ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರೇಗೌಡ ವಿರುದ್ಧ MeToo ಆರೋಪ

Last Updated 24 ಅಕ್ಟೋಬರ್ 2018, 5:49 IST
ಅಕ್ಷರ ಗಾತ್ರ

ಬೆಂಗಳೂರು: ‘ತಿಥಿ’ ಚಿತ್ರದ ಮೂಲಕ ಸಿನಿಪ್ರಿಯರ ಗಮನ ಸೆಳೆದವರು ಸಂಭಾಷಣೆಕಾರ ಈರೇಗೌಡ. ಬಳೆ ಮಾರುವವರ ಕಥೆ ಹೇಳುವ ‘ಬಳೆಕೆಂಪ’ ಚಿತ್ರದ ಮೂಲಕ ಈರೇಗೌಡ ಮತ್ತೊಮ್ಮೆ ಸದ್ದು ಮಾಡಿದ್ದರು. ‘ಬಳೆಕೆಂಪ’ಧರ್ಮಶಾಲಾ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನದ ಗೌರವ ಪಡೆದುಕೊಂಡಿತ್ತು. ‘ಜಿಯೋ ಮಾಮಿ ಮುಂಬೈ ಫಿಲಂ ಫೆಸ್ಟಿವಲ್‌’ನ ಇಂಡಿಯಾ ಗೋಲ್ಡ್‌ ವಿಭಾಗ ಮತ್ತು ಲಿಂಗ ಸಮಾನತೆಗೆ ಸಂಬಂಧಿಸಿದ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈವರೆಗೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ 12 ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

‘ಚಂದನವನ’ದಲ್ಲಿ ಭರವಸೆಯ ಸಂಭಾಷಣೆಕಾರ, ನಿರ್ದೇಶನಾಗುವ ಭರವಸೆ ಮೂಡಿಸಿದ್ದ ಈರೇಗೌಡ ವಿರುದ್ಧ ಇದೀಗ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ‘ಬಳೆಕೆಂಪ’ನಿಗೆ ಧರ್ಮಶಾಲಾದಿಂದ ಗೇಟ್‌ಪಾಸ್ ಸಿಕ್ಕಿದೆ. ‘ಜಿಯೋ ಮಾಮಿ’ ಚಿತ್ರೋತ್ಸವಕ್ಕೂ ದೂರು ಸಲ್ಲಿಸಲು ಮಹಿಳಾ ಪರ ಹೋರಾಟಗಾರರು ನಿರ್ಧರಿಸಿದ್ದಾರೆ. ಫೈರ್ (ಫಿಲ್ಮ್ ಇಂಡಸ್ಟ್ರಿ ಫಾರ್ ಈಕ್ವಾಲಿಟಿ ಅಂಡ್ ರೈಟ್ಸ್‌) ಸಂಸ್ಥೆಗೆ ಸಂತ್ರಸ್ಥೆಯ ಪರವಾಗಿ ದೂರು ನೀಡಲು ಕೆಲವರು ಮುಂದಾಗಿದ್ದಾರೆ.

ತನ್ನ ಮೇಲೆ ನಡೆದ ದೌರ್ಜನ್ಯವನ್ನುಫೇಸ್‌ಬುಕ್‌ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿಯನ್ನು ‘ಪ್ರಜಾವಾಣಿ’ ಸಂಪರ್ಕಿಸಿತು. ‘ನಾನು ಅನಾಮಿಕಳಾಗಿಯೇ ಉಳಿದುಕೊಳ್ಳಲು ಇಚ್ಛಿಸುತ್ತೇನೆ’ ಎಂದಯುವತಿ,‘ಆ ಕರಾಳ ದಿನಗಳಿಂದ ಆಚೆ ಬರಲು ನನಗೆ ಒಂದು ವರ್ಷ ಹಿಡಿಯಿತು. ಸದ್ಯ ನಾನು ಸಿನಿಮಾ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ಆದರೆ, ಕನ್ನಡ ಸಿನಿಮಾರಂಗದಲ್ಲಲ್ಲ. ನನ್ನ ಸ್ನೇಹಿತೆ ಏಕ್ತಾ ಎಂ. ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಕ್ಕಿಂತ ಹೆಚ್ಚಿನದೇನು ಹೇಳುವುದಕ್ಕಿಲ್ಲ. ಸದ್ಯಕ್ಕೆ ನನಗೆ ಕಾನೂನು ಹೋರಾಟ ನಡೆಸುವ ಸಾಮರ್ಥ್ಯವಾಗಲೀ, ಹಣವಾಗಲೀ ಇಲ್ಲ. ಹೀಗಾಗಿ ನ್ಯಾಯಾಲಯದ ಮೆಟ್ಟಿಲು ಏರಲಾರೆ’ ಎಂದು ಹೇಳಿದರು.

ಬೆಂಗಳೂರಿನ ‘ಮರ’ ಸಾಂಸ್ಕೃತಿಕ ಸಂಸ್ಥೆಯ ಕಾರ್ಯಕರ್ತೆಏಕ್ತಾ ಎಂ. ಅವರ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟವಾಗಿರುವ ಅನಾಮಿಕ ಹುಡುಗಿಯ ‘ಸ್ಯಾಂಡಲ್‌ವುಡ್ #MeToo’ ಕಥನದ ಕನ್ನಡಾನುವಾದ ಇಲ್ಲಿದೆ.

***

ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿದ್ದಾಗ ನನಗೆ ಸಿನಿಮಾದಲ್ಲಿ ಆಸಕ್ತಿ ಇರುವುದು ಅರಿವಾಯಿತು. ಭಾರತದ ಸಮಕಾಲೀನ ಫಿಲಂ ಮೇಕರ್‌ಗಳ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದೆ. ಅದರಲ್ಲಿ ‘ತಿಥಿ’ ಕೂಡಾ ಸೇರಿತ್ತು. ಸಿನಿಮಾ ನೋಡಿದಾಗ ಖುಷಿಯಾಯಿತು. ನನಗೆ ಒಬ್ಬರು ಮಾರ್ಗದರ್ಶಕರು ಬೇಕಿತ್ತು. ‘ತಿಥಿ’ಗೆ ಚಿತ್ರಕತೆ ಬರೆದ ಈರೇಗೌಡ ಅವರನ್ನು ಸಂಪರ್ಕಿಸಿದೆ. ನನಗೆ ತಮ್ಮ ಮೊಬೈಲ್ ನಂಬರ್ ಕೊಟ್ಟ ಈರೇಗೌಡ, ಬೆಂಗಳೂರಿಗೆ ಬಂದಾಗ ಸಂಪರ್ಕಿಸುವಂತೆ ಸೂಚಿಸಿದರು.

ಓದು ಮುಗಿದ ನಂತರ ಎಲ್ಲಿಗೆ ಹೋಗಬೇಕು ಎಂದು ಯೋಚಿಸುತ್ತಿದ್ದೆ. ನನ್ನೆದುರು ಬೆಂಗಳೂರು ಮತ್ತು ಮುಂಬೈ ಎನ್ನುವ ಎರಡು ಆಯ್ಕೆಗಳಿದ್ದವು. ಮುಂಬೈನಲ್ಲಿ ಬಾಡಿಗೆ ದುಬಾರಿ ಎನಿಸಿದ್ದರಿಂದ ಬೆಂಗಳೂರಿಗೆ ಬಂದೆ. ಗೆಳತಿಯೊಬ್ಬಳು ವಾಸ್ತವ್ಯಕ್ಕೆ ಸಹಕರಿಸಿದಳು. ಬೆಂಗಳೂರಿನಲ್ಲಿ ಸ್ವಲ್ಪ ಸೆಟ್ಲ್ ಆದೆ ಎಂದು ಅನ್ನಿಸಿದ ನಂತರ ಈರೇಗೌಡನನ್ನು ಸಂಪರ್ಕಿಸಿದೆ. ಅವನು ನಾನು ಹೊರಗಿದ್ದೇನೆ ಎಂದು ಹೇಳಿದ. ನಾವು ಸ್ಯಾಂಕಿ ಟ್ಯಾಂಕ್ ಹತ್ತಿರ ಭೇಟಿಯಾದೆವು. ಅದು ಖುಷಿಕೊಟ್ಟ ಸಂಗತಿ. ‘ತಿಥಿ’ ಚಿತ್ರದ ಪಾತ್ರಗಳು ತನ್ನೊಳಗೆ ಹೇಗೆಜೀವತಳೆದವು ಎಂಬ ಬಗ್ಗೆ ಅವನು ಮಾತನಾಡಿದ. ಪಾತ್ರಗಳೊಂದಿಗೆ ತಾನು ಬೆರೆತುಹೋಗಿ, ವೈವಿಧ್ಯಮಯ ವ್ಯಕ್ತಿತ್ವಗಳು ಪರಸ್ಪರ ಮಾತನಾಡುವಂತೆ ಮಾಡುವುದು ತನಗೆ ಎಷ್ಟು ಖುಷಿ ಕೊಡುತ್ತೆ ಎಂದೆಲ್ಲಾ ಈರೇಗೌಡ ಹೇಳುತ್ತಿದ್ದ.

ಈರೇಗೌಡನ ಒಡನಾಟ ನನಗೂ ಖುಷಿಕೊಟ್ಟಿತು. ಸಂಭಾಷಣೆ ಬರೆಯುವ ಆಸೆ ಹೊತ್ತಿದ್ದ ನನಗೆ ಈ ವ್ಯಕ್ತಿಯ ಮೂಲಕ ದಾರಿ ಕಾಣಿಸಿತು ಎಂದು ಸಂತಸಪಟ್ಟೆ. ಸ್ಯಾಂಕಿ ಟ್ಯಾಂಕ್ ಸಮೀಪವೇ ಮತ್ತೆ ಭೇಟಿಯಾದೆವು. ಈರೇಗೌಡ ತನ್ನ ಬಾಲ್ಯದ ಕಷ್ಟಗಳ ಬಗ್ಗೆ, ಹಳ್ಳಿಯ ಕಥೆಗಳ ಬಗ್ಗೆ ಹೇಳಿಕೊಂಡ. ನನಗೆ ಅವನು ಹೊಂದುತ್ತಾನೆ ಎನಿಸುತ್ತಿತ್ತು. ಕೆಲ ಸಮಯದ ನಂತರ ನನ್ನ ಬಗ್ಗೆ ದೈಹಿಕ ಆಕರ್ಷಣೆ ಹೊಂದಿರುವುದಾಗಿ ಈರೇಗೌಡ ಹೇಳಿಕೊಂಡ. ನಾನು ಏನೇನೋ ನೆಪಗಳನ್ನು ಹೇಳಿ ತಪ್ಪಿಸಿಕೊಂಡೆ.

ನಾನು ಮತ್ತೆ ಅವನನ್ನು ಭೇಟಿಯಾಗಬೇಕೆ ಎಂಬ ಬಗ್ಗೆ ನನ್ನಲ್ಲಿ ಗೊಂದಲವಿತ್ತು. ನನ್ನ ಕೆಲ ಗೆಳತಿಯರೊಂದಿಗೆ ಮಾತನಾಡಿದೆ. ನನ್ನೊಂದಿಗೂ ಮಾತನಾಡಿಕೊಂಡೆ. ನನಗೆ ಯಾರೋ ಒಬ್ಬರು ಆಕರ್ಷಿತರಾಗಿದ್ದಾರೆಎನ್ನುವ ಕಾರಣಕ್ಕೆ ಅವರಿಂದ ದೂರ ಸರಿಯುವುದು ಸರಿ ಎಂದು ನನಗೆ ಅನ್ನಿಸಲಿಲ್ಲ. ನಾನು ಅವನೊಂದಿಗೆ ಈ ವಿಷಯವನ್ನು ಮಾತನಾಡಲು ನಿರ್ಧರಿಸಿದೆ.

ನಾವು ಮತ್ತೊಮ್ಮೆ ಭೇಟಿಯಾದೆವು. ನನಗೆ ಒಬ್ಬ ಮಾರ್ಗದರ್ಶಿ ಬೇಕು. ನಾನು ಕಲಿಸುವವರನ್ನು ಹುಡುಕುತ್ತಿದ್ದೇನೆ. ಬದುಕಿನ ಈ ಹಂತದಲ್ಲಿ ರೊಮ್ಯಾಂಟಿಕ್ ಸಾಹಸಗಳಿಗೆ ಮುಂದಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.ನನ್ನ ಮಾತನ್ನು ಅವನು ಸರಿಯಾಗಿ ಅರ್ಥಮಾಡಿಕೊಂಡ ಎನಿಸಿತು. ಕೆಲ ದಿನಗಳ ನಂತರ ‘ಬಳೆಕೆಂಪದ ಸೌಂಡ್ ರೆಕಾರ್ಡಿಂಗ್ ಕೆಲಸಕ್ಕಾಗಿ ಬ್ಯಾಡರಹಳ್ಳಿಗೆ ಹೋಗುತ್ತಿದ್ದೇನೆ. ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತೇನೆ. ಆಸಕ್ತಿಯಿದ್ದರೆ ನೀನೂ ಬರಬಹುದು’ ಎಂದು ಹೇಳಿದ. ಹಳ್ಳಿಗೆ ಹೋಗಿ ಕೆಲಸ ಕಲಿಯಲು ನನಗೆ ಇಷ್ಟವೇನೋ ಇತ್ತು. ಆದರೆ ಅಷ್ಟೇ ಭಯವೂ ಆಗುತ್ತಿತ್ತು. ಅವನನ್ನು ನಂಬುವುದೋ, ಬೇಡವೋ ಎಂದು ನನಗೆ ಗೊತ್ತಿರಲಿಲ್ಲ.

ಅವನು ಹಳ್ಳಿಗೆ ಹೋಗುವ ದಿನ ಯಾವುದೋ ನೆಪ ಹೇಳಿ ತಪ್ಪಿಸಿಕೊಂಡೆ. ಮಾರನೇ ದಿನ ರೈಲಿನಲ್ಲಿ ಹಳ್ಳಿಗೆ ಹೋಗಿ, ವಾತಾವರಣ ಹೇಗಿದೆ ಪರಿಶೀಲಿಸಿದೆ. ಒಂದು ವೇಳೆ ನನಗೆ ಇಷ್ಟವಾಗದಿದ್ದರೆ ಅದೇ ದಿನ ರೈಲು ಹಿಡಿದು ಬೆಂಗಳೂರಿಗೆ ಹೋಗಬಹುದು ಎನ್ನುವುದು ನನ್ನ ಲೆಕ್ಕಾಚಾರವಾಗಿತ್ತು.ನಾನು ಅವನ ಅತ್ತೆ ಮತ್ತು ಸೌಂಡ್ ರೆಕಾರ್ಡಿಂಗ್ ತಂತ್ರಜ್ಞನನ್ನು ಭೇಟಿಯಾದೆ. ಏನೂ ತೊಂದರೆಯಿಲ್ಲ ಅನ್ನಿಸಿತು. ‘ಬಳೆಕೆಂಪ’ ನೋಡಿದೆವು. ನನಗೆ ಇಷ್ಟವಾಯಿತು.

ಸಿನಿಮಾದ ಎಡಿಟಿಂಗ್ ಕೆಲಸ ಮುಗಿಸಲು ಗೋವಾಕ್ಕೆ ಹೋಗುತ್ತೇನೆ. ನಿನಗೆ ಆಸಕ್ತಿಯಿದ್ದರೆ ಬರಬಹುದು ಎಂದು ಈರೇಗೌಡ ಹೇಳಿದ. ಹಳ್ಳಿಯಲ್ಲಿ ನಾನು, ಈರೇಗೌಡ ಮತ್ತು ರೆಕಾರ್ಡಿಂಗ್ ತಂತ್ರಜ್ಞ ದೀರ್ಘಕಾಲ ಮಾತುಕತೆ ನಡೆಸುತ್ತಿದ್ದೆವು. ಹಳ್ಳಿಯಲ್ಲಿ ಸಾಕಷ್ಟು ತಿರುಗಾಡಿದೆವು. ಟೆಡ್‌ ಟಾಕ್ಸ್‌ಗಾಗಿ ಒಂದು ಅಪ್ಲಿಕೇಶನ್‌ ಮೇಲೆ ಕೆಲಸ ಮಾಡುತ್ತಿದ್ದ. ‘ಸಹಾಯ ಮಾಡಲು ಸಾಧ್ಯವೇ’ ಎಂದು ನನ್ನನ್ನು ಕೇಳಿದ್ದ.

ನಾವು ಬ್ಯಾಡರಹಳ್ಳಿಯಿಂದ ಹೊರಟ ಮಾರನೇ ದಿನವೇ ಆಪ್ಲಿಕೇಶನ್‌ ಸಬ್‌ಮಿಟ್ ಮಾಡಲು ಕೊನೆಯ ದಿನವಾಗಿತ್ತು. ಇನ್ನೂ ಒಂದಷ್ಟು ಕೆಲಸಗಳು ಬಾಕಿ ಉಳಿದಿದ್ದವು.ಗೆಳೆಯನ ಮನೆಗೆ ಹೋಗಿ ಅಲ್ಲಿ ಕೆಲಸ ಮುಗಿಸಬಹುದು ಎಂದು ಈರೇಗೌಡ ಹೇಳಿದ. ಗೆಳೆಯ ಮತ್ತು ಅವನ ಸಂಗಾತಿ ಅಲ್ಲಿರುತ್ತಾರೆ. ನಾವು ಅವರೊಡನೆ ಊಟ ಮಾಡಬಹುದು ಎಂದೂ ಹೇಳಿದ.

ಅಷ್ಟೊತ್ತಿಗೆ ನಾನು ಅವನನ್ನು ನಂಬಲು ಆರಂಭಿಸಿದ್ದೆ. ನಾವು ಅಲ್ಲಿಗೆ ಹೋದೆವು. ಅಲ್ಲಿ ಅವನ ಗೆಳೆಯನ ಗರ್ಲ್‌ಫ್ರೆಂಡ್ ಇರಲಿಲ್ಲ. ನಾನು ಒಂದು ಲೋಟ ಕಾಫಿ ಮಾಡಿಕೊಂಡು ಕುಡಿದೆ. ಒಮ್ಮೊಮ್ಮೆ ಕಾಫಿ ನನ್ನಲ್ಲಿ ಉದ್ವಿಗ್ನತೆ ತಂದೊಡ್ಡುತ್ತದೆ. ಅವತ್ತೂ ಅದೇಥರ ಆಯಿತು. ಈರೇಗೌಡ ಮತ್ತು ಅವನ ಗೆಳೆಯ ಟೇಬಲ್ ಟೆನ್ನಿಸ್ ಆಡಲು ಹೋಗಿದ್ದರು. ನನಗೆ ಆಸಕ್ತಿ ಇರಲಿಲ್ಲ. ಸುಮ್ಮನೆ ಮಲಗಿಬಿಟ್ಟೆ.

ನನ್ನ ಪಕ್ಕ ಬಂದು ಮಲಗಿದ ಈರೇಗೌಡ ಮುತ್ತುಕೊಡಲೆಂದು ಮುಂದೆ ಬಂದ. ನನಗೆ ಆಸಕ್ತಿಯಿಲ್ಲ ಎಂದು ದೂರ ತಳ್ಳಿದೆ. ಆದರೆ ಅವನು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಸಾಕಷ್ಟು ಉದ್ದವಿದ್ದ ಈರೇಗೌಡ ನನಗಿಂತಲೂ ಬಲಶಾಲಿಯಾಗಿದ್ದ. ಇದೊಂದು ರಾತ್ರಿ ಅವನಿಂದ ತಪ್ಪಿಸಿಕೊಂಡರೆ ಸಾಕು ಎನಿಸುತ್ತಿತ್ತು. ನನಗೆ ವಿಪರೀತ ಭಯವಾಗುತ್ತಿತ್ತು. ನಾನು ಮುಟ್ಟಾಗಿದ್ದೇನೆ ಎಂದು ಹೇಳಿದೆ. ಅಷ್ಟು ಹೇಳಿದರೂ ಬಿಡದೆ ಹಲವು ರೀತಿ ಕಾಡಿದ. ನಾನು ಸತ್ತೇ ಹೋದೆ ಎನ್ನಿಸಿತ್ತು. ಒಂದು ಪದ ಉಚ್ಚರಿಸಲು ಅಥವಾ ಅಳಲು ಸಾಧ್ಯವಾಗಲಿಲ್ಲ.

ನಾನು ಉಳಿದುಕೊಂಡಿದ್ದ ಸ್ಥಳಕ್ಕೆ ಅವನೇ ನನ್ನನ್ನು ಡ್ರಾಪ್ ಮಾಡಿದ. ನಾನು ಚಲನೆಯಿಲ್ಲದೆ ನಿಂತಿದ್ದಾಗ, ‘ಏನಾಯಿತು ನಿನಗೆ? ನಗುತ್ತಿಲ್ಲ ಏಕೆ?’ ಎಂದು ಪ್ರಶ್ನಿಸಿದ. ನಾನು ಸುಮ್ಮನೆ ಜಾಗ ಖಾಲಿ ಮಾಡಿದೆ. ಅದೇ ದಿನ ನಾನು ಬೆಂಗಳೂರು ನಗರದ ಬೇರೊಂದು ಸ್ಥಳಕ್ಕೆ ವಾಸ್ತವ್ಯ ಬದಲಿಸುವವಳಿದ್ದೆ. ನನ್ನ ಗೆಳತಿ ಏನಾಯಿತು ಅಂತ ಕೇಳಿದಳು. ನಾನು ಸುಮ್ಮನೆ ಸುಸ್ತಾಗಿದೆ ಅಷ್ಟೇ ಎಂದು ಮಾತು ತೇಲಿಸಿದೆ. ನನ್ನ ಬ್ಯಾಗ್‌ಗಳನ್ನು ತೆಗೆದುಕೊಂಡು, ಊಬರ್ ಬುಕ್ ಮಾಡಿಕೊಂಡು ಜಾಗ ಖಾಲಿ ಮಾಡಿದೆ.

ಹೊಸ ರೂಮ್‌ಗೆ ತಲುಪಿದ ನಂತರ ಬ್ಯಾಗ್‌ಗಳನ್ನು ಒಂದೆಡೆ ಇರಿಸಿ, ಹಾಸಿಗೆ ಮೇಲೆ ಕುಳಿತುಕೊಂಡೆ. ಅಳು ಒತ್ತರಿಸಿಬಂತು. ಅಲ್ಲಿಯವರೆಗೆ ನಾನು ಮಂಕಾಗಿಹೋಗಿದ್ದೆ. ಒಂದೇ ಸಮನೆ ಜೋರಾಗಿ ಅಳುತ್ತಲೇ ಇದ್ದೆ. ಮನಸ್ಸು ಬೇರೆಡೆಗೆ ಹರಿಯಲಿ ಎಂದು ಬಟ್ಟೆ ಒಗೆಯಲು ಶುರು ಮಾಡಿದೆ. ನನಗೆ ವಾಪಸ್ ಮನೆಗೆ ಹೋಗಲು ಇಷ್ಟವಿರಲಿಲ್ಲ. ನನ್ನ ಕನಸುಗಳನ್ನು ಕೊಂದುಕೊಳ್ಳಲು ನಾನು ತಯಾರಿರಲಿಲ್ಲ. ನಾನು ಬೇರೊಂದು ಕೆಲಸ ನೋಡಿಕೊಳ್ಳಲು ಮುಂದಾಗುತ್ತೇನೆ. ಈ ಕಹಿ ಘಟನೆಯಿಂದ ನನ್ನ ಬದುಕು ಮುರಿದುಹೋಗಲು ಬಿಡುವುದಿಲ್ಲ ಎಂದು ಧೈರ್ಯ ತಂದುಕೊಂಡೆ. ಶಾಲಾ ವಿದ್ಯಾರ್ಥಿಗಳಿಗೆ ಪಾಠ ಹೇಳಲು ಶುರುಮಾಡಿದೆ.

ಈ ನಡುವೆ ನಾನು ಸಿನಿಮಾಗಳಿಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಲು ಆರಂಭಿಸಿದೆ. ಈರೇಗೌಡ ನಡುಗುತ್ತಾ ನನ್ನನ್ನು ಸಂಪರ್ಕಿಸಲು ಶುರುಮಾಡಿದೆ. ‘ನಾನು ಕೆಲ ಸಮಯ ಇವನ ಕಾಲ್‌ಗಳನ್ನು ಸ್ವೀಕರಿಸದಿದ್ದರೆ ಅರ್ಥವಾಗುತ್ತೆ’ ಅಂದುಕೊಂಡೆ. ಆದರೆ ಅವನು ನನ್ನ ಕುಟುಂಬವನ್ನು ಸಂಪರ್ಕಿಸಿದ. ನಾನು ಅವನ ಕಾಲ್ ಸ್ವೀಕರಿಸಿದೆ. ಅವನು ಒಂದೇಸಮನೆ ಕ್ಷಮೆ ಕೋರಿದ. ಗೋವಾಕ್ಕೆ ಬರ್ತೀಯಾ ಅಂತೆಲ್ಲಾ ಕೇಳಿದ. ‘ನಿನ್ನ ಜೊತೆಗೆ ಯಾವುದೇ ಕೆಲಸ ಮಾಡಲು ಇಷ್ಟವಿಲ್ಲ. ನನ್ನನ್ನಾಗಲೀ, ನನ್ನ ಕುಟುಂಬವನ್ನಾಗಲೀ ಮತ್ತೆ ಸಂಪರ್ಕಿಸಬೇಡ’ ಎಂದು ಖಡಾಖಂಡಿತವಾಗಿ ಹೇಳಿದೆ. ಅವನು ಕ್ಷಮೆ ಕೇಳುತ್ತಲೇ ಇದ್ದ. ನನಗೆ ನಂಬಿಕೆ ಬರಲಿಲ್ಲ.

ದೇಶದ ಅತ್ಯುತ್ತಮ ಚಿತ್ರ ನಿರ್ಮಾಣ ಸಂಸ್ಥೆ ಅವನ ಚಿತ್ರವನ್ನು ನಿರ್ಮಿಸಿದೆ. ಇವನೆದುರು ನಾನು ಏನೂ ಅಲ್ಲ. ‘ಘಟನೆ ಬಗ್ಗೆ ಎಲ್ಲಾದರೂ ನಾನು ಮಾತನಾಡಬಹುದು ಅಂತ ನಿನಗೆ ಹೆದರಿಕೆನಾ?’ ಅಂತ ಪ್ರಶ್ನಿಸಿದೆ. ಅವನ ಧ್ವನಿ ತಕ್ಷಣ ಬದಲಾಯಿತು. ನೀನು ಹೇಳಿದರೂ ಯಾರೂ ನಂಬಲ್ಲ ಅಂತೆಲ್ಲಾ ಜೋರಾಗಿ ಹೇಳಿದ. ನನ್ನ ಮಾತು ಅವನ ಮರ್ಮಕ್ಕೆ ತಾಗಿದ್ದು ನನಗೆ ಅರ್ಥವಾಗಿತ್ತು. ನಾನು ಕಾಲ್ ಮಾಡಿದೆ. ಎಲ್ಲ ಕಡೆಗಳಲ್ಲಿ ಅವನನ್ನು ಬ್ಲಾಕ್ ಮಾಡಿದೆ.

ಈ ಘಟನೆ ನಡೆದ ವಾರದ ನಂತರ ಹಾಲಿವುಡ್‌ ಸಿನಿಮಾ ನಿರ್ಮಾಪಕ ಹಾರ್ವೆ ವೆನ್ನಿಸ್ಟೀನ್‌ ಪ್ರಕರಣ ಹೊರಬಿದ್ದಿತು. #MeToo ಅಲೆಯೊಂದು ಆಗ ಶುರುವಾಗಿತ್ತು. ಲೈಂಗಿಕ ಕಿರುಕುಳ ಅನುಭವಿಸಿದವರು ತಮ್ಮ ಕಥೆಗಳನ್ನು ಆ ಮೂಲಕ ಹೇಳಿಕೊಳ್ಳುತ್ತಿದ್ದರು. ನಾನು ಕೆಲಸ ಮಾಡುತ್ತಿದ್ದ ಕಡೆ ಕೆಲವು ಸಮಾನ ಮನಸ್ಕರ ಗುಂಪು ಈ ಕುರಿತು ಮಾತನಾಡುವ ಸಭೆಯೊಂದನ್ನು ಏರ್ಪಡಿಸಿದ್ದರು.

ಒಬ್ಬೊಬ್ಬರು ತಾವು ಅನುಭವಿಸಿದ ಕಥೆಗಳನ್ನು ಹೇಳಿಕೊಳ್ಳುತ್ತಿದ್ದರು. ನನ್ನ ಸರದಿಯೂ ಬಂದಿತು. ವಿಷಯ ಹಂಚಿಕೊಳ್ಳಬೇಕೊ ಬೇಡವೊ ಎಂದು ಸ್ವಲ್ಪ ಆತಂಕದಲ್ಲಿದ್ದೆ. ನನ್ನ ಬದುಕಿನಲ್ಲಿ ಘಟನೆಯ ಕೆಲ ಭಾಗವನ್ನು ಹಂಚಿಕೊಂಡೆ.

ಆತನ ಹೆಸರನ್ನು ಬಹಿರಂಗಗೊಳಿಸಿರಲಿಲ್ಲ. ಆದರೆ, ಕೊನೆಯಲ್ಲಿ ನನ್ನ ಮನಸ್ಸು ಬದಲಿಸಿ ಆತನ ಹೆಸರನ್ನು ಹೇಳಿದೆ. ನನ್ನ ಎದೆಯಲ್ಲಿ ಭಯ ಆವರಿಸಿತ್ತು. ಆಗ ನನ್ನ ಸ್ನೇಹಿತೆ ಈ ಬಗ್ಗೆ ಬರಿ ಎಂದು ಸೂಚಿಸಿದರು. ಆದರೆ, ಆಗ ನನಗೆ ಏನು ಮಾಡಬೇಕು ಎಂಬುದು ತಿಳಿದಿರಲಿಲ್ಲ. ನನ್ನಲ್ಲಿ ಅಸುರಕ್ಷತೆ ಕಾಡುತ್ತಿತ್ತು. ಆ ಬಗ್ಗೆ ಪ್ರಚಾರ ಆಗುವುದು ನನಗೆ ಬೇಕಿರಲಿಲ್ಲ. ನನ್ನ ಭಾವನೆಗಳನ್ನು ಹದಗೊಳಿಸಲು ನನಗೆ ಕೆಲ ತಿಂಗಳುಗಳು ಬೇಕಾಯಿತು.

ಈರೇಗೌಡ ಸಿನಿಮಾಗಳಿಗೆ ಸಂಭಾಷಣೆ, ಚಿತ್ರಕಥೆ ಬರೆಯುವ ವ್ಯಕ್ತಿ. ಬೇರೊಬ್ಬರ ಬಾಯಿಯಲ್ಲಿ ತನಗೆ ಬೇಕಾದ ಸಂಭಾಷೆಗಳನ್ನು ಹೇಳಿಸುವಷ್ಟು ಚಾಣಾಕ್ಷ. ನನ್ನನ್ನು ಅಸಹಾಯಕ ಸ್ಥಿತಿಗೆ ತಳ್ಳಿದಾಗ ನಾನು ಏನು ಮಾಡಬಹುದು ಎಂಬುದನ್ನು ಅವನು ಅಂದಾಜಿಸಿದ್ದ. ಅಂಥ ಅವಕಾಶವನ್ನು ಬಳಸಿಕೊಂಡ. ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ತನ್ನೆಲ್ಲಾ ಶಕ್ತಿಯನ್ನು ಬಳಸಿಕೊಂಡ. ಅವನ ಸಿನಿಮಾಲಿಂಗ ಸಮಾನತೆ ಪ್ರಶಸ್ತಿಗೆ ಆಯ್ಕೆಯಾದಾಗ, ಅವನು ಆರಾಮಾಗಿ ಕುಳಿತು ಗಹಗಹಿಸಿ ನಕ್ಕಂತೆ ನನಗೆ ಭಾಸವಾಯಿತು. ಇವನ ಮೇಲೆ ಇಂಥ ಇನ್ನೂ ಅದೆಷ್ಟು ಪ್ರಶಸ್ತಿಗಳ ಮಳೆ ಸುರಿಯುತ್ತದೆಯೋ ನನಗೆ ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT