ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರ ನೂಕುನುಗ್ಗಲು ಅವ್ಯವಸ್ಥೆಗೆ ಅಸಮಾಧಾನ

ಅಂತರರಾಷ್ಟ್ರೀಯ ಸಿನಿಮೋತ್ಸವ 2019
Last Updated 24 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಒಂದು ಉತ್ತಮ ಚಿತ್ರ ವೀಕ್ಷಿಸಲು ಪ್ರೇಕ್ಷಕರು ತುಂಬ ಪರದಾಡಬೇಕಾಯಿತು. ಆದದ್ದು ಇಷ್ಟು– ಸ್ಕ್ರೀನ್‌ 5ರಲ್ಲಿ ’ಶಾಪ್‌ ಲಿಫ್ಟರ್ಸ್‌‘ ಎನ್ನುವ ಜಪಾನಿ ಚಿತ್ರದ ಸಂಜೆ ಶೋ ನಿಗದಿಯಾಗಿತ್ತು. ಈ ಚಿತ್ರಕ್ಕೆಂದೇ ಹಲವರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ನೋಡ ನೋಡುತ್ತಿದ್ದಂತೆ ಪ್ರೇಕ್ಷಾಗೃಹ ತುಂಬಿತು. ಎಷ್ಟೋ ಜನರಿಗೆ ಪ್ರವೇಶ ಸಾಧ್ಯವಾಗಲಿಲ್ಲ. ಆನಂತರ ನಡೆದ ಜಟಾಪಟಿ ಕ್ಷಣಹೊತ್ತು ಸಿನಿ ಅಭಿಮಾನಿಗಳ ಸಹನೆ ಪರೀಕ್ಷಿಸಿತು.

ಪ್ರವೇಶದ್ವಾರದಲ್ಲಿ ನಿಂತಿದ್ದ ಕಾರ್ಯಕರ್ತರು ಮತ್ತು ಅವಕಾಶ ವಂಚಿತ ಪ್ರೇಕ್ಷಕರ ನಡುವೆ ದೊಡ್ಡ ವಾಗ್ವಾದ ನಡೆಯಿತು. ಪಾಸ್‌ ಇದ್ದರೂ, ಸರತಿ ಸಾಲಿನಲ್ಲಿ ನಿಂತು ಕಾದರೂ ಪ್ರವೇಶ ದಕ್ಕಲಿಲ್ಲ ಎನ್ನುವ ಅಸಮಾಧಾನ ಅವರದಾಗಿತ್ತು. ವಿಐಪಿ ಪಾಸ್‌, ಮಾಧ್ಯಮರಂಗದ ವಿಶೇಷ ಪಾಸ್‌ ಹೊಂದಿದವರಿಗೂ ಪ್ರವೇಶ ಸಾಧ್ಯವಾಗಲಿಲ್ಲ. ಅಂಥವರೆಲ್ಲತೀವ್ರ ನಿರಾಶೆಯಿಂದ ವಾಪಸ್‌ ಆದರು. ಪ್ರವೇಶದ್ವಾರದ ಬಳಿ ನಿಂತ ಕಾರ್ಯಕರ್ತರು ಇದೆಲ್ಲವನ್ನು ವ್ಯವಸ್ಥಿತವಾಗಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಅವರಲ್ಲಿ ಹತಾಶೆ ಮನೆಮಾಡಿದಂತಿತ್ತು. ಕೆಲವರೊಡನೆ ಅವರು ತುಂಬ ಜೋರು ದನಿಯಲ್ಲಿ ಮಾತನಾಡಿದರು. ಕೆಲವರನ್ನು ತಳ್ಳಿದ್ದು ಕೋಪಕ್ಕೆ ಕಾರಣವಾಯಿತು.

ಸಿನಿ ಉದ್ಯಮದ, ಮಾಧ್ಯಮರಂಗದ ಮತ್ತು ನಾಡಿನ ಸಾಂಸ್ಕೃತಿಕ ಲೋಕದ ಗಣ್ಯರು ಇರುತ್ತಾರೆ. ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯರಾಗಿದ್ದವರೂ ಇರುತ್ತಾರೆ. ಅವರಿಗೆಂದೇ ವಿಶೇಷ ಪಾಸ್‌ ವ್ಯವಸ್ಥೆಯನ್ನು ಸಂಘಟಕರೇ ಮಾಡಿದ್ದಾರೆ. ಅಂಥವರನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಅವರಿಗೂ ವ್ಯವಸ್ಥೆ ಮಾಡುವುದು ಸಂಘಟನಾ ಚತುರತೆಯ ಸಣ್ಣ ಪ್ರಜ್ಞೆ.

‘ಸಾಂಸ್ಕೃತಿಕ ಕಾಳಜಿ ಮೆರೆಯುವುದಕ್ಕೆ ಒಂದು ಸೂಕ್ಷ್ಮತೆ ಬೇಕು. ಕಾರ್ಯಕರ್ತರಿಗೆ ಮೊದಲು ನಾಡಿನ ಸಾಂಸ್ಕೃತಿಕ ಪ್ರಜ್ಞೆಯ ತಿಳುವಳಿಕೆ ಇರಬೇಕು. ಸಿನಿಮಾ, ಸಾಹಿತ್ಯ ಮತ್ತಿತರ ಕಲೆಗಳಲ್ಲಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಹಲವರಿರುತ್ತಾರೆ. ವಯೋಮಾನದಲ್ಲಿ ಅತ್ಯಂತ ಹಿರೀಕರಿರುತ್ತಾರೆ. ಅಂಥವರ ಸಣ್ಣ ಪರಿಚಯ, ಅವರ ಬಗ್ಗೆ ಸಣ್ಣ ಮಾಹಿತಿ ಇಂಥದ್ದೇನಾದರೂ ಸಂಘಟನಾ ಕಾರ್ಯಕರ್ತರು ಒಂದಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಅಂಥ ಸೂಕ್ಷ್ಮಗಳ ತರಬೇತಿ ಬೇಕು. ಬರಿಯ ಬಿಸಿ ರಕ್ತದ ಯುವಜನ ಗದರಿಸುವುದು ಬಿಟ್ಟರೆ ಬೇರೇನು ಮಾಡಲು ಸಾಧ್ಯ? ಅದರ ಜೊತೆಗೊಂದಷ್ಟು ವಿವೇಕ ಬೇಕು. ವ್ಯವಸ್ಥೆಯ ಚಾಕಚಕ್ಯತೆ ಬೇಕು. ಇಂಗ್ಲಿಷ್‌, ಕನ್ನಡ, ಹಿಂದಿ ಭಾಷೆಗಳಲ್ಲಿ ಪಟ ಪಟಂತ ಮಾತನಾಡಲು ಬಂದರೆ ಸಾಕೆ? ಒಂದು ಸಣ್ಣ ಜವಾಬ್ದಾರಿ, ಸಾಂಸ್ಕೃತಿಕ ಪ್ರಜ್ಞೆ ಬೇಡವೆ?’ ಎಂದು ಹಿರಿಯರೊಬ್ಬರು ಕೋಪ ಮಾಡಿಕೊಂಡರು. ಹಲವರು ಹಿಡಿ ಶಾಪ ಕೂಡ ಹಾಕಿದರು.

‘ಅಂತರರಾಷ್ಟ್ರೀಯ ಮಟ್ಟದ ಇಂಥ ಉತ್ಸವಗಳಲ್ಲಿ ಈ ರೀತಿಯ ಅದ್ವಾನ, ವಾಗ್ವಾದಗಳು ಆಗದಂತೆ ನೋಡಿಕೊಳ್ಳಬೇಕಾದ್ದು ಸಂಘಟನೆಯ ಜವಾಬ್ದಾರಿ. ನೆರೆದ ಪ್ರೇಕ್ಷಕರೆಲ್ಲ ಒಂದೇ ಎನ್ನುವ ಮಾತು ಒಪ್ಪುವಂಥದ್ದೆ. ಆದರೆ, ನಾಗರಿಕತೆಯಲ್ಲಿ ಹಿರಿಯರ ಆದರ, ತಜ್ಞರ, ಅನುಭವಿಗಳ ಸಮ್ಮಾನ ಅಂತಲೂ ಒಂದಿದೆಯಲ್ಲ ಅದನ್ನು ಕಡೆಗಣಿಸಲಾಗುತ್ತಾ’ ಎನ್ನುತ್ತಾರೆ ಉದ್ಯಮದ ಹಿರಿಯ ಜೀವಿಯೊಬ್ಬರು.

‘ಒಳ್ಳೆಯ ಸಿನಿಮಾಗಳು ಮತ್ತು ಅತ್ಯಂತ ಬೇಡಿಕೆಯ ಸಿನಿಮಾಗಳು ಇರುತ್ತವೆ. ಶನಿವಾರ ಅಥವಾ ಭಾನುವಾರದ ರಜಾ ದಿನಗಳು ಅಂತ ಇರುವಾಗ ಜನಸಂದಣಿ ಹೆಚ್ಚಿರುತ್ತದೆ. ಹೆಚ್ಚುವರಿ ಸ್ಕ್ರೀನ್‌ಗಳ ವ್ಯವಸ್ಥೆ ಮಾಡಿಯೋ ಅಥವಾ ಅಂಥ ಸಿನಿಮಾವನ್ನು ರಿಪೀಟ್‌ ಶೋ ಎಂತಲೋ ಏನೋ ಒಂದು ವ್ಯವಸ್ಥೆ ಮಾಡಿ ಪ್ರೇಕ್ಷಕ ಸಮುದಾಯವನ್ನು ಸಮಾಧಾನ ಪಡಿಸುವುದು ಒಳ್ಳೆಯ ನಡೆಯಾದೀತು. ಸಿನಿಮಾಗೆ ಪ್ರೇಕ್ಷಕರನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯೂ ಉತ್ಸವಗಳಿಗೆ ಇರಬೇಕು’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಯುವ ಸಿನಿಪ್ರಿಯ.

ಈ ಸಲ ಒರಾಯನ್‌ ಮಾಲ್‌ನಲ್ಲಿ ತಿಂಡಿ, ತಿನಿಸುಗಳ ಬೆಲೆ ಪರವಾಗಿಲ್ಲ. ಆದರೆ ಒಂದು ಕಪ್‌ ಚಹ ಅರವತ್ತು ರೂಪಾಯಿ ಎಂದರೆ ದುಬಾರಿ ಅನಿಸುತ್ತದೆ. ಚಹ ನಮ್ಮ ಸಂಸ್ಕೃತಿಯಲ್ಲಿ ಸಹಜದ ಪೇಯ. ಸ್ನೇಹ, ಪ್ರೀತಿ, ಬಾಂಧವ್ಯದ ಪ್ರತೀಕ. ಅದನ್ನು ಅಷ್ಟು ದುಬಾರಿಯಾಗಿಸದೇ ಎಲ್ಲರಿಗೂ ಎಟಕುವಂತಾಗಿಸುವುದುಸೂಕ್ತವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT