ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದೊಂದಿಗೆ ನಾನು ಸದಾ ಕನೆಕ್ಟ್‌: ವಿಜಯ್ ರಾಘವೇಂದ್ರ

ಹುಬ್ಬಳ್ಳಿಯಲ್ಲಿ ‘ಚಿನ್ನಾರಿ ಮುತ್ತ’ ವಿಜಯ ರಾಘವೇಂದ್ರ
Last Updated 4 ಫೆಬ್ರುವರಿ 2020, 14:53 IST
ಅಕ್ಷರ ಗಾತ್ರ

ಬಹು ನಿರೀಕ್ಷಿತ ‘ಮಾಲ್ಗುಡಿ ಡೇಸ್’ ಚಿತ್ರದ ಪ್ರಚಾರಕ್ಕಾಗಿ ವಾಣಿಜ್ಯನಗರಿಗೆ ಬಂದಿದ್ದ ನಟ ವಿಜಯ ರಾಘವೇಂದ್ರ, ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಕುರಿತು ತಾವು ಹೊಂದಿರುವ ಅವಿನಾಭಾವ ಸಂಬಂಧದ ಕುರಿತು ‘ಮೆಟ್ರೊ’ ಜತೆ ಮಾತನಾಡಿದ್ದಾರೆ.

‘ಉತ್ತರ ಕರ್ನಾಟಕದೊಂದಿಗೆ ನಾನು ಚಿಕ್ಕಂದಿನಿಂದಲೂ ಕನೆಕ್ಟ್ ಆಗಿಯೇ ಇದ್ದೇನೆ...’ ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕದ ಕುರಿತು ಕೇಳಿದ್ದಕ್ಕೆ ನಟ ವಿಜಯ ರಾಘವೇಂದ್ರ ತಕ್ಷಣ ಪ್ರತಿಕ್ರಿಯಿಸಿದ್ದು ಹೀಗೆ.

1995ರಲ್ಲಿ ತೆರೆ ಕಂಡಿದ್ದ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಸಿನಿಮಾದಲ್ಲಿ ಬಾಲ ಪಂಚಾಕ್ಷರಿಯಾಗಿ ಕಾಣಿಸಿಕೊಂಡಿದ್ದ ಅವರು, 2016ರಲ್ಲಿ ಬಿಡುಗಡೆಯಾದ ‘ಶಿವಯೋಗಿ ಶ್ರೀ ಪುಟ್ಟಯ್ಯಜ್ಜ’ನಾಗಿಯೂ ಈ ಭಾಗದ ಜನರಿಗೆ ಚಿರಪರಿಚಿತ. ಹಾಗಾಗಿಯೇ, ಉತ್ತರ ಕರ್ನಾಟಕದೊಂದಿಗೆ ಅವರದು ಅವಿನಾಭಾವ ಸಂಬಂಧ.

‘‌ಚಿಕ್ಕಂದಿನಿಂದಲೂ ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕಕ್ಕೆ ಬರುತ್ತಲೇ ಇದ್ದೇನೆ. ಸವದತ್ತಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ್ದೇನೆ. ಆಗಿನಿಂದಲೂ ಈ ‘ಚಿನ್ನಾರಿ ಮುತ್ತ’ನನ್ನು ಇಲ್ಲಿನ ಜನ ಹರಿಸಿ ಪ್ರೀತಿಸುತ್ತಿದ್ದಾರೆ’ ಎಂದರು ವಿಜಯ ರಾಘವೇಂದ್ರ.

‘ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ‘ಸೇವಂತಿ ಸೇವಂತಿ’ ಸಿನಿಮಾಗೆ ಹುಬ್ಬಳ್ಳಿಯಲ್ಲಿ ಸಿಕ್ಕಷ್ಟು ಪ್ರತಿಕ್ರಿಯೆ ಬೇರೆಲ್ಲೂ ಸಿಗಲಿಲ್ಲ. ಚಿತ್ರದ ನಿಮಿತ್ತ ಹುಬ್ಬಳ್ಳಿಗೆ ಭೇಟಿ ನೀಡಿದ್ದಾಗ ಜನರು ತೋರಿದ್ದ ಪ್ರೀತಿ ಮರೆಯಲು ಸಾಧ್ಯವೇ ಇಲ್ಲ. ಉತ್ತರ ಕರ್ನಾಟಕದ ಸೊಗಡಿನ ‘ಕಲ್ಲರಳಿ ಹೂವಾಗಿ’, ‘ನನ್ನ ನಿನ್ನ ಪ್ರೇಮಕಥೆ’ ಚಿತ್ರಗಳನ್ನು ಇಲ್ಲಿಯವರು ನೋಡಿ ಹರಸಿದ್ದಾರೆ. ಹಾಡುಗಳನ್ನು ನಿಜವಾಗಿಯೂ ಹಿಟ್‌ ಮಾಡುವವರು ಈ ಭಾಗದ ಮಂದಿಯೇ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅತೀವ ನಿರೀಕ್ಷೆ ಇದೆ

‘ಮಾಲ್ಗುಡಿ ಡೇಸ್‌’ನಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿರುವ ವಿಜಯ ರಾಘವೇಂದ್ರ, ಈ ಸಿನಿಮಾದ ಬಗ್ಗೆ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾಗಿಯೇ, ಕಾಲಿಗೆ ಚಕ್ರ ಕಟ್ಟಿಕೊಂಡು ಊರೂರು ಸುತ್ತಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.

‘ಈ ಸಿನಿಮಾಗೆ ತಲೆ ಕೆಡಿಸಿಕೊಂಡು, ಪ್ರಚಾರಕ್ಕೆ ಓಡಾಡುತ್ತಿರುವಷ್ಟು ಬೇರಾವ ಸಿನಿಮಾಗಳಿಗೂ ಹೋಗಿಲ್ಲ. ಚಿತ್ರದ ತಿರುಳು ಹಾಗೂ ನನ್ನನ್ನು ನಾನು ಹೊಸ ಪ್ರಯೋಗಕ್ಕೆ ಒಡ್ಡಿಕೊಂಡಿರುವುದೇ ಇದಕ್ಕೆ ಕಾರಣ. ಚಿತ್ರದಲ್ಲಿ 70 ವರ್ಷದ ಸಾಹಿತಿ ಹಾಗೂ 16 ವರ್ಷದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ವೃದ್ಧನ ಪಾತ್ರಕ್ಕೆ ಮೇಕಪ್ ಮಾಡುವುದಕ್ಕೆ ಮೂರ್ನಾಲ್ಕು ಗಂಟೆ ಹಿಡಿಯುತ್ತಿತ್ತು. ಮತ್ತೆ ತೆಗೆಯಲು ಕನಿಷ್ಠ ಒಂದೂವರೆ ಗಂಟೆಯಾಗುತ್ತಿತ್ತು. ಇಷ್ಟೆಲ್ಲಾ ಸವಾಲುಗಳಿದ್ದರೂ, ಸಿನಿಮಾ ಶೂಟಿಂಗ್ ಒಂದು ರೀತಿಯ ಹಿತಕರ ಪಯಣವಾಗಿತ್ತು’ ಎಂದು ಹೇಳಿದರು.

‘ಸಾಹಿತಿ ಲಕ್ಷ್ಮಿನಾರಾಯಣ ಮಾಲ್ಗುಡಿ ಬರವಣಿಗೆ ನಿಲ್ಲಿಸಿದರು ಎಂಬ ಎಳೆಯೊಂದಿಗೆ ಆರಂಭವಾಗುವ ಕಥೆ, ಎಲ್ಲರೂ ಒಮ್ಮೆ ತಮ್ಮ ಬದುಕನ್ನು ಹಿಂತಿರುಗಿ ನೋಡುವಂತೆ ಮಾಡುತ್ತದೆ. ಬಾಲ್ಯದ ಚೆಲ್ಲಾಟ, ಹರೆಯದ ಕೀಟಲೆ, ಪ್ರೀತಿ–ಪ್ರೇಮ ಎಲ್ಲವೂ ಚಿತ್ರದಲ್ಲಿ ಮಿಳಿತಗೊಂಡಿದೆ. ತಂಗಾಳಿಯ ಅನುಭವ ನೀಡುವ ಸಿನಿಮಾ, ಕ್ಲೈಮ್ಯಾಕ್ಸ್‌ನಲ್ಲಿ ವೀಕ್ಷಕರ ಕಣ್ಣಿನಿಂದ ಸಂತಸದ ಕಣ್ಣಿರು ತರುತ್ತದೆ’ ಎಂದು ಚಿತ್ರದ ಕಥೆಯ ಬಗ್ಗೆ ಹಂಚಿಕೊಂಡರು.

ವಿಜಯ ರಾಘವೇಂದ್ರ ಅವರ ಮುಂದಿನ ಚಿತ್ರ ಹಾರರ್‌ ಕಥಾಹಂದರದ ‘3 ಬಿಎಚ್‌ಕೆ’. ಜತೆಗೆ, ಎರಡ್ಮೂರು ಪ್ರಾಜೆಕ್ಟ್‌ಗಳು ಚರ್ಚೆಯ ಹಂತದಲ್ಲಿವೆ. ‘ಇದಕ್ಕೂ ಮುಂಚೆ ಹಾರರ್ ಥ್ರಿಲ್ಲರ್ ‘ರಣತಂತ್ರ’ ಮಾಡಿದ್ದೆ. ‘3 ಬಿಎಚ್‌ಕೆ’ ಸಂಪೂರ್ಣ ವಿಭಿನ್ನ ಹಾರರ್ ಚಿತ್ರವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT