ಹ್ಯಾಪಿ ಬರ್ತ್‌ ಡೇ ಭಟ್ಟರೇ!

7

ಹ್ಯಾಪಿ ಬರ್ತ್‌ ಡೇ ಭಟ್ಟರೇ!

Published:
Updated:
Deccan Herald

2006ನೇ ಇಸ್ವಿ. ಅವವೇ ಹಳಸಲು ವಸ್ತು, ವಿಷಯ, ತಂತ್ರಗಾರಿಕೆಗಳಿಂದ ಬರಬಿದ್ದಿದ್ದ ಕನ್ನಡ ಚಿತ್ರರಂಗದಲ್ಲಿ ‘ಮುಂಗಾರು ಮಳೆ’ ಸೋನೆಯಂತೆ ಶುರುವಾದ ಮಳೆ ಕ್ರಮೇಣ ಮುಗಿಲು ಕತ್ತರಿಸಿ ಬಿದ್ದಂತೆ ಭೋರ್ಗರೆಯತೊಡಗಿತ್ತು. ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ‘ಮುಂಗಾರು ಮಳೆ’ ಚಿತ್ರವನ್ನು ಜನರು ನಿರಿಕ್ಷೆ ಮೀರಿ ಎತ್ತಿ ಕೊಂಡಾಡಿ ಮೆರವಣಿಗೆ ಮಾಡಿದ್ದರ ಫಲವಾಗಿ ಮುಂದೆ ಐವತ್ತು ಕೋಟಿಗಿಂತ ಅಧಿಕ ಹಣವನ್ನು ಬಾಚಿಕೊಂಡಿತು. ಹಣದ ಲೆಕ್ಕಾಚಾರದಲ್ಲಿ ಮಾತ್ರವಷ್ಟೇ ಅಲ್ಲ – ವಸ್ತು, ಕ್ರಮ, ತಾಂತ್ರಿಕಗುಣ, ನಿರೂಪಣೆಯ ತಂತ್ರ ಹೀಗೆ ಹಲವು ದೆಸೆಗಳಲ್ಲಿ ಸಿದ್ಧಸೂತ್ರಗಳ ಕಟ್ಟೊಡೆದು ಹೊಸ ಹುಟ್ಟು ಕೊಟ್ಟ ಚಿತ್ರವದು. ‘ಮುಂಗಾರು ಮಳೆ’ಯಿಂದ ಹಲವು ಪ್ರತಿಭಾವಂತರು ಚಿತ್ರರಂಗದಲ್ಲಿ ಚಿಗುರೊಡೆದರು; ಹೊಸ ನೀರಿನ ಝರಿಯೊಂದು ಹಳೆಯ ನದಿಗೆ ಸೇರಿಕೊಂಡು ಚಂದನವನದಲ್ಲಿ ನವೋತ್ಸಾಹದ ಹರಿವು ಕಾಣಿಸಿಕೊಂಡಿತು. ಹಾಗಾಗಿ ಸಿನಿಮಾದ ಶೀರ್ಷಿಕೆ ಹೊಸಫಸಲಿನ ದೃಷ್ಟಿಯಿಂದ ಇಡೀ ಚಿತ್ರರಂಗಕ್ಕೇ ಅನ್ವಯವಾಗುವಂತಿತ್ತು.

‘ಮುಂಗಾರು ಮಳೆ’ ಯಶಸ್ಸಿನ ಜ್ವರ ನೆತ್ತಿಗೇರಿದ್ದ ಸಂದರ್ಭವದು. ಈ ಜ‌್ವರದ ಕಾರಣಪುರುಷ ನಿರ್ದೇಶಕ ಯೋಗರಾಜ್‌ ಭಟ್‌ ಒಂದು ಖಾಸಗೀ ಟೀವಿ ವಾಹಿನಿಯ ಕಾರ್ಯಕ್ರಮದಲ್ಲಿ ಮಿರ್ಚಿ ಬಜ್ಜಿ ಮಾಡುತ್ತ ಕೂತಿದ್ದರು! ಅದರ ಜತೆಗೆ ಸಿನಿಮಾ ಮಾತುಕತೆ. ನಿರೂಪಕಿ ಸದ್ಯದ ಯಶಸ್ಸಿನ ನೆಪದಲ್ಲಿ ಅವರ ಹಿಂದಿನ ಸೋಲನ್ನು ಕೆದಕಲು ಅನುವಾಗಿದ್ದರು. ‘ಸರ್, ಈ ಹಿಂದೆ ರಂಗ ಎಸ್‌ಎಸ್‌ಎಲ್‌ಸಿ, ಮಣಿ ಎಂಬ ಎರಡು ಸಿನಿಮಾ ಮಾಡಿದ್ದೀರಿ. ಆದರೆ ಆ ಸಿನಿಮಾಗಳ್ಯಾಕೆ ಸಕ್ಸೆಸ್ ಆಗಲಿಲ್ಲ?’ ಆಗಷ್ಟೇ ಎಣ್ಣೆಯಲ್ಲಿ ಕರಿದು ಕೆಳಗಿಟ್ಟಿದ್ದ ಬಿಸಿಬಿಸಿ ಬಜ್ಜಿಯನ್ನು ನಿರೂಪಕಿಯ ಕೈಗಿಟ್ಟ ಭಟ್ಟರು ‘ತಿಂದು ನೋಡಿ, ಹೇಗಿದೆ?’ ಎಂದರು. ಬಜ್ಜಿ ತಿಂದ ನಿರೂಪಕಿ ತನ್ನ ಎಂದಿನ ಶೈಲಿಯಲ್ಲಿ ಸೂಪರ್ ಎನ್ನುವಂತೆ ಕೈತೋರಿಸಿದಳು.

ಒಮ್ಮೆ ತಲೆ ಕೆರೆದುಕೊಂಡು ನಕ್ಕ ಭಟ್ಟರು – ‘ಮೊನ್ನೆಯೂ ಹೀಗೆ ಬಜ್ಜಿ ಮಾಡಿದ್ದೆ. ಆದರೆ ಇಷ್ಟು ಚೆನ್ನಾಗಿ ಆಗಿರಲಿಲ್ಲ. ಇದೇ ಕಡಲೆಹಿಟ್ಟು, ಹಸಿಮೆಣಸು, ಮೊಸರು, ಎಲ್ಲ ಸಾಮಗ್ರಿಗಳನ್ನೂ ಹಾಕಿದ್ದೆ. ಆದರೆ ಈ ರುಚಿ ಬಂದಿರಲಿಲ್ಲ. ಈಗ ಹೇಗೆ ಹದ ಸಿಕ್ಕಿತು? ನಾಳೆ ಮತ್ತೆ ಹೀಗೆಯೇ ಮಾಡಿದರೂ ಇದೇ ರುಚಿ ಬರುತ್ತದಾ? ಗೊತ್ತಿಲ್ಲ’ ಎಂದು ಮತ್ತೊಮ್ಮೆ ನಕ್ಕರು. ಬಜ್ಜಿಯ ಕುರಿತಾದ ವಿವರಣೆಯಲ್ಲಿ ನಿರೂಪಕಿಯ ಮೊದಲ ಪ್ರಶ್ನೆಗೂ ಉತ್ತರ ಸಿಕ್ಕಿತ್ತು.

ಇದು ಯೋಗರಾಜ್‌ ಭಟ್. ದೊಡ್ಡದೊಂದು ಯಶಸ್ಸಿನ ಕಿರೀಟವನ್ನು ನೆತ್ತಿಯ ಮೇಲೆ ಹೊತ್ತುಕೊಂಡಿರುವಾಗಲೂ, ಸೋಲಿನ ಮುಳ್ಳು ಅಂಗಾಲಿಗೆ ಚುಚ್ಚಿಕೊಂಡಾಗಲೂ ಅವರು ‘ಇದು ತನ್ನದಲ್ಲ’ ಎನ್ನುವಂತೆ ಹೆಗಲಿಗೊಂದು ಜೋಳಿಗೆ ನೇತುಹಾಕಿಕೊಂಡು ಸುಮ್ಮನೆ ನಡೆಯುವ ಗೊಂಬೆಯಾಡಿಸುವ ಜೋಗಿಯಂತೆ ಹಾಗೆಯೇ ಕಾಣಿಸುತ್ತಾರೆ ಅವರು. ಆ ಜೋಳಿಗೆಯಲ್ಲಿ ಹೇಳಲಿಕ್ಕೆ ಮುಗಿಯದಷ್ಟು ಕಥೆಗಳಿವೆ. ಆಡಿಸಲಿಕ್ಕೆ ಥರಹೇವಾರಿ ಗೊಂಬೆಗಳಿವೆ. ಆಡಿಸುವಾತನ ಕೈಚಳಕದಲ್ಲಿ ಬದುಕಿನ ಗಾಢ ಸತ್ಯಗಳನ್ನು ಕ್ಷಣಾರ್ಧದಲ್ಲಿ ಹೊಳೆಯಿಸಿ ದಂಗುಬಡಿಸುವ ಮಾಂತ್ರಿಕತೆ ಇದೆ. ಮುಪ್ಪಾದ ಹುಣಸೇಮರದಲ್ಲಿ ಬಿಡುವ ಚಪ್ಪರಿಸಿದಷ್ಟೂ ಹುಳಿಬಿಡುವ ಹುಣಸೇಹಣ್ಣಿನಂಥ ಪೋಲಿತನವಿದೆ. ಬಣ್ಣದ ಜಗತ್ತಿನೊಳಗಿದ್ದೂ ಸಹಜಹೂವಿನ ಗಂಧಕ್ಕೆ ಪಕ್ಕನೆ ಅರಳುವ, ಸಂತೆಯ ನಡುವೆ ಮನೆ ಮಾಡಿಯೂ ಶಬ್ದ ಶಬ್ದದ ನಡುವಿನ ತೀವ್ರಮೌನಕ್ಕೆ ಮರುಳಾಗುವ ಮಗುತನವಿದೆ. ಅರಸಿಕೊಂಡ ಬಂದ ಜನಪ್ರಿಯತೆಯನ್ನು ಅಪ್ಪಿಕೊಳ್ಳುವ, ಮರುಕ್ಷಣವೇ ಎಲ್ಲದಕ್ಕೂ ಬೆನ್ನುಕೊಟ್ಟು ನಿಂತುಬಿಡುವ ವಿರಾಗಿತನವೂ ಇದೆ. 

ಇದನ್ನೂ ಓದಿ: ಯೋಗರಾಜ್‌ ಭಟ್ ಜೊತೆಗೆ ಸುದೀರ್ಘ ಪಟ್ಟಾಂಗ

‘ಮುಂಗಾರು ಮಳೆ’ಯೊಟ್ಟಿಗೆ ಕನ್ನಡ ಚಿತ್ರರಂಗವನ್ನು ಇನ್ನೊಂದು ದಿಕ್ಕಿಗೆ ವಿಸ್ತರಿಸಿದ ಉಜ್ವಲ ಪ್ರತಿಭಾವಂತ ನಿರ್ದೇಶಕ ಸೂರಿ. ಯೋಗರಾಜ್‌ ಭಟ್ ಮತ್ತು ಸೂರಿ ಅವರ ನಡುವಿನ ಗೆಳೆತನ ಹಳೆಯದು. ಆದರೆ ಇವರ ಸ್ವಭಾವಗಳಲ್ಲಿ ಮಾತ್ರ ಹಲವು ವೈರುಧ್ಯಗಳು ಎದ್ದು ಕಾಣುತ್ತವೆ. ಸೂರಿ ಕಚೇರಿ ಸದಾ ಮೌನದ ಚಿಪ್ಪಿನೊಳಗೆ ಮುಚ್ಚಿಕೊಂಡೇ ಇರುತ್ತದೆ. ಹೆಚ್ಚೆಂದರೆ ಅಲ್ಲಿ ಕುಂಚ, ಕ್ಯಾನ್ವಾಸುಗಳು, ಪೆನ್ನು– ಕಾಗದಗಳು, ಸಂಜೆ ಹೊತ್ತಲ್ಲಿ ಗಾಜು–ಹೂಜಿಗಳು ಸದ್ದು ಮಾಡಬಹುದು. ಬೆಳಿಗ್ಗೆ ಸೂರಿ ತಾವೇ ಗೇಟಿನ ಬೀಗ ತೆರೆದು ಒಳಹೋಗುತ್ತಾರೆ. ಆದರೆ ಯೋಗರಾಜ್‌ ಭಟ್‌ ಆಫೀಸನ್ನು ನಿರ್ಜನವಾಗಿ ನೋಡಿದರೇ ಇಲ್ಲವೇನೋ. ಬೀಗ ತೆರೆಯಲು ಅವರ ಕಚೇರಿಗೆ ಬೀಗವೇ ಇಲ್ಲ. ಯಾರಾದರೂ ತಮ್ಮನ್ನು ಹುಡುಗಿಕೊಂಡು ಬರುವವರಿಗೆ ಭಟ್ಟರು ಹೇಳುವ ಗುರುತು ‘ಅದೇ ಗೇಟಿಲ್ದಿರೋ ಬಿಲ್ಡಿಂಗಿನೆದುರು ಒಂದು ಉದ್ದ ಕಾರು ನಿತ್ಕಂಡಿರ್ತದೆ ನೋಡಿ’ ಎಂದು! ‘ಗೇಟಿಲ್ಲದ ಬಿಲ್ಡಿಂಗು’ ಅವರ ವ್ಯಕ್ತಿತ್ವಕ್ಕೂ ಸಮರ್ಥ ರೂಪಕವಾಗಬಲ್ಲದು. 

ತಮಗೆ ಸಿಕ್ಕಿದ ಯಶಸ್ಸನ್ನು ಇತರರ ಜತೆ ಹಂಚಿಕೊಳ್ಳಲು ಸದಾ ಮುಕ್ತವಾಗಿರುವವರು ಭಟ್. ಹಾಗಾಗಿಯೇ ತನ್ನ ಹೆಸರನ್ನು, ಬ್ಯಾನರ್‌ ಅನ್ನು ಬಳಸಿಕೊಳ್ಳಲು ಹೊಸ ಹುಡುಗರಿಗೆ ಮುಕ್ತವಾಗಿ ಬಿಟ್ಟುಕೊಟ್ಟವರು ಅವರು. ‘ನನಗೆ ಎಂಬತ್ತು ವರ್ಷ ಆದ್ರೂ ನಾನು ಹದಿನೆಂಟು ವರ್ಷದ ಹುಡುಗ– ಹುಡುಗಿಯರಿಗೇ ಸಿನಿಮಾ ಮಾಡೋದು’ ಎಂದೊಮ್ಮೆ ಅವರು ಹೇಳಿದ್ದರು. 

‘ಮುಂಗಾರು ಮಳೆ’ ದೊಡ್ಡ ಯಶಸ್ಸು ಕೊಟ್ಟರೂ ಅದರ ನಂತರ ಅವರು ಒಡ್ಡಿಕೊಂಡ ಪ್ರಯೋಗಗಳು ಬಹುಮುಖ್ಯವಾಗಿ ಗಮನಿಸಲೇಬೇಕಾದ ಸಿನಿಮಾಗಳನ್ನು ರೂಪಿಸಿದವು. ‘ಗಾಳಿಪಟ’, ಮನಸಾರೆ’ ನಂತರದ ‘ಪಂಚರಂಗಿ’ಯಲ್ಲಂತೂ ಅವರು ಸಿನಿಮಾ ಮಾಧ್ಯಮದ ಮೂಲವ್ಯಾಕರಣವನ್ನೇ ತುಸು ಪಲ್ಲಟಗೊಳಿಸುವ ಹಾಗೆ ಮಾತಿನ ಇಟ್ಟಿಗೆಗಳಿಂದಲೇ ಸಿನಿಮಾ ಕಟ್ಟಿದರು. ಅಂಥ ಚಟಪಟ ಮಾತುಗಳ ಮಧ್ಯವೂ ಸಮುದ್ರ, ಮರಳು, ದೇವಸ್ಥಾನದ ಮೆಟ್ಟಿಲುಗಳ ಸದ್ದಿನ ಇಮೇಜ್‌ಗಳ ಮೂಲವೇ ಮೌನವನ್ನೂ ಕಾಣಿಸಿದರು. 

‘ಪರಮಾತ್ಮ’ ಭಟ್ಟರ ಪ್ರಯೋಗಶೀಲತೆಗೆ ಇನ್ನೊಂದು ಜ್ವಲಂತ ಉದಾಹರಣೆ. ಇದು ಯೋಗರಾಜ್‌ ಭಟ್ಟರ ಮಾತಿನ ಇಮೇಜ್‌  ಮತ್ತು ನಾಯಕನಟ ಪುನೀತ್‌ ರಾಜ್‌ಕುಮಾರ್‌ ಅವರ ಅದುವರೆಗಿನ ಹೀರೊಯಿಸಂ ಇಮೇಜ್‌ ಎರಡನ್ನೂ ಒಡೆದು ರುಬ್ಬಿ ಕಟ್ಟಿದ ಅಪರೂಪದ ಕಲಾಕೃತಿ. ಅದಾದ ನಂತರದ ‘ಡ್ರಾಮಾ’, ‘ವಾಸ್ತು ಪ್ರಕಾರ’, ‘ದನ ಕಾಯೋನು’, ‘ಮುಗುಳುನಗೆ’ ಎಲ್ಲ ಸಿನಿಮಾಗಳಲ್ಲಿಯೂ ಅವರೊಳಗಿನ ನಿರ್ದೇಶಕನ ಜಿಗಿತವನ್ನೂ, ಇದ್ದದ್ದು ಬಿಟ್ಟು ಇಲ್ಲದ್ದರೆಡೆಗೆ ಕೈಚಾಚುವ ತುಡಿತನ್ನೂ ಬೇರೆ ಬೇರೆ ರೀತಿಗಳಲ್ಲಿ ಗುರ್ತಿಸಬಹುದು. ಸದ್ಯಕ್ಕೆ ಅವರು ನಿರ್ದೇಶಿಸುತ್ತಿರುವ ಸಿನಿಮಾ ಹೆಸರು ‘ಪಂಚತಂತ್ರ’. ಹೊಸ ಹುಡುಗರು ಮತ್ತು ಹಳೆ ಸ್ನೇಹಿತರನ್ನು ಇಟ್ಟುಕೊಂಡು ಕಟ್ಟುತ್ತಿರುವ ಈ ಚಿತ್ರದ ಕುರಿತು ಅವರ ನಿರೀಕ್ಷೆಯೂ ಸಾಕಷ್ಟಿದೆ. 

ನಿರ್ದೇಶಕನಾಗಿಯಷ್ಟೇ ಅಲ್ಲ, ಗೀತರಚನೆಕಾರನಾಗಿಯೂ ಯೋಗರಾಜ ಭಟ್ಟರ ಕೊಡುಗೆ ತುಂಬ ಮೌಲ್ಯಯುತವಾದದ್ದು. ಮುಂಗಾರುಮಳೆಯಲ್ಲಿ ‘ಒಲವ ಚಂದಮಾಮ ನಗುತ ಬಂದ ಮನದಂಗಳಕೆ/ ಪ್ರೀತಿ ಬೆಳಕಿನಲೀ ಹೃದಯ ಹೊರಟಿತೇ ಮೆರವಣಿಗೆ’ ಎಂಬಂಥ ರಮ್ಯಸಾಲುಗಳನ್ನು ಬರೆದಿದ್ದ ಭಟ್ಟರೊಳಗಿನ ಕಿಡಿಗೇಡಿ ಪದಗಾರುಡಿತನವನ್ನು ಹೊರಗೆಳೆದಿದ್ದು ‘ಜಂಗ್ಲಿ’ ಚಿತ್ರದ ‘ಹಳೆ ಪಾತ್ರೆ, ಹಳೆ ಕಬ್ಣ/,ಹಳೆ ಪೇಪರ್‌ ಥರ ಹೋಯ್/ ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ’ ಎಂಬ ಹಾಡಿನಲ್ಲಿ. 

ಚಂದಿರನ ತೂಕಕೆ ಇಡು ಸಂಜೆಯನು ಸೇಲಿಗೆ ಬಿಡು
ಭೂಮಿನ ಬಾಡಿಗೆ ಕೊಡು ಸಾಕು
ಲೋಕವ ಮೂಟೆ ಕಟ್ಟು ಬಾರಲೇ ಸೈಕಲ್ ಹತ್ತು
ಲೋಕವ ಮೂಟೆ ಕಟ್ಟು ಬಾರಲೇ ಸೈಕಲ್ ಹತ್ತು
ಯಾತಕೆ ದೂಸರಾ ಮಾತು? ಎಲ್ಲಾ ಟೈಮ್ ವೇಸ್ಟ್

ಎಂಬಂಥ ಸಾಲುಗಳನ್ನು ಅವರು ಬರೆದಾಗ ಪಡ್ಡೆ ಹುಡುಗರ ಬಾಯಿಯಲ್ಲಿ ಚೂಯಿಂಗ್‌ಗಮ್‌ನಷ್ಟೇ ಸಲೀಸಾಗಿ ಚಪ್ಪರಿಸಲ್ಪಟ್ಟರೂ, ಸಾಂಪ್ರದಾಯಿಕ ಮನಸ್ಥಿತಿಯವರ ಕೆಂಗಣ್ಣಿಗೂ ಗುರಿಯಾಗಬೇಕಾಯ್ತು. ‘ಕನ್ನಡ ಹಾಳು ಮಾಡ್ತಿದ್ದಾರೆ’, ‘ಕಂಗ್ಲಿಷು ಪದ್ಯಗಳು’, ‘ಪದ್ಯಕ್ಕಿರುವ ಘನತೆಯನ್ನು ಹಾಳುಮಾಡಿದರು’ ಹೀಗೆ ಹಲವು ಆರೋಪಗಳನ್ನು ತಮ್ಮ ಎಂದಿನ ಪೆಕರು ಪೆಕರು ನಗುವಿನ ಮೂಲಕವೇ ಎದುರಿಸಿದ ಭಟ್ಟರು ಮುಂದೆ ಕನ್ನಡ ಚಿತ್ರಸಾಹಿತ್ಯದಲ್ಲಿ ಹೊಸದೊಂದು ಪದ್ಯದಾರಿಯನ್ನು ತೆರೆದು ಅದರಲ್ಲಿ ನಡೆಯುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಹರೆಯದ ಹುಡುಗ/ಹುಡುಗಿಯರ ಹಸಿಬಿಸಿ ಪ್ರೇಮ–ಕಾಮನಗೆಳು ಹಗುರ ವಿಡಂಬನಾ ರೂಪದಲ್ಲಿ ಅವರು ಹೆಣೆಯುವ ಪರಿಯನ್ನು ಅನುಕರಿಸಲು ಹೋಗಿ ಮುಗ್ಗರಿಸಿದ ಹಲವರಿದ್ದಾರೆ. ಹರಿತ ವ್ಯಂಗ್ಯದೊಟ್ಟಿಗೆ ಬದುಕಿನ ಸುರಳೀತ ಸತ್ಯವನ್ನು ಅವರು ಅಷ್ಟೇ ಸುಭಗವಾಗಿ ಸಾಲುಗಳಲ್ಲಿ ಮಿಂಚಿಸುತ್ತಾರೆ. ಮಿರ್ಚಿ ಬಜ್ಜಿಗೆ ಹಿಟ್ಟಿಗೆ ಹಲವು ಸಾಮಗ್ರಿಗಳನ್ನು ಹಾಕಿ ಕಲೆಸಿದಷ್ಟೇ ಹದವಾಗಿ ಕನ್ನಡಕ್ಕೆ ಇಂಗ್ಲಿಷು ಶಬ್ದಗಳನ್ನು, ಕಾವ್ಯಾತ್ಮಕ ಸಾಲುಗಳ ನಡುವೊಂದೆರಡು ಪಕ್ಕಾ ಪಡ್ಡೆಪದಗಳನ್ನು ಕೂಡಿಸಿ ಕೊಡಬಲ್ಲ ಚಾಕಚಕ್ಯತೆ ಅವರಿಗಿದೆ. ಹಾಗಾಗಿಯೇ ಅವರ ಹಾಡುಗಳು ಒಂದು ಸಿನಿಮಾವನ್ನೂ ಗೆಲ್ಲಿಸಿಕೊಡುವ ವಿಶ್ವಾಸ ಹುಟ್ಟಿಸುವಷ್ಟು ಜನಪ್ರಿಯತೆ ಗಳಿಸುತ್ತವೆ. ಪಡ್ಡೆಹಾಡುಗಳಲ್ಲಿನ ಸಾಲುಗಳನ್ನು ಆಡಿಕೊಳ್ಳಲು ಕೊಟ್ಟು, ಅದೇ ಪೊಟ್ಟಣದಲ್ಲಿ ಮತ್ತೊಂದು ಚಂದಕಾವ್ಯವನ್ನು ಹೊಚ್ಚಹೊಸ ಇಮೇಜ್‌ಗಳಲ್ಲಿ ಹಾಡಿಕೊಳ್ಳಲು ಕೊಡುವಷ್ಟು ಕವಿಪ್ರತಿಭೆಯೂ ಅವರಿಗಿದೆ. ‘ಎಕ್ಕಾ ರಾಜ ರಾಣಿ ನನ್ನ ಕೈಯೊಳಗೆ’ ಎಂದು ಬರೆದಷ್ಟೇ ಸಲೀಸಾಗಿ ಅವರು,

‘ಒಂದೇ ಸಮನೆ ನಿಟ್ಟುಸಿರು,  ಪಿಸುಗುಡುವ ತೀರದ ಮೌನ,

ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ

ಎದೆಯ ಜೋಪಡಿಯಾ ಒಳಗೆ ಅಡಿಯಿಡದೆ ಕೊಲುತಿದೆ ಒಲವು

ಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವು’

ಎಂಬಂಥ ವಿರಹಿಯ ಆತ್ಮಗೀತೆಯನ್ನೂ ಕಟ್ಟಬಲ್ಲರು. ’ಗೊಂಬೆಯಾಡ್ಸೋನು ಮ್ಯಾಲೆ ಕುಂತವ್ನೆ ನಂಗೆ ನಿನಗೆ ಯಾಕೆ ಟೆನ್ಸನ್ನು’ ಎಂದು ಮಹಾನ್ ವಿರಾಗಿಯಂತೆ ಹಾಡಿದ ಅವರೇ ‘ಶೃಂಗಾರದ ಹೊಂಗೆ ಮರ ಹೂಬಿಟ್ಟಿದೆ/ ನಾಚಿಕೆಯೂ ನಮ್ಮ ಜತೆ ಠೂ ಬಿಟ್ಟಿದೆ’ ಎಂದು ಶೃಂಗಾರರಸದಲ್ಲಿ ಮೀಯಿಸಬಲ್ಲರು. 

ಇದನ್ನೂ ಓದಿಭಟ್ಟರ ಹಾಡಿಗೆ ಸೋನಲ್, ವಿಹಾನ್ ಪ್ರಣಯ

ಬಾಲ್ಯದ ತುಂಟಾಟವನ್ನೂ ಕಿಡಿಗೇಡಿತನವನ್ನೂ ತಮ್ಮ ಸಿನಿಮಾ, ಸ್ವಭಾವ, ಹಾಡುಗಳು ಎಲ್ಲದರಲ್ಲಿಯೂ ಉಳಿಸಿಕೊಂಡಿರುವ ಭಟ್ಟರ ಬಾಲ್ಯವೇನೂ ಸುಖದ ಸುಪ್ಪತ್ತಿಗೆಯಲ್ಲ. ಆದರೆ ಬಾಲ್ಯದ ಸಂಕಷ್ಟಗಳ ಕುರಿತು ಅವರು ಮಾತಾಡಿದ್ದೇ ಇಲ್ಲ. ‘ಜಗತ್ತಿನಲ್ಲಿ ಹುಟ್ಟಿದ ಎಲ್ಲರಿಗೂ ಸಂಕಷ್ಟಗಳು ಇದ್ದೇ ಇರ್ತವೆ. ನಾನು ಬಾಲ್ಯದಲ್ಲಿದ್ದಾಗ ಹಂಗಾಗಿತ್ತು, ಅಷ್ಟು ಕಷ್ಟಪಟ್ಟಿದ್ದೆ, ಇಷ್ಟು ಸಂಕಷ್ಟದಲ್ಲಿದ್ದೆ ಎಂದೆಲ್ಲ ಅಲವತ್ತುಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ. ಹಾಗೆ ಮಾತಾಡುವಾಗೆಲ್ಲ ನಾನು ಯಾವುದೋ ನಿರಾಶ್ರಿತರ ಶಿಬಿರದಲ್ಲಿ ನಿಂತುಕೊಂಡು ಎಲ್ರೂ ನನ್ನನ್ನು ನೋಡಿ ಎಂದು ಕೈಯೆತ್ತಿ ಅಲವತ್ತುಕೊಳ್ಳುತ್ತಿರುವಂತೆ ಭಾಸವಾಗುತ್ತದೆ’ ಎಂದೊಮ್ಮೆ ಅವರು ಹೇಳಿದ್ದರು. ಇಂಥ ಪ್ರಬುದ್ಧ ಜೀವನದೃಷ್ಟಿಯ ಕಾರಣದಿಂದಲೇ ಅವರಿಗೆ ತಾವು ಕಂಡ ಅನುಭವವನ್ನು ಎಲ್ಲರ ಅನುಭವವಾಗಿಸುವ, ಬದುಕನ್ನು ಕೊಂಚ ವಕ್ರವಾಗಿ, ವ್ಯಂಗ್ಯವಾಗಿ ನೋಡಬಲ್ಲ ವಿಶಿಷ್ಟ ದೃಷ್ಟಿ ಸಿದ್ಧಿಸಿದೆಯೆನಿಸುತ್ತದೆ. 

ಇಂದು (ಅ.08) ಯೋಗರಾಜ್‌ ಭಟ್ ಅವರ ಜನ್ಮದಿನ. ಬದುಕಿನ ಹಾದಿಯಲ್ಲಿ 46 ಹೆಜ್ಜೆಗಳನ್ನು ಎತ್ತಿಟ್ಟಿರುವ ಅವರು ಈಗಾಗಲೇ ಹಲವು ಅಚ್ಚಳಿಯದ ಗುರುತುಗಳನ್ನು ಮೂಡಿಸಿದ್ದಾರೆ. ಆ ಗುರುತುಗಳ್ಯಾವವೂ ತಮ್ಮದಲ್ಲ ಎನ್ನುವಂತೆ ಮುಂದೆ ಸಾಗುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು, ಅಸಂಖ್ಯಾತ ಅಭಿಮಾನಿಗಳು ಇವರ ಜನ್ಮದಿನದ ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಭಟ್ಟರು ಮಾತ್ರ ದೂರದ ಬಳ್ಳಾರಿಯ ಬಿಸಿಲಿನಲ್ಲಿ ತಲೆಮೇಲೆ ಟೋಪಿ ಇಟ್ಟುಕೊಂಡು, ಗಡ್ಡ ಕೆರೆದುಕೊಳ್ಳುತ್ತ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬೆವರುಹರಿಸುತ್ತಿದ್ದಾರೆ. ‘ಸಿನಿಮಾ ಬಿಟ್ರೆ ಇನ್ನೇನೂ ಮಾಡಕ್ಕೆ ಬರಲ್ಲ ನಂಗೆ’ ಎಂದು ಪದೆ ಪದೆ ಅವರು ಹೇಳಿಕೊಳ್ಳುತ್ತಲೇ ಇರುವ ಮಾತನ್ನೇ ಕೊಂಚ ಹೊರಳಿಸಿ ‘ನಿಮ್ಮ ಹಾಗೆ ಸಿನಿಮಾ ಮಾಡಕ್ಕೆ ಇನ್ಯಾರಿಗೂ ಬರಲ್ಲ’ ಎಂದು ಹೇಳಬೇಕಾದ ದಿನವಿದು.

ಸೋಲು– ಗೆಲುವುಗಳನ್ನು ಮೀರಿ ಭಟ್ಟರ ಸಿನಿಮಾ ಪ್ರಯಾಣ ಸಲೀಸು ಸಾಗುತ್ತಿರಲಿ. ನೈಟ್‌ಬಸ್‌ ಜರ್ನಿಯಲ್ಲಿ ಗುಡ್ಡದ ಮೇಲೆ ಕಂಡ ಒಂಟಿದೀಪದ ಹಾಗೆ, ಹೈವೇ ಪಕ್ಕದ ದಾಬಾಗಳಲ್ಲಿ ಕೇಳಿದ ಅನಾಮಿಕ ಹಾಡೊಂದರ ಸಾಲಿನ ಹಾಗೆ ನಮ್ಮ ಅನುಭವದ ಭಾಗವೇ ಆಗುವಂಥ ಹಲವು ಸಿನಿಮಾಗಳನ್ನು ಅವರು ನೀಡಲಿ. 

ಹ್ಯಾಪಿ ಬರ್ತ್‌ಡೇ! 

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !