ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಬದುಕು ಮರೆಯದ ವಿಕ್ಕಿ

Last Updated 9 ಆಗಸ್ಟ್ 2019, 17:29 IST
ಅಕ್ಷರ ಗಾತ್ರ

2018ನೇ ಸಾಲಿನ66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು,‘ಉರಿ: ದಿ ಸರ್ಜಿಕಲ್ ಸ್ಟ್ರೈಕ್'’ ಚಿತ್ರದ ಅಭಿನಯಕ್ಕಾಗಿ ನಟ ವಿಕ್ಕಿ ಕೌಶಲ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಘೋಷಣೆಯಾಗಿದೆ. ‘ಮಸಾನ್‌‘ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಭರವಸೆ ಮೂಡಿಸಿದ ನಟ ವಿಕ್ಕಿ ಸಿನಿ ಪಯಣವನ್ನು‘ಪ್ರಜಾವಾಣಿ’ಯಲ್ಲಿ ಜನವರಿ 28, 2019ರಂದು ಪ್ರಕಟವಾದ ಲೇಖನ ವಿವರಿಸುತ್ತದೆ.

ತಂದೆ ಶ್ಯಾಮ್ ಕೌಶಲ್ ಸಿನಿಮಾಗಳಲ್ಲಿ ಸಾಹಸ ಸಂಯೋಜನೆ ಮಾಡುತ್ತಿದ್ದರು. ಹೀಗಿದ್ದೂ ಮಗನನ್ನು ಅವರು ಚಿತ್ರೀಕರಣ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದೇ ಇಲ್ಲ. ಸಿನಿಮಾ ಜಗತ್ತಿನ ಅರಿವು ಮನೆಯ ಮಾತುಕತೆಯ ಮೂಲಕ ಇದ್ದೂ, ಚಿತ್ರಕಥೆಯೊಂದು ತೆರೆಮೇಲೆ ಮೂಡುವ ಬಗೆಯ ಸಣ್ಣ ಸಣ್ಣ ವಿವರಗಳನ್ನೂ ಅರಿಯುವ ಸಹಜ ಕುತೂಹಲ ಮಗನಿಗೆ. ಆ ಮಗನೇ ವಿಕ್ಕಿ ಕೌಶಲ್‌. ಈ ನಟನನ್ನು ನೋಡಿದರೆ ಈಗ ಅಸಂಖ್ಯ ಹೆಣ್ಣುಮಕ್ಕಳ ಎದೆಬಡಿತ ಜೋರಾಗುತ್ತದೆ. ಎಲ್ಲ ಅಪ್ಪ–ಅಮ್ಮ ಬಯಸುವಂಥದ್ದೇ ಪ್ರೌಢಾವಸ್ಥೆಯನ್ನು ವಿಕ್ಕಿಕೂಡ ಹಾದುಬಂದರು. ಎಂಜಿನಿಯರಿಂಗ್ ಕಲಿಯುತ್ತಿದ್ದರೂ ಮನಸ್ಸು ಅಭಿನಯದತ್ತ ತುಡಿಯುತ್ತಿತ್ತು.

ಕಾಲೇಜು ಹಂತದಲ್ಲಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದೂ ದೊಡ್ಡ ಕನಸನ್ನು ನೇಯುತ್ತಲೇ. ಹಾಗಂತ ಅವರು ಶಿಕ್ಷಣವನ್ನು ಮೊಟಕುಗೊಳಿಸಲಿಲ್ಲ. ‘ಈ ಕಾಲದಲ್ಲಿ ಕನಿಷ್ಠ ಒಂದು ಪದವಿ ಕೈಯಲ್ಲಿ ಇಲ್ಲದೇ ಇದ್ದರೆ ಮರ್ಯಾದೆ ಸಿಗೊಲ್ಲ. ಹಾಗೆ ನೋಡಿದರೆ ಕೆಲಸದ ಬದುಕು ಒಂದು ಹಂತಕ್ಕೆ ಬರುವುದೇ ಸ್ನಾತಕೋತ್ತರ ಪದವಿ ಪಡೆದ ಮೇಲೆ. ನನಗೆ ಅಭಿನಯದಲ್ಲಿ ಆಸಕ್ತಿ ಇತ್ತಾದರೂ ತಕ್ಷಣಕ್ಕೇ ನಟನಾಗಬೇಕು ಎಂದು ಹಟಕ್ಕೆ ಬೀಳಲಿಲ್ಲ. ಅಪ್ಪನಿಗೆ ಉದ್ಯಮದ ಒಳಸುಳಿಗಳು ಗೊತ್ತಿದ್ದರೂ ಅದರಿಂದ ನನಗೆ ಹೆಚ್ಚೇನೂ ಲಾಭವಾಗಲಿಲ್ಲ’ ಎನ್ನುತ್ತಾರೆ ವಿಕ್ಕಿ ಕೌಶಲ್.

ಎಂಜಿನಿಯರಿಂಗ್ ಪದವಿ ಮುಗಿಸಿದ ಮೇಲೆ ವಿಕ್ಕಿ ಎಲ್ಲೆಲ್ಲಿ ಅವಕಾಶ ಇದ್ದವೋ ಅಲ್ಲೆಲ್ಲ ಆಡಿಷನ್‌ಗಳಿಗೆ ಹೊರಟರು. ಆಯ್ಕೆಯಾಗದೇ ಹೋದಾಗ ಮೊದ ಮೊದಲು ಸಹಜವಾಗಿಯೇ ಸಂಕಟವಾಯಿತು. ಆದರೆ, ಅದು ಕೂಡ ಬದುಕು ಕಟ್ಟಿಕೊಳ್ಳಲು ಅನಿವಾರ್ಯ ಎಂದು ಜ್ಞಾನೋದಯವಾದದ್ದೇ, ನಿರಾಕರಣೆಯನ್ನೂ ನಿರುದ್ವಿಗ್ನವಾಗಿ ಸ್ವೀಕರಿಸುವ ಮನಸ್ಥಿತಿ ಅವರದ್ದಾಯಿತು. ಆರು ತಿಂಗಳು ಅಭಿನಯದ ತರಬೇತಿ ಪಡೆದುಕೊಂಡ ಮೇಲಂತೂ ಸಿನಿಮಾದಲ್ಲಿ ತಾರೆಯಾಗುವುದು ಎಷ್ಟು ಕಷ್ಟ ಎನ್ನುವುದು ಸ್ಪಷ್ಟವಾಯಿತು. ಅದಕ್ಕೇ ವಿಕ್ಕಿ ತಾರೆಯಾಗಬೇಕು ಎಂದು ಬಯಸದೆ, ಒಳ್ಳೆಯ ನಟನಾಗಬೇಕು ಎಂಬ ಉಮೇದನ್ನು ನೇವರಿಸಲಾರಂಭಿಸಿದರು.

200–300 ಪುಟಗಳಲ್ಲಿ ಬರೆದ ಸರಕು ಸಿನಿಮಾ ಆಗಿ ಮೂಡುವುದು ಹೇಗೆ ಎನ್ನುವ ಕುತೂಹಲವನ್ನು ತಣಿಸಿಕೊಳ್ಳಲೆಂದೇ ವಿಕ್ಕಿ ಮೊದಲು ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸಹಾಯಕರ ತಂಡವನ್ನು ಸೇರಿಕೊಂಡರು. ‘ಗ್ಯಾಂಗ್ಸ್‌ ಆಫ್ ವಸೇಪುರ್’ಸಿನಿಮಾ ಕಟ್ಟಿದ ತಂಡದಲ್ಲಿ ಅವರೂ ಒಬ್ಬರು. ಅದು ಅವರ ಪಾಲಿಗೆ ಹೆಮ್ಮೆಯೂ ಹೌದು.

ರಾಜ್‌ಕುಮಾರ್‌ ರಾವ್‌ ಒಲ್ಲೆ ಎಂದ ಕಾರಣಕ್ಕೆ ಅದರಲ್ಲಿ ಅಭಿನಯಿಸುವ ಅವಕಾಶವೂ ಸಿಕ್ಕಿತು. ಆಮೇಲೂ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ವಿಕ್ಕಿ ಮೊದಲು ಪ್ರಮುಖ ನಟನಾಗಿ ಅಭಿನಯಿಸುವ ಅವಕಾಶ ಪಡೆದದ್ದು ‘ಮಸಾನ್’ಹಿಂದಿ ಸಿನಿಮಾದಲ್ಲಿ. ಅದರ ನಂತರ ‘ರಮಣ್ ರಾಘವ್ 2.0’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಛಾಪುಮೂಡಿಸಿದರು. ‘ಲವ್ ಪರ್ ಸ್ಕ್ವೇರ್ ಫೂಟ್’ ಎಂಬ ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಅವರ ಅಭಿನಯ ಒಂದು ಕಡೆ ಜನಮನ ಸೂರೆಗೊಂಡಿತು.

ಇನ್ನೊಂದು ಕಡೆ, ‘ರಾಜಿ’ ಹಾಗೂ ‘ಸಂಜು’ಚಲನಚಿತ್ರಗಳ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಅನುರಾಗ್ ಕಶ್ಯಪ್‌ ಬಲು ಬೇಗ ಈ ನಟನಾ ಪ್ರತಿಭೆಯನ್ನು ಮುಂಚೂಣಿಗೆ ತಂದರು.

‘ಮನ್‌ಮರ್ಜಿಯಾ’ಹಿಂದಿ ಸಿನಿಮಾದ ರ‍್ಯಾಪ್ ಗಾಯಕನ ಪಾತ್ರದಲ್ಲಿ ವಿಕ್ಕಿ ಸಿನಿಮಾ ಜಗತ್ತಿನಲ್ಲಿ ಜಿಗಿತ ಕಂಡರು.

ಈಗ ಅವರ ಅಭಿನಯದ ‘ಉರಿ–ದಿ ಸರ್ಜಿಕಲ್ ಸ್ಟ್ರೈಕ್’ತೆರೆಕಂಡಿದೆ. ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಅನೇಕರು ಹೆಚ್ಚು ಅಂಕಗಳನ್ನು ಕೊಟ್ಟಿದ್ದಾರೆ.ಮುಂಬೈನಲ್ಲೇ ಹುಟ್ಟಿ, ತಂದೆಯ ಏರಿಳಿತಗಳನ್ನು ಹತ್ತಿರದಿಂದ ಕಂಡಿರುವ ವಿಕ್ಕಿ ಈಗ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ನಿಂತು ನೋಡುವಾಗಲೂ ಹಳೆಯ ಬದುಕು ಹೆಚ್ಚು ದೂರವಿದೆ ಎಂದೇನೂ ಅನಿಸುವುದಿಲ್ಲವಂತೆ. ಇಂಥ ಧೋರಣೆಯಿಂದಲೇ ಅವರಂಥ ಪ್ರತಿಭಾವಂತ ಯುವಕರು ಇನ್ನಷ್ಟು ಮೆಟ್ಟಿಲುಗಳನ್ನು ಏರಲು ಸಾಧ್ಯವಾಗುವುದು.

ಈಗ ವಿಕ್ಕಿ ಅವರಿಗೆ 30 ವರ್ಷ ತುಂಬಿದೆ. ಅವರು ಸಿನಿಮಾ ರಂಗದಲ್ಲಿ ಸೈಕಲ್‌ ಹೊಡೆಯಲು ಆರಂಭಿಸಿ ಆರು ವರ್ಷಗಳೇ ಕಳೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT