ಅನ್ನದಾತರ ಬದುಕು ಬಿಂಬಿಸುವ ‘ಯಜಮಾನ’

ಸೋಮವಾರ, ಮಾರ್ಚ್ 25, 2019
28 °C

ಅನ್ನದಾತರ ಬದುಕು ಬಿಂಬಿಸುವ ‘ಯಜಮಾನ’

Published:
Updated:
Prajavani

ಚಿತ್ರ: ಯಜಮಾನ
ನಿರ್ಮಾಪಕರು: ಶೈಲಜಾ ನಾಗ್‌, ಬಿ. ಸುರೇಶ
ನಿರ್ದೇಶನ: ವಿ. ಹರಿಕೃಷ್ಣ, ಪಿ. ಕುಮಾರ್
ತಾರಾಗಣ: ದರ್ಶನ್‌, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ದೇವರಾಜ್‌, ಟಾಕೂರ್‌ ಅನೂಪ್‌ ಸಿಂಗ್, ಧನಂಜಯ್, ರವಿಶಂಕರ್, ಸಾಧುಕೋಕಿಲ 

ಗಾಣ ನಂಬಿ ಬದುಕು ಕಟ್ಟಿಕೊಂಡ ಹಳ್ಳಿಗರು. ಅವರ ನೆಮ್ಮದಿಗೆ ಕೊಳ್ಳಿ ಇಡುವ ಕಲಬೆರಕೆ ಎಣ್ಣೆಯ ದಂಧೆಕೋರರು. ಆ ದಂಧೆ ವಿರುದ್ಧ ತೊಡೆತಟ್ಟಿದ ನಾಯಕ. ಮಹಾನಗರಕ್ಕೆ ತೆರಳಿ ಸ್ವತಂ ಬ್ರಾಂಡ್‌ ಉಳಿಸಿಕೊಳ್ಳಲು ಅವನ ಹರಸಾಹಸ. ದಂಧೆಕೋರರ ತಂತ್ರಕ್ಕೆ ಸೊರಗಿದ ಊರಿನವರಿಗೆ ಕೊನೆಗೆ ಅವನೇ ಜನನಾಯಕ.

ಹೀಗೆ ಕಾರ್ಪೋರೇಟ್‌ ಜಗತ್ತಿನ ಮುಖವಾಡ ಕಳಚಿ ‘ಯಜಮಾನ’ನಿಗೆ ದೇಸಿಯ ಪೋಷಾಕು ತೊಡಿಸಿದ್ದಾರೆ ನಿರ್ದೇಶಕರು. ಕಾಳದಂಧೆಗೆ ಸಿಲುಕಿ ಹಳ್ಳಿಗಳಲ್ಲಿ ಪರಂಪರಾಗತ ವೃತ್ತಿಗಳು ಹೇಗೆ ಮೂಲೆಗೆ ಸರಿಯುತ್ತವೆ ಎನ್ನುವುದನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ದಲ್ಲಾಳಿಗಳ ಕುತಂತ್ರಕ್ಕೆ ಶ್ರಮಿಕರು ಮಿಕವಾಗುವ ಕಥೆ ಇಲ್ಲಿದೆ.

ಒಂದೂವರೆ ವರ್ಷದ ಬಳಿಕ ತೆರೆಯ ಮೇಲೆ ಬಂದಿರುವ ದರ್ಶನ್‌ ಖಡಕ್‌ ಡೈಲಾಗ್‌ಗಳ ಮೂಲಕ ಅಭಿಮಾನಿಗಳಿಗೆ ರಸದೌತಣ ಉಣಬಡಿಸುತ್ತಾರೆ. ಚಿತ್ರದ ಮೊದಲಾರ್ಧ ಎಣ್ಣೆ ಬೆಳೆಗಾರರ ಸಂಕಷ್ಟ, ನಾಯಕ– ನಾಯಕಿಯ ಪ್ರೇಮದಾಟ, ಹಾಡುಗಳು, ಭರ್ಜರಿ ಫೈಟಿಂಗ್‌ ನಡುವೆ ಕಳೆದುಹೋಗುತ್ತದೆ. 

ದ್ವಿತೀಯಾರ್ಧದಲ್ಲಿ ಕಥೆ ಮುಂಬೈ ಬೀದಿಗೆ ಜಿಗಿಯುತ್ತದೆ. ಅಲ್ಲಿಯವರೆಗೆ ದರ್ಶನ್‌ ಬಗೆಗಿನ ಬಿಲ್ಡಪ್‌ ಡೈಲಾಗ್‌ಗಳ ಮೇಲಿದ್ದ ಪೋಕಸ್‌ ನಿಧಾನವಾಗಿ ಕಥನದ ಕ್ಯಾನ್ವಾಸ್‌ ಮೇಲೆ ಸರಿಯುತ್ತದೆ. ಅಲ್ಲಿಯೂ ಜನರ ಸಂಕಷ್ಟದ ಬಗ್ಗೆ ಹೇಳುತ್ತಲೇ ನಾಯಕ ಪ್ರಧಾನ ಚಿತ್ರಗಳ ಮಾಮೂಲಿ ಜಾಡಿನಲ್ಲಿಯೇ ಸಾಗುತ್ತದೆ. 

ಆ ಊರಿನ ಹೆಸರು ಹುಲಿದುರ್ಗ. ಅಲ್ಲಿನವರಿಗೆ ಗಾಣವೇ ಉಸಿರು. ದೇವಿಶೆಟ್ಟಿ ಎಣ್ಣೆ ಉದ್ಯಮದ ಒಡೆಯ. ಆ ಗ್ರಾಮದ ಸಾಂಪ್ರದಾಯಿಕ ಎಣ್ಣೆ ಉತ್ಪಾದನೆ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಾನೆ. ಗಾಣದಿಂದ ಉತ್ಪಾದಿಸಿದ ಸ್ವಂತ ಬ್ರಾಂಡ್‌ನ ಎಣ್ಣೆಗೆ ಮಾರುಕಟ್ಟೆ ಇಲ್ಲದೆ ಕೃಷ್ಣ(ದರ್ಶನ್) ಅಸಹಾಯಕನಾಗುತ್ತಾನೆ. ಕೊನೆಗೆ, ದೇವಿ ಶೆಟ್ಟಿಯ ಷಡ್ಯಂತ್ರಗಳಿಗೆ ಹೇಗೆ ಪ್ರತ್ಯುತ್ತರ ನೀಡುತ್ತಾನೆ ಎನ್ನುವುದೇ ಕಥೆಯ ತಿರುಳು.

ಪರಂಪರಾಗತ ವೃತ್ತಿಗಳನ್ನು ನಂಬಿಕೊಂಡಿದ್ದ ಹಳ್ಳಿಯ ಜನರು ನಗರಕ್ಕೆ ಬಂದು ಅತಂತ್ರರಾಗಿದ್ದಾರೆ. ಅನ್ನದಾತರ ಬದುಕು ದಿಕ್ಕೆಟ್ಟಿದೆ. ನಾಯಕನ ಮೂಲಕ ಅವರ ಸಂಕಷ್ಟದ ಬಗ್ಗೆ ಹೇಳಿಸುವ ಪ್ರಯತ್ನ ಮಾಡಿಸಿದ್ದಾರೆ ನಿರ್ದೇಶಕರು.

ಗಾಣ ಪರಂಪರಾಗತ ಪಳೆಯುಳಿಕೆ. ಸಿನಿಮಾದಲ್ಲಿ ಎತ್ತುಗಳು ಒಂದು ಗಾಣದ ಸುತ್ತ ಮಾತ್ರವೇ ಸುತ್ತುತ್ತವೆ. ಆದರೆ, ಎಣ್ಣೆ ಎಲ್ಲಿಂದ ಬರುತ್ತದೆ ಎನ್ನುವುದು ಗುಟ್ಟಾಗಿಯೇ ಉಳಿಯುತ್ತದೆ. ಅಳಿವಿನಂಚಿನಲ್ಲಿರುವ ಈ ಪದ್ಧತಿ ಬಗ್ಗೆ ಯುವಪೀಳಿಗೆಗೆ ಪರಿಣಾಮಕಾರಿಯಾಗಿ ಪರಿಚಯಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಇಲ್ಲಿ ಅವರದು ಎಣ್ಣೆ ಬರುವ ಮೊದಲೇ ಗಾಣ ಕೈಗೊಡುವ ಸ್ಥಿತಿ. ಇನ್ನೊಂದೆಡೆ ಮುಂಬೈಗೆ ಹೋಗಿ ಸಣ್ಣ ಎಣ್ಣೆ ಉತ್ಪಾದಕನೊಬ್ಬ ಎಣ್ಣೆ ಮಾಫಿಯಾದ ವಿರುದ್ಧ ಸೆಣೆಸಾಡುವ ನಿರ್ದೇಶಕರ ಕಲ್ಪನೆಯೇ ಅವಾಸ್ತವ.  

ದರ್ಶನ್‌ ಖಡಕ್‌ ಡೈಲಾಗ್‌ಗಳ ಮೂಲಕ ಮಿಂಚು ಹರಿಸುತ್ತಾರೆ. ಖಳನಟನಾಗಿ ಟಾಕೂರ್‌ ಅನೂಪ್‌ ಸಿಂಗ್‌ ವಿಜೃಂಭಿಸಿದ್ದಾರೆ. ದೇವರಾಜ್‌, ಧನಂಜಯ್‌, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್‌ ಅವರದು ಅಚ್ಚುಕಟ್ಟಾದ ನಟನೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆಯ ಎಲ್ಲಾ ಹಾಡುಗಳು ಮನಸ್ಸಿಗೆ ಮುದ ನೀಡುತ್ತವೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವೂ ಸೊಗಸಾಗಿದೆ.

ಬರಹ ಇಷ್ಟವಾಯಿತೆ?

 • 54

  Happy
 • 3

  Amused
 • 7

  Sad
 • 5

  Frustrated
 • 8

  Angry

Comments:

0 comments

Write the first review for this !