಳು ನಾಯಕಿಯಂತೆ ಕಾಣುತ್ತಾಳಾ?. ಆದರೆ ನಿರ್ದೇಶಕರು ಒತ್ತಾಯ ಮಾಡಿದರು’ ಎಂದು ಅವರು ಹೇಳಿದರು’. ಹೀಗೆ ತಮಿಳು ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅನುಭವಿಸಿದ ಕೆಟ್ಟ ಘಟನೆಗಳ ಮೆಲುಕು ಹಾಕಿದ್ದಾರೆ. 

‘ಆಗ ಸಿನಿಮಾದಿಂದ ತಿರಸ್ಕೃತಗೊಂಡಗಲೆಲ್ಲಾ ನನಗೆ ನನ್ನ ಬಗ್ಗೆಯೇ ಕೀಳರಿಮೆ ಹುಟ್ಟುತ್ತಿತ್ತು. ನಾನು ನನ್ನ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಲೇ ಇರಲಿಲ್ಲ. ನೋಡಿದಾಗಲೆಲ್ಲಾ ನಾನು ಕೆಟ್ಟದಾಗಿದ್ದೀನಿ ಎನಿಸುತ್ತಿತ್ತು. ಅನೇಕ ವರ್ಷಗಳ ಕಾಲ ಆ ನಿರ್ದೇಶಕನನ್ನು ನಾನು ಕ್ಷಮಿಸಿರಲಿಲ್ಲ. ಆದರೆ ಈಗ ನನ್ನನ್ನು ನಾನು ಇರುವ ಹಾಗೇ ಸ್ವೀಕರಿಸಲು ಸಾಧ್ಯವಾಗಿರುವುದು ಅದರಿಂದಲೇ ಎಂಬುದು ನನಗೆ ಮನವರಿಕೆಯಾಗಿದೆ’ ಎಂದು ಹೇಳಿಕೊಂಡಿದ್ದಾರೆ. 

‘ಇನ್ನೊಂದು ತಮಿಳು ಚಿತ್ರಕ್ಕೆ ನಾನು ಆಯ್ಕೆಯಾಗಿದ್ದೆ. ಒಂದು ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಅಲ್ಲಿನ ಪೋಲಿ ಜೋಕುಗಳ ವಾತಾವರಣದಲ್ಲಿ ಕೆಲಸ ಮಾಡಲಾಗಲಿಲ್ಲ. ಆ ಸಿನಿಮಾದಲ್ಲಿ ನಟಿಸಲ್ಲ ಎಂದು ಬಂದೆ. ಅವರು ನನಗೆ ಲೀಗಲ್‌ ನೋಟಿಸ್‌ ಕಳುಹಿಸಿದರು. ಇದಲ್ಲದೇ ಕಾಸ್ಟಿಂಗ್ ಕೌಚ್‌ನಿಂದಾಗಿಯೂ ನಾನು ಹಲವು ದೊಡ್ಡ ದೊಡ್ಡ ಚಿತ್ರಗಳನ್ನು ನಿರಾಕರಿಸಬೇಕಾಯಿತು’ ಎಂದೂ ಹೇಳಿಕೊಂಡಿದ್ದಾರೆ.

‘ಚೆನ್ನೈನಲ್ಲಿ ನಿರ್ದೇಶಕರೊಬ್ಬರು ನನ್ನನ್ನು ಭೇಟಿ ಮಾಡಲು ಬಂದರು. ಆಗ ನಾನು ಕಾಫಿ ಶಾಪ್‌ನಲ್ಲಿ ಕುಳಿತು ಮಾತನಾಡೋಣ ಎಂದೆ. ಅದಕ್ಕೆ ಅವರು ರೂಮ್‌ಗೆ ಹೋಗೋಣ ಎಂದು ಒತ್ತಾಯ ಮಾಡಿದರು. ನಾನು ರೂಮಿನ ಬಾಗಿಲನ್ನು ತೆರೆದಿಟ್ಟು ಮಾತನಾಡಿ ಎಂದೆ. ಐದು ನಿಮಿಷದ ಬಳಿಕ ಅವರು ಅಲ್ಲಿಂದ ಎದ್ದು ಹೋದರು’ ಎನ್ನುವ ಪ್ರಸಂಗವನ್ನೂ ಬಹಿರಂಗ ಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು