ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಯಕನ್ ಪಯಣ

ಮೈಕಲ್ ಜಾಕ್ಸನ್ ಹೆಜ್ಜೆಯಿಂದ ಶುರಾವ್ ಹೈದ್ರುವರೆಗೆ
Last Updated 10 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

‘ನಾನು ಇಲ್ಲಿಯವರೆಗೆ ಯಾವುದೇ ಸಿನಿಮಾದಲ್ಲಿ ಒಳ್ಳೆಯ ಶರ್ಟ್ ಧರಿಸಿಲ್ಲ, ಕಥೆಗಳೆಲ್ಲ ಅಂಥದ್ದೇ. ಈಗಲೂ ಶವ ಹೊರುವ, ಭಿಕ್ಷುಕನ ವೇಷ ಇರುವ ಚಿತ್ರಕಥೆಗಳಿದ್ದರೆ ಸಿನಿಮಾದವರಿಗೆ ನಾನು ನೆನಪಾಗುತ್ತೇನೆ. ಯಾಕೆ ಹೀಗೆ?’ ಎಂದು ಕೇಳುತ್ತಾರೆ ವಿನಾಯಕನ್.

2016ರಲ್ಲಿ ‘ಕಮ್ಮಟ್ಟಿಪ್ಪಾಡಂ’ ಎಂಬ ಸಿನಿಮಾದ ಗಂಗಾ (ಗಂಗಾಧರನ್) ಪಾತ್ರದ ಮೂಲಕ ಜನರ ಗಮನ ಸೆಳೆದ ಕಪ್ಪು ಮೈಬಣ್ಣದ, ನೇರಾನೇರ ಮಾತಿನ ನಟ ಈ ವಿನಾಯಕನ್. ‘ಕಮ್ಮಟ್ಟಿಪ್ಪಾಡಂ’ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ನಾಯಕನಾಗಿದ್ದರೂ ಉತ್ತಮ ನಟನಿಗಿರುವ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ದಕ್ಕಿದ್ದು ವಿನಾಯಕನ್‌ ಅವರಿಗೆ. ಇದು ವಿನಾಯಕನ್ ಜೀವನದಲ್ಲಿ ಹೊಸ ತಿರುವು ತಂದ ಸಿನಿಮಾ ಆಗಿತ್ತು ‘ಕಮ್ಮಟ್ಟಿಪ್ಪಾಡಂ’. ವಿನಾಯಕನ್ ಅವರ ಜೀವನಕ್ಕೆ ತುಂಬಾ ಹತ್ತಿರವಾದ ಚಿತ್ರವೂ ಅದಾಗಿತ್ತು. ಉತ್ತಮ ನಟನಿಗಿರುವ ರಾಜ್ಯ ಪ್ರಶಸ್ತಿ ಲಭಿಸಿದಾಗ ವಿನಾಯಕನ್ ಎಂಬ ಡಾನ್ಸರ್, ಭರವಸೆಯ ನಟನಾಗಿಯೂ ರೂಪುಗೊಂಡಿದ್ದರು.

ವಿನಾಯಕನ್‌ಗೆ ಪ್ರಶಸ್ತಿ ಲಭಿಸಿದ್ದು ದೊಡ್ಡ ಸುದ್ದಿಯಾಗಿದ್ದರೆ ಪತ್ರಕರ್ತರೊಂದಿಗೆ ರೇಗಿದ್ದು ಅದಕ್ಕಿಂತ ದೊಡ್ಡ ಸುದ್ದಿಯಾಗಿತ್ತು. ಪ್ರಶಸ್ತಿ ಬಗ್ಗೆ ಸುದ್ದಿ ಮಾಡಲು ಬಂದ ಪತ್ರಕರ್ತರು ಜಿಲೇಬಿ ತಿನ್ನಿಸಲು ಯತ್ನಿಸಿದರು. ಅಮ್ಮನನ್ನು ಅಪ್ಪಿ ಮುತ್ತು ಕೊಡಲು ಹೇಳಿದರು. ‘ನಾನು ಯಾಕೆ ಈ ರೀತಿ ಮಾಡಬೇಕು? ನಾನು ಇಲ್ಲಿಯವರೆಗೆ ಅಮ್ಮನಿಗೆ ಮುತ್ತು ಕೊಟ್ಟಿಲ್ಲ. ಇದೆಲ್ಲ ಪೇಜ್ 3 ಕಾನ್ಸೆಪ್ಟ್. ನನಗೆ ರಿಯಲ್ ಆಗಿರಲು ಇಷ್ಟ. ನಾನು ಹೀಗೆಯೇ ಇರುವುದು. ಹಾಸ್ಯದ ವಸ್ತುವಾಗಿ ನನಗೆ ನನ್ನನ್ನೇ ಮಾರಿಕೊಳ್ಳಲು ಇಷ್ಟವಿಲ್ಲ. ನನ್ನ ಜೀವನ ಕಾಮಿಡಿ ಅಲ್ಲ. ನಾನು ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದೇನೆ’ ಎಂದು ಹೇಳುವ ಮೂಲಕ ಜನರ ಮನಸ್ಸು ಗೆದ್ದ ಈ ನಟ ಸಿನಿಮಾರಂಗಕ್ಕೆ ಕಾಲಿಟ್ಟು 24 ವರ್ಷಗಳು ಕಳೆದಿವೆ!

1995ರಲ್ಲಿ ಮೋಹನ್ ಲಾಲ್ ನಾಯಕ ನಟನಾಗಿ ಅಭಿನಯಿಸಿದ್ದ ‘ಮಾಂತ್ರಿಕಂ’ ಎಂಬ ಸಿನಿಮಾದಲ್ಲಿ ಸರ್ಕಸ್ ತಂಡವೊಂದರ ಜೀಪಿನಿಂದ ಜಿಗಿದು ಮೈಕಲ್ ಜಾಕ್ಸನ್ ರೀತಿಯಲ್ಲಿ ಡಾನ್ಸ್ ಮಾಡುವ ದೃಶ್ಯದ ಮೂಲಕ ವಿನಾಯಕನ್ ಮಲಯಾಳ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಆಗ ಬ್ಲಾಕ್‌ ಮರ್ಕ್ಯುರಿ ಎಂಬ ನೃತ್ಯ ತಂಡದಲ್ಲಿ ಡಾನ್ಸರ್ ಆಗಿದ್ದ ವಿನಾಯಕನ್‌‌ಗೆ ಈ ಸಿನಿಮಾದಲ್ಲಿ ಸಂಭಾಷಣೆಯೇನೂ ಇರಲಿಲ್ಲ. ಮೈಕಲ್ ಜಾಕ್ಸನ್ ರೀತಿ ಒಂದಷ್ಟು ಹೆಜ್ಜೆ ಹಾಕುವುದು ಮಾತ್ರವಾಗಿತ್ತು. ಆಮೇಲೆ ಸ್ಟಾಪ್ ವಯೊಲೆನ್ಸ್ ಎಂಬ ಸಿನಿಮಾದಲ್ಲಿ ಮೊಂದ ಎಂಬ ಕಥಾಪಾತ್ರಕ್ಕೆ ಜೀವ ತುಂಬಿದರು. ನಂತರ ಇವರ್, ಚದಿಕ್ಕಾತ್ತ ಚಂದು, ವೆಳ್ಳಿತ್ತಿರ, ಚಿಂತಾಮಣಿ ಕೊಲಕೇಸ್ ಮೊದಲಾದ ಸಿನಿಮಾಗಳಲ್ಲಿ ಸಣ್ಣಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಚುಲರ್ ಪಾರ್ಟಿ ಸಿನಿಮಾದ ಮೂಲಕ ವಿನಾಯಕನ್ ಅವರಲ್ಲಿನ ನಟನಾ ಪ್ರತಿಭೆ ಗಮನಿಸಲ್ಪಟ್ಟಿತು. ಕ್ರೌರ್ಯದ ಪಾತ್ರಗಳಲ್ಲಿ ಫರ್‌ಫೆಕ್ಟ್ ಎಂಬುದೇ ಅವರ ಪ್ಲಸ್ ಪಾಯಿಂಟ್.
ಕಮ್ಮಟ್ಟಿಪ್ಪಾಡಂ ಸಿನಿಮಾದಲ್ಲಿ ಸಹನಟನಾಗಿದ್ದರೂ ವಿನಾಯಕನ್ ಅವರ ನಟನೆಗೆ ಜನಮನ್ನಣೆ ಸಿಕ್ಕಿತು. ಆಮೇಲೆ ಶಾನವಾಸ್ ಕೆ ಬಾವಕುಟ್ಟಿತೊಟ್ಟಪ್ಪನ್ ಎಂಬ ಸಿನಿಮಾ ಮೂಲಕ ವಿನಾಯಕನ್ ಅವರನ್ನು ಹೀರೊ ಮಾಡಿದರು. ಆದಾದ ನಂತರ ಇತ್ತೀಚೆಗೆ ತೆರೆಗೆ ಬಂದ ಚಿತ್ರ ಕಮಲ್ ನಿರ್ದೇಶನದ ಪ್ರಣಯ ಮೀನುಗಳುಡೆ ಕಡಲ್. ಶುರಾವ್ ಹೈದ್ರು ಎಂಬ ಹೆಸರಿನ ಶಾರ್ಕ್ ಹಂಟರ್ ಕಥಾಪಾತ್ರದಲ್ಲಿ ವಿನಾಯಕನ್ ಮತ್ತೆ ಮಿಂಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT