ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸಿನಿಮೋತ್ಸವ ವಿಧ್ಯುಕ್ತ ಆರಂಭ

film fest inaguration
Last Updated 27 ಫೆಬ್ರುವರಿ 2020, 6:14 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದ ವರ್ಣರಂಜಿತ ವೇದಿಕೆಯಲ್ಲಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಈ ಸಿನಿಮೋತ್ಸವಕ್ಕೆ ಜಗತ್ತಿನ ಹಲವು ದೇಶಗಳಿಂದ ಆಗಮಿಸಿರುವ ಚಿತ್ರರಂಗದ ಗಣ್ಯರು ಮತ್ತು ನಾಡಿನ ಸಿನಿ ರಸಿಕರು ಸಾಕ್ಷಿಯಾದರು. ನಂತರ ಮಾತನಾಡಿದ ಯಡಿಯೂರಪ್ಪ, ಕನ್ನಡದಲ್ಲಿ ವರ್ಷದಿಂದ ವರ್ಷಕ್ಕೆ ಚಿತ್ರಗಳ‌ ಸಂಖ್ಯೆ ಹೆಚ್ಚುತ್ತಿವೆ. ಆದರೆ, ಚಿತ್ರಗಳಲ್ಲಿ ಗುಣಮಟ್ಟ ಇನ್ನಷ್ಟು ಸುಧಾರಣೆಯಾಗಬೇಕಾದ ಅವಶ್ಯಕತೆ ಇದೆ ಎಂದರು.

ಕನ್ನಡ ಚಿತ್ರರಂಗದ ಬೆಳವಣಿಗೆಗೆ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕನ್ನಡ ಚಿತ್ರಗಳಿಗೆ ಇನ್ನಷ್ಟು ಉತ್ತೇಜನ ನೀಡಲು ಬದ್ಧವಾಗಿದೆ. 70ರ ದಶಕವನ್ನು ಭಾರತೀಯ ಚಿತ್ರರಂಗದ ಸುವರ್ಣಯುಗ ಎನ್ನಲಾಗುತ್ತದೆ. ಆಗ ಹೆಸರಾಂತ ನಿರ್ದೇಶಕ ಸತ್ಯಜಿತ್ ರೇ ಭಾರತದ ಚಿತ್ರರಂಗದ ಭವಿಷ್ಯವನ್ನು ಕನ್ನಡ ಚಿತ್ರರಂಗದಲ್ಲಿ ಕಾಣಬಹುದೆಂದು ಹೇಳಿದ್ದರು. ಆ ದಿನಗಳು ಮತ್ತೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಿನಿಮೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು (ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.)

ಬಾಲಿವುಡ್ ಚಿತ್ರ ನಿರ್ಮಾಪಕ ಬೋನಿ ಕಪೂರ್, ನನ್ನ ವೃತ್ತಿ ಜೀವನವನ್ನು ಕರ್ನಾಟಕದಿಂದ ಆರಂಭಿಸಿದ್ದೆ. ನನ್ನ ಆರಂಭದ ಚಿತ್ರಗಳನ್ನು ಮೇಲುಕೋಟೆ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಿದ್ದೇನೆ. ಕನ್ನಡದಊಟ, ದುಡ್ಡು ಪದಗಳು ಇನ್ನೂ ನೆನಪಿನಲ್ಲಿವೆ. ಕರ್ನಾಟಕದೊಂದಿಗಿನ ನನ್ನ ನೆನಪುಗಳು ಸದಾ ಹಸಿರಾಗಿವೆ ಎಂದರು.

ಬಾಲಿವುಡ್ ನಟಿ ಜಯಪ್ರದಾ, ಮೂಕಿ ಚಿತ್ರದಿಂದ ಆರಂಭವಾದ ಕನ್ನಡ ಚಿತ್ರರಂಗ ಇಂದು ಹಾಲಿವುಡ್ ಚಿತ್ರಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದೆ. ವಿಶ್ವದ ಚಿತ್ರರಂಗದ ಗಮನ ಸೆಳೆಯುವಂತಹ ಅದ್ಭುತ ಚಿತ್ರವನ್ನು ನಟ ಯಶ್ ನೀಡಿರುವುದನ್ನು ನೋಡಿದ್ದೇವೆ ಎಂದು ಶ್ಲಾಘಿಸಿದರು.

ನನಗೆ ಕನ್ನಡ ಭಾಷೆ, ಕನ್ನಡದ ಜನ, ಕನ್ನಡ ಚಿತ್ರಗಳೆಂದರೆ ಇಷ್ಟ. ಸನಾದಿ ಅಪ್ಪಣ್ಣ ನನ್ನ ಮೊದಲ‌ ಕನ್ನಡ ಚಿತ್ರ. ಡಾ.ರಾಜ್ ಚಿತ್ರದ ಮೂಲಕ ಕನ್ನಡಕ್ಕೆ ನಾನು ಪರಿಚಿತವಾದೆ. ರಾಜ್, ಅಂಬರೀಷ್, ವಿಷ್ಣುವರ್ಧನ್ ಅವರು ನನಗೆ ತೋರಿದ ಪ್ರೀತಿ, ಸ್ನೇಹ ಎಂದಿಗೂ ಮರೆಯುವುದಿಲ್ಲ. ಹಾಗೆಯೇ ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ನೀಡಿದ್ದೇನೆ. ಬೆಂಗಳೂರನ್ನು ತುಂಬಾ ಪ್ರೀತಿಸುತ್ತೇನೆ ಎಂದರು.

ಹಿನ್ನೆಲೆ ಗಾಯಕ ಸೋನು ನಿಗಮ್ ಮಾತನಾಡಿ, ಹಿಂದಿನ ಜನ್ಮವೊಂದಿದ್ದರೆ ಅದರಲ್ಲಿ ನಾನು ಖಂಡಿತಾ ಕನ್ನಡಿಗನಾಗಿ ಹುಟ್ಟಿರುವೆ. ಈ ಜನ್ಮದಲ್ಲಿ ನಾನು ಹಿಂದಿ‌ಭಾಷಿಕನಾಗಿ ಹುಟ್ಟಿದ್ದರೂ ಕನ್ನಡದ ಹಾಡುಗಳನ್ನು ಎದೆ ತುಂಬಿ ಹಾಡಿದ್ದೇನೆ ಎಂದರು.

ಮುಂಗಾರು ಮಳೆಯ ಚಿತ್ರಕ್ಕೆ ಹಾಡಿದ್ದ 'ಅನಿಸುತ್ತಿದೆ ಯಾಕೊ ಇಂದು ..' ಹಾಡನ್ನು ಸೋನು ನಿಗಮ್ ಮತ್ತೊಮ್ಮೆ ಹಾಡಿ ಪ್ರೇಕ್ಷಕರ ಶಿಳ್ಳೆ, ಕರತಾಡನ ಗಿಟ್ಟಿಸಿದರು.

ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ನಟ ಯಶ್, ರಾಜ್ಯದಲ್ಲಿ ಸುಸಜ್ಜಿತ ಫಿಲಂ ಸಿಟಿ ನಿರ್ಮಿಸುವಂತೆ ಮುಖ್ಯಮಂತ್ರಿ ಎದುರು ಬೇಡಿಕೆ ಇಟ್ಟರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ಅಕಾಡೆಮಿಯ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ₹5 ಕೋಟಿ ಅನುದಾನ ನೀಡಿದೆ. ಈ ಹಣವನ್ನು ಸದ್ವಿನಿಯೋಗ ಮಾಡುತ್ತೇವೆ ಎಂದರು.

ಉದ್ಘಾಟನಾ ಸಿನಿಮಾವಾಗಿ ಇರಾನಿನ ಪರ್ಷಿಯನ್ ಭಾಷೆಯ 'ಸಿನಿಮಾ ಖಾರ್ ( ಸಿನಿಮಾ ಡಾಂಕಿ)' (ನಿರ್ದೇಶನ: ಶಾಹೆದ ಅಹ್ಮದ್ ಲೂ) ಚಿತ್ರವನ್ನು ಪ್ರದರ್ಶಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್. ಎನ್. ಸಿದ್ದರಾಮಪ್ಪ ಸಿನಿಮೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಟಿ ಅದಿತಿ ಪ್ರಭುದೇವ, ಇಲಾಖಾ ಕಾರ್ಯದರ್ಶಿ ಕ್ಯಾಪ್ಟನ್ ಪಿ. ಮಣಿವಣ್ಣನ್, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜಯರಾಜ್, ಸಿನಿಮೋತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್ ಇದ್ದರು.

ಈ ಸಿನಿಮೋತ್ಸವದಲ್ಲಿ 60 ದೇಶಗಳ ಸುಮಾರು 225 ಚಿತ್ರಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ 40 ಚಿತ್ರಗಳ ಪ್ರೀಮಿರ್ ಶೋ ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ಸಿಗಲಿದೆ.

ಸಿನಿಮೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು (ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.)

ಸಿನಿಮೋತ್ಸವಕ್ಕೆ ನೃತ್ಯ ರೂಪಕದ ರಂಗು

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿರುವ ಈ ಸಿನಿಮೋತ್ಸವಕ್ಕೆ ಕರ್ನಾಟಕ ಕಿರುತೆರೆ ಕಲಾವಿದರ ಸಂಘದವರು ರೈತ ಗೀತೆಗಳ ನೃತ್ಯ ರೂಪಕ ಪ್ರದರ್ಶಿಸುವ ಮೂಲಕ ರಂಗಿನ ಆರಂಭ ನೀಡಿದರು.

ಈ ಬಾರಿಯ ಸಿನಿಮೋತ್ಸವದ ಪ್ರಧಾನ ವಿಷಯ 'ಭಾರತೀಯ ಸಂಗೀತ ಪರಂಪರೆ ಮತ್ತು ಸಿನಿಮಾ'ಕ್ಕೆ ಪೂರಕವಾಗಿ ಸಮನ್ವಯ ತಂಡದ ಕಲಾವಿದರು ಭಾರತೀಯ ಚಿತ್ರರಂಗದಲ್ಲಿ ಮಿಂಚಿದ ಮಿನುಗು ತಾರೆಯರಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ಚಿತ್ತಾಕರ್ಷಕ ನೃತ್ಯ ರೂಪಕ ಪ್ರದರ್ಶಿಸಿದರು. ಒಂದೂವರೆ ತಾಸಿಗೂ ಹೆಚ್ಚು ಹೊತ್ತು ನಡೆದ ಭಾರತೀಯ ಸಂಗೀತ ಪರಂಪರೆ ಬಿಂಬಿಸುವ ನೃತ್ಯ ರೂಪಕ ಕಣ್ಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT