ಐ ಆ್ಯಮ್ ವಿಲನ್‌!

ಶುಕ್ರವಾರ, ಮೇ 24, 2019
22 °C

ಐ ಆ್ಯಮ್ ವಿಲನ್‌!

Published:
Updated:
Prajavani

ಬಣ್ಣದ ಲೋಕಕ್ಕೆ ಕಾಲಿಡುವ ಹುಡುಗರ ಕಣ್ಣುಗಳಲ್ಲಿ ‘ಹೀರೊ’ ಆಗುವ ಕನಸುಗಳೇ ಹೆಚ್ಚಿರುತ್ತವೆ. ಆದರೆ ಉಡುಪಿಯ ಯಶವಂತ್‌ ಶೆಟ್ಟಿ ಇದಕ್ಕೆ ತದ್ವಿರುದ್ಧ. ‘ನಂಗೆ ತೆರೆಯ ಮೇಲೆ ವಿಲನ್‌ ಆಗಿಯೇ ಕಾಣಿಸಿಕೊಳ್ಳಬೇಕು ಎಂದು ಆಸೆ. ಇದೇ ಕಾರಣಕ್ಕೆ ನಾಯಕನಾಗಿ ನಟಿಸಲಿಕ್ಕೆ ಬಂದ ಹಲವು ಅವಕಾಶಗಳನ್ನು ಕೈಬಿಟ್ಟಿದ್ದೇನೆ’ ಎನ್ನುತ್ತಾರೆ ಇವರು.

ಶಾಲಾ ದಿನಗಳಿಂದಲೇ ಸಿನಿಮಾ ನಟನಾಗಬೇಕು ಎಂಬ ಕನಸು ಹೊತ್ತ ಅವರು ಬೆಳ್ಳಿತೆರೆಯ ಬಾಗಿಲು ತಲುಪುವ ಉದ್ದೇಶದಿಂದಲೇ ನೀನಾಸಂಗೆ ಸೇರಿಕೊಂಡರು. ಅಲ್ಲಿ ಒಂದು ವರ್ಷ ನಟನೆಯ ಅಭ್ಯಾಸ ಮುಗಿಸಿ ದೆಹಲಿಯ ಎನ್‌ಎಸ್‌ಡಿಯಲ್ಲಿ ಮೂರು ವರ್ಷ ತರಬೇತಿ ಪಡೆದರು.

‘ಸಿನಿಮಾದಲ್ಲಿ ನಟಸಬೇಕು ಎನ್ನುವುದು ನನ್ನ ಎಂದಿನ ಆಸೆಯಾಗಿತ್ತು. ಆದರೆ ಸಿನಿಮಾ ಮಾಧ್ಯಮದ ಆಳ ಅಗಲ ಗೊತ್ತಿಲ್ಲದೆ ನಟನೆಗೆ ಇಳಿಯುವುದು ಇಷ್ಟವಿರಲಿಲ್ಲ. ಹಾಗಾಗಿ ಕೋಡ್ಲು ರಾಮಕೃಷ್ಣ ಅವರ ‘ಮಕ್ಕಳೇ ಮಾಣಿಕ್ಯ’ ಎಂಬ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ದಿನೇಶ್ ಬಾಬು ಅವರ ಒಂದು ಧಾರಾವಾಹಿಗೂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ನಂತರ ಅಂಬರೀಷ್ ಬಿ.ಎಂ. ಅವರ ನಿರ್ದೇಶನದ ‘ಜ್ವಲಂತಂ’ ಎನ್ನುವ ಸಿನಿಮಾ ಮೂಲಕ ಸಿನಿಮಾ ನಟನೆಗೆ ಇಳಿದೆ. ಆ ಸಿನಿಮಾದಲ್ಲಿ ಅಘೋರಿ ಪಾತ್ರದಲ್ಲಿ ನಟಿಸಿದೆ. ನಂತರ ಹಲವು ಸಿನಿಮಾಗಳಲ್ಲಿ ಖಳನಟನಾಗಿ ನಟಿಸುವ ಅವಕಾಶ ಸಿಗುತ್ತಲೇ ಹೋಯಿತು’ ಎಂದು ನಟನಾ ದಾರಿಗೆ ಅಡಿಯಿಟ್ಟ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ.

‘ಚೌಕ’, ‘ಜಾನ್‌ ಜಾನಿ ಜನಾರ್ದನ್‌’, ‘ನೂರೊಂದು ನೆನಪು’, ‘ಸಂಹಾರ’, ‘ಅಥರ್ವ’, ‘ತ್ರಾಟಕ’, ‘ಕೆಜಿಎಫ್‌’ ಹೀಗೆ ಅವರು ನಟಿಸಿದ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ‘ಕೆಜಿಎಫ್‌ 2’, ‘ಕಿರಾತಕ 2’, ‘ರವಿಚಂದ್ರ’, ‘ಆದಿಲಕ್ಷ್ಮೀ ಪುರಾಣ’– ಹೀಗೆ ಒಪ್ಪಿಕೊಂಡಿರುವ ಚಿತ್ರಗಳ ಪಟ್ಟಿಯೂ ಅಷ್ಟೇ ಉದ್ದ ಇದೆ.

ಖಳನಟನಾಗಿ ಆರ್ಭಟಿಸುತ್ತಿರುವ ಯಶವಂತ್ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾ ಮೌನೇಶ ಬಡಿಗೇರ್ ನಿರ್ದೇಶನದ ‘ಸೂಜಿದಾರ’. ಹರಿಪ್ರಿಯಾ ಜತೆ ಯಶವಂತ್ ತೆರೆಯನ್ನು ಹಂಚಿಕೊಂಡಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಸೂಜಿದಾರ ಸಿನಿಮಾದಲ್ಲಿ ಸ್ಕ್ರಿಪ್ಟ್‌ ತುಂಬ ಬೇರೆ ಥರ ಇದೆ. ಇದರಲ್ಲಿ ನಾನು ಹೀರೊ ಅಲ್ಲ. ಕಥೆಯೇ ಹೀರೊ. ನಾನು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಅತಿಯಾಗಿ ಕಾಡುವುದು ಕಥೆಯೇ’ ಎನ್ನುತ್ತಾರೆ ಅವರು.

‘ಒಂದು ಸಿನಿಮಾದಲ್ಲಿ ಹೀರೊ ವಿಜೃಂಭಿಸಬೇಕು ಎಂದರೆ ಅವನ ಎದುರಾಳಿ ಖಳನಟನೂ ಅಷ್ಟೇ ಪ್ರಭಾವಿಯಾಗಿರಬೇಕು. ಜನರು ನಾಯಕನಷ್ಟೇ, ಅವನ ಎದುರು ಬರುವ ವಿಲನ್‌ಗೂ ಕಾಯುತ್ತಾರೆ. ನಾಯಕ ಎಂದಾಗ ಅವನ ಒಳ್ಳೆಯ ಗುಣಗಳೇ ಮುನ್ನೆಲೆಗೆ ಬರುತ್ತವೆ. ಆದರೆ ಮನುಷ್ಯನೊಳಗಿನ ಖಳಗುಣಗಳನ್ನು ತೋರಿಸುವ ಸಾಧ್ಯತೆ ಇರುವುದು ಖಳನ ಪಾತ್ರದಲ್ಲಿಯೇ’ ಎಂದು ಖಳಪಾತ್ರದ ಮೇಲಿನ ತಮ್ಮ ಪ್ರೀತಿಗೆ ಕಾರಣವನ್ನು ಅವರು ಅರುಹುತ್ತಾರೆ.

ಯಶವಂತ್ ಅವರ ಪ್ರಕಾರ ನಟನೆ ಎಂದರೆ ಅದು ನಟನ ವ್ಯಕ್ತಿತ್ವದ ವಿಸ್ತರಣೆ. ‘ನನ್ನ ಮನೆಯಲ್ಲಿ ನನ್ನ ತಾಯಿ ಮತ್ತು ತಮ್ಮ ಪ್ರತಿದಿನವೂ ನನ್ನನ್ನು ನೋಡುತ್ತಿರುತ್ತಾರೆ. ಅವರಿಗೆ ನಾನು ಯಶವಂತ್ ಅಷ್ಟೆ. ನಾನು ತೆರೆಯ ಮೇಲೆ ಒಂದು ಪಾತ್ರವಾಗಿ ಕಾಣಿಸಿಕೊಂಡಾಗ ಅವರಿಗೆ ಅದು ನಿಜ ಅನಿಸಬೇಕು. ಆಗ ಮಾತ್ರ ನಟನಾಗಿ ಯಶಸ್ವಿಯಾಗಲು ಸಾಧ್ಯ. ಅವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ನಾನು ಕೆಟ್ಟ ನಟ ಎಂದು ಅರ್ಥ’ ಎಂದು ತಮ್ಮ ನಟನಾಮೀಮಾಂಸೆಯನ್ನು ಬಿಚ್ಚಿಡುತ್ತಾರೆ. ‘ಪ್ರತಿ ಪಾತ್ರವೂ ನಿಜಜೀವನದಿಂದ ಸ್ಫೂರ್ತಿಗೊಂಡಿದ್ದೇ ಆಗಿರುತ್ತದೆ. ಬರೆದವನು ತಾನು ನೋಡಿದ ಜಗತ್ತಿನ ರೆಫರೆನ್ಸ್‌ ಇಟ್ಟುಕೊಂಡೇ ಬರೆಯುತ್ತಾನೆ. ಅದು ನೋಡುಗರ ಮನಸ್ಸಿನಲ್ಲಿಯೂ ಯಾವುದೋ ಮೂಲೆಯಲ್ಲಿ ಇರುವ ಬಿಂಬಗಳೇ ಆಗಿರುತ್ತವೆ. ಆ ಬಿಂಬಗಳಿಗೆ ನಟ ಜೀವ ತುಂಬಿದಾಗ ಮಾತ್ರ ಅವರಿಗೆ ಇಷ್ಟವಾಗುತ್ತದೆ’ ಎಂದು ನಟನ ಮುಂದಿರುವ ಸವಾಲುಗಳನ್ನು ವಿವರಿಸುತ್ತಾರೆ.

ಸದ್ಯಕ್ಕೆ ಒಂದು ತಮಿಳು ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಯಶವಂತ್ ಅವರಿಗೆ ಹಿಂದಿಯಿಂದಲೂ ಅವಕಾಶಗಳು ಕೈ ಬೀಸಿ ಕರೆಯುತ್ತಿವೆ. ಬಹುಭಾಷೆಯಲ್ಲಿ ತಮ್ಮ ನಟನೆಯ ಛಾಪು ಮೂಡಿಸುವ ಉತ್ಸಾಹದಲ್ಲಿರುವ ಅವರಿಗೆ ಕನ್ನಡದ ನೆಲದಲ್ಲಿಯೇ ಕಾಲೂರಿ ಹಲವು ಭಾಷೆಗಳಿಗೆ ಚಾಚಿಕೊಳ್ಳುವ ಇಂಗಿತ ಇದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !