ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿರ್ಬಂಧ: ‘ಚಂದನವನ’ ಹೈರಾಣ

ಚಿತ್ರರಂಗಕ್ಕೆ ಹೊಡೆತ ನೀಡಲಿದೆ ವಾರಾಂತ್ಯ ಕರ್ಫ್ಯೂ
Last Updated 5 ಜನವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ 50ಕ್ಕೆ ನಿರ್ಬಂಧಿಸಿರುವುದು ಹಾಗೂ ವಾರಾಂತ್ಯದ ಕರ್ಫ್ಯೂ ಚಿತ್ರರಂಗವನ್ನು ಮತ್ತೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಸತತ ಎರಡು ಲಾಕ್‌ಡೌನ್‌ನಿಂದ ಕಂಗೆಟ್ಟು, ನಾಡಹಬ್ಬದ ಬಳಿಕ ಗರಿಗೆದರಿ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗದ ಮೇಲೆ ಮತ್ತೆ ಕಾರ್ಮೋಡ ಆವರಿಸಿದೆ.

ಜನವರಿಯಲ್ಲಿ ‘ಏಕ್‌ ಲವ್‌ ಯಾ’ ಸಿನಿಮಾವನ್ನು ಬಿಟ್ಟರೆ ದೊಡ್ಡ ಬಜೆಟ್‌ ಸಿನಿಮಾಗಳಿಲ್ಲ. ಸರ್ಕಾರದ ಹೊಸ ಮಾರ್ಗಸೂಚಿ ಹೊರಬೀಳುತ್ತಿದ್ದಂತೆಯೇ ‘ಏಕ್‌ ಲವ್‌ ಯಾ’ ಸಿನಿಮಾದ ಬಿಡುಗಡೆಯನ್ನು ನಿರ್ದೇಶಕ ಪ್ರೇಮ್‌ ಮುಂದೂಡಿದ್ದಾರೆ. ಜ.7ಕ್ಕೆ ಬಿಡುಗಡೆಯಾಗಬೇಕಿದ್ದ ಪ್ರಕಾಶ್ ರಾಜ್ ಮೇಹು ನಿರ್ದೇಶನದ, ಅಚ್ಯುತ್‌ ಕುಮಾರ್‌ ನಟನೆಯ ‘ಡಿಎನ್‌ಎ’ ಚಿತ್ರವನ್ನೂ ಮುಂದೂಡಲಾಗಿದೆ.

ಜ.7ಕ್ಕೆ ಬಿಡುಗಡೆಯಾಗಬೇಕಿದ್ದ ಎಸ್‌.ಎಸ್‌. ರಾಜಮೌಳಿ ಅವರ ಪ್ಯಾನ್‌ ಇಂಡಿಯಾ ಸಿನಿಮಾ ‘ಆರ್‌ಆರ್‌ಆರ್‌’ ಹಾಗೂ ಜ.14ಕ್ಕೆ ಬಿಡುಗಡೆಯಾಬೇಕಿದ್ದ ಪ್ರಭಾಸ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್‌’ ಚಿತ್ರಗಳ ಬಿಡುಗಡೆಯನ್ನೂ ಮುಂದೂಡಲಾಗಿದೆ. ‘ಲೂಸ್‌ ಮಾದ’ ಯೋಗೇಶ್‌ ನಟನೆಯ ‘ಒಂಬತ್ತನೇ ದಿಕ್ಕು’ ಸಿನಿಮಾವನ್ನು ಜ.14ಕ್ಕೆ ಬಿಡುಗಡೆ ಮಾಡಲು ನಿರ್ದೇಶಕ ದಯಾಳ್‌ ಪದ್ಮನಾಭನ್‌ ನಿರ್ಧರಿಸಿದ್ದರು. ಆದರೆ ವಾರಾಂತ್ಯದ ಕರ್ಫ್ಯೂ, ದಯಾಳ್‌ ನಿರ್ಧಾರವನ್ನು ತಲೆಕೆಳಗಾಗಿಸಿದೆ.

‘ವಾರಾಂತ್ಯದ ಕರ್ಫ್ಯೂ ತರ್ಕರಹಿತ. ಚಲನಚಿತ್ರ ವಾಣಿಜ್ಯ ಮಂಡಳಿ ಪ್ರತಿನಿಧಿಗಳ ಜೊತೆಗೂಡಿ ಶೀಘ್ರದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿಯಾಗುತ್ತೇವೆ. ವಾರಾಂತ್ಯದಲ್ಲಿ ಚಿತ್ರಪ್ರದರ್ಶನಕ್ಕೆ ವಿನಾಯಿತಿ ನೀಡುವಂತೆ ಕೋರುತ್ತೇವೆ. ಮುಖ್ಯಮಂತ್ರಿಯವರ ನಿರ್ಧಾರವನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದಿದ್ದಾರೆ ದಯಾಳ್‌.

ಜ.21ಕ್ಕೆ ಬಿಡುಗಡೆಯಾಗಬೇಕಿದ್ದ ಅಚ್ಯುತ್‌ ಕುಮಾರ್‌ ನಟನೆಯ ‘ಫೋರ್‌ ವಾಲ್ಸ್‌’ ಹಾಗೂ ಜ.28 ರಂದು ಆಗಬೇಕಿದ್ದ ನಟ ಶಿವರಾಜ್‌ ಕೆ.ಆರ್‌.ಪೇಟೆ ನಟನೆಯ ‘ಧಮಾಕ’ ಚಿತ್ರದ ಬಿಡುಗಡೆಯನ್ನೂ ಮುಂದೂಡಲಾಗಿದೆ. ಓಮೈಕ್ರಾನ್‌ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದ ಕಾರಣ ಡಿ.10ರಂದು ಬಿಡುಗಡೆಯಾಗಬೇಕಿದ್ದ ನಟ ಶರಣ್‌ ನಟನೆಯ, ಸಿಂಪಲ್‌ ಸುನಿ ನಿರ್ದೇಶನದ ‘ಅವತಾರ ಪುರುಷ’ ಸಿನಿಮಾವನ್ನು ಮುಂದೂಡಲಾಗಿತ್ತು. ಜನವರಿ ಅಂತ್ಯದಲ್ಲಿ ತೆರೆಕಾಣಬೇಕಿದ್ದ ಈ ಸಿನಿಮಾವನ್ನೂ ಮುಂದೂಡಲಾಗಿದೆ. ಡಿ.31ರಂದು ಬಿಡುಗಡೆಯಾಗಬೇಕಿದ್ದ ನಟ ರಕ್ಷಿತ್‌ ಶೆಟ್ಟಿ ನಟನೆಯ ‘ಚಾರ್ಲಿ 777’ ಸಿನಿಮಾದ ಭವಿಷ್ಯವೇನು ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಫೆಬ್ರುವರಿಯಲ್ಲಿದ್ದವು ಸಾಲು ಸಾಲು ಸಿನಿಮಾಗಳು

ಫೆ.4ರಂದು ಬಿಡುಗಡೆಯಾಗಬೇಕಿದ್ದ ಶ್ರೀ ಮಹಾದೇವ್‌ ಹಾಗೂ ಅದಿತಿ ಪ್ರಭುದೇವ ನಟನೆಯ ‘ಗಜಾನನ ಆ್ಯಂಡ್‌ ಗ್ಯಾಂಗ್‌’ ಸಿನಿಮಾ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ಫೆ.11ರಂದು ಶ್ರೀನಿ ನಟಿಸಿ, ನಿರ್ದೇಶಿಸಿರುವ ‘ಓಲ್ಡ್‌ ಮಾಂಕ್‌’, ಡಾರ್ಲಿಂಗ್‌ ಕೃಷ್ಣ ನಟನೆಯ ‘ಲವ್‌ ಮಾಕ್ಟೇಲ್‌–2’ ಹಾಗೂ ಧನ್ವೀರ್‌ ಹಾಗೂ ಶ್ರೀಲೀಲಾ ನಟನೆಯ ‘ಬೈ ಟು ಲವ್‌’–ಹೀಗೆ ಮೂರು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದವು. ಈ ಪೈಕಿ ‘ಬೈ ಟು ಲವ್‌’ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಇನ್ನುಳಿದ ಸಿನಿಮಾಗಳ ಬಗ್ಗೆ ಚಿತ್ರತಂಡವು ಅಧಿಕೃತ ಮಾಹಿತಿಯನ್ನು ಇನ್ನಷ್ಟೇ ನೀಡಬೇಕಿದೆ.

ನಟ ಕಿಚ್ಚ ಸುದೀಪ್‌ ನಟನೆಯ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ಬಿಡುಗಡೆಗೆ ಫೆ.24ಕ್ಕೆ ದಿನಾಂಕ ನಿಗದಿಯಾಗಿದೆ. ಆದರೆ ಚಿತ್ರ ಬಿಡುಗಡೆ ಕುರಿತು ಚಿತ್ರತಂಡ ಇನ್ನೂ ಗೊಂದಲದಲ್ಲಿದೆ. ಕಳೆದ ವರ್ಷ ಆಗಸ್ಟ್‌ 19ರಂದೇ ತೆರೆಯ ಮೇಲೆ ಬರಬೇಕಿದ್ದ ಈ ಸಿನಿಮಾ, ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೆ ಸಿನಿಮಾವನ್ನು ಮುಂದೂಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಚಿತ್ರತಂಡವಿದೆ.

***

ಚಿತ್ರಮಂದಿರಗಳಲ್ಲಿ ಶೇ 50 ಆಸನ ಭರ್ತಿಗೆ ವಿರೋಧವಿಲ್ಲ. ಆದರೆ, ಚಿತ್ರ ಬಿಡುಗಡೆಯಾಗುವುದೇ ಶುಕ್ರವಾರದಂದು. ವಾರಾಂತ್ಯದಲ್ಲೇ ಚಿತ್ರಮಂದಿರಕ್ಕೆ ಹೆಚ್ಚಿನ ಜನರು ಆಗಮಿಸುತ್ತಾರೆ. ವಾರಾಂತ್ಯದ ಕರ್ಫ್ಯೂನಿಂದ ಆ ಆದಾಯಕ್ಕೂ ಹೊಡೆತ ಬೀಳಲಿದೆ.

ಡಿ.ಕೆ.ರಾಮಕೃಷ್ಣ, ಅಧ್ಯಕ್ಷ, ನಿರ್ಮಾಪಕರ ಸಂಘ

ಪ್ರೇಕ್ಷಕರ ಸಂಖ್ಯೆ ನಿರ್ಬಂಧ, ವಾರಾಂತ್ಯ ಹಾಗೂ ರಾತ್ರಿ ಕರ್ಫ್ಯೂ ಕಾರಣದಿಂದ ಸಿನಿಮಾ ಬಿಡುಗಡೆ ಮುಂದೂಡುತ್ತಿದ್ದೇವೆ. ಕೋವಿಡ್‌ ಪ್ರಕರಣಗಳು ಇಳಿಕೆಯಾಗಿ, ಪರಿಸ್ಥಿತಿ ಸುಧಾರಿಸಿದ ಬಳಿಕ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸುತ್ತೇವೆ.

-ಪ್ರೇಮ್‌, ‘ಏಕ್‌ ಲವ್‌ ಯಾ’ ಸಿನಿಮಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT