ಸೋಮವಾರ, ಸೆಪ್ಟೆಂಬರ್ 20, 2021
20 °C

ಸುಕುಮಾರ್ ಜೊತೆ ಬಿಗ್‌ ಬಜೆಟ್ ಸಿನಿಮಾ ಘೋಷಿಸಿದ ವಿಜಯ್ ದೇವರಕೊಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ನ ‘ನುವ್ವಿಲ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದ ನಟ ವಿಜಯ್‌ ದೇವರಕೊಂಡ. ಇವರು ಮೊದಲ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು ‘ಪೆಳ್ಳಿ ಚೂಪುಲು’ ಸಿನಿಮಾದಲ್ಲಿ. ಆದರೂ ಈ ರೌಡಿ ಹೀರೊ ಹೆಚ್ಚು ಖ್ಯಾತಿ ಪಡೆದಿದ್ದು ವಿಭಿನ್ನ ಪ್ರೇಮಕಥೆ ಹೊಂದಿದ್ದ ‘ಅರ್ಜುನ್‌ ರೆಡ್ಡಿ’ ಸಿನಿಮಾದ ಮೂಲಕ. ಅತೀ ಕಡಿಮೆ ಸಮಯದಲ್ಲೇ ಹೆಚ್ಚು ಖ್ಯಾತಿ ಪಡೆದ ವಿಜಯ್‌ ‘ನೋಟಾ, ಮಹಾನಟಿ, ಟ್ಯಾಕ್ಸಿವಾಲಾ, ಡಿಯರ್‌ ಕಾಮ್ರೇಡ್‌, ವರ್ಲ್ಡ್‌ ಫೇಮಸ್‌ ಲವರ್‌’ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅರ್ಜುನ್‌ ರೆಡ್ಡಿ ಸಿನಿಮಾದ ಮೂಲಕ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟ ಈ ನಟ ಅಂದಿನಿಂದ ಸ್ಟಾರ್‌ ನಿರ್ದೇಶಕರ ಬೇಡಿಕೆಯ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಯುವ ಅಭಿಮಾನಿ ಬಳಗವನ್ನು ಹೊಂದಿರುವ ದೇವರಕೊಂಡಗಾಗಿ ಅನೇಕ ನಿರ್ದೇಶಕರು ಕತೆ ತಯಾರಿಸಿಟ್ಟುಕೊಂಡಿದ್ದಾರೆ. ವಿಜಯ್ ಸದ್ಯ ಡ್ಯಾಶಿಂಗ್‌ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಪೂರಿ ಜಗನ್ನಾಥ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಹೀಗಿರುವ ನಿನ್ನೆ ಖ್ಯಾತ ನಿರ್ದೇಶಕ ಸುಕುಮಾರ್ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ ವಿಜಯ್‌. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಸುಕುಮಾರ್‌–ವಿಜಯ್‌ ದೇವರಕೊಂಡ. ನನ್ನೊಳಗಿನ ನಟ ತುಂಬಾನೇ ಉತ್ಸುಕನಾಗಿದ್ದಾನೆ. ನನ್ನೊಳಗಿನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದು ಅತ್ಯಂತ ಮಹತ್ವದ ಸಿನಿಮಾವಾಗುತ್ತದೆ ಎಂಬುದಕ್ಕೆ ನಾವು ಭರವಸೆ ಕೊಡುತ್ತೇವೆ. ಸುಕ್ಕು ಸರ್ ಜೊತೆ ಸೆಟ್‌ಗೆ ತೆರಳಲು ಕಾತುರನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾವನ್ನು ಫ್ಯಾಲಕನ್‌ ಕ್ರಿಯೇಷನ್‌ ಸಂಸ್ಥೆಯಡಿ ಕೇದಾರ್‌ ಸೆಲಗಮಂಸೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ.  ಕೇದಾರ್ ನಿರ್ಮಾಣದ ಮೊದಲ ಸಿನಿಮಾ ಇದಾಗಿದೆ. ಸಿನಿಮಾವು 2022ರಲ್ಲಿ ತೆರೆ ಕಾಣಲಿದೆ. ಈ ಇಬ್ಬರು ಯಶಸ್ವಿ ನಾಯಕ ಹಾಗೂ ನಿರ್ದೇಶಕರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ ತೆರೆ ಮೇಲೆ ಅದ್ಭುತ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ. ಅಭಿಮಾನಿಗಳು ಸಿನಿಮಾದ ಕುರಿತು ಇನ್ನಷ್ಟು ಮಾಹಿತಿ ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು