ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರ ಫ್ಯಾಷನ್‌ಗೆ ‘ಮಿಲಾನ್‌’ ವ್ಯಾಖ್ಯೆ

Last Updated 11 ಮಾರ್ಚ್ 2019, 19:48 IST
ಅಕ್ಷರ ಗಾತ್ರ

ಆ ಜನನಿಬಿಡ ರಸ್ತೆಯಲ್ಲಿ ಅವಳ ಹಿಂದೆ ಅವನಿದ್ದ. ಅವಳ ಶಾರ್ಟ್ಸ್‌ ಮತ್ತು ಟಾಪ್‌ನ್ನು ಕಾಪಿ ಪೇಸ್ಟ್‌ ಮಾಡಿದಂತಿತ್ತು ಅವನು ಧರಿಸಿದ್ದ ತ್ರೀ ಫೋರ್ತ್ ಬರ್ಮುಡಾ ಮತ್ತು ಅಂಗಿ.

ಆ ರ‍್ಯಾಂ‍ಪ್‌ನಲ್ಲಿ ಒಬ್ಬರಾದ ಮೇಲೊಬ್ಬರು ಕಟ್ಟುಮಸ್ತು ಯುವಕರು ಬಂದರು. ಅವರ ಉಡುಪುಗಳು ಹೆಣ್ಣು ಮಕ್ಕಳ ವಾರ್ಡ್‌ರೋಬ್‌ನಿಂದ ಆರಿಸಿಕೊಂಡಂತಿತ್ತು. ಕಾರಣ ಗಾಢ ಬಣ್ಣ ಮತ್ತು ಹೂ–ಬಳ್ಳಿಯ ಢಾಳ ವಿನ್ಯಾಸಗಳು. ವಸ್ತ್ರವಿನ್ಯಾಸ ಮತ್ತು ಸ್ಟೈಲಿಸ್ಟ್‌ ಬ್ರ್ಯಾಂಡ್‌ಗಳು 2019ರ ಅಗ್ರ ಟ್ರೆಂಡ್‌ ಎಂದು ಪರಿಚಯಿಸಿದ ವಿನ್ಯಾಸಗಳಿವು. ಈ ದೃಶ್ಯಗಳು ಕಂಡುಬಂದಿದ್ದು ಮಿಲಾನ್‌ನಲ್ಲಿ ಇತ್ತೀಚೆಗೆ ನಡೆದ ಫ್ಯಾಷನ್‌ ಸಪ್ತಾಹದಲ್ಲಿ.

ಫ್ಯಾಷನ್‌ ಜಗತ್ತಿನ ವಾರ್ಷಿಕ ಫ್ಯಾಷನ್‌ ಶೋಗಳಿಗೆ ಚಾಲನೆ ಸಿಗುವುದೇ ಲಂಡನ್‌, ಮಿಲಾನ್‌ ಮತ್ತು ಪ್ಯಾರಿಸ್‌ನಲ್ಲಿ ನಡೆಯುವ ಸಪ್ತಾಹಗಳ ಮೂಲಕ. ಫೆಬ್ರುವರಿ ಎರಡನೇ ವಾರದಿಂದ ಮಾರ್ಚ್‌ ಮೊದಲ ವಾರದವರೆಗೆ ತಲಾ ಒಂದು ವಾರದಂತೆ ಮೂರೂ ಕಡೆ ಸಪ್ತಾಹಗಳು ನಡೆದಿವೆ. ಜಾಗತಿಕ ಫ್ಯಾಷನ್‌ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸಪ್ತಾಹಗಳಿವು.

ಫ್ಯಾಷನ್‌, ವಸ್ತ್ರವಿನ್ಯಾಸ, ಪ್ರಸಾಧನ, ಬ್ಯಾಗ್‌, ಪಾದರಕ್ಷೆಯಂತಹ ಆಕ್ಸೆಸರಿಗಳ ಪ್ರಮುಖ ಬ್ರ್ಯಾಂಡ್‌ಗಳು ಈ ಸಪ್ತಾಹಗಳಲ್ಲಿ ಕಾಯಂ ಸ್ಥಾನ ಪಡೆದಿರುತ್ತವೆ. ಹೊಸ ಬ್ರ್ಯಾಂಡ್‌ಗಳು, ವಿನ್ಯಾಸಕರು, ಸ್ಟೈಲಿಸ್ಟ್‌ಗಳು ಈ ವೇದಿಕೆ ಮೂಲಕ ಜಗತ್ತಿಗೆ ಪರಿಚಯಗೊಳ್ಳುವುದೂ ಇದೆ.

ಸಪ್ತಾಹಗಳಲ್ಲಿ ಪುರುಷರ ವಸ್ತ್ರ ವಿನ್ಯಾಸದಲ್ಲಿನ ಮಹತ್ತರ ಮಾರ್ಪಾಡು ಈ ಕ್ಷೇತ್ರದಲ್ಲಿ ಚರ್ಚೆ ಹುಟ್ಟುಹಾಕಿದೆ. ಕೆಲವು ವರ್ಷಗಳಿಂದೀಚೆ ಹೂವು, ಬಳ್ಳಿಗಳ ವಿನ್ಯಾಸ ಪುರುಷರ ವಸ್ತ್ರಲೋಕದಲ್ಲಿ ಪರಿಚಯಗೊಂಡಿದ್ದರೂ ಬಣ್ಣಗಳ ಮಟ್ಟಿಗೆ ಸಂಕುಚಿತವಾಗಿಯೇ ಇತ್ತು. ಆದರೆ ಈ ಬಾರಿ ಮಹಿಳೆಯರಿಗಷ್ಟೇ ಸೀಮಿತವಾಗಿದ್ದ ಬಣ್ಣಗಳು ಮತ್ತು ವಿನ್ಯಾಸಗಳಿಗೆ ಪುರುಷರ ವಸ್ತ್ರಲೋಕವನ್ನು ಮುಕ್ತವಾಗಿ ತೆರೆದುಕೊಟ್ಟಿರುವುದು ಗಮನಾರ್ಹ. ಕಣ್ಣಿಗೆ ರಾಚುವಂತಹ ಫ್ಲಾರಾಸೆಂಟ್‌ ಬಣ್ಣಗಳ ಓವರ್‌ಕೋಟ್‌, ಶರ್ಟ್‌ ಮತ್ತು ಟ್ರೌಶರ್‌ಗಳೂ ರ‍್ಯಾಂಪ್‌ಗಳಲ್ಲಿ ಮಿಂಚಿದವು.

ಲಂಡನ್‌ ಮತ್ತು ಮಿಲಾನ್‌ಫ್ಯಾಷನ್‌ ಸಪ್ತಾಹಗಳು ಪುರುಷರ ಫ್ಯಾಷನ್‌ ಮತ್ತು ವಸ್ತ್ರವಿನ್ಯಾಸ ಕ್ಷೇತ್ರದಲ್ಲಿ ಹೊಸ ಗಾಳಿ ಬೀಸಬೇಕಿದೆ ಎಂಬ ಸಂದೇಶವನ್ನು ರವಾನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT