ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರಿಗೆ, ಉನ್ನತ ಅಧಿಕಾರಿಗಳಿಗೆ ದೆಹಲಿಯಲ್ಲಿ ವಿಕ್ರಾಂತ್ ರೋಣ ಪ್ರೀಮಿಯರ್ ಶೋ

ಅಕ್ಷರ ಗಾತ್ರ

ಬೆಂಗಳೂರು:ನಟ ಕಿಚ್ಚ ಸುದೀಪ್‌ ನಟನೆಯ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ ‘ವಿಕ್ರಾಂತ್‌ ರೋಣ’ ಸಿನಿಮಾದ ಪ್ರೀಮಿಯರ್‌ ಶೋವನ್ನು ಸಂಸದರಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದೆ.

ದೆಹಲಿಯಲ್ಲಿ ಜು.28 ಗುರುವಾರ ಬೆಳಿಗ್ಗೆ ಚಾಣಕ್ಯಪುರಿಯ ಪಿವಿಆರ್‌ ಥಿಯೇಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸಂಸದ ಪ್ರತಾಪ್ ಸಿಂಹ ಅವರಿಗೆ ಆಹ್ವಾನ ಹೋಗಿದ್ದು ಅವರು ಮಾಹಿತಿ ಹಂಚಿಕೊಂಡು ಧನ್ಯವಾದ ಸಲ್ಲಿಸಿದ್ದಾರೆ. ರಾಜ್ಯಸಭಾ ಸದಸ್ಯರಿಗೆ, ಲೋಕಸಭಾ ಸದಸ್ಯರಿಗೆ ಹಾಗೂ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಆಹ್ವಾನ ಹೋಗಿದ್ದು, ಕನ್ನಡದ ವಿಕ್ರಾಂತ್ ರೋಣ ಸಿನಿಮಾವನ್ನು ಅವರಿಗೆ ತೋರಿಸಲಾಗುತ್ತದೆ.

ಚಿತ್ರದಲ್ಲಿ ಸುದೀಪ್ ತನಿಖಾ ಪೊಲೀಸ್ ಆಗಿ ಕಾಣಿಸಿಕೊಂಡಿದ್ದು ಅವರ ಪಾತ್ರ ಎಲ್ಲರನ್ನೂ ಸೆಳೆಯುತ್ತಿದೆ. ಸುದೀಪ್‌ಗೆ ಅನೇಕ ನಟ–ನಟಿಯರು, ತಂತ್ರಜ್ಞರು, ನಿರ್ಮಾಪಕರು ಶುಭ ಕೋರಿದ್ದಾರೆ.

ಈ ಚಿತ್ರ ಟೀಸರ್, ಪೋಸ್ಟರ್‌ಗಳ ಮೂಲಕ ಈಗಾಗಲೇ ಸದ್ದು ಮಾಡಿತ್ತು. ಫೆ.24ರಂದು ತೆರೆ ಕಾಣಬೇಕಿದ್ದ ಚಿತ್ರದ ಬಿಡುಗಡೆ ಕೋವಿಡ್‌ ಸೃಷ್ಟಿಸಿದ ಪ್ರತಿಕೂಲ ಪರಿಸ್ಥಿತಿ, ನಿಯಮಾವಳಿಗಳ ಇತಿಮಿತಿಗಳಿಂದಾಗಿ ಜುಲೈ 28 ಕ್ಕೆ 3ಡಿಯಲ್ಲಿ ಬರುತ್ತಿದೆ.

ಸುದೀಪ್‌ ಅವರೇ ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಡಬ್ಬಿಂಗ್‌ ಮಾಡಿದ್ದಾರೆ. ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಈ ಚಿತ್ರದ ಮುಖಾಂತರ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದು, ರಕೇಲ್‌ ಡಿಕೋಸ್ಟ ಉರ್ಫ್‌ ‘ಗಡಂಗ್‌ ರಕ್ಕಮ್ಮ’ನಾಗಿ ವಿಶೇಷ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಹಿಂದಿ ಹಾಗೂ ಇತರ ಭಾಷೆಗಳಲ್ಲಿ ಪ್ರಮೋಷನ್ಸ್‌ ಸೇರಿ ಚಿತ್ರದ ಬಜೆಟ್‌ ₹100 ಕೋಟಿ ದಾಟಿದೆ ಎಂದು ಇತ್ತೀಚೆಗೆ ಚಿತ್ರದ ನಿರ್ಮಾಪಕ ಜಾಕ್‌ ಮಂಜು ತಿಳಿಸಿದ್ದರು. ಜೀ ಸ್ಟುಡಿಯೊಸ್‌ ಹಾಗೂ ಕಿಚ್ಚ ಕ್ರಿಯೇಷನ್ಸ್‌ನಡಿ ಜಾಕ್‌ ಮಂಜು ಅವರ ಶಾಲಿನಿ ಆರ್ಟ್ಸ್‌ ಈ ಚಿತ್ರವನ್ನು ವಿತರಣೆ ಮಾಡಲಿದೆ. ಚಿತ್ರಕ್ಕೆ ಬಿ.ಅಜನೀಶ್‌ ಲೋಕನಾಥ್‌ ಸಂಗೀತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT