ಗುರುವಾರ , ಅಕ್ಟೋಬರ್ 6, 2022
24 °C

ಮುಂದಿನ ಸಿನಿಮಾ ಯಾವುದು? ಮೈಸೂರಲ್ಲಿ ಉತ್ತರ ಕೊಟ್ಟ ನಟ ಯಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಮುಂದಿನ ಚಿತ್ರ ಯಾವುದು, ಯಾವ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂಬುದನ್ನು ಕಾದು ನೋಡಿ’ ಎಂದು ಚಲನಚಿತ್ರ ನಟ ಯಶ್ ಪ್ರತಿಕ್ರಿಯಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಹೊಸ ಕೇಶವಿನ್ಯಾಸದ ಬಗ್ಗೆಯೂ ಕುತೂಹಲವಿರಲಿ’ ಎಂದರು.

‘ಮೈಸೂರು ನನ್ನ ಹುಟ್ಟೂರು. ಆಡಿ ಬೆಳೆದ ಊರಿದು. ಸ್ನೇಹಿತರೆಲ್ಲಾ ಸಿಗುತ್ತಾರೆ. ಇಲ್ಲಿಗೆ ಬರಲು ತುಂಬಾ ಖುಷಿಯಾಗುತ್ತದೆ. ಮುಂಬರುವ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ಯೋಜಿಸಿಲ್ಲ; ನೋಡೋಣ’ ಎಂದು ಹೇಳಿದರು.

---

ಬೀಟ್ ಹಾಕಿಕೊಂಡಿದ್ದೆ, ಸಣ್ಣ ಬದಲಾವಣೆಗಳು ಬದಲಾಯಿಸಿದವು...

– ಹೀಗೆಂದವರು ಚಲನಚಿತ್ರ ನಟ ಯಶ್.

ಮೈಸೂರು ವಿಶ್ವವಿದ್ಯಾಲಯದಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಯುವಜನ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನದಲ್ಲಿ ಖಂಡಿತವಾಗಿಯೂ ತಂದೆ–ತಾಯಿ ಖುಷಿಯಾಗುವಷ್ಟು ಒಳ್ಳೆಯ ರೀತಿಯಲ್ಲಿ ಇದ್ದವನಲ್ಲ. ಬಹಳ ಬೇಜವಾಬ್ದಾರಿಯಿಂದ, ಸ್ಟಂಟ್‌ಗಳನ್ನು ಮಾಡಿಕೊಂಡು, ಹುಡುಗರೊಂದಿಗೆ ಕಾಳಿದಾಸ ರಸ್ತೆ, ಒಂಟಿ ಕೊಪ್ಪಲು, ಪಡುವಾರಹಳ್ಳಿ, ಗಂಗೋತ್ರಿಯಲ್ಲಿ ಬೀಟ್‌ ಹಾಕಿಕೊಂಡು ಇದ್ದವನು. ಈಗ ಅದೇ ಊರಲ್ಲಿ ಇಷ್ಟೊಂದು ಪ್ರೀತಿ ಸಿಗುತ್ತಿರುವುದು ಖುಷಿಯ ವಿಚಾರ’ ಎಂದರು.

‘ಅಂಥದ್ದೇನು ಬಹಳ ಬದಲಾವಣೆ ಮಾಡಿಕೊಂಡಿಲ್ಲ. ಸಣ್ಣ ಬದಲಾವಣೆಗಳು ಬದಲಾಯಿಸಿಬಿಡುತ್ತವೆ. ಸಾಧಿಸಬೇಕಾದರೆ ತುಂಬಾ ಬೋರಿಂಗ್ ಆಗಿರಬೇಕು; ಎಲ್ಲ ಬಿಟ್ಟು ಜೀವನದಲ್ಲಿ ತಪಸ್ಸು ಮಾಡಬೇಕು ಎಂದುಕೊಳ್ಳುತ್ತೇವೆ. ಅದಲ್ಲ. ಸಣ್ಣ ಸಣ್ಣ ವಿಷಯ ಹಾಗೂ ಟ್ಯೂನಿಂಗ್‌ಗಳಿಂದ ಏನು ಬೇಕಾದರೂ ಸಾಧಿಸಬಹುದು. ಮುಖ್ಯವಾಗಿ ಆತ್ಮವಿಶ್ವಾಸವಿರಬೇಕು’ ಎಂದು ತಿಳಿಸಿದರು.

ಪಾಸಿವಿಟ್ ಎನರ್ಜಿ ಬೇಕು:

‘ಕನ್ನಡ ಸಿನಿಮಾಕ್ಕೆ ಇಡೀ ಭಾರತ ಇಷ್ಟು ಬೇಗ ದೊಡ್ಡ ಗೌರವ ಕೊಡುತ್ತದೆ ಎಂದು ನಂಬಿದ್ರಾ? ಅದು ಆಗಿದೆಯಲ್ಲವೇ? ಸತ್ಯ ತಾನೆ? ಮುಕ್ತವಾಗಿಯೇ ಮಾತನಾಡುತ್ತೇನೆ. ಅದರಲ್ಲಿ ನನಗೇನೂ ಸಂಕೋಚವಿಲ್ಲ. ಏಕೆಂದರೆ, ಪಾಸಿಟಿವ್ ಎನರ್ಜಿ ಯಾವಾಗಲೂ ಹರಡಬೇಕು’ ಎಂದರು.

‘ಕೆಲವು ದಿನಗಳ ಹಿಂದೆ ನಾವು ಆತ್ಮವಿಶ್ವಾಸದಿಂದ ಮಾತನಾಡುವಾಗ, ಏನಿವನು ಬಹಳ ಎಗರಾಡುತ್ತಿದ್ದಾನೆ ಎನಿಸಿರಬೇಕು. ಒಳ್ಳೆಯದು ಮಾತನಾಡಿದರೆ, ಯೋಚಿಸಿದರೆ ಮಿಕ್ಕಿದ್ದೆಲ್ಲವೂ ತಾನಾಗಿಯೇ ಬರುತ್ತಿರುತ್ತದೆ. ಯಾರೋ ಒಂದಷ್ಟು ಜನ ಒಳ್ಳೆಯವರು ಸೇರಿಕೊಳ್ಳುತ್ತಾರೆ. ಒಬ್ಬರಿಂದಲೇ ಎಲ್ಲವೂ ಆಗುವುದಿಲ್ಲ. ಆ ಕಡೆಗೆ ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.

ನಮ್ಮೊಳಗೇ ಒಂದು ಸರ್ಕಾರವಿರಲಿ

‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸೋಣ. ಈಗ ಆಡಳಿತ ಮಾಡುತ್ತಿರುವವರು ಹಾಗೂ ಅವರ ಯೋಜನೆಗಳನ್ನು ಸ್ಮರಿಸೋಣ. ಅದನ್ನು ನಂಬೋಣ. ಆದರೆ, ನಮ್ಮೊಳಗೆ ಒಂದು ಸರ್ಕಾರ ಹುಟ್ಟಬೇಕು. ನಮ್ಮೊಳಗೆ ನಾವೇ ಯೋಜನೆ ಹಾಕಿಕೊಳ್ಳಬೇಕು. ಕಾರ್ಯರೂಪಕ್ಕೆ ತರಬೇಕು. ಅವರವರ ಕ್ಷೇತ್ರದಲ್ಲಿ ಇರುವ ಕಷ್ಟಗಳನ್ನು ದಾಟಿ ಮುಂದೆ ಬರುವಂತಾದರೆ ದೇಶ ತಾನಾಗಿಯೇ ಮುಂದೆ ಹೋಗುತ್ತದೆ. ಇನ್ನೇನೂ ಬೇಕಾಗುವುದಿಲ್ಲ’ ಎಂದು ತಿಳಿಸಿದರು.

‘ಯಾರು ಏನು ಬೇಕಾದರೂ ಸಾಧಿಸಬಹುದು. ಕುಳಿತಲ್ಲೇ, ಚಿಕ್ಕ ಹಳ್ಳಿಯಿಂದ ಇಂಟರ್‌ನೆಟ್‌ ಸಂಪರ್ಕವಿದ್ದರೆ ಸಮಸ್ಯೆಗಳನ್ನು ಪರಿಹರಿಸಬಹುದು. ಶಕ್ತಿಯನ್ನು ಅದಕ್ಕೆ ಬಳಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ತಿಳಿದು ಸದ್ಬಳಕೆ ಮಾಡಿಕೊಳ್ಳಿ. ಹಸಿವಿದ್ದರೆ ಊಟ ಸಿಗುತ್ತದೆ. ಸಾಧಿಸಬೇಕು ಎನ್ನುವುದಿದ್ದರೆ ದಾರಿಗಳು ಸಿಗುತ್ತವೆ. ಆ ಕಡೆಗೆ ಗಮನಹರಿಸಬೇಕು. ಮಜಾ ಕೂಡ ಮಾಡಬೇಕು. ಸಣ್ಣ ಸಣ್ಣ ಖುಷಿಗಳನ್ನೂ ಅನುಭವಿಸಿ. ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ತುಂಬಾ ಗಂಭೀರವಾಗಬೇಡಿ’ ಎಂದು ಯುವಜನರಿಗೆ ಸಲಹೆ ನೀಡಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಟ್ ಎಂದು ನಿರ್ಧಾರ ಮಾಡುತ್ತಾರೆ. ಅವರ ಯೋಜನೆಗಳನ್ನೆಲ್ಲ ಅನುಷ್ಠಾನಕ್ಕೆ ತರುವ ಶಕ್ತಿಯನ್ನು ದೇವರು ನೀಡಲಿ’ ಎಂದು ಪ್ರಾರ್ಥಿಸಿದರು. ‘ಹೊರಗಡೆ ಸಾವಿರ ನಡೆಯಬಹುದು. ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಕೆಲಸ ಮಾಡುವವರಿಗೆ ರಾಜಕೀಯ ಶಕ್ತಿಯನ್ನು ಜನರೇ ಕೊಡುತ್ತಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು