ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಿನಿಮಾ ಖರೀದಿಗೆ ಒಟಿಟಿ ವೇದಿಕೆಗಳ ಹಿಂದೇಟು; ಇದರ ಹಿಂದಿರುವ ಹಕೀಕತ್ತೇನು?

PV Web Exclusive
Last Updated 3 ಸೆಪ್ಟೆಂಬರ್ 2020, 7:07 IST
ಅಕ್ಷರ ಗಾತ್ರ

ಅದು 2010ರ ಸಮಯ. ಸಿನಿಮಾ ನೋಡಲು ಜನರು ಥಿಯೇಟರ್‌ಗಳಿಗೆ ದಾಂಗುಡಿ ಇಡುತ್ತಿದ್ದ ಕಾಲವದು. ಟಿ.ವಿ.ಗಳಲ್ಲಿ ತಮ್ಮ ನೆಚ್ಚಿನ ನಟ, ನಟಿಯರ ಸಿನಿಮಾ ಪ್ರಸಾರವಾದರೆ ಬೆರಗುಗಣ್ಣಿನಿಂದ ನೋಡಿ ಆನಂದತುಂದಿಲರಾಗುತ್ತಿದ್ದರು. ಮನರಂಜನಾ ಉದ್ಯಮದ ಪ್ರಗತಿಯೂ ಆಮೆಗತಿಯಲ್ಲಿತ್ತು. ಆಗ ಸ್ಮಾರ್ಟ್‌ಫೋನ್ ಇರಲಿಲ್ಲ. ಅಂತರ್ಜಾಲ ಸೌಲಭ್ಯವೂ ಸುಲಭಕ್ಕೆ ದಕ್ಕುತ್ತಿರಲಿಲ್ಲ.

ಒಂದು ದಶಕದ ಅವಧಿಯಲ್ಲಿ ಮನರಂಜನಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾಗಿದೆ. ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ರಿಂಗಾಣಿಸುತ್ತಿವೆ. ಅಂತರ್ಜಾಲ ಸೌಲಭ್ಯ ತೀರಾ ಅಗ್ಗವಾಗಿದೆ. ಥಿಯೇಟರ್‌, ಟಿ.ವಿ. ಮುಂದೆ ಸಿನಿಮಾ ನೋಡಲು ಕಾಯುವ ಪ್ರಮೇಯವೇ ಈಗಿಲ್ಲ. ಮತ್ತೊಂದೆಡೆ ಜನರಿಗೆ ಸಮಯವೂ ಇಲ್ಲ. ಕೈಯಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿಯೇ ಬೇಕೆಂದಾಗ ಸಿನಿಮಾ ವೀಕ್ಷಿಸಬಹುದು. ಈಗ ಏನಿದ್ದರು ಒಟಿಟಿ ಕಾಲ. ಈ ವೇದಿಕೆಗಳು ಮನರಂಜನಾ ಜಗತ್ತನ್ನು ಜನರ ಮುಂದೆ ತೆರೆದಿಟ್ಟಿರುವ ಬಗೆ ಒಂದೆರಡಲ್ಲ.

ಕೋವಿಡ್‌–19 ಪರಿಣಾಮ ದೇಶದಾದ್ಯಂತ ಚಿತ್ರಮಂದಿರಗಳಿಗೆ ತಾತ್ಕಾಲಿಕವಾಗಿ ಬೀಗ ಬಿದ್ದಿದೆ. ಕೇಂದ್ರ ಸರ್ಕಾರ ಯಾವಾಗ ಇವುಗಳ ಪುನರಾರಂಭಕ್ಕೆ ಅನುಮತಿ ನೀಡುತ್ತದೆ ಎಂಬುದು ಗೊತ್ತಿಲ್ಲ. ಈ ನಡುವೆಯೇ ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಜೀ5ನಂತಹ ಪ್ರಸಿದ್ಧ ಒಟಿಟಿ ವೇದಿಕೆಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳ ಸಿನಿಮಾಗಳು ನೇರವಾಗಿಯೇ ಬಿಡುಗಡೆಯಾಗುತ್ತಿವೆ. ಆದರೆ, ಕನ್ನಡ ಸಿನಿಮಾಗಳಿಗೆ ಇಂತಹ ಅವಕಾಶ ಮರೀಚಿಕೆಯಾಗಿರುವುದು ಏಕೆ ಎಂಬುದು ಯಕ್ಷ ಪ್ರಶ್ನೆ.

ಅಮಿತಾಭ್‌ ಬಚ್ಚನ್‌, ಆಯುಷ್ಮಾನ್‌‌ ಖುರಾನ, ವಿದ್ಯಾ ಬಾಲನ್‌, ಜ್ಯೋತಿಕಾ, ಕೀರ್ತಿ ಸುರೇಶ್‌ ಸೇರಿದಂತೆ ಹಲವು ಸ್ಟಾರ್‌ ನಟ, ನಟಿಯರ ಸಿನಿಮಾಗಳು ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಯಾಗಿವೆ. ನಟರಾದ ನಾನಿ, ಸೂರ್ಯ ಅವರ ಸಿನಿಮಾಗಳು ಬಿಡುಗಡೆಗೆ ಸರದಿ ಸಾಲಿನಲ್ಲಿ ನಿಂತಿವೆ. ಕನ್ನಡದ ಮಟ್ಟಿಗೆ ಅಂತಹ ಭಾಗ್ಯ ದೊರೆತಿದ್ದು ಪಿಆರ್‌ಕೆ ಪ್ರೊಡಕ್ಷನ್ಸ್‌ನ ‘ಲಾ’ ಮತ್ತು ‘ಫ್ರೆಂಚ್‌ ಬಿರಿಯಾನಿ’ ಸಿನಿಮಾಗಳಿಗೆ ಮಾತ್ರ. ಚಂದನವನದಲ್ಲಿಯೂ ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಆದರೆ, ಅವುಗಳ ಪಾಲಿಗೆ ಒಟಿಟಿ ಮಾರುಕಟ್ಟೆಯ ಬಾಗಿಲು ಬಂದ್‌ ಆಗಿದೆ ಎಂದರೆ ಅಚ್ಚರಿಪಡಬೇಕಿಲ್ಲ. ಹಾಗಿದ್ದರೆ, ಈ ವೇದಿಕೆಗಳಲ್ಲಿ ಕನ್ನಡ ಚಿತ್ರಗಳಿಗೆ ಮುಂದೆಯೂ ಅವಕಾಶ ಇಲ್ಲವೇ, ಖರೀದಿಗೆ ಹಿಂದೇಟು ಹಾಕುತ್ತಿರುವ ಹಿಂದಿನ ಹಕೀಕತ್ತಾದರೂ ಏನು?

‘ನನ್ನದೊಂದು ಅಂಗಡಿ ಇದೆ. ನೀವು ಬಂದು ಅಂಗಡಿಯಲ್ಲಿ ನಿಮ್ಮ ಸಾಮಗ್ರಿಯನ್ನು ಬಿಕರಿಗೆ ಇಟ್ಟುಬಿಡಿ. ಅದು ಜನರಿಗೆ ಆಕರ್ಷಿತವಾದರೆ ಒಂದಿಷ್ಟು ಕಮಿಷನ್‌ ತೆಗೆದುಕೊಳ್ಳಿ’ ಎಂಬುದು ಒಟಿಟಿಯ ಸರಳ ಮಂತ್ರ. ಈ ಮಾರುಕಟ್ಟೆಯಲ್ಲಿನ ಸಿನಿಮಾ ಖರೀದಿಯ ವ್ಯವಹಾರವೂ ಅಷ್ಟೇ ಕೌತುಕ.

ಸಿನಿಮಾಗಳ ಖರೀದಿ ಹೇಗೆ?

ಒಟಿಟಿ ವೇದಿಕೆಗಳ ಸಿನಿಮಾ ಖರೀದಿಯಲ್ಲಿ ಮೂರು ವಿಧಾನಗಳಿವೆ. ಮೊದಲ ವಿಧಾನದಡಿ ಸ್ಟಾರ್‌ ನಟ ಮತ್ತು ನಟಿಯರ ಸಿನಿಮಾಗಳನ್ನು ಔಟ್‌ರೇಟ್‌ ಲೆಕ್ಕಾಚಾರದಲ್ಲಿ ಒಂದೇ ಬಾರಿಗೆ ಹಣ ಪಾವತಿಸಿ ಖರೀದಿಸಲಾಗುತ್ತದೆ. ಹಿಂದಿಯ ‘ಗುಲಾಬೊ ಸಿತಾಬೊ’, ‘ಶಕುಂತಲಾ ದೇವಿ’, ತಮಿಳಿನ ‘ಪೆಂಗ್ವಿನ್‌’ ಸಿನಿಮಾ ಖರೀದಿಯಾಗಿದ್ದು ಹೀಗೆಯೇ. ಸ್ಟಾರ್‌ ನಟ, ನಟಿಯರ ಸಿನಿಮಾಗಳಿಗಷ್ಟೇ ಈ ವಿಧಾನ ಮೀಸಲು. ಹೊಸಬರ ಚಿತ್ರಗಳನ್ನು ಈ ಮಾದರಿಯಲ್ಲಿ ಖರೀದಿಸುವುದು ವಿರಳ.

ಎರಡನೇ ವಿಧಾನದಲ್ಲಿ ಕಂತುಗಳ ರೂಪದಲ್ಲಿ ಸಿನಿಮಾ ಖರೀದಿಸಲಾಗುತ್ತದೆ. ಉದಾಹರಣೆಗೆ ₹ 1 ಕೋಟಿಯ ಮೊತ್ತಕ್ಕೆ ಸಿನಿಮಾವೊಂದನ್ನು ಖರೀದಿಸಿದರೆ ಹತ್ತು ಕಂತುಗಳಲ್ಲಿ ಸಂಬಂಧಪಟ್ಟ ನಿರ್ಮಾಪಕರಿಗೆ ಹಣ ನೀಡಲಾಗುತ್ತದೆ. ಒಟಿಟಿ ವೇದಿಕೆಯು ಎಷ್ಟು ಕಂತುಗಳನ್ನಾದರೂ ನಿಗದಿಪಡಿಸಬಹುದು. ಕನ್ನಡದ ‘ನಾತಿಚರಾಮಿ’ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಖರೀದಿಸಿದ್ದು ಇದೇ ವಿಧಾನದಲ್ಲಿಯೇ. ಈ ಎರಡೂ ವಿಧಾನದಡಿ ವೇದಿಕೆಗಳು ಖರೀದಿಸಿದ ಸಿನಿಮಾಗಳಿಂದ ಎಷ್ಟು ಬೇಕಾದರೂ ದುಡಿದುಕೊಳ್ಳಬಹುದು. ಆ ಲಾಭದಲ್ಲಿ ನಿರ್ಮಾಪಕರಿಗೆ ಪಾಲು ಸಿಗುವುದಿಲ್ಲ.

ಮೂರನೇ ವಿಧಾನವೇ ‘ಪೇಪರ್‌ ವೀವ್‌’. ಈ ವಿಧಾನದಡಿ ಸೆಕೆಂಡ್‌ಗಳದ್ದೇ ಪ್ರಧಾನ ಪಾತ್ರ. ಸಿನಿಮಾವೊಂದನ್ನು ಆಯಾ ಒಟಿಟಿ ವೇದಿಕೆಯ ಚಂದಾದಾರರು ನೋಡುವ ಸೆಕೆಂಡ್‌ಗಳ ಆಧಾರದಡಿ ಲೆಕ್ಕಹಾಕಿ ನಿರ್ಮಾಪಕರಿಗೆ ಹಣ ಸಂದಾಯ ಮಾಡಲಾಗುತ್ತದೆ. ಸ್ಟ್ರೀಮಿಂಗ್‌ ಸೆಕೆಂಡ್‌ಗಳನ್ನು ಗಂಟೆಯ ಲೆಕ್ಕಾಚಾರಕ್ಕೆ ಸೀಮಿತಗೊಳಿಸಲಾಗುತ್ತದೆ. ಅಂದರೆ ಆ ಸಿನಿಮಾವನ್ನು ಚಂದಾದಾರರು ಎಷ್ಟು ಗಂಟೆ ವೀಕ್ಷಿಸಿದ್ದಾರೆ ಎಂದು ಲೆಕ್ಕ ಹಾಕಿ ಹಣ ನೀಡಲಾಗುತ್ತದೆ.

ಈ ಹಿಂದೆ 1 ಗಂಟೆಗೆ ₹ 7 ನೀಡಲಾಗುತ್ತಿತ್ತಂತೆ. ಈಗ ಇದು ₹ 2ರಿಂದ ₹ 3ಕ್ಕೆ ಇಳಿದಿದೆ. ಕನ್ನಡದ ‘ಅಮ್ಮಚ್ಚಿಯೆಂಬ ನೆನಪು’, ‘ಅಳಿದು ಉಳಿದವರು’, ‘ಬೀರ್‌ಬಲ್‌’ ಸಿನಿಮಾಗಳನ್ನು ಒಟಿಟಿ ವೇದಿಕೆಗಳು ಖರೀದಿಸಿರುವುದು ಈ ಲೆಕ್ಕಾಚಾರದಲ್ಲಿಯೇ. ಹಾಗಾಗಿ, ಸಿನಿಮಾಗಳ ಸ್ಟ್ರೀಮಿಂಗ್‌ ಇಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಸದ್ಯಕ್ಕೆ ಕನ್ನಡ ಸಿನಿಮಾಗಳ ಖರೀದಿಗೆ ಇದೇ ವಿಧಾನವನ್ನೇ ಈ ವೇದಿಕೆಗಳು ಅನುಸರಿಸುತ್ತಿವೆ (‘ಲಾ’ ಮತ್ತು ‘ಫ್ರೆಂಚ್‌ ಬಿರಿಯಾನಿ’ ಮಾತ್ರ ಔಟ್‌ರೇಟ್‌ ಲೆಕ್ಕಾಚಾರದಲ್ಲಿ ಖರೀದಿಯಾಗಿವೆಯಂತೆ). ಇದರಿಂದ ನಿರ್ಮಾಪಕರಿಗೆ ಲಾಭವಾಗುವುದು ಕಡಿಮೆ. ಮತ್ತೊಂದೆಡೆ ಈ ವೇದಿಕೆಯಲ್ಲಿ ಬಿಡುಗಡೆಯಾಗುವ ಸಿನಿಮಾಗಳು ಅಂದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಸೋರಿಕೆಯಾಗುವುದು ಮಾಮೂಲು.

ಕನ್ನಡ ಸಿನಿಮಾಗಳ ಖರೀದಿಗೆ ಹಿಂದೇಟು ಏಕೆ?‌

ಒಟಿಟಿ ವೇದಿಕೆಗಳು ಕನ್ನಡ ಸಿನಿಮಾಗಳ ಖರೀದಿಗೆ ಹಿಂದೇಟು ಹಾಕಲು ಕಾರಣಗಳು ಹೇರಳವಾಗಿವೆ. ಕನ್ನಡ ಸಿನಿಮಾಗಳಲ್ಲಿ ಕಥೆ ಮತ್ತು ನಿರೂಪಣೆಯದ್ದೇ ಬಹುದೊಡ್ಡ ಸಮಸ್ಯೆ. ಹತ್ತಾರು ಸಿನಿಮಾಗಳನ್ನು ನೋಡಿ ಅವುಗಳಿಂದಲೇ ಕಥೆ ಹುಡುಕಿಕೊಂಡು ಮತ್ತೊಂದು ಹೊಸ ಸಿನಿಮಾದ ಕಥೆ ಹೆಣೆಯುವುದು ಗಾಂಧಿನಗರದ ಹಳೆಯ ಸೂತ್ರ. ಇದು ಕನ್ನಡ ಚಿತ್ರರಂಗದ ದೊಡ್ಡ ದುರಂತವೂ ಹೌದು. ಅಂತಹ ಕಥೆಯಲ್ಲಿ ಜೀವಂತಿಕೆ ಉಳಿಯುವುದಾದರೂ ಹೇಗೆ?

ಈಗಾಗಲೇ, ಇಂತಹ ಸಿನಿಮಾಗಳನ್ನು ನೋಡಿದವರಿಗೆ ತಾವು ನೋಡುವ ಹೊಸ ಚಿತ್ರದಲ್ಲಿ ಹೊಸತನವೇ ಕಾಣುವುದಿಲ್ಲ. ಮತ್ತೊಂದೆಡೆ ಕನ್ನಡ ಚಿತ್ರಗಳಲ್ಲಿ ಪ್ರೀತಿಗೆ ಸಂಬಂಧಿಸಿದ ಪಾಠಗಳು, ವ್ಯಾಖ್ಯಾನಗಳದ್ದೇ ಕಾರುಬಾರು. ಆದರೆ ತೆಲುಗು, ತಮಿಳು, ಮಲಯಾಳದಲ್ಲಿ ಇದನ್ನು ಮೀರಿದ ಜಗತ್ತಿನ ಕಥೆಗಳು ದೃಶ್ಯರೂಪ ತಾಳಿ ಪ್ರೇಕ್ಷಕರನ್ನು ರಂಜಿಸುತ್ತಿವೆ. ಆ ಲೆಕ್ಕಾಚಾರದಲ್ಲಿ ನಮ್ಮ ಕನ್ನಡದ ಕಥೆಗಳು ತೀರಾ ಹಿಂದುಳಿದಿವೆ ಎಂದರೆ ಅತಿಶಯೋಕ್ತಿಯಲ್ಲ.

ಉದಾಹರಣೆಗೆ ಮಲಯಾಳ ಚಿತ್ರರಂಗವನ್ನೇ ಗಮನಿಸಿ. ಅಲ್ಲಿನ ಸಿನಿಮಾಗಳ ಕಥೆಯಲ್ಲಿ ನೈಜತೆ ಎದ್ದು ಕಾಣುತ್ತದೆ. ಪ್ರೇಕ್ಷಕರು ಅದರ ಭಾಗವಾಗುವಂತೆ ನಿರೂಪಣೆ ಇರುತ್ತದೆ. ಅಲ್ಲಿನ ನಿರ್ದೇಶಕರು ಹೊಸತನಕ್ಕೆ ಒತ್ತು ನೀಡುವ ಜೊತೆಗೆ ಸೌಂಡ್‌ ಕ್ವಾಲಿಟಿಗೂ ಪ್ರಧಾನ್ಯ ನೀಡುತ್ತಾರೆ. ನಟನೆಗೂ ಪ್ರಾಮುಖ್ಯತೆ ಇರುತ್ತದೆ; ಬಕೆಟ್‌ ಸಂಸ್ಕೃತಿ ಆಸ್ಪದ ಇರುವುದಿಲ್ಲ.

ಆದರೆ, ಕನ್ನಡ ಚಿತ್ರರಂಗದಮಟ್ಟಿಗೆ ಕಥೆಯದ್ದೇ ದೊಡ್ಡ ಸಮಸ್ಯೆ. ನಿರ್ದೇಶಕರೊಬ್ಬರು ಕಥೆ ಸಿದ್ಧಪಡಿಸಿಕೊಂಡು ಅದಕ್ಕೆ ನಿರ್ಮಾಪಕರು ಸಿಕ್ಕಿ, ಅದು ಸಿನಿಮಾ ಆಗಿ ಜನರ ಮುಂದೆ ಬರುವಾಗ ಒಂದೂವರೆ ವರ್ಷವಾಗುತ್ತದೆ. ಆ ವೇಳೆಗೆ ಆ ಸಿನಿಮಾದ ಕಥೆ ಪ್ರಸ್ತುತ ಎನಿಸುವುದಿಲ್ಲ!

ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವಾಗ ಎ, ಬಿ, ಸಿ ಮತ್ತು ಡಿ ಸೆಂಟರ್‌ಗಳೆಂದು ವರ್ಗೀಕರಿಸುವ ಪರಿಪಾಠ ಉಂಟು. ಆದರೆ, ಒಟಿಟಿ ವೇದಿಕೆಯು ವಿಶ್ವ ವ್ಯಾಪ್ತಿಯಾದುದು. ಈ ವೇದಿಕೆಗೆ ವಿಶ್ವಮಟ್ಟದ ಗಮನ ಸೆಳೆಯುವ ಕಂಟೆಂಟ್‌ ಇರಬೇಕು. ಈ ವೇದಿಕೆಗಳು ಯೂನಿವರ್ಸಲ್‌ ಆಗಿರುವ ಕಂಟೆಂಟ್‌ಗೆ ಮೊದಲ ಆದ್ಯತೆ ನೀಡುತ್ತವೆ. ಅಂತಹ ಕಂಟೆಂಟ್‌ ಇರುವ ಚಿತ್ರಗಳು ಕನ್ನಡದಲ್ಲಿ ನಿರ್ಮಾಣವಾಗುತ್ತಿವೆಯೇ?

ಆದರೆ, ಇಂತಹದ್ದೇ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದು ಈ ವೇದಿಕೆಗಳು ನಿಯಮ ವಿಧಿಸುವುದಿಲ್ಲ. ಕಥಾವಸ್ತು ಯೂನಿವರ್ಸಲ್‌ ಆಗಿದ್ದರೆ ತಕ್ಷಣವೇ ಖರೀದಿಗೆ ಒಪ್ಪಿಕೊಳ್ಳುತ್ತವೆ. ಆ ಮಟ್ಟದಲ್ಲಿ ಇಲ್ಲದಿದ್ದರೆ ರಾಷ್ಟ್ರೀಯ ಮಟ್ಟದಲ್ಲಾದರೂ ಆ ಕಂಟೆಂಟ್‌ ಜನರಿಗೆ ತಲುಪುವಂತಿರಬೇಕು. ಇಲ್ಲವಾದರೆ ವೇದಿಕೆಯ ಚಂದಾದಾರರನ್ನಾದರೂ ರೀಚ್‌ ಆಗುವಂತಿರಬೇಕು. ಈ ಅಂಶಗಳು ಇಲ್ಲದಿದ್ದರೆ ಸಿನಿಮಾ ಖರೀದಿಗೆ ಮುಂದೆ ಬರುವುದಿಲ್ಲ.

ಸದ್ಯ ಕನ್ನಡದಲ್ಲಿ ನೈಜತೆಯಿಂದ ಕೂಡಿದ ಕಥಾವಸ್ತು ಹೊಂದಿರುವ ಸಿನಿಮಾಗಳ ನಿರ್ಮಾಣ ವಿರಳ. ಕಥೆ ಹೇಳುವ ರೀತಿ, ಸ್ಕ್ರೀನ್‌ ಪ್ಲೇ ತುಂಬಾ ವೀಕ್‌ ಆಗಿದೆ. ಇದೇ ಒಟಿಟಿ ವೇದಿಕೆಗಳು ಕನ್ನಡ ಸಿನಿಮಾಗಳ ಖರೀದಿಗೆ ಹಿಂದೇಟು ಹಾಕಲು ಮೂಲ ಕಾರಣ. ಕನ್ನಡದಲ್ಲಿ ಕಥೆಯ ಎಳೆ ಸೊಗಸಾಗಿರುತ್ತದೆ. ಆದರೆ, ಅದನ್ನು ಪರದೆ ಮೇಲೆ ಕಟ್ಟಿಕೊಡುವಾಗ ನಿರ್ದೇಶಕರು ಸೋತು ಹೋಗುತ್ತಾರೆ. ಇಲ್ಲವಾದರೆ ತುಂಬಾ ಪ್ರಯೋಗಕ್ಕೆ ಒಗ್ಗಿಸಿಬಿಡುತ್ತಾರೆ. ಇಂತಹ ಸಿನಿಮಾಗಳು ಒಟಿಟಿ ವೇದಿಕೆಗಳಿಗೆ ರುಚಿಸುವುದು ತೀರಾ ಕಡಿಮೆ.

ಒಟಿಟಿ ವೇದಿಕೆಗಳಲ್ಲಿ ಕನ್ನಡ ಸಿನಿಮಾಗಳಿಗೆ ಮನ್ನಣೆ ಕಡಿಮೆಯಾಗಿರುವ ಬಗ್ಗೆ ನಿರ್ದೇಶಕ ಮಂಸೋರೆ ಹೇಳುವುದು ಹೀಗೆ; ‘ಬೇರೆ ಭಾಷೆಯ ಸಿನಿಮಾ‌ಗಳಲ್ಲಿ ಏನು ಮಾಡುತ್ತಾರೆ ಎಂಬುದರ ಬಗ್ಗೆ ನಾವು ಚಿಂತಿಸಬೇಕಿಲ್ಲ. ದೂಷಣೆ ಮಾಡುವುದು ಕೂಡ ಸರಿಯಲ್ಲ. ನಮ್ಮನ್ನು ನಾವು ಇಂದಿನ ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಮಾಡಿಕೊಳ್ಳಬೇಕು. ನಮ್ಮ ಸಿನಿಮಾದ ಗುಣಮಟ್ಟ ಹೆಚ್ಚಿಸಿಕೊಳ್ಳಲು ಒತ್ತು ನೀಡಬೇಕು. ಆಗ ಒಟಿಟಿಯವರು ನಮ್ಮ ಬಳಿಗೆ ಓಡಿ ಬರುತ್ತಾರೆ’.

ಕನ್ನಡ ಸಿನಿಮಾಗಳ ಖರೀದಿ

‘ಅಮೆಜಾನ್‌ ಪ್ರೈಮ್‌ ಈಗಾಗಲೇ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಎರಡು ಸಿನಿಮಾಗಳನ್ನು ಖರೀದಿಸಿದೆ. ಅವು ಬಿಡುಗಡೆಯೂ ಆಗಿವೆ. ಮುಂಬರುವ ಎರಡು ತಿಂಗಳಲ್ಲಿ ಕನ್ನಡದ ಹಲವು ಸಿನಿಮಾಗಳನ್ನು ಖರೀದಿಸಲು ನಿರ್ಧರಿಸಿದೆ. ಈ ಬಗ್ಗೆ ನಮಗೂ ಮಾಹಿತಿ ನೀಡಿದೆ. ಆದರೆ, ಯಾವ ಸಿನಿಮಾಗಳನ್ನು ಖರೀದಿಸಲಾಗುತ್ತಿದೆ ಎಂಬುದು ಗೊತ್ತಿಲ್ಲ. ಖರೀದಿ ಪ್ರಕ್ರಿಯೆ ನಡೆಯುತ್ತಿರುವುದು ಸತ್ಯ. ಯಾವುದೇ ಸಿನಿಮಾದ ಖರೀದಿಯು ಚಿತ್ರದ ನಿರ್ಮಾಪಕರು ಮತ್ತು ಅಮೆಜಾನ್ ವೇದಿಕೆಯ ನಡುವಿನ ಒಪ್ಪಂದದ ಮೇಲೆ ನಿಂತಿರುತ್ತದೆ’ ಎಂಬುದು ಅಮೆಜಾನ್‌ ಪ್ರೈಮ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ನರೇಶ್‌ ಭಂಡಾರಿ ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT