ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ‘ಯಜಮಾನ’ನ ಜಮಾನ

Last Updated 21 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

‘ನಾನು ಬಹಳಷ್ಟು ಸಿನಿಮಾಗಳ ಶೂಟಿಂಗ್‌ ಸೆಟ್‌ಗೆ ಸ್ಕೂಲ್‌ ಹುಡುಗನಂತೆಯೇ ಹೋಗಿದ್ದೇನೆ. ಅಲ್ಲೆಲ್ಲೋ ಬ್ಯಾಗ್‌ ಇಡುತ್ತಿದ್ದೆ. ನಿರ್ದೇಶಕರು ಹೇಳಿದಂತೆ ನಟಿಸಿ ಎಲ್ಲಿಯೋ ಕುಳಿತುಕೊಂಡಿದ್ದ ನಿದರ್ಶನಗಳಿವೆ. ಯಜಮಾನ ಚಿತ್ರದ್ದು ನನಗೆ ಹೊಸ ಅನುಭವ’ ಎಂದು ಮಾತು ಆರಂಭಿಸಿದರು ನಟ ದರ್ಶನ್.

ವಿ. ಹರಿಕೃಷ್ಣ ಮತ್ತು ಪಿ. ಕುಮಾರ್‌ ನಿರ್ದೇಶನದ ‘ಯಜಮಾನ’ ಚಿತ್ರ ಮಾರ್ಚ್ ಒಂದರಂದು ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ.ದರ್ಶನ್‌ ನಟನೆಯ ಚಿತ್ರ ತೆರೆಕಂಡು ಹಲವು ತಿಂಗಳುಗಳೇ ಉರುಳಿವೆ. ಹಾಗಾಗಿ, ಈ ಚಿತ್ರ ಚಂದನವನದಲ್ಲಿ ನಿರೀಕ್ಷೆಯ ಭಾರವನ್ನೂ ಹೆಚ್ಚಿಸಿರುವುದು ಗುಟ್ಟೇನಲ್ಲ. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

‘ಟ್ರೇಲರ್‌ನಲ್ಲಿಯೇ ಚಿತ್ರದ ಕಥೆ ಗೊತ್ತಾಗಿದೆ. ಎಲ್ಲ ಹಾಡುಗಳೂ ಸೂಪರ್‌ ಹಿಟ್‌ ಆಗಿರುವುದು ಖುಷಿ ನೀಡಿದೆ. ಅವುಗಳ ಬಿಡುಗಡೆಗೂ ನಿರ್ಮಾಪಕರು ವಹಿಸಿದ್ದ ಶ್ರದ್ಧೆಗೆ ಅಭಿನಂದನೆ ಸಲ್ಲಿಸಬೇಕು. ಸಾಕಷ್ಟು ಪೂರ್ವ ತಯಾರಿ ಮಾಡಿದ್ದರಿಂದಲೇ ಹಾಡುಗಳು ಹಿಟ್‌ ಆಗಲು ಸಾಧ್ಯವಾಯಿತು. ಈ ಯಶಸ್ಸಿನ ಹಿಂದೆ ಹರಿಕೃಷ್ಣ ಅವರ ಪಾಲು ದೊಡ್ಡದಿದೆ’ ಎಂದು ಹೊಗಳಿದರು ದರ್ಶನ್.

ಹಿಂದಿನ ಚಿತ್ರದಲ್ಲಿ ದರ್ಶನ್‌ಗೆ ತಾತನಾಗಿ ನಟಿಸಿದ್ದ ನಟ ದೇವರಾಜ್‌ ಅವರದ್ದು ಈ ಚಿತ್ರದಲ್ಲಿ ಮಾವನ ಪಾತ್ರವಂತೆ. ‘ತಾತ, ಅಪ್ಪ ಆದ ಮೇಲೆ ಡೈನಾಮಿಕ್‌ನ ಸೆನ್ಸ್‌ ಕಡಿಮೆಯಾಗುತ್ತೆ. ಯಜಮಾನನ ಅನುಭವ ಸೊಗಸಾಗಿತ್ತು’ ಎಂದು ಖುಷಿ ಹಂಚಿಕೊಂಡರು ದೇವರಾಜ್.

‘ಡಾಲಿ’ ಖ್ಯಾತಿಯ ನಟ ಧನಂಜಯ್‌ ಅವರದ್ದು ಚಿತ್ರದಲ್ಲಿ ಮಿಠಾಯಿ ಸೂರಿಯ ಪಾತ್ರ. ‘ನನ್ನದು ವಿಲನ್‌ ಪಾತ್ರವಲ್ಲ. ಹುಂಬತನದಿಂದ ಕೂಡಿದ ಪಾತ್ರವದು. ಆದರೆ, ಕೆಟ್ಟವನಲ್ಲ. ಪಾತ್ರ ಪೋಷಣೆ ಚೆನ್ನಾಗಿದೆ’ ಎಂದು ಹೇಳಿಕೊಂಡರು.

ನಿರ್ದೇಶಕ ವಿ. ಹರಿಕೃಷ್ಣ, ‘ಜೀವನ ಹೇಗೆ ಕರೆದುಕೊಂಡು ಹೋಗಿದೆಯೋ ಹಾಗೆ ಹೋಗಿದ್ದೇನೆ. ನಾಳೆ ಏನಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ನಿರ್ದೇಶಕನಾಗುತ್ತೇನೆ ಎನ್ನುವ ಕಲ್ಪನೆಯೂ ಇರಲಿಲ್ಲ. ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದು ಖುಷಿ ಹಂಚಿಕೊಂಡರು.

ಚಿತ್ರದ ಮತ್ತೊಬ್ಬ ನಿರ್ದೇಶಕ ಪಿ. ಕುಮಾರ್, ‘ಚಿತ್ರದ ಶೂಟಿಂಗ್‌ಗೆ ಹತ್ತು ಎತ್ತುಗಳ ಅಗತ್ಯವಿತ್ತು. ಗುಂತಕಲ್‌ನಿಂದ ಅವುಗಳನ್ನು ತರಿಸಬೇಕಿತ್ತು. ಅವುಗಳ ವೆಚ್ಚವೇ ದಿನಕ್ಕೆ ಹತ್ತು ಸಾವಿರ ರೂಪಾಯಿ ದಾಟುತ್ತದೆ. ಯಾವುದೇ, ಅಡೆತಡೆಯಿಲ್ಲದೆ ಕೇಳಿದ ತಕ್ಷಣವೇ ನಿರ್ಮಾಪಕರು ಲಾರಿಯಲ್ಲಿ ಎತ್ತುಗಳನ್ನು ತರಿಸಿಕೊಟ್ಟರು. ಚಿತ್ರದ ಗುಣಮಟ್ಟದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ’ ಎಂದು ವಿವರಿಸಿದರು.

‘ಯಜಮಾನ ಚಿತ್ರದ್ದು ಅಪರೂಪದ ಪಯಣ’ ಎಂದು ಬಣ್ಣಿಸಿದರು ನಿರ್ಮಾಪಕ ಬಿ. ಸುರೇಶ.

‘ಪ್ರತಿಸಲವೂ ರೈತ ಬಿತ್ತನೆ ಮಾಡುತ್ತಾನೆ. ದೊಡ್ಡ ಆಸೆಯೂ ಅವನಲ್ಲಿ ಚಿಗುರೊಡೆಯುತ್ತದೆ. ನಾವು ಕೂಡ ಬಿತ್ತನೆ ಮಾಡಿದ್ದೇವೆ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು’ ಎಂದರು.

ಈ ಚಿತ್ರ ನಿರ್ಮಾಣದ ಬಗ್ಗೆ ಚರ್ಚೆ ನಡೆದಿದ್ದು ಐದು ವರ್ಷದ ಹಿಂದೆಯಂತೆ. ‘ಹರಿಕೃಷ್ಣ ಮತ್ತು ನಾನು ದರ್ಶನ್‌ ಮನೆಗೆ ಹೋಗಿದ್ದೆವು. ಒಂದೇ ಮಾತಿಗೆ ದರ್ಶನ್‌ ಡೇಟ್‌ ನೀಡಿದರು. ಅಂದಿನಿಂದಲೂ ಚಿತ್ರದ ಶೂಟಿಂಗ್‌ ಯಾವಾಗ ಶುರುವಾಗುತ್ತದೆ ಎಂಬ ಕಾತರವಿತ್ತು. ಈಗ ಬಿಡುಗಡೆಯ ಹಂತದಲ್ಲಿದ್ದೇವೆ. ಈಗಾಗಲೇ, ಈ ಸಿನಿಮಾ ಹೊಸದೊಂದು ಕ್ರೇಜ್‌ ಸೃಷ್ಟಿಸಿದೆ’ ಎಂದರು ನಿರ್ಮಾಪಕಿ ಶೈಲಜಾ ನಾಗ್.

ಪೋಷಕ ನಟ ರವಿಶಂಕರ್‌, ನಟಿ ತಾನ್ಯಾ ಹೋಪ್ ಅನುಭವ ಹಂಚಿಕೊಂಡರು. ಛಾಯಾಗ್ರಹಣ ಶ್ರೀಶ ಕೂದುವಳ್ಳಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT