ಹೇಟ್‌ ಯೂ ಎನ್ನುವವೆಬ್‌ ಸೀರೀಸ್‌!

7

ಹೇಟ್‌ ಯೂ ಎನ್ನುವವೆಬ್‌ ಸೀರೀಸ್‌!

Published:
Updated:
Deccan Herald

ಮೆಟ್ರೊ ರೈಲು ಬಳಸಿ ಕಚೇರಿಗೆ ಪ್ರಯಾಣ ಮಾಡುವಾಗಲೇ, ಸ್ಮಾರ್ಟ್‌ಫೋನ್‌ನಲ್ಲಿ ಇಪ್ಪತ್ತು–ಮೂವತ್ತು ನಿಮಿಷಗಳ ಅವಧಿಯಲ್ಲಿ ನೋಡಿಬಿಡಬಹುದಾದ ವೆಬ್‌ ಸೀರೀಸ್‌ಗಳ ಕಾಲ ಇದು. ಇದನ್ನು ವರ್ಷದ ಹಿಂದೆಯೇ ಗ್ರಹಿಸಿದ್ದ ‘ಸಖತ್‌ ಸ್ಟುಡಿಯೋಸ್‌’ ಒಂದು ವೆಬ್‌ ಸೀರೀಸ್‌ ಮಾಡಿತ್ತು. ಅದಕ್ಕೆ ‘ಲೂಸ್‌ ಕನೆಕ್ಷನ್‌’ ಎಂದು ಹೆಸರಿಟ್ಟಿತ್ತು.

ನಟ ಶಿವರಾಜ್‌ ಕುಮಾರ್‌ ಕುಮಾರ್ ಅವರ ಪುತ್ರಿ ನಿವೇದಿತಾ ಅವರು ಈಗ ‘ಸಖತ್‌ ಸ್ಟುಡಿಯೊ’ ಜೊತೆಯಾಗಿ ‘ಹೇಟ್‌ ಯೂ ರೋಮಿಯೊ’ ಎನ್ನುವ ಹೊಸ ವೆಬ್‌ ಸೀರೀಸ್‌ ನಿರ್ಮಾಣ ಮಾಡುತ್ತಿದ್ದಾರೆ. ಇದರ ಚಿತ್ರೀಕರಣದ ಕೆಲಸಕ್ಕಾಗಿ ಒಂದು ತಂಡ ವಿಯೆಟ್ನಾಂಗೆ ಈಗಾಗಲೇ ತೆರಳಿದೆ. ಅರವಿಂದ್ ಅಯ್ಯರ್ ಹಾಗೂ ದಿಶಾ ಮದನ್ ಅವರು ಇದರಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ‘ಲೂಸ್ ಕನೆಕ್ಷನ್’ ನಿರ್ದೇಶಿಸಿದ್ದ ಹಸೀನ್ ಖಾನ್ ಹಾಗೂ ಇಶಾಮ್ ಖಾನ್ ಅವರೇ
ಇದರ ನಿರ್ದೇಶನವನ್ನೂ ಮಾಡುತ್ತಿದ್ದಾರೆ.


ಅರವಿಂದ ಅಯ್ಯರ್

‘ಸಖತ್ ಸ್ಟುಡಿಯೋ ಸಂಸ್ಥೆ ಕನ್ನಡದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ನೀಡುವ ಕೆಲಸವನ್ನು ಒಂದು ವರ್ಷದಿಂದ ಮಾಡುತ್ತಿದೆ. ಹೊಸ ವೆಬ್‌ ಸೀರೀಸ್‌ಅನ್ನು ದೊಡ್ಡ ಮಟ್ಟದಲ್ಲಿ ಮಾಡೋಣ ಎಂಬ ಆಲೋಚನೆ ನಮ್ಮಲ್ಲಿ ಇತ್ತು. ಶಿವಣ್ಣ ಅವರು ಲೂಸ್‌ ಕನೆಕ್ಷನ್‌ ವೆಬ್‌ ಸೀರೀಸ್‌ ನೋಡಿದ್ದರು. ನಾವು ಒಮ್ಮೆ ಅವರನ್ನು ಭೇಟಿ ಆಗಿದ್ದಾಗ, ಅವರು ಡಿಜಿಟಲ್ ಮಾಧ್ಯಮದ ಬಗ್ಗೆ ಚರ್ಚಿಸಿದ್ದರು. ನಮ್ಮ ತಲೆಯಲ್ಲಿದ್ದ ಹೊಸ ಕಥೆಯನ್ನು ಅವರಿಗೆ ವಿವರಿಸಿದೆವು’ ಎಂದರು ಸಖತ್‌ ಸ್ಟುಡಿಯೋಸ್‌ ಸಂಸ್ಥೆಯ ಪ್ರದೀಪ್.

ಸೈಫ್‌ ಅಲಿ ಖಾನ್‌  ಸ್ಯಾಕ್ರೆಡ್‌ ಗೇಮ್ಸ್‌ ನೆಟ್‌ಫ್ಲಿಕ್ಸ್‌ಗಾಗಿ ಮಾಡಿದರು. ಮಾಧವನ್‌ ಬ್ರೀತ್‌ ಎಂಬ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು.  ಹಾಗೆಯೇ ಜಗಪತಿ ಬಾಬು ಅವರು ತೆಲುಗಿನಲ್ಲಿ ಮಾಡಿದರು. ತಮಿಳಿನಲ್ಲಿ ಕೂಡ ಇಂತಹ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಆದರೆ, ಕನ್ನಡದಲ್ಲಿ ಕೆಲವರು ಮಾತ್ರ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನ್ನುವ ಪ್ರದೀಪ್, ‘ನಮ್ಮ ಸೀರೀಸ್‌ನ ಗುಣಮಟ್ಟ ಚಲನಚಿತ್ರಗಳ ಗುಣಮಟ್ಟಕ್ಕೆ ಸರಿಸಮವಾಗಿ ಇರುತ್ತದೆ. ವೆಬ್‌ ಸೀರೀಸ್‌ ಎಂಬುದು ಟಿ.ವಿ.
ಧಾರಾವಾಹಿ ಹಾಗೂ ಸಿನಿಮಾಗಳಿಗೆ ಪರ್ಯಾಯವಾಗಿ ಬೆಳೆಯಬೇಕು’ ಎನ್ನುತ್ತಾರೆ.

ಇಂದಿನ ಯುವಕರೂ ಸೇರಿದಂತೆ ಬಹುತೇಕರು ಹೆಚ್ಚಿನ ಸಮಯವನ್ನು ಮೊಬೈಲ್‌ ನೋಡುತ್ತ ಕಳೆಯುತ್ತಿದ್ದಾರೆ ಎಂಬ ಮಾತು ಇದೆ. ಹಾಗಾಗಿ, ಮನರಂಜನೆಯನ್ನು ಮೊಬೈಲ್‌ ಮೂಲಕವೇ ಒದಗಿಸಿ, ಆ ಮೂಲಕ ಲಾಭ ಗಳಿಸುವ ಅವಕಾಶ ಇದೆಯೇ ಎಂಬುದನ್ನು ‘ಸಖತ್‌ ಸ್ಟುಡಿಯೊ’ ಪರೀಕ್ಷಿಸಿತ್ತು. ‘ಲೂಸ್‌ ಕನೆಕ್ಷನ್‌’ ಸೀರೀಸ್‌ಅನ್ನು ಯೂಟ್ಯೂಬ್‌ ಮೂಲಕ ಉಚಿತ ವೀಕ್ಷಣೆಗೆ ನೀಡಿಯೂ, ಲಾಭ ಆಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

‘ಕನ್ನಡದಲ್ಲಿ ವೆಬ್‌ ಸೀರೀಸ್‌ ಮಾರುಕಟ್ಟೆ ಇನ್ನೂ ತೆರೆದುಕೊಂಡಿಲ್ಲ ಎಂಬ ಮಾತುಗಳು ಇವೆ. ಆದರೆ ವಾಸ್ತವ ಏನೆಂದರೆ ನಮ್ಮಲ್ಲಿ ಅಂತಹ ಪ್ರಯತ್ನಗಳು ಹೆಚ್ಚು ನಡೆದಿಲ್ಲ. ನಮ್ಮಲ್ಲಿ ವೆಬ್‌ ಸೀರೀಸ್‌ಗಳನ್ನು ಯಾರು ನೋಡುತ್ತಿದ್ದಾರೆ, ಅವರ ವಯಸ್ಸು ಎಷ್ಟು, ಅವರು ಯಾವ ಪ್ರದೇಶಕ್ಕೆ ಸೇರಿದವರು ಎಂಬ ವಿವರಗಳು ಇಲ್ಲ. ಹಾಗಾಗಿ, ಇವನ್ನೆಲ್ಲ ಅರ್ಥ ಮಾಡಿಕೊಳ್ಳಲು ನಾವು ಲೂಸ್‌ ಕನೆಕ್ಷನ್‌ ನಿರ್ಮಾಣ ಮಾಡಿದೆವು. ಆ ಸೀರೀಸ್‌ ನಮಗೆ ವಿಶ್ವಾಸ ತಂದುಕೊಟ್ಟಿತು’ ಎಂದರು ಪ್ರದೀಪ್.

ಅಂದಹಾಗೆ, ಈ ಸಂಸ್ಥೆಯ ಹಿಂದಿನ ವೆಬ್‌ ಸೀರೀಸ್‌ಗಳನ್ನು ಉಚಿತ ವೀಕ್ಷಣೆಗೆ ನೀಡಿದಂತೆ ಈ ಬಾರಿಯದ್ದನ್ನೂ ಉಚಿತವಾಗಿ ನೋಡಬಹುದೇ ಎಂಬುದು ಇನ್ನೂ ಖಚಿತವಾಗಿಲ್ಲ. ‘ನಾವು ಇದನ್ನು ಯೂಟ್ಯೂಬ್‌ ಮೂಲಕವಂತೂ ಪ್ರಸಾರ ಮಾಡುವುದಿಲ್ಲ. ಏಕೆಂದರೆ, ಯೂಟ್ಯೂಬ್‌ ಮಾತ್ರ ನಂಬಿಕೊಂಡರೆ ಹೆಚ್ಚು ಆದಾಯ ಬರುವುದಿಲ್ಲ. ಬ್ರ್ಯಾಂಡ್ ಇಂಟಿಗ್ರೇಷನ್ (ಮನರಂಜನಾ ಕಾರ್ಯಕ್ರಮದ ಮೂಲಕವೇ ಕೆಲವು ಬ್ರ್ಯಾಂಡ್‌ಗಳಿಗೆ ಪ್ರಚಾರ ನೀಡಿ, ಆದಾಯ ಗಳಿಸುವುದು) ಹಾಗೂ ಡಬ್ಬಿಂಗ್ ಹಕ್ಕುಗಳ ಮಾರಾಟದಿಂದಾಗಿ ನಮಗೆ ಆದಾಯ ಬಂದಿದೆ. ಈಗಿನ ಸೀರೀಸ್‌ಅನ್ನು ಯಾವ ವೇದಿಕೆ ಮೂಲಕ ಇದು ಜನರನ್ನು ತಲುಪಿಸುತ್ತೇವೆ ಎಂಬುದನ್ನು ಮುಂದೆ ತಿಳಿಸುತ್ತೇವೆ’ ಎಂದು ಅವರು ಹೇಳಿದರು.

ದಕ್ಷಿಣ ಭಾರತದ ಮಟ್ಟಿಗೆ ಇದು ಅತಿ ದೊಡ್ಡ ವೆಬ್ ಸೀರೀಸ್ ಆಗಲಿದ್ದು, ಇದರ ಶೇಕಡ 90ರಷ್ಟು ಭಾಗ ವಿದೇಶದಲ್ಲಿ ಚಿತ್ರೀಕರಣ ಆಗಲಿದೆ ಎಂದು ಸಂಸ್ಥೆ ಹೇಳಿದೆ. ಈ ಸೀರೀಸ್‌ನಲ್ಲಿ ತಲಾ 30 ನಿಮಿಷಗಳ ಏಳು ಸಂಚಿಕೆಗಳು ಇರಲಿವೆಯಂತೆ.

ಶಿವಣ್ಣಂಗೆ ಧನ್ಯವಾದ

ಹೊಸ ವೆಬ್‌ ಸೀರೀಸ್‌ಗೆ ಕೈಜೋಡಿಸಿದ ಶಿವಣ್ಣ ಅವರಿಗೆ ‘ಸಖತ್‌ ಸ್ಟುಡಿಯೊ’ ತಂಡ ಧನ್ಯವಾದ ಹೇಳುತ್ತಿದೆ. ‘ಡಿಜಿಟಲ್‌ ಮಾಧ್ಯಮದಲ್ಲಿನ ಸಾಧ್ಯತೆಗಳ ಬಗ್ಗೆ ಅವರಿಗೆ ವಿವರಿಸಿದಾಗ, ಅವರು ಅದನ್ನು ಅರ್ಥ ಮಾಡಿಕೊಂಡು, ನಮ್ಮನ್ನು ಹುರಿದುಂಬಿಸಿದರು’ ಎನ್ನುತ್ತಿದ್ದಾರೆ ಸಖತ್ ಸ್ಟುಡಿಯೊ ತಂಡದವರು.

ಹೊಸ ಸೀರೀಸ್‌ನ ಕಥಾಹಂದರ ಗಂಭೀರವಾಗಿ ಇರುವುದಿಲ್ಲವಂತೆ. ಅರವಿಂದ್ ಅವರು ಮಾಡೆಲ್‌ ಪಾತ್ರವನ್ನು ನಿಭಾಯಿಸಲಿದ್ದಾರೆ. ದಿಶಾ ಅವರು ವಿಡಿಯೊ ಬ್ಲಾಗರ್ ಪಾತ್ರ ನಿಭಾಯಿಸುತ್ತಿದ್ದಾರೆ. ‘ಜೀವನ ಎಲ್ಲರಿಗೂ ಒಂದೊಂದು ಪಾಠ ಕಲಿಸುತ್ತದೆ’ ಎಂಬುದು ಕಥೆಯ ಸಾರ.


ಶಿವರಾಜ್‌ಕುಮಾರ್

ಹೊಸ ಕಾರ್ಯಕ್ರಮದ ಕುರಿತು ಶಿವರಾಜ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, ‘ನನ್ನ ಮಗಳು (ನಿವೇದಿತಾ) ಇದರ ನಿರ್ಮಾಣ ಕಾರ್ಯದಲ್ಲಿ ಇದ್ದಾಳೆ. ಹೊಸ ಕಾಲದ ಮಕ್ಕಳಿಗೆ ಹೊಸ ಆಲೋಚನೆಗಳು ಬರುತ್ತವೆ. ಹಾಗಾಗಿಯೇ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾಳೆ’ ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !