ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಟರ್ ಸಿನಿಮಾ ವಿಮರ್ಶೆ: ಹೆದ್ದಾರಿಯಂಥ ಕಥನದಲ್ಲಿ ರಂಜನೆಯ ಅನಗತ್ಯ ದಿಬ್ಬ

Last Updated 14 ಜನವರಿ 2021, 9:21 IST
ಅಕ್ಷರ ಗಾತ್ರ

ಚಿತ್ರ: ಮಾಸ್ಟರ್ (ತಮಿಳು)
ನಿರ್ಮಾಣ: ಕ್ಸೇವಿಯರ್ ಬ್ರಿಟೊ
ನಿರ್ದೇಶನ: ಲೋಕೇಶ್ ಕನಕರಾಜ್
ತಾರಾಗಣ: ವಿಜಯ್, ವಿಜಯ್ ಸೇತುಪತಿ, ಅರ್ಜುನ್ ದಾಸ್, ಮಾಳವಿಕಾ ಮೋಹನನ್, ಆಂಡ್ರಿಯಾ ಜೆರೆಮಿಯಾ, ಗೌರಿ ಕಿಶನ್.

***

ಕತ್ತಲ ಬದುಕಿನ ಥ್ರಿಲ್ಲರ್‌ಗಳನ್ನು ರೋಮಾಂಚನಕಾರಿಯಾಗಿ ಹೇಳುವ ಮಾರ್ಗವನ್ನು ಆರಿಸಿಕೊಂಡಿರುವ ನಿರ್ದೇಶಕ ಲೋಕೇಶ್ ಕನಕರಾಜ್ಅವರ ಹೊಸ ಚಿತ್ರಕೃತಿಯನ್ನು ಹಿಂದಿನ ಅವರದ್ದಕ್ಕೇ ಹೋಲಿಸುವುದು ಸಹಜ. ‘ಖೈದಿ’ ತಮಿಳು ಚಿತ್ರದಲ್ಲಿ ಗಟ್ಟಿ ಥ್ರಿಲ್ಲರ್‌ ಒಂದನ್ನು ಅವರು ಕಟ್ಟಿಕೊಟ್ಟಿದ್ದರು. ಅದರ ತುಲನೆಯಲ್ಲಿ ‘ಮಾಸ್ಟರ್’ ಕೆಳಗೆ ನಿಲ್ಲುತ್ತದೆ. ಸ್ಟಾರ್‌ಗಿರಿಯ ಹಂಗು ಇರುವ ನಟ ವಿಜಯ್ ಅಭಿಮಾನಿಗಳನ್ನು ಮೆಚ್ಚಿಸಲೋ ಎಂಬಂತೆ ಚಿತ್ರಕಥೆಯಲ್ಲಿ ಅಲ್ಲಲ್ಲಿ ಮಾಡಿಕೊಂಡಿರುವ ಅನುಕೂಲಸಿಂಧುತ್ವವೇ ಇದಕ್ಕೆ ಕಾರಣ.

ಬಾಲಾಪರಾಧಿಯೊಬ್ಬ ಮುಂದೆ ತಾನೇ ರಕ್ಕಸನಾಗುವ ಬೆರಗಿನ ಒನ್‌ಲೈನರ್ ಈ ಸಿನಿಮಾದ್ದು. ಸರಿದಾರಿಗೆ ಬರಬಹುದಾದ ಬಾಲಾಪರಾಧಿಗಳನ್ನು ಅವನು ಅಪರಾಧಿಗಳಾಗಿಸುತ್ತಲೇ ತನ್ನ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾನೆ. ಅವನನ್ನು ಮಟ್ಟಹಾಕಿ, ಬಾಲಾಪರಾಧಿಗಳಿಗೆ ಒಳಿತಿನ ಬೆಳಕನ್ನು ಕಾಣಿಸುವ ಪ್ರೊಫೆಸರ್ ಅನ್ನು ಲೋಕೇಶ್ ಕನಕರಾಜ್ ನಾಯಕನನ್ನಾಗಿಸಿದ್ದಾರೆ. ನಾಯಕ ವಿಜಯ್ ಆಗಿರುವುದರಿಂದ ಪ್ರಜ್ಞಾಪೂರ್ವಕವಾಗಿ ಅಲ್ಲಲ್ಲಿ ಚಿತ್ರವನ್ನು ‘ಮಾಸ್’ ಆಗಿಸುವ ದೃಶ್ಯಗಳನ್ನು ತುರುಕಲಾಗಿದೆ. ಅವುಗಳಲ್ಲಿ ಬಹುತೇಕವು ಅಸಹಜವೆನ್ನಿಸುತ್ತವೆ. ನಾಯಕನಿಗಿಂತ ಪ್ರತಿನಾಯಕನ ಪಾತ್ರವೇ ಗಟ್ಟಿಯಾಗಿದೆ. ಅದರ ‘ಬರಹದ ಗ್ರಾಫ್’ನಲ್ಲಿನ ಹಿಡಿತ ನಾಯಕನ ಪಾತ್ರದ ಕಟೆಯುವಿಕೆಯಲ್ಲಿ ಇಲ್ಲ. ಪ್ರೊಫೆಸರ್ ಒಬ್ಬ ಮದ್ಯವ್ಯಸನಿಯಾಗಿ ಅಸಡಾಬಸಡಾ ರೀತಿಯಲ್ಲಿ ವರ್ತಿಸುವುದನ್ನು, ಟಪ್ಪಾಂಗುಚಿ ಹಾಕುತ್ತಾ ರಂಜಿಸುವುದನ್ನು ತಮಾಷೆಯಾಗಿಯೇ ಸ್ವೀಕರಿಸಬೇಕು.

ಸಿನಿಮಾ ಪ್ರಾರಂಭವಾಗುವುದು ಪ್ರತಿನಾಯಕನ ಪಾತ್ರದ ಕಟ್ಟುವಿಕೆಯ ಮೂಲಕ. ರಕ್ಕಸನೊಬ್ಬನ ಉಗಮಕ್ಕೆ ನಿರ್ದೇಶಕರು ಹಾಕಿರುವ ವೇದಿಕೆ ಆಸಕ್ತಿಕರವಾಗಿದೆ. ಅದೇ ನಾಯಕನ ಪರಿಚಯ ಮಾಡಿಸಲು ಅವರು ಆಯ್ಕೆ ಮಾಡಿಕೊಂಡಿರುವ ಮಾರ್ಗದಲ್ಲಿ ಕಲ್ಲುಮುಳ್ಳುಗಳೇ ಹೆಚ್ಚು. ಕುಣಿತಕ್ಕಾಗಿ ಕುಣಿತ, ಹೊಡೆದಾಟಕ್ಕಾಗಿ ಹೊಡೆದಾಟ ಎನ್ನುವ ಆ ಮಾರ್ಗ ಲೋಕೇಶ್ ಕನಕರಾಜ್ ತರಹದ ನಿರ್ದೇಶಕರ ಹಿಡತವನ್ನು ಸಡಿಲಗೊಳಿಸುತ್ತವೆ. ಎರಡನೇ ಅರ್ಧದಲ್ಲಿ ಮೆಲೋಡ್ರಾಮಾಗಳ ಜತೆಗೆ ಚಿತ್ರ ಸುದೀರ್ಘವಾಗುತ್ತಾ ಸಾಗುತ್ತದೆ. ಅಂತ್ಯ ರೋಚಕವಾಗಿದೆ.

ಅನಿರುದ್ಧ್ ರವಿಚಂದರ್ ಸ್ವರ ಸಂಯೋಜನೆಯ ಹಿನ್ನೆಲೆ ಸಂಗೀತ ಚಿತ್ರಕ್ಕೆ ಇಂಧನವಾಗಿ ಒದಗಿಬಂದಿದೆ. ಸತ್ಯನ್ ಸೂರ್ಯನ್ ಕ್ಯಾಮೆರಾ ಕೆಲಸವೂ ಗಮನಾರ್ಹ. ಅಭಿನಯದಲ್ಲಿ ವಿಜಯ್ ಸೇತುಪತಿ ಹುರಿದು ಮುಕ್ಕಿದ್ದಾರೆ. ಪ್ರತಿನಾಯಕನಾಗಿ ತಮ್ಮನ್ನು ತಾವು ಅನನ್ಯವಾಗಿ ಪ್ರಕಟಗೊಳಿಸುತ್ತಾ ತಣ್ಣಗಿನ ದನಿಯಲ್ಲೇ ಕುಹಕದ ಡೈಲಾಗ್‌ಗಳನ್ನು ಹೊಡೆಯುವ ಮೂಲಕ ಪಂಚ್ ಕೊಡುತ್ತಾರೆ. ಅವರ ನಯನಾಭಿನಯಕ್ಕೆ ಅವರೇ ಸಾಟಿ. ನಾಯಕ ವಿಜಯ್‌ಗೆ ಇರುವ ಮಿತಿ ಎಂಥದು ಎನ್ನುವುದೂ ಅವರ ಹೋಲಿಕೆಯಲ್ಲಿ ಸ್ಪಷ್ಟವಾಗಿಬಿಡುತ್ತದೆ. ವಿಜಯ್ ಎಂದಿನಂತೆ ತಮ್ಮ ಮನರಂಜನೆಯ ನೃತ್ಯ, ಹೊಡೆದಾಟದ ಬಿಂಬಗಳ ಮೂಲಕ ನೆನಪಿನಲ್ಲಿ ಉಳಿಯುತ್ತಾರಷ್ಟೆ. ನಾಯಕಿ ಮಾಳವಿಕಾ ಮೋಹನನ್ ಪಾತ್ರಕ್ಕಾಗಲೀ, ಆಂಡ್ರಿಯಾ ಪಾತ್ರಕ್ಕಾಗಲೀ ಹೆಚ್ಚೇನೂ ಕೆಲಸಗಳಿಲ್ಲ. ಬಾಲಾಪರಾಧಿಯ ಪಾತ್ರದಲ್ಲಿ ಅರ್ಜುನ್ ದಾಸ್ ತಮ್ಮ ಕಂಚಿನ ಕಂಠದಿಂದ ಹಿಡಿದಿಡುತ್ತಾರೆ.

ಹೆದ್ದಾರಿಯಂತೆ ಇರಬಹುದಾಗಿದ್ದ ಕಥನದಲ್ಲಿ ಅನಗತ್ಯ ರಂಜನೆಯ ಹಂಪುಗಳನ್ನು ಹಾಕಿರುವ ನಿರ್ದೇಶಕ ಲೋಕೇಶ್ ಕನಕರಾಜ್, ತಮ್ಮತನದಲ್ಲಿ ರಾಜಿಯಾಗಿರುವುದಕ್ಕೆ ಕೆಲವು ಉದಾಹರಣೆಗಳೂ ಚಿತ್ರದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT