ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ್‌ ಸೆಲ್ವನ್‌’ ಮಾಲಿವುಡ್‌ಗೆ

Last Updated 28 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ತಮಿಳಿನ ಪ್ರಮುಖ ನಟ ವಿಜಯ್‌ ಸೇತುಪತಿ ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ತಮಿಳು ಚಿತ್ರರಂಗದಲ್ಲಿ ‘ಮಕ್ಕಳ್‌ ಸೆಲ್ವನ್‌’ ಎಂದೇ ಗುರುತಿಸಿಕೊಳ್ಳುವ ವಿಜಯ್‌, ಮಲಯಾಳಂನಲ್ಲಿ ಸನಿಲ್‌ ಕಳತ್ತಿಲ್‌ ನಿರ್ದೇಶನದ ‘ಮಾರ್ಕೊನಿ ಮಥಾಯ್‌’ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ಮಾಲಿವುಡ್‌ನ ದಿಗ್ಗಜ ನಟ ಜಯರಾಮ್‌ ಕೂಡಾ ನಟಿಸಲಿರುವುದು ಗಮನಾರ್ಹ.

‘ಮಾರ್ಕೊನಿ ಮಥಾಯ್‌’ ಹಾಸ್ಯಪ್ರಧಾನ ಪ್ರೇಮಕತೆ ಇರುವ ಚಿತ್ರ. ಜಯರಾಮ್‌, ಬ್ಯಾಂಕ್‌ವೊಂದರಲ್ಲಿ ಮಾರ್ಕೊನಿ ಎಂಬ ಭದ್ರತಾ ಸಿಬ್ಬಂದಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಬ್ಯಾಂಕ್‌ನಲ್ಲಿ ಕಸ ಗುಡಿಸುವ ‘ಅನ್ನಾ’ ಎಂಬ ಯುವತಿಯೊಂದಿಗಿನ ಮಾರ್ಕೊನಿಯ ಪ್ರೇಮಾಲಾಪಗಳು ಹಾಸ್ಯಮಯವಾಗಿ ಮೂಡಿಬರಲಿವೆ ಎಂದು ಸನಿಲ್‌ ಹೇಳಿದ್ದಾರೆ. ತಮ್ಮ ಸತ್ಯಂ ಸಿನೆಮಾಸ್‌ ಬ್ಯಾನರ್‌ನಡಿ ಪ್ರೇಮಚಂದ್ರನ್‌ ಎ.ಜಿ. ಅವರು ಬಂಡವಾಳ ಹೂಡಲಿದ್ದಾರೆ. ಎಂ.ಜಯಚಂದ್ರನ್‌ ಸಂಗೀತ ನಿರ್ದೇಶನವಿರುತ್ತದೆ.

ಇಷ್ಟೆಲ್ಲ ವಿವರಗಳನ್ನು ಬಹಿರಂಗಪಡಿಸಿರುವ ನಿರ್ದೇಶಕರು ಮತ್ತು ನಿರ್ಮಾಪಕರು ವಿಜಯ್‌ ಸೇತುಪತಿ ಪಾತ್ರದ ವಿವರಗಳನ್ನು ಮಾತ್ರ ಬಿಟ್ಟುಕೊಡದಿರುವುದು ವಿಶೇಷ.

ಹೊಸ ವರ್ಷಾರಂಭದಲ್ಲೇ ‘ಮಾರ್ಕೊನಿ ಮಥಾಯ್‌’ ಸೆಟ್ಟೇರಲಿದೆ. ಚೆನ್ನೈ, ಗೋವಾ, ಎರ್ನಾಕುಲಂ ಮತ್ತು ಚಂಗನ್‌ಚೇರಿಯಲ್ಲಿ ಚಿತ್ರೀ ಕರಣ ನಡೆಯಲಿದೆ. ಅಂದ ಹಾಗೆ, ‘ಮಾರ್ಕೊನಿ ಮಥಾಯ್‌’ ಮಲಯಾಲಂ ಮತ್ತು ತಮಿಳಿನಲ್ಲಿ ಮೂಡಿಬರಲಿದ್ದು, ಮಾಲಿವುಡ್‌ ಮತ್ತು ಕಾಲಿವುಡ್‌ನ ಸಿನಿಪ್ರಿಯರಿಗೆ ಏಕಕಾಲಕ್ಕೆ ರಸದೌತಣ ನೀಡುವ ಲೆಕ್ಕಾಚಾರ ನಿರ್ಮಾ‍ಪಕರದು.

ವಿಕ್ರಮ್‌ ವೇದ, ಪಿಜ್ಜಾ, ಸೂಡು ಕವ್ವಮ್‌, ಚೆಕ್ಕ ಚೀವಂತ ವಾನಂ ಮುಂತಾದ 25 ಚಲನಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ ತಮಿಳು ಸಿನಿಪ್ರಿಯರ ಮನಗೆದ್ದವರು ವಿಜಯ್. ಮಾತೃಭಾಷೆ ತಮಿಳು ಆದರೂ ಕೇರಳದಲ್ಲೂ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶನದ, ರಜನಿಕಾಂತ್‌– ವಿಜಯ್‌ ಸೇತುಪತಿ ಜೋಡಿಯ ಚಿತ್ರ ‘ಪೆಟ್ಟಾ’ ಮುಂದಿನ ಜನವರಿಯಲ್ಲಿ ಪೊಂಗಲ್‌ ಹಬ್ಬದ ವೇಳೆ ಬಿಡುಗಡೆಯಾಗಲಿದೆ. ವಿಜಯ್‌, ಇದೇ ಮೊದಲ ಬಾರಿಗೆ ರಜನಿಕಾಂತ್‌ ಜೋಡಿಯಾಗಿ ನಟಿಸಿದ್ದಾರೆ. ‘ಪೆಟ್ಟಾ’ ಬಿಡುಗಡೆಯಾದ ಬೆನ್ನಲ್ಲೇ ‘ಮಾರ್ಕೊನಿ ಮಥಾಯ್‌’ ಮುಹೂರ್ತ ನಡೆಯಲಿದೆ ಎಂದು ಹೇಳಲಾಗಿದೆ.

ಮೆಚ್ಚಿ ನುಡಿದ ಬಾಲು ಮಹೇಂದ್ರ

ವಿಜಯ್‌ ಸೇತುಪತಿಗೆ ನಟನಾಗುವ ಬಯಕೆ ಇರಲಿಲ್ಲ. ಜೀವನ ನಿರ್ವಹಣೆಗೆ ಯಾವ ವೃತ್ತಿಯಲ್ಲಿ ಹೆಚ್ಚು ಸಂಪಾದನೆ ಸಾಧ್ಯವೊ ಅದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಮಧ್ಯಮ ವರ್ಗದ ಯುವಕನಾಗಿದ್ದವರು. ಸೇಲ್ಸ್‌ಮ್ಯಾನ್‌, ದುಬೈನಲ್ಲಿ ಅಕೌಂಟ್ಸ್‌ ಅಸಿಸ್ಟೆಂಟ್‌ ಆಗಿ ದುಡಿದ ವಿಜಯ್, ಸ್ಮಾರ್ಟ್‌ ಕಿಚನ್‌ ಮಾರ್ಕೆಟಿಂಗ್‌ನಲ್ಲಿ ಪರವಾಗಿಲ್ಲ ಎನ್ನುವಷ್ಟು ಸಂಪಾದಿಸತೊಡಗಿದರು.

ಹಾಗೊಂದು ದಿನ ಮಾರ್ಕೆಟಿಂಗ್‌ ಕೆಲಸಕ್ಕಾಗಿ ಓಡಾಡುತ್ತಿದ್ದ ವಿಜಯ್‌ ಅವರಿಗೆ ‘ನಟನೆಯಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ’ ಎಂಬ ಭಿತ್ತಿಪತ್ರ ಕಂಡುಬಂತು.ಅದು ರಂಗಭೂಮಿ ಚಟುವಟಿಕೆಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿ ರುವ ತಂಡವೊಂದರ ಪೋಸ್ಟರ್‌ ಆಗಿತ್ತು.ತಡಮಾಡದೇ ಅಲ್ಲಿಗೆ ಅರ್ಜಿ ಸಲ್ಲಿಸಿ ನಟನೆಯ ತರಬೇತಿ ಶಿಬಿರದಲ್ಲಿ ಭಾಗವಹಿಸಿದರು. ಅದೇ ಸಂಸ್ಥೆಯ ದೈನಂದಿನ ಲೆಕ್ಕಪತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ನಟನೆಯ ಮಟ್ಟುಗಳನ್ನು ಕಲಿಯುತ್ತಾ ಹೋದರು.

ತರಬೇತಿ ವೇಳೆ, ತಮಿಳಿನ ಖ್ಯಾತ ನಿರ್ದೇಶಕ ಬಾಲು ಮಹೇಂದ್ರ ಅವರು,‘ನಿನ್ನ ಮುಖ ಬಹಳ ಫೋಟೊಜೆನಿಕ್‌ ಆಗಿದೆ, ನೀನು ನಟನೆಯಲ್ಲೇ ಮುಂದುವರಿ’ ಎಂದು ಮೆಚ್ಚುಗೆಯ ಮಾತನಾಡಿ ಮಾರ್ಗದರ್ಶನವನ್ನೂ ನೀಡುತ್ತಾರೆ. ವಿಜಯ್‌ ಸೇತುಪತಿ ಅದೃಷ್ಟದ ಬಾಗಿಲು ತೆರೆದ ಕ್ಷಣವದು. ಬಾಲು ಮಹೇಂದ್ರ ಅವರಂತಹ ನಿರ್ದೇಶಕರು ಮೆಚ್ಚಿ ನುಡಿದಾಗ ಸುಮ್ಮನಿರಲು ಸಾಧ್ಯವೇ? ವಿಜಯ್‌, ಚಿತ್ರರಂಗದಲ್ಲೇ ತಮ್ಮ ಭವಿಷ್ಯ ಕಂಡುಕೊಳ್ಳುವ ನಿರ್ಧಾರ ಮಾಡಿದರು. ಸಿನಿಮಾಗಳಲ್ಲಿ ನಾಯಕನ ಸ್ನೇಹಿತನ ಪಾತ್ರ ಇಲ್ಲವೇ ಪೋಷಕ ಪಾತ್ರಗಳನ್ನು ಮಾಡುತ್ತಲೇ ಐದು ವರ್ಷ ಕಳೆದರು. ಆದರೆ ಚಿತ್ರರಂಗದಲ್ಲಿ ಪರಿಚಿತರಾದರು. ಅದೇ ವೇಳೆ ಧಾರಾವಾಹಿ ಮತ್ತು ಕಿರುಚಿತ್ರಗಳ ಮೂಲಕ ವಿಜಯ್‌ ನಟನೆಯ ಅವಕಾಶಗಳನ್ನು ವಿಸ್ತರಿಸಿಕೊಂಡರು.

‘ಅಖಾಡ‘ ತಮಿಳು ಸಿನಿಮಾದ ಕನ್ನಡ ಆವೃತ್ತಿಯಲ್ಲಿ ವಿಜಯ್‌ ನಾಯಕರಾಗಿ ಕಾಣಿಸಿಕೊಂಡರು. ಆದರೆ ಚಿತ್ರ ತೆರೆಕಾಣಲೇ ಇಲ್ಲ. ವಿಜಯ್‌ ನಾಯಕ ನಟನಾದುದು 2010ರಲ್ಲಿ. 2012ರಲ್ಲಿ ಖಳ ಪಾತ್ರದಲ್ಲಿ ಮಿಂಚಿದರು. ಅಲ್ಲಿಂದೀಚೆ ಬಹುಬೇಡಿಕೆಯ ನಟರಾಗಿಯೇ ಮಿಂಚುತ್ತಿದ್ದಾರೆ. ಈಗ ವಿಜಯ್‌ ಕೇವಲ ನಟರಾಗಿ ಉಳಿದಿಲ್ಲ. ನಿರ್ಮಾಪಕ, ಗೀತ ರಚನೆಕಾರ, ಸಂಭಾಷಣೆಕಾರರಾಗಿಯೂ ತಮಿಳು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ಬಹುಮುಖ ಪ್ರತಿಭೆ. ಹತ್ತಾರು ಬಾರಿ ಅತ್ಯುತ್ತಮ ನಟ, ಅತ್ಯುತ್ತಮ ಖಳನಟ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

‘ಶಿಲ್ಪಾ’ ಪಾತ್ರದಲ್ಲಿ ಮಿಂಚಿದ ವಿಜಯ್‌

‘ಸೂಪರ್‌ ಡಿಲಕ್ಸ್’, ವಿಜಯ್‌ ಸೇತುಪತಿ ನಟಿಸಿದ ಚಿತ್ರಗಳಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಾಗಲಿದೆ ಎಂಬುದು, ಚಿತ್ರದ ಫಸ್ಟ್‌ ಲುಕ್‌ ವೇಳೆ ವ್ಯಕ್ತವಾದ ಅಭಿಪ್ರಾಯ. ಲೈಂಗಿಕ ಅಲ್ಪಸಂಖ್ಯಾತೆ ಶಿಲ್ಪಾ ಪಾತ್ರದಲ್ಲಿ ಸಹಜ ಅಭಿನಯದ ಮೂಲಕ ಇಡೀ ಚಿತ್ರದ ಜೀವಾಳವಾಗಿದ್ದಾರೆ ಎನ್ನಲಾಗಿದೆ. ತ್ಯಾಗರಾಜನ್‌ ಕುಮಾರರಾಜ ನಿರ್ದೇಶನದ ‘ಸೂಪರ್‌ ಡಿಲಕ್ಸ್‌’, ಮುಂದಿನ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT