ಭಾನುವಾರ, ಏಪ್ರಿಲ್ 5, 2020
19 °C

ಜನ ಏಕೆ ನೋಡಲಿಲ್ಲ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಈ ಚಿತ್ರವನ್ನು ಸಿನಿಮಾ ಮಂದಿರದಲ್ಲಿ ವೀಕ್ಷಿಸದೆ ಇದ್ದಿದ್ದಕ್ಕೆ ನನಗೆ ನಾಚಿಕೆ ಆಗುತ್ತಿದೆ...’

‘ಏನ್‌ ಗುರು ಈ ಚಿತ್ರದಲ್ಲಿ ಇಷ್ಟೊಂದು ಟ್ರ್ಯಾಜಿಡಿಗಳಾ...?’

ಇಂತಹ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತವಾಗಿರುವುದು ಕೆ.ಎಸ್. ಅಶೋಕ ನಿರ್ದೇಶನದ ‘ದಿಯಾ’ ಚಿತ್ರಕ್ಕೆ. ರಕ್ಷಿತ್ ಶೆಟ್ಟಿ ಅವರು, ‘ನಾನು ಈಚೆಗೆ ನೋಡಿದ ಅತ್ಯಂತ ಸುಂದರ ಸಿನಿಮಾ’ ಎಂದು ಹೇಳಿದ್ದು ಇದರ ಕುರಿತು.

ಚಿತ್ರವು ಈಗ ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗಿದ್ದು, ಬಹುಶಃ ಚಿತ್ರಮಂದಿರಗಳ ಮೂಲಕ ತಲುಪಿದ್ದಕ್ಕಿಂತ ಹೆಚ್ಚಿನ ಜನರನ್ನು ಪ್ರೈಮ್‌ ಮೂಲಕ ತಲುಪಿದೆ. ಅಮೆಜಾನ್‌ ಪ್ರೈಮ್‌ನಲ್ಲಿ ವೀಕ್ಷಿಸಿದವರು, ‘ನಾನು ಇದನ್ನು ಚಿತ್ರಮಂದಿರದಲ್ಲಿ ನೋಡಬೇಕಿತ್ತು’ ಎಂದು ಹೇಳಿದ್ದಿದೆ.

‘ಸಿನಿಮಾ ಚೆನ್ನಾಗಿದೆ. ಆದರೆ ಇದನ್ನು ಥಿಯೇಟರ್‌ನಲ್ಲಿ ನೋಡಿಲ್ಲ’ ಎಂದು ಸಿನಿಪ್ರೇಮಿಗಳು ಹೇಳಿರುವ ಕುರಿತು ಪ್ರಶ್ನಿಸಿದಾಗ, ನಿರ್ದೇಶಕ ಅಶೋಕ ಉತ್ತರಿಸಿದ್ದು ಹೀಗೆ: ‘ದಿಯಾ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಚಿತ್ರಮಂದಿರಗಳಲ್ಲಿ ಇದನ್ನು ಹೆಚ್ಚು ಜನ ನೋಡಲಿಲ್ಲ. ಆದರೆ, ನೋಡಿದ ಎಲ್ಲರೂ ಇಷ್ಟಪಟ್ಟಿದ್ದಾರೆ.’

ಫೆ. 7ರಂದು ತೆರೆಕಂಡ ಈ ಚಿತ್ರವು ಮಲ್ಟಿಫ್ಲೆಕ್ಸ್‌ಗಳಲ್ಲಿ ಮೂರು ವಾರ ಪ್ರದರ್ಶನ ಕಂಡಿದೆ. ‘ಚಿತ್ರದ ಹೂರಣ ಚೆನ್ನಾಗಿರುವ ಕಾರಣ, ಇನ್ನಷ್ಟು ಜನ ಸಿನಿಮಾ ಮಂದಿರಕ್ಕೆ ಬಂದು ವೀಕ್ಷಿಸುತ್ತಾರೆ’ ಎಂಬ ನಿರೀಕ್ಷೆ ಸಿನಿತಂಡಕ್ಕೆ ಇತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಏಕೆ ಬರಲಿಲ್ಲ ಎಂಬ ಕುರಿತು ಅಶೋಕ ಆಲೋಚನೆ ಮಾಡಿದ್ದಾರೆ. ‘ಸಿನಿಮಾಗಳನ್ನು ಗಂಭೀರವಾಗಿ ಪರಿಗಣಿಸಿದವರು ಇದನ್ನು ಇಷ್ಟಪಟ್ಟಿದ್ದಾರೆ. ಜೀವನದಲ್ಲಿ ಒಂದಿಷ್ಟು ಭಾವುಕ ಕ್ಷಣಗಳನ್ನು ಅನುಭವಿಸಿದವರಿಗೆ ಕೂಡ ಇದು ಇಷ್ಟವಾಗಿದೆ. ಆದರೆ, ಸಿನಿಮಾ ಅಂದರೆ ಮನರಂಜನೆ ಮಾತ್ರ ಎನ್ನುವವರಿಗೆ ಅಷ್ಟು ರುಚಿಸಿಲ್ಲ ಅನಿಸುತ್ತದೆ. ಥಿಯೇಟರ್‌ಗೆ ಬಂದು ನೋಡುವಂತೆ ಮಾಡುವ ಅಂಶ ನಮ್ಮ ಸಿನಿಮಾದಲ್ಲಿ ಮಿಸ್ ಆಗಿರಬೇಕು’ ಎನ್ನುತ್ತಾರೆ ಅಶೋಕ.

‘ಈ ಸಿನಿಮಾಕ್ಕೆ ನೀವು ಸಾಕಷ್ಟು ಪ್ರಚಾರ ನೀಡಿರಲಿಲ್ಲವೇ’ ಎಂದು ಕೇಳಿದಾಗ, ‘ಪ್ರಚಾರ ನೀಡುವ ವಿಚಾರದಲ್ಲಿ ಏನೆಲ್ಲ ಮಾಡಬಹುದಿತ್ತೋ ಅವೆಲ್ಲವನ್ನೂ ಮಾಡಿದ್ದೆವು. ಹೊಸಬರ ಸಿನಿಮಾಗಳಿಗೆ ಬಾಯಿಮಾತಿನ ಮೂಲಕ ಸಿಗುವ ಪ್ರಚಾರ ಮಾತ್ರ ಇಂದು ಜನ ಚಿತ್ರಮಂದಿರಗಳಿಗೆ ಬರುವಂತೆ ಮಾಡುತ್ತದೆ. ನಮ್ಮ ಚಿತ್ರದಲ್ಲಿ ವೈರಲ್ ಆಗುವಂಥದ್ದು ಏನೂ ಇರಲಿಲ್ಲ. ಅದು ಇಲ್ಲದಿದ್ದರೆ ಜನ ಆರಂಭದಲ್ಲೇ ಸಿನಿಮಾ ಮಂದಿರಕ್ಕೆ ಬರುವುದಿಲ್ಲ’ ಎಂದು ಆತ್ಮಾವಲೋಕನದ ಧಾಟಿಯಲ್ಲಿ ಹೇಳಿದರು.

ನಗರದ, ಮೇಲ್ಮಧ್ಯಮ ವರ್ಗದ ಕಥೆ ಈ ಚಿತ್ರದಲ್ಲಿ ಇದೆ. ಆದಿ, ರೋಹಿತ್ ಮತ್ತು ದಿಯಾ ಈ ಚಿತ್ರದ ಪ್ರಮುಖ ಪಾತ್ರಗಳು. ಈ ಮೂವರ ನಡುವಿನ ಪ್ರೇಮಕಥೆ ಚಿತ್ರದ ಕಥಾವಸ್ತು. ಇದಕ್ಕೆ ಐಎಂಡಿಬಿಯಲ್ಲಿ 10ಕ್ಕೆ 9.1 ಅಂಕ ಸಿಕ್ಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು