ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಗಾರ ಕಂಡಂತೆ ಕಥಾನಾಯಕಿ ಹರಿಪ್ರಿಯಾ!

ನಟಿ ಹರಿಪ್ರಿಯಾ ವಿಶೇಷ ಸಂದರ್ಶನ
Last Updated 24 ನವೆಂಬರ್ 2018, 15:36 IST
ಅಕ್ಷರ ಗಾತ್ರ

ಕನ್ನಡ ಸಿನಿಮಾ ರಂಗದಲ್ಲಿ ಈಗ ಮುಂಚೂಣಿಯಲ್ಲಿರುವ ನಟಿ ಹರಿಪ್ರಿಯ. ಸೂಜಿದಾರ, ಬೆಲ್ ಬಾಟಮ್, ಡಾಟರ್ ಆಫ್ ಪಾರ್ವತಮ್ಮ, ಕುರುಕ್ಷೇತ್ರ, ಕಥಾ ಸಂಗಮ, ಕನ್ನಡ್ ಗೊತ್ತಿಲ್ಲ, ಮುಂತಾದ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತ ತನ್ನ ಅಭಿನಯ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುತ್ತಿರುವ ಆವಿಷ್ಕರಿಸಿಕೊಳ್ಳುತ್ತಿರುವ ಪ್ರತಿಭೆ.

ಪ್ರತಿಭೆಯ ಪ್ರಭೆಯನ್ನು ಚೆಲ್ಲುತ್ತಿರುವಂಥ ಚೆಲುವಾದ ಮುಖ. ಆ ಚೆಲುವನ್ನು ಕಲಶದಂತೆ ಹೊತ್ತಿರುವ ಅಂಗಾಂಗಳ ಲಾವಣ್ಯ. ಲಾವಣ್ಯಕ್ಕೆ ತಕ್ಕುದಾದ ಗಾಂಭೀರ್ಯದ ನಡೆ-ನುಡಿ. ಇದೆಲ್ಲವನ್ನೂ ಮೀರಿಸುವಂಥ ಹೊರಗೆಲ್ಲೂ ಹರಡಿಕೊಳ್ಳದಂಥ ತನ್ನೊಳಗಿಗಷ್ಟೇ ಮೀಸಲಾಗಿದೆ ಎನ್ನುವಂಥ ಒಳಬಗೆಯ ಸೌಂದರ್ಯವೊಂದು ಕಣ್ಣುಗಳ ಚಲನೆಯಲ್ಲಿ ತುಳುಕುತ್ತಿತ್ತು. ಸರಳ ಉಡುಪಿನಲ್ಲಿ ಬಂದಿದ್ದರು. ಯಾವುದೋ ಸ್ನೇಹಿತನೊಂದಿಗೆ ಐಸ್ ಕ್ರೀಮ್ ತಿನ್ನುತ್ತ ಹರಟೆ ಹೊಡೆಯುವ ಸಹಜತೆಯಲ್ಲಿ ಎದುರು ಕುಳಿತಿದ್ದರು. ಇದೊಂದು ಮುಕ್ತ ಮಾತುಕತೆ ಅನ್ನುತ್ತಲೇ ಮಾತು ಶುರುವಿಟ್ಟೆವು...

ಯುವ ಕಥೆಗಾರ ವಿಕ್ರಮ್ ಹತ್ವಾರ್ ಜತೆ ನಟಿ ಹರಿಪ್ರಿಯಾ
ಯುವ ಕಥೆಗಾರ ವಿಕ್ರಮ್ ಹತ್ವಾರ್ ಜತೆ ನಟಿ ಹರಿಪ್ರಿಯಾ


ಹೀರೋಯಿನ್ ಹರಿಪ್ರಿಯಾ ಮರೆತು, ಇಪ್ಪತ್ತು ವರ್ಷದ ಹಿಂದಿನ ನಿಮ್ಮ ಬಾಲ್ಯದ ದಿನಗಳ ಬಗ್ಗೆ ಮಾತಾಡೋಣ... ಹೇಗಿತ್ತು ಆ ದಿನಗಳು?

ನನಗೆ ಬಾಲ್ಯದಿಂದಲೂ ಕಲಿಕೆಯಲ್ಲಿ ಆಸಕ್ತಿ. ಕಲಿಕೆ ಕಲಿಕೆ ಕಲಿಕೆ. ಶಾಲೆಯಿಂದ ಬಂದ ಮೇಲೆ ಯಾವುದಾದರೂ ಕ್ಲಾಸ್ ಇರುತ್ತಿತ್ತು. ಮೆಹಂದಿ, ಸಂಗೀತ, ಬಾಡ್ಮಿಂಟನ್, ಡ್ರಾಯಿಂಗ್, ಕ್ರಾಪ್ಟ್‌, ಎಲ್ಲವನ್ನೂ ಕಲಿತಿದ್ದೇನೆ. ಹಾಗಂತ ಮನೆಯಲ್ಲಿ ಒತ್ತಡ ಇರಲಿಲ್ಲ, ಇಷ್ಟ ಪಟ್ಟು ಮಾಡುತ್ತಿದ್ದೆ. ಸಣ್ಣ ವಯಸಲ್ಲೇ ಸ್ಟೇಜ್ ಹತ್ತಿದ್ದೆ. ಡ್ಯಾನ್ಸ್ ಪ್ರೊಗ್ರಾಮ್‌ ಕೊಡ್ತಿದ್ದೆ. ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಲ್ಲಿ ಸಾಕಷ್ಟು ಭಾಗವಹಿಸಿದ್ದೆ. ಕೆಳದಿ ಚೆನ್ನಮ್ಮ, ಒನಕೆ ಓಬವ್ವ, ಕಣಿ ಹೇಳ್ತೀನಮ್ಮ ಕಣಿ, ಶಾಕುಂತಲೆ, ಎಲ್ಲ ಪಾತ್ರಗಳನ್ನೂ ಮಾಡಿದ್ದೇನೆ. ಪ್ರತಿಸಲ ಬಹುಮಾನ ಬರ್ತಿತ್ತು. ಅಮ್ಮನೇ ನನ್ನನ್ನು ತಯಾರು ಮಾಡುತ್ತಿದ್ದಳು. ಶಾಕುಂತಲೆಗೆ ಮಲ್ಲಿಗೆ ಹೂವ, ಬೈತಲೆ ಬೊಟ್ಟು, ಕಿವಿ ಓಲೆ, ಎಲ್ಲವೂ ಅಮ್ಮನದೇ ತಯಾರಿ....

ಸ್ಟೇಜ್ ಫಿಯರ್ ಇದ್ದ ಸಂದರ್ಭದಲ್ಲಿ ಅಮ್ಮ ಹೇಳುತ್ತಿದ್ದರು - ಜನರ ಮುಖವನ್ನ ನೋಡಬೇಡ ಅವರುಏನು ಯೊಚಿಸ್ತಾರೆ ಅನ್ನೋದನ್ನ ಗಮನಿಸಬೇಡ, ನೇರವಾಗಿ ನೋಡಿ ಆತ್ಮವಿಶ್ವಾಸದಿಂದ ಮಾತಾಡು ಅನ್ನುತ್ತಿದ್ದರು. ಅದನ್ನು ನಾನು ಇಂದಿಗೂ ಪಾಲಿಸ್ತಾ ಬಂದಿದೀನಿ. ಹೀರೋಯಿನ್ ಮಾಡಲು ತಯಾರಿ ಮಾಡಿದ್ದಲ್ಲ. ನನ್ನೊಳಗೊಂದು ಆತ್ಮವಿಶ್ವಾಸವನ್ನು ತುಂಬಲು ಮಾಡುತ್ತಿದ್ದರು. ಸಿನಿಮಾಗೆ ಬರುವ ಯಾವುದೇ ಯೋಚನೆ ಇರಲಿಲ್ಲ. ಆದರೆ, ಎಲ್ಲವನ್ನೂ ಕಲಿತಿರಬೇಕು ಅನ್ನುವ ಉದ್ದೇಶ ಇತ್ತು. ಶಾಲೆಯಲ್ಲು ನನ್ನ ಬಗ್ಗೆ ಎಲ್ಲರಿಗು ಹೆಮ್ಮೆಯಿತ್ತು. ಇಂಟರ್ ಸ್ಕೂಲ್ ಕಾಂಪಿಟೇಶನ್ನಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದೆ. ಮತ್ತೆ, ನನ್ನ ಬಳಿ ಒಂದು ಲೇಡಿ ಬರ್ಡ್ ಸೈಕಲ್ ಇತ್ತು, ಅಪ್ಪ ಕೊಡಿಸಿದ್ದು. ಅದರಲ್ಲೇ ನಮ್ಮ ಸಂಚಾರ. ಸ್ನೇಹಿತರೊಂದಿಗೆ ಊರೆಲ್ಲ ತಿರುಗುತ್ತಿದ್ದದ್ದು ಅದೇ ಸೈಕಲಲ್ಲಿ. ಅದರ ನೆನಪುಗಳು ಇಂದಿಗೂ ಹಿತವಾಗಿ ನನ್ನೊಳಗೆ ಹುದುಗಿಕೊಂಡಿದೆ. ಚಿಕ್ಕಬಳ್ಳಾಪುರ ನಮ್ಮೂರು. ಅಜ್ಜಿಮನೆ ಇದ್ದಿದ್ದು ಬೆಂಗಳೂರಲ್ಲಿ.



* what kind of a girl were you? ತುಂಟಾಟಿಕೆ ತುಂಬ ಮಾಡ್ತಿದ್ರಾ? ಸೈಲಂಟ್ ಹುಡ್ಗೀನಾ? ರಿಸೆರ್ವಡ್‌ ಆಗಿದ್ರಾ?

ಇಲ್ಲ, ನಾನು ಯಾವತ್ತು ರಿಸರ್ವಡ್ ಆಗಿರಲಿಲ್ಲ. ತುಂಬ ಮಾತಾಡ್ತಿದ್ದೆ, ಫ್ರೆಂಡ್ಸ್ ಜೊತೆ ಸುತ್ತಾಡ್ತಿದ್ದೆ, ತುಂಬ ಕಾನ್ಫಿಡೆಂಟ್‌ ಆಗಿದ್ದೆ. ಯಾವುದಕ್ಕೂ ಹೆದರುತ್ತಿರಲಿಲ್ಲ. ಅದಕ್ಕೆ ಕಾರಣ ನಮ್ಮ ತಂದೆ. ಅವರದ್ದು ಬೇಕರಿ ಇತ್ತು. ಮತ್ತು, ಊರಿನಲ್ಲಿ ಅವರಿಗೆ ಒಳ್ಳೆಯ ಹೆಸರಿತ್ತು. ಸುಮಾರು ಹೈದಿನೈದು ಜನ ಕೆಲಸಕ್ಕಿದ್ದರು. ನಮ್ಮ ಬೇಕರಿಯಿಂದ ಸಣ್ಣ ಸಣ್ಣ ಬೇಕರಿಗಳಿಗೆ ಸಪ್ಲೈ ಮಾಡ್ತಿದ್ವಿ. ದೀಪಾವಳಿ ಸಮಯದಲ್ಲಿ ಸಾಕಷ್ಟು ಬಿಸಿಯಾಗಿರ್ತಿದ್ವಿ. ಕೆಲಸದವರಿಗೆಲ್ಲ ಬಟ್ಟೆ, ಪಟಾಕಿ ಕೊಡಿಸುತ್ತಿದ್ದರು. ಬೇಕರಿಯನ್ನು ಸಿಂಗರಿಸುತ್ತಿದ್ದರು. ನಾನು ನಮ್ಮಣ್ಣ, ನಾವೆಲ್ಲ ಬೇಕರಿಯ ಕೆಲಸದವರೊಂದಿಗೆ ಸೇರಿ ಪಟಾಕಿ ಹೊಡೀತಿದ್ವಿ. ನಮ್ಮ ತಂದೆ ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಹಣದ ಸಹಾಯ ಮಾತ್ರ ಅಲ್ಲ ಯಾರಿಗೆ ಏನೇ ತೊಂದರೆ ಬಂದರು ಸಹಾಯಕ್ಕೆಂದು ಹೋಗುತ್ತಿದ್ದರು. ಹಾಗಾಗಿ ಊರಿನವರಿಗೆಲ್ಲ ಅವರ ಪರಿಚಯವಿತ್ತು, ಅವರ ಬಗ್ಗೆ ಗೌರವ ಇತ್ತು.

ಚಂದ್ರಸೇನ ಅವರ ಮಕ್ಕಳು ಅಂದರೆ ನಮ್ಮ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಇತ್ತು. ನಮಗೆ ಯಾರು ಏನೇ ಹೇಳಿದರೂ, `ಅಪ್ಪನಿಗೆ ಹೇಳ್ತೀನಿ...' ಅಂತ ಉತ್ತರಿಸುತ್ತಿದ್ದೆ, ಧೈರ್ಯ ತಂದುಕೊಳ್ಳುತ್ತಿದ್ದೆ. ಅಪ್ಪ ತೀರಿ ಹೋದ ನಂತರ ಅದೊಂದು ವಿಚಾರದಲ್ಲಿ ನನ್ನ ಬಾಯಿ ಕಟ್ಟುತ್ತಿತ್ತು. ಯಾರಾದರು ಏನಾದರು ಅಂದರೆ, `ಅಪ್ಪನಿಗೆ ಹೇಳ್ತೀನಿ...' ಅನ್ನುವ ಮಾತನ್ನು ಒಳಗೇ ನುಂಗಿಕೊಳ್ಳುತ್ತಿದ್ದೆ.

(ಮಾತುಗಳು ವಿಷಾದದ ಕಡೆಗೆ ತಿರುಗುತ್ತಿತ್ತು. ನಾನು ಮಾತು ತಿರುಗಿಸಿದೆ) ಯಾವುದಾದ್ರು ತರ್ಲೆ ಕೆಲಸ ನೀವು ಮಾಡಿರೋದು, ಅಮ್ಮನಿಗೆ ಗೊತ್ತಿಲ್ಲದೇ ಇರೋದು?

`ನಾನು ತುಂಬ ಒಳ್ಳೆ ಹುಡ್ಗಿ ಸರ್' ಅಂತ ನಕ್ಕರು. ಇಲ್ಲ, ಅಮ್ಮನಿಗೆ ಗೊತ್ತಿಲ್ಲದ ಯಾವುದೇ ಕಿತಾಪತಿಗಳನ್ನು ಮಾಡಿದ ನೆನಪಿಲ್ಲ. ಎಲ್ಲವನ್ನೂ ಮನೆಯಲ್ಲಿ ವರದಿ ಒಪ್ಪಿಸುತ್ತಿದ್ದೆ. ಅಮ್ಮನಿಗೆ ಇಲ್ಲ ಅಣ್ಣನಿಗೆ ಎಲ್ಲವನ್ನೂ ಹೇಳುತ್ತಿದ್ದೆ. ನಾನು ಕಾಲೇಜಿಗೆ ಹೋಗಿದ್ದೇ ಬರೀ ಆರು ತಿಂಗಳು. ಕಾಲೇಜ್ ಫೆಸ್ಟಿನ ಒಂದು ಫೋಟೊ ನೋಡಿ ತುಳು ಸಿನಿಮಾವೊಂದಕ್ಕೆ ಆಫರ್ ಬಂತು. `ಬದಿ' ಅಂತ ಸಿನಿಮಾದ ಹೆಸರು. ನನಗಾಗ ಹದಿನಾರು ವರ್ಷ. ಆಗ ನನಗೆ ಸಿನಿಮಾ ಮಾಡಲು ಸುತಾರಾಂ ಇಷ್ಟವಿರಲಿಲ್ಲ. ನಾನು ಸಿನಿಮಾ ಮಾಡಲ್ಲ, ಓದಿ ಡಾಕ್ಟರ್ ಆಗ್ತೀನಿ ಅಂತಿದ್ದೆ. ಅಂದ್ರೆ, ಸಿನಿಮಾ ಇಂಡಸ್ಟ್ರಿ ಬಗ್ಗೆ ಒಂದು ರೀತಿಯ ತಪ್ಪು ತಿಳುವಳಿಕೆ ಇತ್ತು. ಅಮ್ಮ-ಅಣ್ಣ ನನಗೇನು ಇಷ್ಟವೋ ಅದನ್ನು ಮಾಡಲು ಸಪೋರ್ಟ್‌ ಮಾಡ್ತಿದ್ರು. ತಪ್ಪಿದ್ರೆ ಸರಿಯಾಗಿ ಗೈಡ್ ಮಾಡ್ತಿದ್ರು. ಆದ್ರೆ ಯಾವತ್ತೊ ಇದನ್ನೇ ಮಾಡು ಅಂತ ಒತ್ತಡ ಹೇರಿದವರಲ್ಲ. ಓದಿನ ಜೊತೆಗೆ ಸಿನಿಮಾನೂ ಮಾಡು, ತಪ್ಪೇನಿದೆ? ಅದೂ ಒಂದು ಕಲೆ. ಇದೊಂದು ಅವಕಾಶ ಬಂದಿರೋವಾಗ ಮಾಡೋದಾದ್ರೆ ಮಾಡು ಅಂತ ಸಪೋರ್ಟ್‌ ಮಾಡಿದ್ರು. ಅದೊಂದೇ ಸಿನಿಮಾ ಅಂತ ಶುರುವಾಯ್ತು. ಹತ್ತು ದಿವ್ಸ ಕಾಲೇಜಿಗೆ ರಜೆ ಹಾಕಿ ಶೂಟಿಂಗ್ ಮುಗಿಸಿ ಬಂದ್ವಿ. ಅಲ್ಲಿ ತುಳು ಭಾಷೆ ಸ್ವಲ್ಪ ಕಲಿತೆ. ಇವತ್ತಿಗೂ ತುಳುವಿನಲ್ಲಿ ಅಂಕಿಗಳನ್ನು ಹೇಳಬಲ್ಲೆ...



* So, you are good at picking up languages...
ಹೌದು, ತಮಿಳು ಬರುತ್ತೆ, ತೆಲುಗು ನಮ್ಮ ಮಾತೃ ಭಾಷೆ, ಹಿಂದಿಯಲ್ಲಿ ಮಾತಾಡಬಲ್ಲೆ, ಐದಾರು ಭಾಷೆ ಬರುತ್ತೆ. ತುಳು ಸ್ವಲ್ಪ ಕಲಿತೆ, ಸಿನಿಮಾಗಾಗಿ. ಅದು ನನ್ನ ಮೊದಲ ಸಿನಿಮಾ. ಆದರೆ ನನಗೆ ಕ್ಯಾಮೆರಾ ಎದುರಿಸುವಾಗ ಯಾವ ಭಯವೂ ಆಗಲಿಲ್ಲ. ಮತ್ತುಆ ಸಿನಿಮಾದ ನಿರ್ದೇಶಕರು ಅವರ ಮನೆಯವರು ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಅವರ ಮನೆಯವರೇ ಅಡುಗೆ ಮಾಡುತ್ತಿದ್ದರು. ನಾನು ಮೊದಲು ನೀರ್‌ದೋಸೆ ತಿಂದಿದ್ದು ಅಲ್ಲೇ (ನಗು).ನೀರ್‌ದೋಸೆ ಅಂತ ಸಿನಿಮಾ ಮಾಡ್ತೀನಿ ಅಂದುಕೊಂಡಿರಲಿಲ್ಲ. ಶೂಟಿಂಗ್ ಅಂದ್ರೆ ಇಷ್ಟು ಚೆನ್ನಾಗಿರುತ್ತಾ ಅಂತ ಅನ್ನಿಸೋಕೆ ಶುರುವಾಯ್ತು. ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳು ಬಂದ್ವು. ರಾಷ್ಟ್ರ ಪ್ರಶಸ್ತಿ ಕೂಡ ಬಂತು. ಅದಾದಮೇಲೆ ಒಂದು ಕನ್ನಡ ಸಿನಿಮಾದ ಆಫರ್ ಬಂತು. ಅದರ ಶೂಟಿಂಗ್ ಸಮಯಕ್ಕೆ ಕಾಲೇಜಿನಲ್ಲಿ ಪ್ರಿಪರೇಟರಿ ಎಕ್ಸಾಮ್ ಇತ್ತು. ಶೂಟಿಂಗಾ ಎಕ್ಸಾಮಾ? ಅನ್ನೋ ನಿರ್ಧಾರ ತಗೋಬೇಕಿತ್ತು. ಶೂಟಿಂಗ್ ತುಂಬ ಎಕ್ಸೈಟಿಂಗ್ ಆಗಿತ್ತು. ಸೋ, ಸಿನಿಮಾ ಕಡೆ ಹೊರಳಿಕೊಂಡೆ. ಎಕ್ಸಾಮ್ ಮತ್ತೆ ಬರೀಬಹುದು ಮುಂದಿನ ವರ್ಷ ಬರೀಬಹುದು ಅಂತ ಆಗ ಬಿಟ್ಟಿದ್ದು, ಈವತ್ತಿನವರೆಗೂ ಬರೆಯೋಕೆ ಆಗ್ಲೇ ಇಲ್ಲ.

* ಅಲ್ಲಿಗೆ ನಿಮ್ಮ ಕಾಲೇಜ್ ಲೈಫ್ ಮುಗೀತು. ಅದನ್ನ ಮಿಸ್ ಮಾಡ್ಕೋತೀರ?
ಹೌದು, ತುಂಬಾ ತುಂಬಾ... ಒಂದು ಡಿಗ್ರೀ ಮಾಡ್ಕೋ ಬೇಕು ಅಂತ ಆಸೆ ಇದೆ. ಮಧ್ಯೆ ಒಮ್ಮೆ ಕಾಲೇಜುಗಳಲ್ಲಿ ವಿಚಾರಿಸಿದೆ. ಆದ್ರೆ, ಅದೇ ಟೈಮಿಗೆ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾದೆ. ಹೆಚ್ಚಿನ ಜನರಿಗೆ ಗೊತ್ತಿಲ್ಲ. ನಾನು ಮತ್ತೆ ಕಾಲೇಜು ಸೇರಬೇಕು ಅನ್ನೋವಾಗ ನೀರ್‍ದೋಸೆ ಸಿನಿಮಾ ಆಫರ್ ಬಂದಿದ್ದು. ಆದ್ರೆ, ಒಂದಂತು ನಿಜ. ಮುಂದೆ ಏನೇ ಆದ್ರೂ, ಅಂದ್ರೆ ಮದ್ವೆ ಆದ್ರೂ ಏನೇ ಇದ್ರೂ ಒಂದು ಡಿಗ್ರೀ ಮಾಡ್ಕೋಬೇಕು ಅನ್ನೋ ಆಸೆ ಇದೆ....ಒಂದು ಕ್ವಾಲಿಫಿಕೇಷನ್ ಒಂದು ಎಜುಕೇಷನ್ ಬೇಕೇ ಬೇಕು. ಅದು ನಮ್ಮಲ್ಲಿ ತುಂಬುವ ಆತ್ಮವಿಶ್ವಾಸವೇ ಬೇರೆ. ಮತ್ತೆ, ನಮ್ಮ ಫ್ಯಾಮಿಲಿಯಲ್ಲಿ ಎಲ್ರೂ ಹೇಳ್ತಿದ್ರು, ಇವಳೊಬ್ಬಳೇ ಚೆನ್ನಾಗಿ ಓದೋಳು, ಇವಳೊಬ್ಬಳೇ ಡಾಕ್ಟರ್ ಆಗ್ತಾಳೆ ಅಂತೆಲ್ಲ. ಅದು ಎಲ್ಲೋ ಒಂದು ಕಡೆ ಇನ್‍ಕಂಪ್ಲೀಟ್ ಅನ್ಸುತ್ತೆ ನನ್ನೊಳಗೆ.

* ನಿಮ್ಮ ಬಾಲ್ಯದ ಯಾವ ಸಂಗತಿ ಯಾವ ವ್ಯಕ್ತಿ ನೀವು ಇವತ್ತಿಗೂ ನೆನಪಿಸಿಕೊಳ್ಳುತ್ತೀರ?
ಅಪ್ಪನೇ. ಇವತ್ತಿಗೂ ಅವರನ್ನ ತುಂಬ ಮಿಸ್ ಮಾಡ್ಕೋತೀನಿ. ನನ್ನ ವ್ಯವಹಾರ ಜ್ಞಾನ ಚೆನ್ನಾಗಿದೆ ಅಂತ ಅಮ್ಮ ಹೇಳ್ತಾರೆ. ತುಂಬ ಪ್ರೊಡ್ಯೂಸರ್‌ಗಳು ಕೂಡ ನೀವು ತುಂಬ ಆರ್ಗನೈಸ್ಡ್ ಅಂತ ಹೇಳಿದ್ದಾರೆ. ಅದೆಲ್ಲ ಅಪ್ಪನಿಂದನೇ ಬಂದಿರೋದು. ಸಣ್ಣ ವಯಸ್ಸಲ್ಲಿ ಅಪ್ಪನೊಂದಿಗೆ ಆಗಾಗ ಟ್ರಿಪ್ ಹೋಗ್ತಿದ್ವಿ. ಎಲ್ಲ ತುಂಬ ಚೆನ್ನಾಗಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡ್ತಿದ್ರು. ಬಡ್ಜೆಟ್ ಮಾಡ್ತಿದ್ವಿ. ಲೆಕ್ಕಾಚಾರದಲ್ಲಿ ಬಹಳ ಜಾಗರೂಕತೆ ಇರ್ತಿತ್ತು. ಪ್ರತಿಯೊಂದಕ್ಕು ಒಂದು ಲೆಕ್ಕ ಇರಬೇಕು. ಶಿಸ್ತು ಇರಬೇಕು.

ನೀರಿನ ಬಾಟಲ್ ಬಂತು. `ಹೌ ಕ್ಯೂಟ್' ಅಂದ್ರು. ಇಂಥ ಬಾಟಲಿಗಳನ್ನ ನಾನು ಬಿಸಾಕೋದಿಲ್ಲ. ನನ್ ಹತ್ರ ಸಾಕಷ್ಟು ಕಲೆಕ್ಶನ್ಸ್ ಇದೆ.

* ಯಾಕ್ ಮಾಡ್ತೀರಾ? ವಾಟ್ ಮೇಕ್ಸ್ ಯು ಡು ದಟ್? ಅಂತ ಕೇಳಿದೆ
ಗೊತ್ತಿಲ್ಲ, ಮೇ ಬಿ ಕ್ಯೂಟ್‍ನೆಸ್, ಯೂನಿಕ್‍ನೆಸ್. ಮತ್ತೆ ಈ ವಸ್ತು ನನಗೆ ಸಿಗದಿದ್ರೆ? ಹಾಗಾಗಿ ನಾನು ಎಲ್ಲ ಚೆಂದದ ವಸ್ತುಗಳನ್ನ ಬದುಕಿನ ಸಂದರ್ಭಗಳನ್ನ ಕಾಪಿಟ್ಟುಕೊಳ್ತೀನಿ.

ಮತ್ತೆ, ನಮ್ಮ ತಂದೆಯ ಸ್ವಭಾವ ಹೇಗಿತ್ತು ಅಂದ್ರೆ, ಶತ್ರುಗಳೇ ಇದ್ದರೂ ಅವರ ಕಷ್ಟ ಕಾಲದಲ್ಲಿ ಅವರಿಗೆ ಆಗುತ್ತಿದ್ದರು. ಅವರು ಹೋದಾಗ ನನಗೆ ಹದಿಮೂರು ವರ್ಷ. ಅವರು ಈಗ ಇದ್ದಿದ್ರೆ ನಾವು ಏನೆಲ್ಲ ಮಾತಾಡಿಕೊಳ್ತಿದ್ವಿ, ಅವರು ನನ್ನ ಹೇಗೆಲ್ಲ ಗೈಡ್ ಮಾಡ್ತಿದ್ರು, ನನ್ನ ಸ್ನೇಹಿತರು ಅವರ ತಂದೆಯೊಟ್ಟಿಗೆ ಮಾತಾಡುವಾಗೆಲ್ಲ ಅದು ನನ್ನ ತುಂಬ ಕಾಡುತ್ತೆ.



* ...ಮತ್ತೆ ವಿಷಾದ. `ನಿಮ್ಮ ಅಣ್ಣ ಏನು ಮಾಡ್ತಿದ್ದಾರೆ?' ಅಂತ ಕೇಳಿದೆ.

ಅವನು ಒಂದು ರೆಸ್ಟೋರೆಂಟ್ ನಡೆಸ್ತಿದಾನೆ

* ಮುಂಚಿನಿಂದಲೂ ನಿಮ್ಮ ಕುಟುಂಬ ಫುಡ್ ಇಂಡಸ್ಟ್ರಿಯಲ್ಲಿತ್ತು. ಹಣಕಾಸಿನ ತೊಂದ್ರೆ ಅಂತ ಯಾವತ್ತೂ ಆಗಿರ್ಲಿಲ್ಲ ಅಂದ್ಕೋತೀನಿ.
ನಾನು ಎಲ್ಲ ಬಗೆಯ ಬದುಕನ್ನೂ ನೋಡಿದ್ದೀನಿ. ಅಪ್ಪ ಇರೋವಾಗ ಎಲ್ಲ ಚೆನ್ನಾಗೇ ಇತ್ತು. ಆಮೇಲೆ ನಮ್ಮವರೇ ನಮಗೆ ಮೋಸ ಮಾಡಿದ್ರು. ತುಂಬ ಕಷ್ಟ ಆಗಿತ್ತು ಆಗ. ಮತ್ತೆ ಮೇಲೆದ್ವಿ. ಅಪ್ಪ ಮಾಡಿದ ಒಳ್ಳೆಯ ಕೆಲಸಗಳು ನಮ್ಮನ್ನು ಇವತ್ತಿಗೂ ಕಾಪಾಡ್ತಿದೆ ಅನ್ನೋ ನಂಬಿಕೆ ನನ್ನದು.

* ನಿಮ್ಮ ಕಲಿಕೆ ಅರ್ಧಕ್ಕೇ ನಿಂತುಹೋಯ್ತು. ಆಮೇಲೆ ಓದಿನ ಹವ್ಯಾಸ ಏನಾದ್ರು ಇತ್ತಾ?
ಓದಿನ ಹವ್ಯಾಸಕ್ಕಿಂತ ಬೇರೆ ಬೇರೆ ಸಂಗತಿಗಳನ್ನು ಕಲೀತಾ ಹೋದೆ. ಕುದುರೆ ಸವಾರಿ, ಕಾರ್ ಡ್ರೈವಿಂಗ್, ಡ್ಯಾನ್ಸ್ ಪ್ರಾಕ್ಟೀಸ್ ಮಾಡ್ತಿದ್ದೆ. ಏನಾದ್ರು ಕಲೀಬೇಕು ಅನ್ನೋ ಆಸಕ್ತಿ ಹಾಗೇ ಇದೆ. ಸ್ಕೇಟಿಂಗ್, ಗಿಟಾರ್ ಕಲೀಬೇಕು ಅಂತಿದೆ. ಆಗ್ತಿಲ್ಲ. ಟೈಮ್ ಸಿಗ್ತಿಲ್ಲ.

* ಟ್ರಾವೆಲ್?
ಐ ಲವ್ ಟ್ರಾವೆಲ್ಲಿಂಗ್. ಶೂಟಿಂಗ್ ಮುಗೀತು ಸ್ವಲ್ಪ ಬಿಡುವು ಸಿಕ್ಕರೂ ನಾವು ತಿರುಗಾಟಕ್ಕೆ ಹೊರಟು ಬಿಡ್ತೀವಿ.

* ಇಷ್ಟದ ತಾಣಗಳು?
ಮಸೀನಾ ಗುಡಿಗೆ ಸಾಕಷ್ಟು ಸಲ ಹೋಗಿದೀವಿ. ಆಮೆಲೆ, ಚಿಕ್ಕಮಗಳೂರು. ಪ್ರಕೃತಿಗೆ ಹತ್ತಿರ ಇರುವ ಪ್ರಶಾಂತವಾಗಿರುವ ಸ್ಥಳಗಳು ಇಷ್ಟ.

* ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೆ ಬಹುಪಾಲು ಅದು ಹೇಗೆ ನಡೆಸಿಕೊಂಡು ಹೋಗುತ್ತೋ ಹಾಗೆ ನೀವು ಮುಂದುವರೀತೀರಿ. ಅಂದ್ರೆ, ಯಾವ ತರಹ ಆಫರ್ಸ್ ಬರುತ್ತೆ, ಎಷ್ಟು ಆಫರ್ಸ್ ಬರುತ್ತೆ, ಎಲ್ಲಿಂದ ಬರುತ್ತೆ, ತಮಿಳು, ತೆಲುಗು, ಹೀಗೆ... ನೀವು ಆಯ್ಕೆಗಳನ್ನ ಮಾಡಿಕೊಳ್ಳಬಹುದು. ಆದರೆ ಬಹುಪಾಲು ಬಂದಿರುವುದನ್ನ ಸ್ವೀಕರಿಸಬೇಕು ಅಥವ ನಿರಾಕರಿಸಬೇಕು. ಆದರೆ, ಇದೆಲ್ಲದರ ಹೊರತಾಗಿ ನಿಮಗೇ ಇಂಥದನ್ನು ಮಾಡಲೇಬೇಕು ಅಂತ ಏನಾದ್ರು ಆಸೆ ಕನಸು ಇದೆಯೇ?

ಸಿನಿಮಾ ಒಂದು ರೀತಿ ಜೂಜಿನ ಆಟ. ಯಾರು ಏಷ್ಟು ವರ್ಷ ಹೇಗೆ ಅನ್ನೋದೆಲ್ಲ ಗೊತ್ತಿರಲ್ಲ. ನನಗೂ ಗೊತ್ತಿಲ್ಲ. ನಾನು ಯಾವುದನ್ನೂ ಪ್ಲ್ಯಾನ್ ಮಾಡಿಲ್ಲ. ಯಾವುದೇ ಪೂರ್ವತಯಾರಿಗಳಿಲ್ಲದೆ ಬಂದೆ. ಕೆಲವೊಮ್ಮೆ ಸೋತಿದ್ದೀನಿ. ಇಲ್ಲ ಅಂತಲ್ಲ. ಅದೃಷ್ಟನೂ ಬೇಕು. ನನಗೊಂದು ನಿಜವಾದ ಸಕ್ಸಸ್ ಸಿಗೋದಕ್ಕೆ ಸುಮಾರು ಹತ್ತು ವರ್ಷಗಳೇ ಬೇಕಾದವು. ಕಳ್ಳರ ಸಂತೆ, ಉಗ್ರಂ ಥರದ ಸಿನಿಮಾಗಳು ಸಿಕ್ಕವು. ತಮಿಳು, ತೆಲುಗು, ಮಳಯಾಳಿ ಸಿನಿಮಾಗಳು ಸಿಕ್ಕವು. ಯಾವ ಭಾಷೆಗೂ ನಾನು ಪ್ರಾಂಪ್ಟಿಂಗ್ ತಗೊಂಡಿಲ್ಲ. ನಾನೇ ಆ ಭಾಷೆಯಲ್ಲಿ ಮಾತಾಡ್ತೀನಿ. ಮತ್ತೆ, ನಾಳೆ ದಿವ್ಸ ಯಾವ ಸೀನ್ ಯಾವ ಡೈಲಾಗ್ಸ್ ಎಲ್ಲವೂ ಗೊತ್ತಿರಬೇಕು. ಎಲ್ಲದಕ್ಕೂ ಚೆನ್ನಾಗಿ ಪ್ರಿಪೇರ್ ಆಗಿ ನಾನು ಶೂಟಿಂಗಿಗೆ ಹೋಗ್ತೀನಿ. ನನ್ನ ತಲೇಲಿ ಬರೀ ಸಿನಿಮಾನೇ ಓಡ್ತಿದೆ ಸದ್ಯಕ್ಕೆ.

* ಸರಿ, ಇನ್ನೊಂದು ರೀತಿಯಲಿ ಕೇಳ್ತೀನಿ. ನಿಮ್ಮ ರಿಟೈರ್‍ಮೆಂಟ್ ಪ್ಲ್ಯಾನ್ ಏನು? (ಭರಪೂರ ನಗು)
ನಾನು ಸಿನಿಮಾಗೆ ಬಂದಾಗ ಎಲ್ರೂ ಹೀರೋಯಿನ್ಸ್ ಬರೀ ನಾಲ್ಕೈದು ವರ್ಷ ಅಷ್ಟೇ ಅನ್ನೋರು. ಇರಬಹುದು


* ಅದೀಗ ಬದಲಾಗ್ತಿದೆ ಅನ್ಸೋದಿಲ್ವ?
ಕೆಲವ್ರು ಒಂದೆರಡು ವರ್ಷಕ್ಕೇ ಮರೆಯಾಗಿ ಬಿಡ್ತಾರೆ. ನಾನು ನೀರ್‍ದೋಸೆ ನಂತರ ಮತ್ತೆ ಅದೇ ಥರದ ಸಿನಿಮಾಗಳನ್ನ ಒಪ್ಕೊಂಡಿದ್ರೆ ನನ್ನ ಕೆರಿಯರ್ ಮುಗಿದೇ ಹೋಗಿರೋದು. ಅಂಥ ಸಾಕಷ್ಟು ಆಫರ್ ಬಂತು. ಆದ್ರೆ, ನಾನು ನಿರಾಕರಿಸಿದೆ. ಹೊಸ ಥರದ ಸಬ್ಜೆಕ್ಟ್ ಮತ್ತು ಪಾತ್ರಗಳು ಸಿಗ್ತಾ ಹೋಯ್ತು. ಹಾಗಾಗಿ ನಮ್ಮ ಆಯ್ಕೆಗಳು ಕೂಡ ಮುಖ್ಯ ಅನ್ಸುತ್ತೆ.

* ನಿಜ. ಆದ್ರೆ ಮುಂಚಿನ ಹಾಗೆ ಈಗ ಮದ್ವೆ ಆದ ಕೂಡ್ಲೆ ನಟಿಯ ಕೆರಿಯರ್ ಮುಗಿದೇ ಹೋಯ್ತು ಅನ್ನೋದು ಬದಲಾಗ್ತಿದೆ. ಅಟ್‍ಲೀಷ್ಟ್ ಬಾಲಿವುಡ್ಡಿನಲ್ಲಿ ಕರೀನಾ ಕಪೂರ್, ಕಾಜೋಲ್, ಹೀಗೆ ಸಾಕಷ್ಟು ಜನರು ತಮ್ಮ ಕೆರಿಯರ್ ಮುಂದುವರಿಸ್ತಿದಾರೆ. ಇಲ್ಲಿನ ಪರಿಸ್ಥಿತಿ ಬದಲಾಗಬಹುದು ಅನ್ಸುತ್ತಾ?

ಅದು ಇಲ್ಲಿ ಸ್ವಲ್ಪ ಕಷ್ಟ. ಸೌತ್ ಇಂಡಿಯಾದಲ್ಲಿ ಮದ್ವೆ ಆಯ್ತ ಮಕ್ಕಳು ಆಯ್ತ ಮುಗೀತು. ಮನೆ ನೋಡ್ಕೊಂಡಿರು ಅನ್ನೋ ಮನಸ್ಥಿತಿನೇ ಜಾಸ್ತಿ. ಆದ್ರೆ, ನನಗೆ ಮಾದುವೆ ಆದ್ರೂ ಏನೇ ಆದ್ರು, ನಾನು ಸ್ವತಂತ್ರವಾಗಿರಬೇಕು. ಯಾರ ಮೇಲೂ ಡಿಪೆಂಡ್ ಆಗಿರಬಾರದು. ಆಗೋ ಟೈಮಲ್ಲಿ ಅದಾಗಿಯೇ ಎಲ್ಲವೂ ಆಗುತ್ತೆ. ಅದಕ್ಕಾಗಿ ನಾನು ನನ್ನ ಕೆರಿಯರ್ ಬಿಟ್ಟು ಪ್ಲ್ಯಾನ್ ಮಾಡೋದಿಲ್ಲ.

* ರಿಟೈರ್‍ಮೆಂಟ್ ಅಂದ್ರೆ ಮದುವೆ ಆಗೋದು ಅಂತ ನನ್ನ ಪ್ರಶ್ನೆಯ ಉದ್ದೇಶ ಆಗಿರಲಿಲ್ಲ. ಅಂದ್ರೆ, ಸಿನಿಮಾ ಕ್ಷೇತ್ರದಲ್ಲಿ ಇಂತಿಷ್ಟು ವರ್ಷ ನೀವು ಹೀರೋಯಿನ್ನಾಗಿ ಚಾಲ್ತಿಯಲ್ಲಿರಬಹುದು. ಆಮೇಲೆ ಬೇರೆ ಏನು ಮಾಡಬೇಕು ಅಂದ್ಕೊಂಡಿದೀರ?

ಇನ್ನೂ ತುಂಬಾ ಟೈಮ್ ಇದೆ. ಇನ್ನೂ ಯೋಚ್ನೆ ಮಾಡಿಲ್ಲ. ನಾನು ಚಿಕ್ಕ ವಯಸ್ಸಿಗೇ ಕೆರಿಯರ್ ಶುರು ಮಾಡಿದ್ರಿಂದ ಹತ್ತು ವರ್ಷ ಅನ್ನೋದು ದೊಡ್ಡದಾಗಿ ಕಾಣಬಹುದು. ಆದ್ರೆ ಇನ್ನೂ ಹಲವು ವರ್ಷ ಹೀರೋಯಿನ್ ಆಗಿ ಮುಂದುವರಿಯುವ ಅವಕಾಶಗಳಿವೆ. ಅಷ್ಟರಲ್ಲಿ ನಾನು ಬಿಸಿನೆಸ್ ಕಡೆ ಕೂಡ ಗಮನ ಹರಿಸಬಹುದು. ಏನೇನೋ ಐಡಿಯಾಸ್ ಬರುತ್ತೆ. ಆದ್ರೆ ಯಾವುದರ ಬಗ್ಗೆಯೂ ಪ್ಲ್ಯಾನ್ ಮಾಡಿಲ್ಲ. ಸಿನಿಮಾದಲ್ಲೂ ಈಗ ನಂಬರ್ ಒನ್ ನಂಬರ್ ಟು ಅನ್ನೋದರ ಬಗ್ಗೆ ನನಗೆ ನಂಬ್ಕೆ ಇಲ್ಲ. ಎಲ್ರೂ ಹೇಳ್ತಾರೆ ನೀವು ಈಗಿರೋ ನಂಬರ್ ಒನ್ ಹೀರೋಯಿನ್ ಅಂತ. ಆದ್ರೆ ನಾವು ಮಂಜುಳಾ, ಕಲ್ಪನಾ, ಮಾಲಾಶ್ರೀ ಅವರನ್ನ ನೆನಪಿಸಿಕೋಳ್ತೀವಿ. ಅವರ ನಟನೆ ನೆನಪಿಸಿಕೊಳ್ತೀವಿ. ಅವರ ನಂಬರ್ ಅಲ್ಲ. ಸಿನಿಮಾ ನಾನು ಪ್ಲ್ಯಾನ್ ಮಾಡಿಲ್ಲ. ಮುಂದೇನೂ ಪ್ಲ್ಯಾನ್ ಮಾಡಿಲ್ಲ. ಈಗ ಸಾಕಷ್ಟು ಬೇರೆ ಬೇರೆ ರೀತಿಯ ಪಾತ್ರಗಳು ಬರ್ತಿವೆ. ಐ ವಾಂಟ್ ಟು ಎಂಜಾಯ್ ಇಟ್.

* ಹೌದು, ನೀವು ಸಾಕಷ್ಟು ವೈವಿಧ್ಯಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೀರ. ಸೂಜಿದಾರ, ಡಾಟರ್ ಆಫ್ ಪಾರ್ವತಮ್ಮ, ಬೆಲ್ ಬಾಟಮ್, ಎಲ್ಲವೂ ಬೇರೆ ರೀತಿಯ ಪಾತ್ರಗಳು. ನಿಮ್ಮನ್ನು ಗಮನದಲ್ಲಿ ಇಟ್ಟುಕೊಂಡೇ ಕತೆಗಳನ್ನು ಬರೀತಾ ಇದ್ದಾರೆ. ಹೀಗೆಲ್ಲ ಇರಬೇಕಾದ್ರೆ, ನಿಮಗೆ ನಾನೇ ನಂಬರ್ ಒನ್ ಅಂತ ಅನ್ಸೋದಿಲ್ವ?

ಜನ ಹೇಳ್ತಾರೆ (ನಗು)

* ನೀವೂ ನೋಡ್ತಿದೀರಲ್ಲ, ನಿಮಗೇ ಅನ್ಸೋದಿಲ್ವಾ?
ಅದನ್ನ ನಾನೇ ಹೇಳೊದು ಕಷ್ಟ



* ಸರಿ, ಆದ್ರೆ ಇತ್ತೀಚೆಗೆ ಕನ್ನಡದ ನಟಿಯೊಬ್ಬಳು ಇಷ್ಟೊಂದು ವೈವಿಧ್ಯಮಯ ಪಾತ್ರಗಳನ್ನು ಮಾಡ್ತಿರೋದು ನೀವೊಬ್ರೆ ಅನ್ಸುತ್ತೆ
ನಾನು ನನ್ನ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಆಭಾರಿಯಾಗಿದ್ದೇನೆ. ಇಂಥ ಪಾತ್ರಗಳನ್ನು ಈಕೆ ಮಾಡಬಹುದು ಅಂತ ನಂಬಿಕೆ ಇಟ್ಟು ಮಾಡ್ತಿದ್ದಾರೆ. ನಾನು ಲಕ್ಕಿ ಅನ್ಸುತ್ತೆ.

* ಹೀಗೆ ಬೇರೆ ಬೇರೆ ಶೇಡ್ಸ್ ಇರೋ ಪಾತ್ರಗಳನ್ನು ಮಾಡೋವಾಗ ಅದರ ಬಗ್ಗೆ ನಿಮ್ಮ ತಯಾರಿ ಹೇಗಿರುತ್ತೆ?

ನನಗೆ ಅಂಥ ಸವಾಲು ಅಂತೇನು ಅನ್ಸೋದಿಲ್ಲ. ಶೂಟಿಂಗ್ ಆಯ್ತು ಅಂದ್ರೆ ನಾನು ಅದರಿಂದ ಹೊರ ಬರ್ತೀನಿ. ನೀರ್‍ದೋಸೆ ಮಾಡಬೇಕಾದ್ರೆ ನಾನು ನನ್ನನ್ನೇ ಕಂಫರ್ಟ್ ಮಾಡ್ಕೋಬೇಕಿತ್ತು. ಆ ರೀತಿಯ ಪಾತ್ರ, ಆ ರೀತಿಯ ಬಟ್ಟೆಗಳು, ಇದೆಲ್ಲ ನನಗೆ ಹೊಸತು. ಹಾಗಾಗಿ ನಾನು ಆದಷ್ಟು ಶೂಟಿಂಗ್ ಟೀಮಿನ ಜನರ ಮಧ್ಯೆಯೇ ಇರುತ್ತಿದ್ದೆ. ರೆಡಿ ಆಗೋಕೆ ಮಾತ್ರ ಕ್ಯಾರವನ್ ಬಳಸುತ್ತಿದ್ದೆ. ರೆಡಿ ಆದ ತಕ್ಷಣ ಹೊರಬಂದು ಜನರ ಮಧ್ಯೆ ಕೂರುತ್ತಿದ್ದೆ. ಯಾಕಂದ್ರೆ ನಾನು ಉಟ್ಟ ಉಡುಗೆ ನನಗೇ ಮುಜುಗರ ತರಬಾರದು. ನಾನದನ್ನು ಕ್ಯಾರಿ ಮಾಡಬೇಕು. ಆಗ ಮಾತ್ರ ನಾನು ಪಾತ್ರವನ್ನು ಸರಿಯಾಗಿ ನಿರ್ವಹಿಸೋಕೆ ಸಾಧ್ಯ. ಯಾಕೆಂದ್ರೆ ಏನೇ ಹೊಸತು ಇದ್ರು ಜನ ನೋಡ್ತಾನೆ ಇರ್ತಾರೆ. ದೆ ಕೀಪ್ ಸ್ಟೇರಿಂಗ್. ಎಲ್ಲರೂ ಅದಕ್ಕೆ ಒಗ್ಗಿಕೊಳ್ಳೋಕೆ ನಾವು ಹೇಗೆ ನಡೆದುಕೊಳ್ತೀವಿ ಅನ್ನೋದೂ ಮುಖ್ಯವಾಗುತ್ತೆ.

* ಇಂಟೆರೆಸ್ಟಿಂಗ್. ಅದು ನನ್ನ ಮುಂದಿನ ಪ್ರಶ್ನೆಗೆ ತೆರೆದುಕೊಳ್ಳುತ್ತೆ. ಈಗ ಬಹಳ ಸದ್ದು ಮಾಡುತ್ತಿರುವ ಮೀಟೂ ಅಭಿಯಾನ ಬಗ್ಗೆ ಈ ಪ್ರಶ್ನೆ. ನಿಮಗೆ ಯಾವತ್ತಾದ್ರೂ ಇರುಸುಮುರುಸಿನ ಅನುಭವ ಆಗಿದ್ಯಾ?

ಖಂಡಿತ ಇಲ್ಲ. ಉದಾಹರಣೆಗೆ ನೀರ್‍ದೋಸೆ ಸಿನಿಮಾದಲ್ಲಿ ನಿರ್ದೇಶಕ ವಿಜಯ್ ಅವ್ರು ನನಗೆ ಕಂಫರ್ಟಬಲ್ ಇಲ್ಲಾಂದ್ರೆ, ಕೇವಲ ಕ್ಯಾಮೆರಾಮೆನ್ ಮತ್ತು ಕಲಾವಿದರನ್ನು ಮಾತ್ರ ಇರಿಸಿಕೊಂಡು ಶೂಟಿಂಗ್ ಮಾಡಿದ್ದಾರೆ. ಮತ್ತೆ, ಪ್ರತಿ ಹುಡುಗಿಗೂ ಒಂದಲ್ಲ ಒಂದು ರೀತಿಯಲ್ಲಿ ಎಲ್ಲೋ ಒಂದು ಕಡೆ ಅನ್‍ಕಂಫರ್ಟಬಲ್ ಅನ್ನೋ ಪರಿಸ್ಥಿತಿ ಬಂದೇ ಇರುತ್ತೆ. ಬಸ್ಸಲ್ಲಿ ಇರಬಹುದು, ಅಥವ ಯಾರೋ ಶೇಕ್ ಹ್ಯಾಂಡ್ ಮಾಡೋವಾಗ ಇರಬಹುದು. ಆದ್ರೆ, ನಾವು ಹುಡುಗಿಯರು ಅಂಥ ಸಂದರ್ಭದಲ್ಲಿ ಅದಕ್ಕೆ ಅಲ್ಲೇ ಉತ್ತರ ಕೊಟ್ಟಿರ್ತೀವಿ. ಕಿರುಚಾಟ ರಂಪಾಟ ಅಲ್ಲದಿದ್ರು ಕಣ್ಣಲ್ಲೇ ಗದರಿಸಿ ಅದನ್ನ ಎದುರಿಸಿರ್ತೀವಿ. ಯಾವುದೇ ಚಳವಳಿ ಅಭಿಯಾನಕ್ಕೆ ಕಾಯ್ತಾ ಕೂರಲ್ಲ. ಮತ್ತೆ, ನಾನು ಸದರ ಕೊಟ್ಟರೆ ತಾನೇ ಬೇರೆಯವರು ಮುಂದುವರೆಯೋಕೆ ಸಾಧ್ಯ? ನಾನು ಇಲ್ಲೇ ಈ ಗಡಿ ದಾಟಿ ಬರೋದಿಲ್ಲ ಅಂದ್ರೆ ಯಾರೂ ಆ ಧೈರ್ಯ ಮಾಡೊಲ್ಲ. ನಾವು ನೀಡುವ ವೈಬ್ಸ್ ಪ್ರಕಾರ ಆ ಕಡೆಯಿಂದನೂ ವೈಬ್ಸ್ ಬರುತ್ತೆ ಅನ್ನೋದು ನನ್ನ ನಂಬಿಕೆ. ನನಗೆ ಕ್ಲಾರಿಟಿ ಇದೆ. ನನಗೇನು ಬೇಕು. ನನ್ನ ಕೆಲಸ ಏನು. ಯಾವುದಕ್ಕಾಗಿ ದುಡ್ಡು ಕೊಡ್ತಿದಾರೆ ಅನ್ನೋದು ನನಗೆ ಕ್ಲಿಯರ್ ಆಗಿ ತಿಳಿದಿದೆ. ನಾನು ಆ ನಿಟ್ಟಿನಲ್ಲಿ ಮಾತ್ರ ಕೆಲಸ ಮಾಡ್ತೀನಿ.

ಮತ್ತೆ ಒಂದು ಗಂಡು ಮತ್ತು ಹೆಣ್ಣು ಒಟ್ಟಿಗೆ ಕೆಲಸ ಮಾಡುವಾಗ ಒಂದು ರೀತಿಯ ಆಕರ್ಷಣೆ ಹುಟ್ಟಿಕೊಳ್ಳುವುದು ಸಹಜ. ಆದರೆ, ಎದುರಿನ ವ್ಯಕ್ತಿ ನೀನು ಇಷ್ಟ ಅನ್ನುವ ಸೂಚನೆ ಕೊಟ್ಟಾಗ ಅದನ್ನು ಒಪ್ಪಿಕೊಳ್ಳುವ ಅಥವ ತಿರಸ್ಕರಿಸುವ ಆಯ್ಕೆ ಮತ್ತು ಸ್ವಾತಂತ್ರ್ಯ ನನಗಿದೆ. ನಾನು ಸಣ್ಣ ಮಗುವಲ್ಲ. ಯಾರೋ ಏನೋ ಕೇಳಿದ್ರು ಅನ್ನೋದೇ ತಪ್ಪು ಅಂತ ಹೇಳೊಕ್ಕಾಗೊಲ್ಲ.

* ಈಗ ಸಿನಿಮಾ ಇಂಡಸ್ಟ್ರಿಯಲ್ಲಿರುವ ಹೀರೋಯಿನ್‍ಗಳಲ್ಲಿ ನಿಮ್ಮ ಬೆಸ್ಟ್ ಫ್ರೆಂಡ್ ಯಾರು?
ಯಾರೂ ಇಲ್ಲ

* ನೀವು ಇಷ್ಟ ಪಡುವ ನಟಿ ಯಾರು?
ಆಗಿನ ಕಾಲದಲ್ಲಿ ನಾನು ತುಂಬ ಇಷ್ಟಪಟ್ಟ ನಟಿಯರು ರಮ್ಯ ಮತ್ತು ರಕ್ಷಿತ. ರೋಲ್ ಮಾಡೆಲ್ ಆಗಿ ಸೌಂದರ್ಯ ಮತ್ತು ಶ್ರೀದೇವಿ.

* ನಿಮ್ಮ ಸಮಕಾಲೀನ ನಟಿಯರಲ್ಲಿ ನೀವು ಇಷ್ಟಪಡುವ ನಟಿ ಯಾರು?
ನನ್ನ ಸಮಕಾಲೀನ ನಟಿ ಯಾರೂ ಇಲ್ಲ ಸರ್ ಇಂಡಸ್ಟ್ರಿಯಲ್ಲಿ (ಇಬ್ಬರೂ ಜೋರಾಗಿ ನಕ್ಕೆವು)

* ಸೂಜಿದಾರದ ಪಾತ್ರದ ಬಗ್ಗೆ ಹೇಳಿ
ನನ್ನ ವಯಸ್ಸಿಗೆ ಮೀರಿದ ಪಾತ್ರ. ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ವರ್ಕ್‍ಶಾಪ್ ಆಗಿತ್ತು. ಪದ್ಮ ಅನ್ನುವ ಪಾತ್ರ ಹೇಗೆ ವರ್ತಿಸುತ್ತೆ ಅವಳೊಳಗೆ ಏನೇನು ನಡೀತಿದೆ ಇದನ್ನೆಲ್ಲ ಕಲಿತುಕೊಳ್ತಾ ಹೋದೆ. ಟೀಸರ್ ರಿಲೀಸ್ ಆಗಿದೆ. ಸಾಕಷ್ಟು ಒಳ್ಳೆಯ ರೆಸ್ಪಾನ್ಸ್ ಬಂದಿದೆ. ನನಗೂ ಸಾಕಷ್ಟು ನಿರೀಕ್ಷೆ ಇದೆ. ಡಾಟರ್ ಆಫ್ ಪಾರ್ವತಮ್ಮ ಪಾತ್ರ ಕೂಡ ಸಾಕಷ್ಟು ಬೇರೆ ರೀತಿಯಲ್ಲಿದೆ. ಒಂದು ಕಮರ್ಶಿಯಲ್ ಸಿನಿಮಾ ಇಡಿಯಾಗಿ ಹೀರೋಯಿನ್ ಓರಿಯೆಂಟಡ್ ಬರ್ತಿರೊದಕ್ಕೆ ಖುಷಿಯಾಗ್ತಿದೆ

* ಸೋ, ಮಾಲಾಶ್ರೀಯ ನಂತರ ಹರಿಪ್ರಿಯಾ?
ನೀವು ಹಾಗೆ ಹೇಳೋದಾದ್ರೆ ಖುಷಿಯಾಗುತ್ತೆ

* ನಿಮಗೆ ಏನು ಅನ್ಸುತ್ತೆ?
ಇಲ್ಲ ನನಗೆ ಹಾಗೆ ಕಂಪೇರ್ ಮಾಡಿಕೊಳ್ಳೋಕೆ ಇಷ್ಟ ಇಲ್ಲ

* ಕಂಪೇರ್ ಅಂತಲ್ಲ. ಹೀರೊಯಿನ್ ಸೆಂಟ್ರಿಕ್ ಯುಗ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಕಳಚಿ ಬಿದ್ದು ಸಾಕಷ್ಟು ವರ್ಷಗಳಾಗಿವೆ. ಇದು ಪುರುಷ ಪ್ರಧಾನ ವ್ಯವಸ್ಥೆ. ಹೀಗಿರೋವಾಗ, ನಿಮ್ಮ ಮೂಲಕ ಇದು ಮತ್ತೆ ಮರುಹುಟ್ಟು ಪಡೀತಾ ಇರೋ ಸೂಚನೆ ಇದೆ ಅನ್ಸುತ್ತ?
ಹಾಗೆ ಆಗಬಹುದು ಅಂತ ನನಗೂ ಭರವಸೆ ಇದೆ. ನನ್ನನ್ನು ಯಾವುದಕ್ಕೂ ಸೀಮಿತ ಮಾಡಿಲ್ಲ. ಹೀರೋ ಸೆಂಟ್ರಿಕ್ ಸಿನಿಮಾಗಳಲ್ಲೂ ನಟಿಸ್ತಿದೀನಿ

* ಆದ್ರೆ, ಈ ಇಂಡಸ್ಟ್ರಿ ಪುರುಷ ಪ್ರಧಾನವಾದದ್ದು ಅಂತ ಒಪ್ತೀರಾ?
ಬರೀ ಇಂಡಸ್ಟ್ರಿ ಅಲ್ಲ, ಇಡೀ ವ್ಯವಸ್ಥೆ ಇಡೀ ಸಮಾಜ ಪುರುಷ ಪ್ರಧಾನವಾಗಿದೆ



* ನಿಮಗೆ ಅಭಿನಯ ಅಂದ ತಕ್ಷಣ ಅನ್ನಿಸೋದೇನು? ನೀವು ಅದನ್ನ ಹೇಗೆ ವ್ಯಾಖ್ಯಾನಿಸ್ತೀರ?
ಅಭಿನಯ ಅಂದ್ರೆ ಬಿಹೇವಿಯರ್; ವರ್ತನೆ. ಅದಕ್ಕಾಗಿ ಏನೋ ಹೆಚ್ಚಿನ ಪರಿಶ್ರಮ ಹಾಕೋದಲ್ಲ. ಒಂದು ಪಾತ್ರದ ಬಗ್ಗೆ ನೀವು ಹೇಳಿದ ತಕ್ಷಣ ಆ ಪಾತ್ರ ಹೇಗೆ ನಡೆದುಕೊಳ್ಳುತ್ತೆ, ನನ್ನ ಕೈಯ ಚಲನೆ ಹೇಗಿರಬೇಕು, ಕಣ್ಣುಗಳ ಚಲನೆ ಹೇಗಿರಬೇಕು. ಹೀಗೆ ಆಕ್ಟಿಂಗ್ ಅನ್ನೋದು ನನ್ನ ಪ್ರಕಾರ ಬಿಹೇವಿಯರ್

* ಈಗ, ಕೆಲವೊಂದು ಕೇಳಲೇ ಬೇಕಾದ ಪ್ರಶ್ನೆಗಳು....ಶಾಪಿಂಗ್ ಸ್ಪಾಟ್ಸ್? ಬ್ರಾಂಡ್ ಸ್ಪೆಸಿಫಿಕ್?
ಹೆಚ್ಚಾಗಿ ಆನ್‍ಲೈನ್ ಶಾಪಿಂಗ್ ಮಾಡ್ತೀನಿ. ಹೊರಗೆ ಹೋದ್ರೆ ಶಾಪಿಂಗ್ ಮಾಡೋಕ್ಕಿಂತ ಹೆಚ್ಚಾಗಿ ಫೆÇೀಟೊಸ್‍ಗೆ ಪೆÇೀಸ್ ಕೊಡೋದೇ ಆಗುತ್ತೆ. ಬ್ರ್ಯಾಂಡ್‍ಗಿಂತ ನಾನು ಎಷ್ಟು ಕಂಫರ್ಟಬಲ್ ಆಗಿರ್ತೀನಿ ಅನ್ನೋದು ಮುಖ್ಯ. ಮತ್ತೆ ಯಾವ ಸಂದರ್ಭಕ್ಕೆ ಯಾವ ಉಡುಗೆ ಅನ್ನೋದೂ ಮುಖ್ಯ.

* ಫುಡ್ ಬಗ್ಗೆ ಹೇಳ್ತಿದ್ರಿ.... ನೀವು ಫುಡಿ ಪರ್ಸನ್ ಅಂತ.... ರೋಡ್‍ಸೈಡಲ್ಲಿ ಗಾಡಿ ಪಾನಿಪೂರಿ ತಿಂತೀರಾ?
ಹೂ...ತುಂಬಾ, ಪ್ರೆಂಡ್ಸ್ ಜೊತೆ, ಅಮ್ಮನ ಜೊತೆ ಹೋಗಿ ಕಾರಿಗೆ ತರಿಸಿಕೊಂಡು ತಿಂತೀನಿ. ಮುಂಚೆ ವಿ.ವಿ.ಪುರಂಗೆ ತುಂಬ ಹೋಗ್ತಿದ್ವಿ. ಆದ್ರೆ ಹೆಚ್ಚಿನ ಸಮಯ ಫೋಟೊ ತೆಗೆಸಿಕೊಳ್ಳೋದೆ ಆಗಿಹೋಗುತ್ತೆ. ದೋಸೆ ಬಾಯಿಗೆ ಇಟ್ಕೊಳ್ಳೋ ಹೊತ್ತಿಗೆ ಯಾರೋ ಬಂದು ಫೋಟೊ... ಹೀಗೇ...

* ಅಡುಗೆ ಮಾಡ್ತೀರ?
ನಾನು ಕಾಂಟಿನೆಂಟಲ್ ಡಿಶೆಸ್ ತುಂಬ ಚೆನ್ನಾಗಿ ಮಾಡ್ತೀನಿ. ಪಾಸ್ತಾ ತುಂಬ ಚೆನ್ನಾಗಿ ಮಾಡ್ತೀನಿ. ಬೇಸಿಕ್ ಸಾಸ್ ಮಾಡೋದ್ರಿಂದ ಹಿಡಿದು ಪ್ರತಿಯೊಂದನ್ನು ಮನೇಲಿ ಮಾಡ್ತೀನಿ. ಕೇಕ್ ಚೆನ್ನಾಗಿ ಮಾಡೋಕೆ ಗೊತ್ತು. ಫ್ರೆಂಡ್ಸ್ ಬರ್ತ್ಡೇಗೆ ನಾನೇ ಥರೇವಾರಿ ಕೇಕುಗಳನ್ನು ಮಾಡ್ತೀನಿ.

* ಪೆಟ್ಸ್?
ಎರಡಿದೆ. ಗೋಲ್ಡನ್ ರೆಟ್ರೀವರ್ - `ಲಕ್ಕಿ' ಅಂತ ಅವನ ಹೆಸರು. `ಹ್ಯಾಪಿ' ಅಂತ ಫಿಟ್ಸು ಬ್ರೀಡಿನ ನಾಯಿ. ಹ್ಯಾಪಿ ಮತ್ತು ಲಕ್ಕಿ ನಮ್ಮ ಮನೇಲಿದೆ. ಇಬ್ರೂ ಹುಟ್ಟಿದ್ದು ಡಿಸೆಂಬರ್ ಆರಕ್ಕೆ.

* ಕಾರುಗಳು? ಗ್ಯಾಡ್ಜೆಟ್ಸ್?
ಕಾರುಗಳು - ಯೆಸ್. ಸ್ವಲ್ಪ ಪ್ಯಾಶನ್ ಇದೆ. ಜ್ಯಾಗ್ವಾರ್ ತಗೋಬೇಕು ಅಂತ ಆಸೆ ಇತ್ತು. ಈಗ ಎರಡು ತಿಂಗಳಾಯ್ತು ತಗೊಂಡು. ಖುಷಿ ಇದೆ. ಫೋನ್‌ - ಪ್ರತಿ ವರ್ಷ ಬರ್ತ್ಡೇಗೆ ಹೊಸ ಫೋನ್‌ ತಗೋತೀನಿ. ಅದು ನನಗೆ ನಾನೇ ಕೊಡೋ ಗಿಫ್ಟು. ಇದು ಬಿಟ್ಟು ನಾನು ಹೆಚ್ಚಾಗಿ ಖರ್ಚು ಮಾಡೊಲ್ಲ. ಖರ್ಚು ಮಾಡೋಕೆ ಮುಂಚೆ ಎರಡು ಸಲ ಯೋಚಿಸಿ ಅವಶ್ಯಕತೆ ಇದ್ದಾಗ ಮಾತ್ರ ಖರ್ಚು ಮಾಡ್ತೀನಿ.

* ಚಿಕ್ಕಬಳ್ಳಾಪುರದಿಂದ ಬಂದ ಹುಡುಗಿ ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷವಿದ್ದು, ತಮಿಳು ತೆಲುಗು ಮಳಯಾಳದಲ್ಲೂ ನಟಿಸಿ, ಈಗ ಅತ್ಯಂತ ಬ್ಯುಸಿಯಾಗಿರುವ ನಟಿ... ಮುಂದೇನು? ನಿಮ್ಮ ಅತಿ ದೊಡ್ಡ ಆಂಬಿಷನ್ ಏನು?

ಅದು ಯಾವತ್ತೂ ಮುಗಿಯೋದಿಲ್ಲ ಅನ್ಸುತ್ತೆ. ಒಂದು ಮುಗಿದ್ರೆ ಮತ್ತೊಂದು. ಇನ್ನೂ ಸಿನಿಮಾ ಮಾಡ್ಬೇಕು ಅಂದ್ಕೋತೀವಿ. ಒಂದು ಸಿನಿಮಾ ಮುಗಿದು ಸ್ವಲ್ಪ ಹೆಸರು ಬಂದ್ರೆ ಇನ್ನಷ್ಟು ಮತ್ತಷ್ಟು ಸಿನಿಮಾ ಮಾಡ್ಬೇಕು ಅಂದ್ಕೋತೀವಿ. ಆಮೇಲೆ ನಾವು ಬದುಕಿದ್ದೀವಿ ಅಂತ ತೋರಿಸ್ಕೋಳೋದಕ್ಕೆ ನಾವು ಸದಾ ಸುದ್ದಿಯಲ್ಲಿರಬೇಕು. ನನಗೇನು ಅಂದ್ರೆ ನಾನೊಬ್ಬ ಒಳ್ಳೆಯ ನಟಿ ಅಂತ ಗುರುತಿಸಿಕೊಳ್ಳಬೇಕಾಗಿತ್ತು. ಅದೀಗ ಚಿಕ್ಕಚಿಕ್ಕದಾಗಿ ಆಗ್ತಿದೆ. ಮುಂದೆಯೂ ನಾನು ಸಿನಿಮಾದಲ್ಲಿ ಇದ್ರೂ ಇಲ್ದೇ ಇದ್ರೂ ಒಳ್ಳೆಯ ಕಲಾವಿದೆ ಅಂತ ಜನ ನೆನಪಿಸಿಕೊಳ್ಳಬೇಕು ಅನ್ನೋ ಆಸೆ ಇದೆ.

ಮಾತುಕತೆ ಮುಗಿಸಿ ಐಸ್‍ಕ್ರೀಮ್ ಪಾರ್ಲರಿನ ಹೊರಬಂದ ಮೇಲೂ ಸುಮಾರು ಹೊತ್ತು ನಮ್ಮ ಮಾತುಕತೆ ಮುಂದುವರೆದಿತ್ತು. ಆಫ್ ದಿ ರೆಕಾರ್ಡ್ ಮಾತುಗಳೂ ಸಾಕಷ್ಟು ಆದವು. ತಾನೊಬ್ಬ ಹೀರೋಯಿನ್ ಅನ್ನುವ ಯಾವ ಬಿನ್ನಾಣವನ್ನೂ ಹರಿಪ್ರಿಯಾ ತೋರಲಿಲ್ಲ. ಎಷ್ಟೋ ದಿನಗಳ ನಂತರ ಸಿಕ್ಕ ಸ್ನೇಹಿತರು ಮನತುಂಬಿ ಮಾತಾಡಿ ಬೀಳ್ಕೊಡುವಷ್ಟೇ ಸಹಜವಾಗಿ ಅಲ್ಲಿಂದ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT