ಶುಕ್ರವಾರ, ಅಕ್ಟೋಬರ್ 23, 2020
28 °C

ಕಾಜಲ್ ಬದಲು ಬೇರೆ ನಾಯಕಿ ‘ಆಚಾರ್ಯ’ಕ್ಕೆ ಎಂಟ್ರಿ ಕೊಡಲಿದ್ದಾರಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಕಾಜಲ್ ಅಗರ್‌ವಾಲ್‌ ಅವರ ಮದುವೆಯ ಕುರಿತು ಕಳೆದ ಆರು ತಿಂಗಳಿನಿಂದ ಸುದ್ದಿ ಕೇಳಿ ಬರುತ್ತಲೇ ಇತ್ತು. ಕಾಜಲ್ ಇತ್ತೀಚೆಗೆ ತಮ್ಮ ಮದುವೆಯ ದಿನಾಂಕವನ್ನು ತಿಳಿಸಿದ್ದರು. ಕಾಜಲ್‌ ಹತ್ತಿರದವರಿಗೆ ಈ ಸುದ್ದಿ ಆಶ್ಚರ್ಯ ಎನ್ನಿಸದೇ ಇದ್ದರೂ ‘ಆಚಾರ್ಯ’ ಸಿನಿಮಾ ತಂಡಕ್ಕೆ ಈ ವಿಷಯ ಸ್ವಲ್ಪ ಬೇಸರ ತರಿಸಿದ್ದು ಮಾತ್ರ ಸುಳ್ಳಲ್ಲ. ಏಕೆಂದರೆ ಕಾಜಲ್‌ ಆಚಾರ್ಯ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

ತ್ರಿಷಾ ಕೃಷ್ಣನ್ ಸಿನಿಮಾದಿಂದ ಹೊರ ನಡೆದ ಮೇಲೆ ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ಅಗರ್‌ವಾಲ್ ಸಹಿ ಹಾಕಿದ್ದರು.

ಕಾಜಲ್ ಸಹಿ ಹಾಕಿದ ಕೆಲವೇ ದಿನಗಳಲ್ಲಿ ಲಾಕ್‌ಡೌನ್ ಘೋಷಣೆಯಾಗಿತ್ತು. ಆ ಕಾರಣಕ್ಕೆ ಶೂಟಿಂಗ್‌ ನಿಲ್ಲಿಸಲಾಗಿತ್ತು. ಒಂದು ವೇಳೆ ಕೊರೊನಾ ಸೋಂಕು ಕಾಣಿಸದೇ ಇದ್ದರೆ ಕಾಜಲ್ ನಟನೆಯ ಸಂಪೂರ್ಣ ಭಾಗ ಇಷ್ಟರಲ್ಲೇ ಶೂಟಿಂಗ್ ಮುಗಿದಿರುತ್ತಿತ್ತು.

ಅದೇನೆ ಇದ್ದರೂ ಕಾಜಲ್ ಮದುವೆಯ ಬಳಿಕ ಶೂಟಿಂಗ್‌ಗೆ ಬರುವುದು ಅನಿವಾರ್ಯವಾಗಿದೆ. ಆಚಾರ್ಯ ಸಿನಿಮಾದ ಶೂಟಿಂಗ್‌ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಅಕ್ಟೋಬರ್ 30 ರಂದು ಕಾಜಲ್ ಹಸೆಮಣೆ ಏರಲಿದ್ದಾರೆ.

ಕಾಜಲ್ ಇಲ್ಲಿಯವರೆಗೆ ಆಚಾರ್ಯ ಶೂಟಿಂಗ್‌ನಲ್ಲಿ ಭಾಗವಹಿಸಿಯೇ ಇರಲಿಲ್ಲ. ಆ ಕಾರಣಕ್ಕೆ ಅವರ ಜಾಗಕ್ಕೆ ಬೇರೆ ನಾಯಕಿಯನ್ನು ಆಯ್ಕೆ ಮಾಡಲಿದೆಯೇ ಚಿತ್ರತಂಡ? ಎಂಬ ಪ್ರಶ್ನೆ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

‘ಆದರೆ ನಿರ್ಮಾಪಕರು ಈ ಬಗ್ಗೆ ಇನ್ನೂ ಯೋಚಿಸಿಲ್ಲ. ಅವರು ತಮ್ಮ ಚಿತ್ರಕ್ಕೆ ಕಾಜಲ್ ಅವರನ್ನೇ ಮುಂದುವರಿಸುವ ಯೋಚನೆಯಲ್ಲಿದ್ದಾರೆ’ ಎನ್ನುತ್ತಿದೆ ಚಿತ್ರತಂಡ.

ಒಂದು ವೇಳೆ ಕಾಜಲ್‌ ಸಿನಿಮಾದಿಂದ ತಾನಾಗಿಯೇ ಬಯಸಿ ಹೊರಹೋದರೆ ಹೋಗಬಹುದು. ಆದರೆ ಆಕೆ ಮದುವೆಯ ನಂತರವೂ ಚಿತ್ರರಂಗದಲ್ಲಿ ಮುಂದುವರಿಯುವುದಾಗಿ ಈ ಹಿಂದೆಯೇ ಹೇಳಿದ್ದರು. ಹಾಗಾಗಿ ಆಚಾರ್ಯ ಸಿನಿಮಾದಿಂದ ಕಾಜಲ್ ಹೊರ ಹೋಗುವುದು ಗಾಳಿಸುದ್ದಿ ಎಂದುಕೊಳ್ಳಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು