ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಟಲ್‌ಗೆ ಗುರೂಜಿ ಪ್ರೇರಣೆ

Last Updated 7 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಸಿನಿಮಾ ಟೈಟಲ್‌ನ ಮೊದಲ ಅಕ್ಷರ ‘ಯಾ’ ಇದ್ದರೆ ಯಶಸ್ಸು ಲಭಿಸಲಿದೆ ಎಂದು ಗುರೂಜಿಯೊಬ್ಬರು ಹೇಳಿದ್ರು. ಹಾಗಾಗಿ, ಈ ಶೀರ್ಷಿಕೆ ಇಟ್ಟಿದ್ದೇನೆ ಎಂದು ಮೊದಲೇ ಸ್ಪಷ್ಟೀಕರಣ ನೀಡಿದರು ‘ಯಾರಿಗೆ ಯಾರುಂಟು’ ಚಿತ್ರದ ನಿರ್ದೇಶಕ ಕಿರಣ್‌ ಗೋವಿ.

ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ಚಿತ್ರದಲ್ಲಿ ‘ರಂಗಣ್ಣ’ ಹೆಸರಿನ ಕಾರ್ಟೂನ್‌ ಇದೆಯಂತೆ. ಇದು ಹದಿನೈದು ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ರಂಗಣ್ಣನಿಗೆ ಕಥೆಗೊಂದು ತಿರುವು ನೀಡುವ ಶಕ್ತಿಯನ್ನೂ ನಿರ್ದೇಶಕರು ದಯಪಾಲಿಸಿದ್ದಾರೆ.

‘ಸಂಚಾರಿ’, ‘ಪಯಣ’, ‘ಪಾರು ವೈಫ್ ಆಫ್ ದೇವದಾಸ್’ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಕಿರಣ್‍ ಗೋವಿ ಮುಖದಲ್ಲಿ ನಾಲ್ಕು ವರ್ಷದ ಬಳಿಕ ಮತ್ತೆ ನಿರ್ದೇಶನದ ಹಾದಿಗೆ ಬಂದಿರುವ ಸಂತಸ ಎದ್ದುಕಾಣುತ್ತಿತ್ತು. ‘ನಾಯಕನಿಗೆ ಮೂವರು ನಾಯಕಿಯರು ಇದ್ದಾರೆ. ಎಲ್ಲಾ ಪಾತ್ರಗಳಿಗೂ ಪ್ರಾಧಾನ್ಯ ನೀಡಲಾಗಿದೆ’ ಎಂದು ವಿವರಿಸಿದರು. ಕಥೆ ಶುರುವಾಗುವುದು ಆರೋಗ್ಯಧಾಮದಲ್ಲಿ. ನಾಯಕ ವೃತ್ತಿಯಲ್ಲಿ ವೈದ್ಯ. ಜೊತೆಗೆ, ಬ್ರಹ್ಮಚಾರಿ. ನೇರವಾಗಿ ಬಂದು ಪ್ರೀತಿಸುತ್ತೇನೆ ಎಂದು ಹೇಳುವ ಹುಡುಗಿಯನ್ನು ಮದುವೆಯಾಗುತ್ತೇನೆ ಎನ್ನುವುದು ಅವನ ಧೋರಣೆ. ಆತನ ಬದುಕಿನಲ್ಲಿ ಮೂವರು ಹುಡುಗಿಯರು ಬರುತ್ತಾರೆ. ಅದರ ಸುತ್ತವೇ ಕಥೆ ಸಾಗಲಿದೆಯಂತೆ.

‘ಒರಟ’ ಖ್ಯಾತಿಯ ಪ್ರಶಾಂತ್ ಈ ಚಿತ್ರದ ನಾಯಕ. ಆವರದು ಮುಗ್ಧ ಹುಡುಗನ ಪಾತ್ರವಂತೆ. ‘ಒಳ್ಳೆಯ ತಂಡದಿಂದ ಉತ್ತಮ ಚಿತ್ರ ನಿರ್ಮಾಣ ಸಾಧ್ಯ. ಮೂವರು ನಾಯಕಿಯರದ್ದೂ ಭಿನ್ನವಾದ ವರ್ತನೆ. ಧ್ವನಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಅವರೊಟ್ಟಿಗೆ ನಟಿಸುವುದು ಸವಾಲಿನಿಂದ ಕೂಡಿತ್ತು’ ಎಂದು ಹೇಳಿಕೊಂಡರು.

ಕೃತ್ತಿಕಾ ರವೀಂದ್ರ, ಲೇಖಾ ಚಂದ್ರ ಮತ್ತು ಅದಿತಿರಾವ್ ನಾಯಕಿಯರು. ಪೋಷಕ ಪಾತ್ರಕ್ಕೆ ಶರತ್‍ ಸಿಂಗ್ ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಬಿ.ಜೆ. ಭರತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಾಕೇಶ್‌ ಸಿ. ತಿಲಕ್ ಅವರದ್ದು. ಎಚ್.ಸಿ. ರಘುನಾಥ್ ಬಂಡವಾಳ ಹೂಡಿದ್ದಾರೆ. ಇದೇ 22ರಂದು ಚಿತ್ರ ರಾಜ್ಯದಾದ್ಯಂತ ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT