ಶುಕ್ರವಾರ, ನವೆಂಬರ್ 27, 2020
20 °C

ಸಿನಿಮಾ ವಿಮರ್ಶೆ: ಕಾಡದ ಕಥೆ ಕಳಚದ ‘ಭ್ರಮೆ’!

ಕೆ.ಎಂ. ಸಂತೋಷ್‌ಕುಮಾರ್‌‌ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಭ್ರಮೆ (ನಮ್ಮ ಫ್ಲಿಕ್ಸ್‌ –ಕನ್ನಡ ಒಟಿಟಿಯಲ್ಲಿ ತೆರೆಕಂಡಿದೆ)

ನಿರ್ದೇಶನ: ಚರಣ್‌ ರಾಜ್ ಆರ್‌.

ನಿರ್ಮಾಣ: ಹನೀಶ್‌ ರಾಜ್‌ ಫಿಲಮ್ಸ್

ತಾರಾಗಣ: ನವೀನ್‌ ರಘು, ಅಂಜನಾ ಗೌಡ, ಇಶಾನಾ, ಪವನ್‌, ಮುತ್ತುರಾಜ್‌, ಭಾವನಾ

ಮಹೇಶ್‌ಗೆ (ಚಿತ್ರದ ನಾಯಕ ನವೀನ್‌ ರಘು) ಆಸ್ಪತ್ರೆಯಲ್ಲಿ ಮೇಲ್‌ ನರ್ಸ್ ಉದ್ಯೋಗ. ಈತನ ಸಹೋದ್ಯೋಗಿ ಮಹಿಳಾ ನರ್ಸ್‌ಗಳು ‘ಬ್ರದರ್’ ಎಂದು ಕರೆದರೆ ಸಿಕ್ಕಾಪಟ್ಟೆ ಸಿಟ್ಟು. ಅದರಲ್ಲೂ ಆತನನ್ನು ಎದುರುಗೊಳ್ಳುವ ಮಹಿಳೆಯರು, ಮಕ್ಕಳು ಅಷ್ಟೇ ಏಕೆ ವೃದ್ಧೆಯರೂ ‘ಬ್ರದರ್‌’ ಎಂದು ಕರೆದಾಗಲಂತೂ ಈತನಿಗೆ ಬದುಕಿನ ಮೇಲೆ ಬಲು ಬೇಸರ. ವಯಸ್ಸಿಗೆ ಬಂದ ಹೆಣ್ಮಕ್ಕಳೆಲ್ಲರೂ ‘ಬ್ರದರ್‌’ ಎನ್ನುತ್ತಿದ್ದರೆ, ಯಾರನ್ನು ಮದುವೆಯಾಗಲಿ, ವಂಶೋದ್ಧಾರ ಹೇಗೆ ಮಾಡಲಿ ಎನ್ನುವುದು ಆತನ ಚಿಂತೆ ಮತ್ತು ಚಿಂತನೆ. ಈ ಚಿಂತೆಯನ್ನು ಇನ್ನಷ್ಟು ಹೆಚ್ಚು ಮಾಡಲು ಆತನ ಬೆನ್ನಿಗಂಟಿಕೊಳ್ಳುತ್ತದೆ ದೆವ್ವದ ಭಯ. ಕಥೆಯ ಉದ್ದಕ್ಕೂ ಬೆನ್ನುಬಿಡದೆ ಕಾಡುವ ತರ್ಕವಿಲ್ಲದ ಮತ್ತು ಅರ್ಥವಿಲ್ಲದ ಈ ಚಿಂತೆಯು ಒಂದು ‘ಭ್ರಮೆ’ ಇರಬಹುದಾ ಎನ್ನುವ ಕುತೂಹಲದ ಮೇಲೆ ಕಥೆ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಚರಣ್‌ ರಾಜ್‌ ಆರ್‌. ಇದಕ್ಕೊಂದಿಷ್ಟು ಹಾರರ್‌ ಮತ್ತು ಕಾಮಿಡಿ ಅಂಶಗಳನ್ನು ಸೇರಿಸಿ ರಂಜನೀಯಗೊಳಿಸಲು ‘ಹರಸಾಹಸ’ ಪಟ್ಟಿದ್ದಾರೆ.

ಸುಮಾರು 1 ಗಂಟೆ 58 ನಿಮಿಷ ಅವಧಿಯ ಈ ಚಿತ್ರದಲ್ಲಿ ಒಂದು ಪರಿಪೂರ್ಣ ಸಿನಿಮಾ ನೋಡಿದ ಅನುಭೂತಿಯನ್ನು ಪ್ರೇಕ್ಷಕ ನಿರೀಕ್ಷಿಸಿದರೆ ಅದು ತಪ್ಪಾದೀತು. ಚಲನಚಿತ್ರ ಬಯಸುವ ‘ಚಲನೆಯ ವೇಗ ಮತ್ತು ಓಘ’ ಎರಡೂ ಇದರಲ್ಲಿ ಕಾಣಸಿಗುವುದಿಲ್ಲ. ಕಥೆ ಓಡುವುದಕ್ಕಿಂತ ತೆವಳುತ್ತಾ ಸಾಗಿದ ಅನುಭವವಾಗುತ್ತದೆ. ಒಂದಿಷ್ಟು ಹಾಸ್ಯ ಸನ್ನಿವೇಶಗಳು ನಗಿಸುವಂತಿದ್ದರೂ, ಅಲ್ಲಲ್ಲಿ ಬಲವಂತವಾಗಿ ತುರುಕಿರುವ ಕೆಲವು ಹಾಸ್ಯ ಸನ್ನಿವೇಶಗಳಂತೂ ಬಾಲಿಶವಾಗಿ ಕಾಣಿಸುತ್ತವೆ. ‘ಮಜಾ ಟಾಕೀಸ್‌’ ಖ್ಯಾತಿಯ ಪವನ್‌ ಇದ್ದರೂ ಅವರಿಂದ ನೈಜ ಹಾಸ್ಯದ ಹೊನಲು ಹೊಮ್ಮಿದೆ ಎನಿಸುವುದಿಲ್ಲ. ಕಥಾ ನಾಯಕ ತಾನು ಕೆಲಸ ಮಾಡುವ ಆಸ್ಪತ್ರೆ ಮತ್ತು ವಾಸ ಮಾಡುವ ಅಪಾರ್ಟ್‌ಮೆಂಟ್‌ ಹಾಗೂ ಪೊಲೀಸ್‌ ಠಾಣೆಯ ಕಾಂಪೌಂಡ್ ದಾಟದ ಕಥೆಯು ಸೀಮಿತ ಚೌಕಟ್ಟಿನೊಳಗೆ ಬಂಧಿಯಾಗಿದೆ. ಪಾತ್ರಗಳ ದೇಹಭಾಷೆಗೆ ಸಂಭಾಷಣೆಯು ಲಯಬದ್ಧವಾಗಿ ಹೊಂದಿಕೆಯಾಗದ ಕೊರತೆಯೂ ಎದ್ದು ಕಾಣಿಸುತ್ತದೆ. ಮುಖ್ಯ ಪಾತ್ರಗಳ ಸಂಭಾಷಣೆಗೆ ದ.ಕ ಭಾಷೆಯನ್ನು ಆರಿಸಿಕೊಂಡಿದ್ದರೂ ಅದು ಮಾತ್ರ ಪ್ರೇಕ್ಷಕನ ಮನಸಿನೊಳಗೆ ಇಳಿಯುವುದಿಲ್ಲ. ಇಬ್ಬರು ಚೆಂದದ ನಾಯಕಿಯರಿದ್ದರೂ ಅವರ ಪಾತ್ರಗಳು ಹಾಗೆ ಬಂದು ಹೀಗೆ ಹೋಗುವ ದೃಶ್ಯಗಳಿಗಷ್ಟೇ ಸೀಮಿತಗೊಂಡಿವೆ. ಇದೂ ಸಹ ಚಿತ್ರದ ದೌರ್ಭಾಗ್ಯ. ಚರಣ್‌ ರಾಜ್‌ ಇನ್ನೊಂದಿಷ್ಟು ಮಾಗಿದರೆ, ಅವರಿಗೆ ನಿರ್ದೇಶನದ ಸೂತ್ರ ಸಿದ್ಧಿಸೀತು. ಹಾಗೆಯೇ ನಟ ನವೀನ್‌ ರಘು ಕೂಡ ಪ್ರಯತ್ನಿಸಿದರಷ್ಟೇ ಅಭಿನಯದ ಪಟ್ಟು ಕರಗತ ಮಾಡಿಕೊಳ್ಳಬಹುದು.

ವಿ.ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯ ಮತ್ತು ಸಂಗೀತವಿರುವ ಎರಡು ಹಾಡುಗಳು ಕೇಳುವಂತಿವೆ. ಸಿನಿಟೆಕ್‌ ಸೂರಿ ಅವರ ಛಾಯಾಗ್ರಹಣ ಸನ್ನಿವೇಶಕ್ಕೆ ಸಹ್ಯವಾಗಿದೆ. ಸಂಕಲನದಲ್ಲಿ ಇನ್ನೊಂದಿಷ್ಟು ಶಾಣ್ಯಾತನ ತೋರಿದ್ದರೆ ಕಥೆ ಲಂಬಿಸುವುದನ್ನು ಜ್ಞಾನೇಶ್‌ ಬಿ.ಮಠದ್‌ ತಡೆಯಬಹುದಿತ್ತು. ನೈಜ ಘಟನೆ ಎನ್ನುವ ಪೀಠಿಕೆ ಇದೆ. ಆದರೆ ಕಥೆ ಕಾಡುವಷ್ಟು ಗಟ್ಟಿಯಾಗಿಲ್ಲ. ಕ್ಲೈಮ್ಯಾಕ್ಸ್‌ನಲ್ಲಾದರೂ ‘ಭ್ರಮೆ’ ಕಳಚುತ್ತದೆ ಎಂದರೆ, ಮತ್ತೆ ಪ್ರೇಕ್ಷಕನನ್ನು ‘ಭ್ರಮೆ’ಯಲ್ಲಿ ಮುಳುಗಿಸುವಂತೆ ಸಿನಿಮಾ ಅಂತ್ಯವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು