ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ವಿಲನ್’: ಆತ್ಮವಿಲ್ಲದ ಭೀಮಕಾಯ; ಯರ್ರಾಬಿರ್ರಿ ಗೆರೆ ಎಳೆದ ರಂಗೋಲಿ!

Last Updated 19 ಅಕ್ಟೋಬರ್ 2018, 11:32 IST
ಅಕ್ಷರ ಗಾತ್ರ

ಚಿತ್ರ: ದಿ ವಿಲನ್

ನಿರ್ಮಾಪಕ: ಸಿ.ಆರ್. ಮನೋಹರ್

ನಿರ್ದೇಶನ: ಪ್ರೇಮ್

ತಾರಾಗಣ: ಶಿವರಾಜ್‌ಕುಮಾರ್, ಸುದೀಪ್‌, ಆ್ಯಮಿ ಜಾಕ್ಸನ್,ಶರಣ್ಯಾ ಪೊನವಣ್ಣನ್, ಶ್ರೀಕಾಂತ್

ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾವನ್ನು ಐದು ಭಾಗಗಳಲ್ಲಿ ವಿಂಗಡಿಸಿಕೊಳ್ಳಬಹುದು. ಮೊದಲನೇ ಭಾಗ ಇಂಟ್ರೊಡಕ್ಷನ್. ಎರಡನೇ ಭಾಗ ಬಿಲ್ಡಪ್. ಮೂರನೇ ಭಾಗ ಮತ್ತೆ ಮತ್ತೆ ಬಿಲ್ಡಪ್. ನಾಲ್ಕನೇ ಭಾಗ ಫಾರಿನ್‌ನಲ್ಲಿಬಿಲ್ಡಪ್. ಐದನೇ ಭಾಗ ಕ್ಲೈಮ್ಯಾಕ್ಸ್‌ ಅಥವಾ ತಾಯಿ ಸೆಂಟಿಮೆಂಟ್.

ಇವುಗಳಲ್ಲಿ ಸಿನಿಮಾ ನೋಡಿದ ಅನುಭವ ಕೊಂಚವಾದರೂ ಸಿಗುವುದು ಕೊನೆಯ ಭಾಗದಲ್ಲಿ ಮಾತ್ರವೇ. ಎರಡೂವರೆ ಗಂಟೆ ಹಿಂಸಿಸಿ ಕೊನೆಯ ಇಪ್ಪತ್ತು ನಿಮಿಷ ತಬ್ಬಿ ಸಂತೈಸಿ, ಹೃದಯ ಕಲುಕಿ, ಕಣ್ಣೀರು ತರಿಸಿ ಹಳೆಯ ನೋವ ಮರೆಸುವ ತಂತ್ರ ನಿರ್ದೇಶಕರದ್ದು.

ಮೊದಲ ಇಪ್ಪತ್ತು ನಿಮಿಷ ಶಿವರಾಜ್‌ಕುಮಾರ್‌ ಇಂಟ್ರೊಡಕ್ಷನ್ ಸಾಂಗ್, ಫೈಟ್ ಇತ್ಯಾದಿಗಳಿಗೆ ಮೀಸಲು. ನಂತರ ಸುದೀಪ್ ಪ್ರವೇಶ. ಆ ಪ್ರವೇಶದ ಬಿರುಗಾಳಿಗೆ ಚಲ್ಲಾಪಿಲ್ಲಿಯಾಗುವ ಮರಳ ಕಣಗಳ ಹಾಗೆ ನಟ ಮಿಥುನ್ ಚಕ್ರವರ್ತಿ ಬಂದು ಹೋಗಿದ್ದು ಗೊತ್ತಾಗುವುದೇ ಇಲ್ಲ.

ಎರಡು ಸಾವಿರದ ನೋಟುಗಳ ಕಟ್ಟನ್ನು ಕಿಸೆಯಿಂದ ತೆಗೆದು ಬಿಸಾಕುವ, ದುಬಾರಿ ಕಾರಿನಲ್ಲಿ ಸವಾರಿ ಮಾಡುವ ‘ಖಳನಾಯಕ’ ತುಟಿಗಳಲ್ಲಿ ಮಾತ್ರ ಲೋಕಲ್ ಬೀಡಿ!ಈ ಲೋಕಲ್‌ ಬೀಡಿಯನ್ನು ಇಡೀ ಸಿನಿಮಾಕ್ಕೆ ರೂಪಕವಾಗಿಯೂ ನೋಡಬಹುದು. ಬೀಡಿಗೆ ಅಲಂಕಾರ ಮಾಡಿದರೆ ಬಣ್ಣದ ಬೆಗಡೆ ಸುತ್ತಿ, ಗೆಜ್ಜೆ ಕಟ್ಟಿ, ಇನ್ನಷ್ಟು ಉದ್ದ ಮಾಡಿ ಏನೇನೆಲ್ಲಾ ಮಾಡಿದರೂ ಒಳಗಿರುವುದು ಅದೇ ಹಳೆಯ ತಂಬಾಕಲ್ಲವೇ? ಅದು ಸೇದಿದಾಗ ಆಗುವ ದುಷ್ಪರಿಣಾಮ ಕಮ್ಮಿಯಾಗಬಹುದೇ?

‘ದಿ ವಿಲನ್’ ಚಿತ್ರವೂ ಹಾಗೆಯೇ ಇದೆ. ಹೂರಣದ ಬಗ್ಗೆ ಹೊಸದಾಗಿ ಏನೂ ಯೋಚಿಸದ ಪ್ರೇಮ್, ಸುಮ್ಮನೇ ಒಂದಿಷ್ಟು ಸನ್ನಿವೇಶಗಳನ್ನು ಕಟ್ಟುತ್ತಾ ಹೋಗಿದ್ದಾರೆ. ಅರ್ಜುನ್ ಜನ್ಯ, ನಿರ್ದೇಶಕ ಕುಣಿತಕ್ಕೆ ತಕ್ಕ ಹಾಗೆ ಬಗೆಬಗೆಯ ವಾದ್ಯಗಳನ್ನು ಕುಟ್ಟುತ್ತಾ ಹೋಗಿದ್ದಾರೆ. ಅವೆಲ್ಲವೂ ಒಂದಕ್ಕಿಂತ ಇನ್ನೊಂದು ಅದ್ದೂರಿಯಾಗಿ, ಭಿನ್ನವಾಗಿ ಇರಬೇಕು ಎಂಬುದನ್ನೊಂದೇ ಅವರು ಮನಸಲ್ಲಿ ಇಟ್ಟುಕೊಂಡಂತಿದೆ. ಅದಕ್ಕಾಗಿಯೇ ಮಂಡ್ಯದಲ್ಲಿಯೇ ಮುಗಿಯಬಹುದಾಗಿದ್ದ ಪಂಚಾಯ್ತಿಯನ್ನು ಲಂಡನ್‌ಗೆ ಕೊಂಡೊಯ್ದಿದ್ದಾರೆ.

ಭಿನ್ನಗೊಳಿಸುವ ವ್ಯಾಮೋಹ ಪಾತ್ರಗಳ ವಸ್ತ್ರವಿನ್ಯಾಸದಲ್ಲಿಯೂ ಎದ್ದು ಕಾಣುತ್ತದೆ. ಚಂಬಲ್ ಕಣಿವೆಯಿಂದ ಕಡ ತಂದ ಬಟ್ಟೆಗಳನ್ನು ತೊಟ್ಟಿರುವ ಪಾತ್ರ ಒಮ್ಮಿಂದೊಮ್ಮೆಲೇ ರಾಮ್‌ರಾಜ್‌ ಪಂಚೆಯ ಜಾಹೀರಾತಿನ ಭಾಗವೇನೋ ಎಂದು ಕಾಣುವಷ್ಟು ಬದಲಾಗುತ್ತದೆ. ಇದ್ದಕ್ಕಿದ್ದ ಹಾಗೆ ಕೂದಲು ಜುಟ್ಟುಗಟ್ಟುತ್ತದೆ. ಈ ಎಲ್ಲ ಹೊರಾಂಗಣ ಪ್ರದರ್ಶನಗಳಲ್ಲಿ ಸಿನಿಮಾ ಮಾತ್ರ ಜಡ್ಡುಗಟ್ಟುತ್ತಲೇ ಹೋಗುತ್ತದೆ. ಕಥೆ ಸಾಗುವ ದಾರಿಯಲ್ಲಿ ಒಂದು ತಿರುವಿನಿಂದ ಇನ್ನೊಂದು ತಿರುವಿಗೆ ತಾರ್ಕಿಕ ಸಂಬಂಧವೇ ಇಲ್ಲ. ನಿರ್ದೇಶಕರಿಗೆ ಬೇಕೆನಿಸಿದಾಗ ಮಹಾನ್ ಭೂಗತದೊರೆ ದಡ್ಡ ಕಮಾಂಡುವಿನ ಹಾಗೆ ಸಿಕ್ಕುಬೀಳುತ್ತಾನೆ. ಹಳ್ಳಿಯಲ್ಲಿ ಇಸ್ಪೀಟು ಆಡಿಕೊಂಡು ಅಂಡಲೆಯುತ್ತಿದ್ದ ಒಬ್ಬ ನಾಯಕ ಲಂಡನ್‌ಗೆ ತೆರಳಿ ಭೂಗತಲೋಕವನ್ನು ಆಳುತ್ತಿರುವವನಿಗೆ ಚಳ್ಳೆಹಣ್ಣು ತಿನ್ನಿಸುತ್ತಾನೆ. ಇನ್ನೊಬ್ಬ ನಾಯಕ ಲಂಡನ್‌ನ ಗೃಹಮಂತ್ರಿಯನ್ನೇ ಮುಖಾಮುಖಿ ಯಾಮಾರಿಸಿ ಕ್ಲೈಮ್ಯಾಕ್ಸ್‌ ಫೈಟ್ ಮಾಡಲು ಇಂಡಿಯಾಕ್ಕೆ ಬಂದುಬಿಡುತ್ತಾನೆ.

‘ಬಿಗ್‌ ಬಜೆಟ್’ ಮಾಡಲಿಕ್ಕೆಂದೇ ಮಾಡಿದ ಅನಗತ್ಯ ಖರ್ಚುಗಳು ಸಿನಿಮಾದುದ್ದಕ್ಕೂ ತೆರೆಯ ಮೇಲೆ ರಾಚುತ್ತವೆ. ಈ ಕಾರಣಕ್ಕಾಗಿಯೇ ಕಥೆ ಬೇರೂರುವುದಿರಲಿ, ನೆಲಕ್ಕಿಳಿಯುವುದೂ ಇಲ್ಲ. ಹರಿದ ಪೋಸ್ಟರ್ ತುಣುಕಿನಂತೆ ಎತ್ತೆತ್ತಲೋ ಹಾರಿ ಎಲ್ಲೆಲ್ಲಿಯೋ ಸಿಕ್ಕಾಕಿಕೊಂಡು ಛಿದ್ರವಾಗುತ್ತದೆ.

ಭಾರತದಿಂದ ಹೋದ ಖಳನೊಬ್ಬ ಇಂಗ್ಲೆಂಡಿನಲ್ಲಿ ‘ಹೆಮ್ಮೆಯ ಭಾರತೀಯ’ ಎಂದು ಹೇಳಿಕೊಳ್ಳುತ್ತಾನೆ. ಅವನ ಬೂಟಿನ ಮೇಲೆ ಬಿದ್ದ ಬೆವರ ಹನಿಯನ್ನು ಬ್ರಿಟಿಷ್ ಡಾನ್‌ ಒಬ್ಬ ಹಣೆಯಿಂದ ಸ್ವಚ್ಛಗೊಳಿಸುತ್ತಾನೆ. ಇದನ್ನು ಬ್ರೀಟಿಷರ ಮೇಲೆ ಸೇಡು ತೀರಿಸಿಕೊಂಡ ರೀತಿ ಎಂಬಂತೆ ಬಿಂಬಿಸಲಾಗಿದೆ. ಆದರೆ ನಮ್ಮ ದೇಶ‍ಪ್ರೇಮ ಪ್ರದರ್ಶಿಸಲು (ಅದೂ ಕಳ್ಳನೊಬ್ಬನ ಪಾತ್ರದ ಮೂಲಕ) ಎತ್ತಿಹಿಡಿಯಲು ಇನ್ನೊಂದು ದೇಶವನ್ನು ಹೀಯಾಳಿಸುವುದು ಯಾವ ಸಂಸ್ಕಾರವೋ ನಿರ್ದೇಶಕರೇ ಹೇಳಬೇಕು. ಹಾಗೆಯೇ ಸಿನಿಮಾದಲ್ಲಿನ ದುರುಳಪಾತ್ರವನ್ನು ಅಕಾರಣವಾಗಿ ಮುಸ್ಲಿಮರನ್ನಾಗಿಸುವ ಸಂವೇದನಾಹೀನತೆಯಿಂದ ಇನ್ನಾದರೂ ಕನ್ನಡದ ನಿರ್ದೇಶಕರು ಎಚ್ಚೆತ್ತುಕೊಳ್ಳಬೇಕು.

ಹಲವು ದೃಶ್ಯಗಳಲ್ಲಿ ಸುದೀಪ್ ವಿಚಿತ್ರ ಅಂಗಚೇಷ್ಟೆಗಳಿಂದ ಕಮಿಡಿಯನ್‌ ಹಾಗೆ ಕಾಣುತ್ತಾರೆ.ಕಿವಿಗಡಚಕ್ಕವ ನಿರಂತರ ಗೌಜಿಯ ಕೊನೆಯಲ್ಲಿ ಬರುವ ತಾಯಿ ಸೆಂಟಿಮೆಂಟ್ ಭಾಗವೇ ಹೆಚ್ಚು ಆಪ್ತವಾಗುತ್ತದೆ. ಶಿವಣ್ಣ ಮತ್ತು ಸುದೀಪ್ ಅವರ ನಟನೆಯ ನಿಜರೂಪ ದರ್ಶನವಾಗುವುದೂ ಅದೇ ಸಂದರ್ಭದಲ್ಲಿ. ಈ ಭಾಗ ಮನಸಲ್ಲಿ ಉಳಿಯುವಲ್ಲಿ, ತಾಯಿ ಪಾತ್ರ ಮಾಡಿದಶರಣ್ಯಾ ಪೊನವಣ್ಣನ್ ಅವರ ಕೊಡುಗೆಯೂ ಸಾಕಷ್ಟಿದೆ.

ಮೊದಲೊಂದು ಚುಕ್ಕಿ ಇಟ್ಟು, ಆಮೇಲೆ ಎಲ್ಲೆಲ್ಲಿಯೋ ಗೆರೆ ಎಳೆದು ಕೊನೆಯಲ್ಲಿ ಮೊದಲ ಚುಕ್ಕಿಗೇ ತಂದು ಮುಟ್ಟಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ನಿರ್ದೇಶಕರು. ಆದರೆ ಅಸಂಬದ್ಧವಾಗಿ ಒಂದಿಷ್ಟು ಚುಕ್ಕಿ ಇಟ್ಟು ಯರ್ರಾಬಿರ್ರಿ ಗೆರೆ ಎಳೆದ ಮಾತ್ರಕ್ಕೆ ಅದು ರಂಗೋಲಿಯಾಗಲಾರದು ಎಂಬ ಕಲ್ಪನೆ ಅವರಿಗೆ ಇರಲಿಕ್ಕಿಲ್ಲ. ಇನ್ನೊಂದು ಹೆಜ್ಜೆ ಮುಂದಿಟ್ಟು ಹೇಳುವುದಾದರೆ ‘‌ದಿ ವಿಲನ್’ ಅನ್ನು ಆತ್ಮವಿಲ್ಲದ ಭೀಮಕಾಯ ಎನ್ನಬಹುದು. ಆತ್ಮವಿಲ್ಲದ ಕಾಯವನ್ನು ಏನೆಂದು ಕರೆಯುತ್ತಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT