ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ನಾಯಿಗಳ ರಕ್ಷಣೆಗೆ ₹5 ಕೋಟಿ ಕೊಡುತ್ತೇವೆ: ರಕ್ಷಿತ್ ಶೆಟ್ಟಿ

‘777 ಚಾರ್ಲಿ’ ಬಿಡುಗಡೆಯಾಗಿ 25 ದಿನ ಪೂರೈಸಿದೆ
Last Updated 4 ಜುಲೈ 2022, 10:18 IST
ಅಕ್ಷರ ಗಾತ್ರ

ಬೆಂಗಳೂರು: ನಟ ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಬಿಡುಗಡೆಯಾಗಿ 25 ದಿನ ಪೂರೈಸಿದೆ. ಇದೇ ಸಂದರ್ಭದಲ್ಲಿ ದೇಶಿ ತಳಿ ನಾಯಿಗಳ ದತ್ತು, ರಕ್ಷಣೆ, ಪೋಷಣೆಗೆ ಚಿತ್ರದ ಲಾಭಾಂಶದ ಶೇ 5ರಷ್ಟು ಹಣವನ್ನು(ಸುಮಾರು ₹4–5 ಕೋಟಿ) ನೀಡುವುದಾಗಿ ರಕ್ಷಿತ್‌ ಘೋಷಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಯಿಗಳನ್ನು ದತ್ತು ಪಡೆಯುವ ಕುರಿತು ಉತ್ತಮ ಸಂದೇಶವನ್ನು ನಮ್ಮ ಸಿನಿಮಾ ಹೊಂದಿತ್ತು. ಸಿನಿಮಾ ಒಟ್ಟಾರೆ ₹150 ಕೋಟಿ ವ್ಯವಹಾರ ಮಾಡಿದೆ. ಇದರಲ್ಲಿ ₹90 ರಿಂದ ₹100 ಕೋಟಿಯವರೆಗೆ ನಿರ್ಮಾಪಕರ ಕೈಸೇರಲಿದೆ. ಬಂದಿರುವ ಲಾಭದಲ್ಲಿ ಶೇ 5ರಷ್ಟನ್ನು(₹4–5 ಕೋಟಿ) ಚಾರ್ಲಿ ಹೆಸರಲ್ಲಿ ದೇಶದಾದ್ಯಂತ ಇರುವ ದೇಶೀಯ ತಳಿಯ ನಾಯಿಗಳ ದತ್ತು ಮತ್ತು ರಕ್ಷಣಾ ಕೇಂದ್ರಗಳಿಗೆ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ನೀಡಲಿದ್ದೇವೆ. ಈ ಹಣವನ್ನು ನಾವು ನೇರವಾಗಿ ಹಂಚುವ ಉದ್ದೇಶವಿಟ್ಟುಕೊಂಡಿದ್ದೇವೆ. ಹೀಗಾಗದೇ ಇದ್ದಲ್ಲಿ ಚಾರ್ಲಿ ಹೆಸರಲ್ಲಿ ಒಂದು ಖಾತೆ ತೆರೆದು ಅದರಲ್ಲಿ ಈ ಹಣವನ್ನಿಟ್ಟು, ಅದರಿಂದ ಬರುವ ಬಡ್ಡಿಯನ್ನು ಇಂತಹ ಕೇಂದ್ರಗಳಿಗೆ ಪ್ರತಿ ತಿಂಗಳು ಸಹಾಯದ ರೂಪದಲ್ಲಿ ನೀಡುವ ನಿರ್ಧಾರ ಮಾಡಿದ್ದೇವೆ. ಇದು ಸಹಾಯವಲ್ಲ, ನಮ್ಮ ಜವಾಬ್ದಾರಿಯೂ ಆಗಿದೆ’ ಎಂದರು.

‘ದೇಶದಾದ್ಯಂತ 450 ಚಿತ್ರಮಂದಿರಗಳಲ್ಲಿ ‘777 ಚಾರ್ಲಿ’ ಸಿನಿಮಾ 25ನೇ ದಿನವನ್ನು ಪೂರೈಸಿದೆ. ಇದನ್ನು ವೈಯಕ್ತಿಕವಾಗಿ ದೊಡ್ಡ ಸಾಧನೆ ಎನ್ನುತ್ತೇನೆ. ಇದು ಕೇವಲ ಸಿನಿಮಾವಲ್ಲ. ಇದು ಮೂರು ವರ್ಷದ ಪಯಣ. ಜೀವನದ ಶೇ 5ರಷ್ಟು ಸಮಯವನ್ನು ಈ ಸಿನಿಮಾಗೆ ಇಡೀ ಚಿತ್ರತಂಡ ನೀಡಿದೆ. ಬೇರೆ ಭಾಷೆಗಳಿಂದ ಒಟಿಟಿ ಹಾಗೂ ಸ್ಯಾಟಲೈಟ್‌ ಹಕ್ಕಿಗೆ ಒಳ್ಳೆಯ ಆಫರ್‌ಗಳು ಬರುತ್ತಿವೆ. ಸಿನಿಮಾದ ಹಿಂದೆ 200 ಜನರು ಕೆಲಸ ಮಾಡಿದ್ದಾರೆ. ನನ್ನನ್ನು ಹೊರತುಪಡಿಸಿ, ಇವರೆಲ್ಲರ ಜೊತೆಗೆ ಶೇ 10 ರಷ್ಟು(₹7–10 ಕೋಟಿ) ಲಾಭವನ್ನು ಹಂಚುತ್ತೇನೆ. ಬೇರೆ ಭಾಷೆಗಳಿಂದ ರಿಮೇಕ್‌ ಹಕ್ಕುಗಳನ್ನೂ ಕೇಳಿದ್ದಾರೆ. ಆದರೆ ಈಗಾಗಲೇ ನಾವೇ ಈ ಸಿನಿಮಾವನ್ನು ಡಬ್‌ ಮಾಡಿ ಬಿಡುಗಡೆ ಮಾಡಿರುವ ಕಾರಣ ಹಾಗೂ ಒಟಿಟಿಯಲ್ಲೂ ಬಿಡುಗಡೆಯಾಗುತ್ತಿರುವ ಕಾರಣ ಮುಂದೇನಾಗುತ್ತದೆ ಎಂದು ತಿಳಿದಿಲ್ಲ’ ಎಂದರು.

ಎರಡನೇ ಭಾಗ ಬರುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್‌, ‘ಮೊದಲ ಭಾಗವೇ ಮೂರು ವರ್ಷದ ಪಯಣ. ಇದನ್ನು ಮೊದಲು ಜೀರ್ಣಿಸಿಕೊಳ್ಳಬೇಕು. ಕಿರಣ್‌ರಾಜ್‌ಗೆ ಏನಾದರೂ ಎರಡನೇ ಭಾಗ ಮಾಡಬೇಕು ಎಂದು ಮನಸಾದರೆ, ಮಾಡುತ್ತೇವೆ. ನಾನೇ ನಿರ್ಮಾಪಕನಾಗುತ್ತೇನೆ. ಆಗ ಶಾರ್ವರಿ ದೊಡ್ಡವಳಾಗಿರುತ್ತಾಳೆ. ಆಕೆಯೇ ನಾಯಕಿ’ ಎನ್ನುತ್ತಾ ಮುಗುಳ್ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT