ಶುಕ್ರವಾರ, ನವೆಂಬರ್ 15, 2019
20 °C

ಹೆಗಲಿನ ಕೀಲುಗಳ ಆರೋಗ್ಯಕ್ಕೆ ಗೋಮುಖಾಸನ

Published:
Updated:
Prajavani

ಕಾಲುಗಳ ಪೆಡಸುತನ ಇದ್ದರೆ ಆರಾಮದಾಯಕವಾಗಿ ನಡೆದಾಡುವುದೂ ಕಷ್ಟ. ಎದೆ ಮತ್ತು ಹೆಗಲಿನ ಸರಿಯಾದ ಚಲನೆಗೆ ವ್ಯಾಯಾಮ ಒದಗಿಸಿ ಶಕ್ತಿ ತುಂಬುವಲ್ಲಿ ಗೋಮುಖಾಸನ ನೆರವಾಗುತ್ತದೆ. ಈ ಆಸನವು ಅಂತಿಮ ಸ್ಥಿತಿಯಲ್ಲಿ ಹಸುವಿನ ಮುಖವನ್ನು ಹೋಲುವುದರಿಂದ ಗೋಮುಖಾಸನ ಎಂದು ಹೆಸರಿಸಲಾಗಿದೆ. ಗೋಮುಖ ಎಂಬ ಸಂಗೀತ ವಾಧ್ಯವೂ ಇದೆ.

ಅಭ್ಯಾಸ ಕ್ರಮ

ಕಾಲುಗಳನ್ನು ನೀಳವಾಗಿ ಚಾಚಿ ನೆಲದ ಮೇಲೆ ನೇರವಾಗಿ ಕುಳಿತುಕೊಳ್ಳಿ. ಎರಡೂ ಕೈಗಳನ್ನು ಸೊಂಟದ ಪಕ್ಕ ನೆಲಕ್ಕೆ ಊರಿ ವೃಷ್ಠವನ್ನು ನೆಲದಿಂದ ಮೇಲಕ್ಕೆತ್ತಿ. ಎಡ ಕಾಲಿನ ಮಂಡಿಯನ್ನು ಬಾಗಿಸಿ ಪಾದವನ್ನು ಹಿಮ್ಮುಖ ಮಾಡಿ ಇರಿಸಿ, ಪಾದದ ಮೇಲೆ ಕುಳಿತುಕೊಳ್ಳಿ. ಬಳಿಕ, ನೆಲಕ್ಕೂರಿದ್ದ ಕೈಗಳನ್ನು ತೆಗೆದು ಬಲಕಾಲಿನ ಮಂಡಿಯನ್ನು ಬಾಗಿಸಿ ಕೈಗಳ ಸಹಾಯದಿಂದ ಎಡ ತೊಡೆಯ ಮೇಲೆ ಬಲ ತೊಡೆ ಬರುವಂತೆ ತಂದು ಪಾದವನ್ನು ಹಿಮ್ಮುಖವಾಗಿ ಇರಿಸಿ. ಕಾಲಿನಗಿಣ್ಣುಗಳು ಹಾಗೂ ಹಿಮ್ಮಡಿಗಳು ಒಂದಕ್ಕೊಂದು ತಾಗುವಂತೆ ಹೊಂದಿಸಿ (ಕಾಲ್ಬೆರಳುಗಳು ಹಿಮ್ಮುಖವಾಗಿರಲಿ).

ನಂತರ ಕೈಗಳನ್ನು ನೀಳವಾಗಿ ತಲೆಯಿಂದ ಮೇಲಕ್ಕೆತ್ತಿ. ಎಡ ಮೊಳಕೈಯನ್ನು ಬಾಗಿಸಿ ಬೆನ್ನಹಿಂದೆ ತಂದು ಕುತ್ತಿಗೆಯ ಕೆಳಗೆ ಭುಜಗಳ ಮಧ್ಯೆ ಇರಿಸಿ. ಬಳಿಕ, ಬಲಕೈಯನ್ನು ಕೆಳಕ್ಕಿಳಿಸಿ ಮೊಳಕೈಯನ್ನು ಬಾಗಿಸಿ, ಬೆನ್ನ ಹಿಂದೆ ತಂದು ಬಲ ತೋಳನ್ನು ಮೇಲಕ್ಕೆ ಸರಿಸಿ ಹೆಗಲ ಎಲುಬಿನ ಮಧ್ಯೆ ತನ್ನಿ. ಮೇಲಿನಿಂದ ಕೆಳಕ್ಕೆ ಬಾಗಿರುವ ಎಡಗೈನ ಬೆರಳುಗಳನ್ನು ಕೆಳಗಿರುವ ಬಲಗೈನ ಬೆರಳುಗಳಿಂದ ಬಂಧಿಸಿ ಹಿಡಿಯಿರಿ. ಮೇಲಿದ್ದ ಎಡಗೈನ ತೋಳು ಕಿವಿಗೆ ತಾಗಿರುವಂತೆ ಇದ್ದು, ಮೇಲಕ್ಕೆ ಸೆಳೆಯುತ್ತಿರುತ್ತದೆ. ಕೆಳಗಿನ ಕೈ ಕೆಳಕ್ಕೆ ಸೆಳೆಯುತ್ತಿರುತ್ತದೆ. ಭುಜದಲ್ಲಿನ ಮಾಂಸಖಂಡಗಳು ಸೆಳೆಯಲ್ಪಡುತ್ತವೆ. 

ಈ ಹಂತದಲ್ಲಿ ಸರಳ ಮತ್ತು ದೀರ್ಘ ಉಸಿರಾಟ ನಡೆಸಿ, ಅಂತಿಮ ಸ್ಥಿತಿಯಲ್ಲಿ 30 ಸೆಕೆಂಡುಗಳಿಂದ ಒಂದು ನಿಮಿಷದವರೆಗೆ ನೆಲೆಸಿ ವಿರಮಿಸಿ. ನಂತರ ವಿರುದ್ಧ ದಿಕ್ಕಿನಲ್ಲಿ ಅಭ್ಯಾಸ ನಡೆಸಿ.

ಸೂಚನೆ

ಕಾಲು ಮತ್ತು ಕೈಗಳು ಬಲ–ಎಡ, ಎಡ–ಬಲ ಹೀಗೆ ವಿರುದ್ಧ ಕ್ರಮದಲ್ಲಿದ್ದು ಅಭ್ಯಾಸ ನಡೆಯುತ್ತದೆ. ಬಲ ಕಾಲು ಮೇಲಿದ್ದಾಗ ಎಡ ಕೈ ಮೇಲಿರುತ್ತದೆ. ಎಡ ಕಾಲು ಮೇಲಿದ್ದಾಗ ಬಲ ಕೈ ಮೇಲಿರುತ್ತದೆ.

ಫಲಗಳು

- ಎದೆಯು ವಿಶಾಲವಾಗಿ ಹಿಗ್ಗಲು ಸಹಕಾರಿ.

- ಬೆನ್ನನ್ನು ನೇರವಾಗಿ ನಿಲ್ಲಿಸುತ್ತದೆ. ಬೆನ್ನಿನ ಸೆಳೆತ ನಿವಾರಿಸುತ್ತದೆ.

- ಹೆಗಲಿನ ಕೀಲುಗಳ ಸರಳವಾದ ಚಲನೆಗೆ ನೆರವಾಗುವುದು.

- ಕಾಲುಗಳಲ್ಲಿನ ಪೆಡಸುತನವನ್ನು ತೊಡೆದು, ಮಾಂಸಖಂಡಗಳು ಸ್ಥಿತಿಸ್ಥಾಪಕತ್ವ ಪಡೆಯುತ್ತವೆ.

 

ಪ್ರತಿಕ್ರಿಯಿಸಿ (+)