ಕಾಲೇಜು ವಿದ್ಯಾರ್ಥಿ ಆಗಲಿರುವ ಪುನೀತ್

7

ಕಾಲೇಜು ವಿದ್ಯಾರ್ಥಿ ಆಗಲಿರುವ ಪುನೀತ್

Published:
Updated:
Deccan Herald

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾದ ಟೈಟಲ್ ಅಂತೂ ಇಂತೂ ಅಧಿಕೃತವಾಗಿ ಅನೌನ್ಸ್ ಆಗಿದೆ. ಚಿತ್ರಕ್ಕೆ ‘ಯುವರತ್ನ’ ಎಂದು ಹೆಸರಿಡಲಾಗಿದೆ.

ಈ ಹಿಂದೆ ಹೇಳಿದಂತೆ, ರಾಜ್ಯೋತ್ಸವದಂದೇ ಚಿತ್ರದ ಹೆಸರನ್ನು ಬಹಿರಂಗಗೊಳಿಸಿರುವ ಚಿತ್ರತಂಡ, ಸಿನಿಮಾದ ಫಸ್ಟ್‌ಲುಕ್ ಸಹ ಅಂದೇ ಬಿಡುಗಡೆ ಮಾಡಿದೆ. ಫಸ್ಟ್‌ಲುಕ್‌ಗೆ ಅಪ್ಪು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಫಸ್ಟ್‌ಲುಕ್ ಬಿಡುಗಡೆಗೊಂಡ ಒಂದೇ ದಿನದಲ್ಲಿ 1.60 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಟೈಟಲ್ ಲಾಂಚ್‌ ಕಾರ್ಯಕ್ರಮದೊಂದಿಗೆ ರಾಜ್ಯೋತ್ಸವವನ್ನು ಚಿತ್ರತಂಡ ಅದ್ಧೂರಿಯಾಗಿ ಆಚರಿಸಿತು. ಅಭಿಮಾನಿಗಳೇ ಟೈಟಲ್ ಅನ್ನು ಲಾಂಚ್ ಮಾಡಿದರು.

ಕಾರ್ಯಕ್ರಮದಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ಪುನೀತ್, ‘ನಮ್ಮ ಕುಟುಂಬದ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನ ದೊಡ್ಡದು. ಸುಮಾರು 50ಕ್ಕೂ ಹೆಚ್ಚು ವರ್ಷಗಳಿಂದ ನಮಗೆ ಪ್ರೀತಿ ಹಂಚಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ನಮ್ಮ ಕುಟುಂಬ ದುರುಪಯೋಗ ಪಡಿಸಿಕೊಂಡಿಲ್ಲ. ಹೀಗಾಗಿಯೇ ಅಪ್ಪಾಜಿ, ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು. ಅಭಿಮಾನಿಗಳ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರೇ ಅವರಿಗೆ ದೇವರು ಒಳ್ಳೆಯದು ಮಾಡಲ್ಲ. ಅಭಿಮಾನಿಗಳನ್ನು ರಂಜಿಸುವುದೇ ನಮ್ಮ ಕೆಲಸ’ ಎಂದಿದ್ದಾರೆ.

ವರನಟ ಡಾ.ರಾಜ್‌ಕುಮಾರ್ ಅಭಿನಯದ ‘ಪರುಶುರಾಮ’, ‘ದೇವತಾ ಮನುಷ್ಯ’ ಹಾಗೂ ‘ಜ್ವಾಲಾಮುಖಿ’ ಚಿತ್ರದ ಹೆಸರನ್ನೇ ಅಪ್ಪು–ಸಂತೋಷ್ ಕಾಂಬಿನೇಷನ್‌ನ ಮುಂದಿನ ಸಿನಿಮಾಗೆ ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಚಂದನವನದ ಅಂಗಳದಲ್ಲಿ ಹರಿದಾಡಿದ್ದವು.

‘ಮಿಸ್ಟರ್ ಆ್ಯಂಡ್ ಮಿಸ್ಸಸ್ ರಾಮಾಚಾರಿ’ ಹಾಗೂ ‘ರಾಜಕುಮಾರ್’ದಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್, ಅಪ್ಪು ಜೊತೆಗೂಡಿ ಮತ್ತೊಂದು ಯಶಸ್ವಿ ಸಿನಿಮಾ ನೀಡಲು ಕಾತುರರಾಗಿದ್ದಾರೆ. ‘ಯುವರತ್ನ’ ಚಿತ್ರವನ್ನು ಪಿಆರ್‌ಕೆ ಬ್ಯಾನರ್ ಸಹಯೋಗದಲ್ಲಿ ಹೊಂಬಾಳೆ ಫಿಲ್ಮ್ ನಿರ್ಮಾಣ ಮಾಡುತ್ತಿದೆ.

ಪವನ್ ಒಡೆಯರ್ ನಿರ್ದೇಶನದ ‘ನಟಸಾರ್ವಭೌಮ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ನಟ ಪುನೀತ್, ಈ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ‘ನಟಸಾರ್ವಭೌಮ’ ಪೂರ್ಣಗೊಂಡ ಬಳಿಕ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !