‘ಪಾತ್ರವೆಂದರೆ ಮತ್ತೊಬ್ಬ ವ್ಯಕ್ತಿಯ ನಕಲು ಅಷ್ಟೇ’

7

‘ಪಾತ್ರವೆಂದರೆ ಮತ್ತೊಬ್ಬ ವ್ಯಕ್ತಿಯ ನಕಲು ಅಷ್ಟೇ’

Published:
Updated:
Deccan Herald

ಮಂಜುನಾಥ್‌ ಹೆಗಡೆ ತಮ್ಮ ನಟನೆ, ಬದ್ಧತೆಯಿಂದ ರಂಗಭೂಮಿ, ಧಾರಾವಾಹಿ ಮತ್ತು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಮುಖ್ಯಮಂತ್ರಿ ಚಂದ್ರು’ ಇವರಿಗೆ ಹೆಸರು ತಂದುಕೊಟ್ಟ ನಾಟಕ. ಜೋಗುಳ, ಸಾಧನೆ ಮತ್ತು ಮೇಘ ಧಾರಾವಾಹಿಗಳ ಮೂಲಕ ತಮ್ಮದೇ ಛಾಪು ಮೂಡಿಸುವುದರ ಮೂಲಕ ಮನೆ ಮಾತಾಗಿದ್ದಾರೆ. ಹಲವು ಪೋಷಕ ಪಾತ್ರಗಳಿಗೆ ಜೀವ ತುಂಬಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

‘ಶ್ರೀ ಲಕ್ಷ್ಮಿ ನಾರಾಯಣರ ಪ್ರಪಂಚನೇ ಬೇರೆ’ ಸಿನಿಮಾದಲ್ಲಿ ಪೋಷಕ ಪಾತ್ರಕ್ಕಾಗಿ 2017ನೇ ಸಾಲಿನ ಅತ್ಯತ್ತುಮ ಪೋಷಕ ನಟ ರಾಜ್ಯ ಪ್ರಶಸ್ತಿ ಒಲಿದಿದೆ. ಆ ಖುಷಿಯನ್ನು ಇಲ್ಲಿ ಅವರು ಹಂಚಿಕೊಂಡಿದ್ದಾರೆ. 

* ‘ಶ್ರೀ ಲಕ್ಷ್ಮೀ ನಾರಾಯಣರ ಪ್ರಪಂಚನೇ ಬೇರೆ’ ಚಿತ್ರದ ಪಾತ್ರದ ಬಗ್ಗೆ ಹೇಳಿ?

ನಾನು ಇಲ್ಲಿಯವರೆಗೆ ಮಾಡಿದ ಪಾತ್ರಗಳಲ್ಲೇ ಹೆಚ್ಚು ಖುಷಿ ಕೊಟ್ಟ ಪಾತ್ರ. ಖಿನ್ನತೆಗೆ ಒಳಗಾದ ಪತ್ನಿಯನ್ನು ಆ್ಯಕ್ಟಿವ್‌ ಮಾಡಲಿಕ್ಕೆ ಪತಿ ವಿಭಿನ್ನವಾದ ಸರ್ಕಸ್‌ ಮಾಡುತ್ತಾನೆ. ಅದು ವಿಭಿನ್ನವಾಗಿ ಮೂಡಿ ಬಂದಿದೆ. 

* ಅಭಿನಯ ಕ್ಷೇತ್ರ ನಿಮ್ಮ ಆಯ್ಕೆಯೊ ಅನಿವಾರ್ಯವೊ?

ಎರಡೂ ಅಲ್ಲ! ನಾನು ಅಭಿನಯಿಸಬೇಕು, ಆ ಮೂಲಕ ಗುರುತಿಸಿಕೊಳ್ಳಬೇಕು ಎನ್ನುವ ಯಾವ ಆಸೆಯೂ ಇರಲಿಲ್ಲ. ಬದುಕು ನಡೆಸಿಕೊಂಡಂತೆ ನಡೆದುಕೊಂಡು ಬಂದವನು. ಸಿಕ್ಕ ಅವಕಾಶ ಬಳಸಿಕೊಂಡಿದ್ದೇನೆ ಎನ್ನುವ ತೃಪ್ತಿ ಇದೆ.      

*  ಧಾರಾವಾಹಿಗಳಲ್ಲಿ ಅಷ್ಟು ಆಳಕ್ಕೆ ಇಳಿದು ಹೇಗೆ ಅಭಿನಯಿಸುತ್ತೀರಾ?

ನಿರ್ದೇಶಕರೇ ನಮ್ಮ ಸೂತ್ರಧಾರಿಗಳು. ಅವರ ಕೈಯಲ್ಲಿ ನಾವು ಗೊಂಬೆಗಳಾಗುತ್ತೀವಿ. ಒಬ್ಬ ನಟನನ್ನು ಎಷ್ಟು ಮತ್ತು ಹೇಗೆ ಬಳಸಿಕೊಳ್ಳಬೇಕು ಎನ್ನುವದಕ್ಕೆ ಆ (ನಟಿಸಿದ) ಧಾರಾವಾಹಿಗಳ ನಿರ್ದೇಶಕರೇ ನಿದರ್ಶನ. ಅವರು ನಟನೊಳಗಿನ ಕಲಾವಿದನನ್ನು ಬಡಿದೆಬ್ಬಿಸುತ್ತಾರೆ, ಚಿವುಟುತ್ತಾರೆ, ಕಚಗಳಿ ನೀಡುತ್ತಾರೆ. 

* ಧಾರಾವಾಹಿಗಳಲ್ಲಿ ನೀವು ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು, ಇದರ ಬಗ್ಗೆ ವಿವರಿಸಿ?

ಪ್ರತಿ ಪಾತ್ರಕ್ಕೂ ತನ್ನದೇ ಆದ ಮಹತ್ವವಿದೆ. ಪಾತ್ರ ಎಂದರೆ ನನ್ನ ಪ್ರಕಾರ ಮತ್ತೊಬ್ಬ ವ್ಯಕ್ತಿಯ ನಕಲು! ನನಗೆ ಒಂದು ಪಾತ್ರ ಸಿಕ್ಕರೆ ಮೊದಲು ಆ ಪಾತ್ರಕ್ಕೆ ಹೊಂದುವವರು ನನ್ನ ಸುತ್ತಮುತ್ತ ಯಾರಾದರೂ ಇದ್ದಾರಾ ಎಂದು ನೋಡುತ್ತೀನಿ ಅವರನ್ನು ಆ ಪಾತ್ರಕ್ಕೆ ಹೊಂದಿಸಿಕೊಂಡು ನಟಿಸುತ್ತೀನಿ. ಎಲ್ಲಾ ಪಾತ್ರಗಳಂತೆ ತಂದೆ ಪಾತ್ರವನ್ನೂ ನಿಭಾಯಿಸಿದ್ದೇನೆ. ನಾನೂ ತಂದೆಯಾಗಿರುವುದರಿಂದ ಅದು ಇನ್ನಷ್ಟು ಚೆನ್ನಾಗಿ ಮೂಡಿ ಬಂದಿದೆ ಅಷ್ಟೇ.     

* ಇಲ್ಲಿಗೆ ಬರುವ ಮುನ್ನ?

ಅಭಿನಯ ಕ್ಷೇತಕ್ಕೆ ಬರುವುದಕ್ಕಿಂತ ಮುನ್ನ ಶಿವಮೊಗ್ಗದಲ್ಲಿ ಪ್ರಿಂಟಿಂಗ್‌ ಪ್ರೆಸ್‌ ನಡೆಸಿಕೊಂಡಿದ್ದೆ. ನಾಟಕ ಮತ್ತು ಧಾರಾವಾಹಿಗಳಲ್ಲಿ ಹೊಟ್ಟೆ ತುಂಬಿಸಿಕೊಳ್ಳ‌ಬಹುದು ಎನ್ನುವುದು ಖಚಿತವಾದ ಮೇಲೆ ಪ್ರಿಂಟಿಂಗ್‌ ಪ್ರೆಸ್‌ ಮುಚ್ಚಿ, ಕಾಯಂ ಆಗಿ ಬೆಂಗಳೂರಿಗೆ ಬಂದು ನೆಲೆಸಿದೆ.     

* ಅನುಭವಿ ನಟರು ಸ್ಕೋಪ್‌ ಇಲ್ಲದ ಪಾತ್ರಗಳನ್ನು ಮಾಡುತ್ತಾರಲ್ಲ?

ನನಗೂ ಆ ಅನುಭವವಾಗಿದೆ. ಸಿನಿಮಾ ನಿರ್ದೇಶಕರ ದೃಷ್ಟಿಯಿಂದ ನೋಡಿದಾಗ, ಸಣ್ಣ ಪಾತ್ರಕ್ಕೂ ಒಳ್ಳೆಯ ಕಲಾವಿದರಿಂದ ಮಾಡಿಸಿದ್ದೇವೆ ಎಂದು ಹೇಳಬಹುದು!

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !