ಶುಕ್ರವಾರ, ಆಗಸ್ಟ್ 12, 2022
28 °C

'ಸೀ ಯೂ ಸೂನ್' ಸಿನಿಮಾ ವಿಮರ್ಶೆ: ಪುಟ್ಟ ಪರದೆ, ಗಟ್ಟಿ ಥ್ರಿಲ್ಲರ್

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಸೀ ಯೂ ಸೂನ್ (ಮಲಯಾಳ)

ನಿರ್ಮಾಣ: ಫಹಾದ್ ಫಾಸಿಲ್, ನಜ್ರಿಯಾ ನಜೀಂ

ನಿರ್ದೇಶನ: ಮಹೇಶ್ ನಾರಾಯಣ್

 ತಾರಾಗಣ: ಫಹಾದ್ ಫಾಸಿಲ್, ರೋಷನ್ ಮ್ಯಾಥ್ಯೂ, ದರ್ಶನಾ ರಾಜೇಂದ್ರನ್

ಲಾಕ್‌ಡೌನ್‌ನಲ್ಲಿ ಬಹುತೇಕ ಜನರ ಕಣ್ಣುಗಳು ಹೆಚ್ಚು ಹೊತ್ತು ತೆರೆಗಳ ಮೇಲೆ ಕೀಲಿಸಿವೆ. ಟಿ.ವಿ ಇರಬಹುದು, ಮೊಬೈಲ್ ಇರಬಹುದು, ಲ್ಯಾಪ್‌ಟಾಪ್‌ ಇರಬಹುದು... ಅವುಗಳ ತೆರೆಗಳಿಗೆ ಅಂಟಿಕೊಂಡ ಕಣ್ಣುಗಳಿಗೆ ಸಿನಿಮಾವನ್ನೂ ಅದೇ ಬಗೆಯಲ್ಲಿ ಕೊಟ್ಟರೆ ಹೇಗಿರಬೇಡ. ಇಂಥದೊಂದು ಪ್ರಶ್ನೆಯನ್ನೇ ಇಟ್ಟುಕೊಂಡು ಬಿಗಿಯಾದ ಚಿತ್ರಕಥೆ ಸಿದ್ಧಪಡಿಸಿದ್ದಾರೆ ಮಹೇಶ್ ನಾರಾಯಣ್. ಥ್ರಿಲ್ಲರ್ ಸಿನಿಮಾಗೆ ಇರಬೇಕಾದ ಸಕಲೇಷ್ಟ ಲಕ್ಷಣಗಳನ್ನೂ ಒಳಾಂಗಣ ಚಿತ್ರೀಕರಣದ ಮಿತಿಯಲ್ಲೇ ಒದಗಿಸಿರುವುದು ಅವರ ಜಾಣ್ಮೆ.

ಇಡೀ ಸಿನಿಮಾ ಲ್ಯಾಪ್‌ಟಾಪ್‌, ಮೊಬೈಲ್ ಸ್ಕ್ರೀನ್‌ಗಳ ಮೇಲೆ ನಡೆಯುತ್ತದೆ. ಮೂರು ಪ್ರಮುಖ ಪಾತ್ರಗಳ ನಡುವಿನ ಕುದಿಯೇ ಕಥಾವಸ್ತು.

ಜಿಮ್ಮಿ ಕುರಿಯನ್ ಯುಎಇನಲ್ಲಿ ಬ್ಯಾಂಕರ್. ಅನು ‌ಮೋಳ್ ಎಂಬ ಹುಡುಗಿಯನ್ನು ಡೇಟಿಂಗ್ ಆ್ಯಪ್ ಮೂಲಕ ಹಚ್ಚಿಕೊಳ್ಳುತ್ತಾನೆ. ಪ್ರೀತಿ ಮೂಡುವ ಬಗೆಯನ್ನು ಅವರಿಬ್ಬರ ನಡುವಿನ ಟೆಕ್ಸ್ಟ್‌–ವಿಡಿಯೊ ಚಾಟ್‌ಗಳ ಮೂಲಕವೇ ಸಿನಿಮಾ ತೋರಿಸುತ್ತದೆ. ಮೆಚ್ಚಿದ ಹುಡುಗಿಯನ್ನು ಮದುವೆಯಾಗುವುದಾಗಿ ತನ್ನ ತಾಯಿಗೆ ತಿಳಿಸುವುದೂ ಲ್ಯಾಪ್‌ಟಾಪ್‌ನ ಮುಂದೆ ಕುಳಿತೇ; ಅದೂ ಪ್ರೇಯಸಿಯೂ ಲೈನ್‌ನಲ್ಲಿ ಇರುವಾಗ. ಆಮೇಲೆ ನಾಯಕಿಯ ಮುಖದ ಮೇಲೆ ಗಾಯಗಳಾಗುತ್ತವೆ. ಅವಳು ಕಾಪಾಡು ಎಂದು ಅಂಗಲಾಚುತ್ತಾಳೆ. ಅವಳನ್ನು ನಾಯಕ ತನ್ನ ಮನೆಗೆ ಕರೆತರುತ್ತಾನೆ. ಅದಾದ ಮೇಲೆ ಅವಳು ನಾಪತ್ತೆ. ಪೊಲೀಸರು ಬಂದು ಅವನನ್ನು ಕರೆದುಕೊಂಡು ಹೋಗುತ್ತಾರೆ. ಇವಿಷ್ಟೂ ಲ್ಯಾಪ್‌ಟಾಪ್‌ ಪರದೆಯ ಮೇಲೆಯೇ ಕಾಣಿಸುವ ಘಟನಾವಳಿಗಳು.

ನಾಯಕನ ಸಹೋದರ ಸಂಬಂಧಿ ಇಡೀ ಪ್ರಕರಣವನ್ನು ತನ್ನ ಚಾಣಾಕ್ಷತನದಿಂದ ಕುಳಿತಲ್ಲಿಂದಲೇ ಭೇದಿಸತೊಡಗುತ್ತಾನೆ. ನಾಯಕಿ ಯಾರು, ಅವಳು ನಾಪತ್ತೆಯಾದದ್ದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಥ್ರಿಲ್ಲರ್ ಹಿಡಿದು ಕೂರಿಸುತ್ತದೆ. ಮಿಕ್ಕ ಚಿತ್ರಕಥೆಯ ಹೂರಣವನ್ನು ಸಿನಿಮಾ ನೋಡಿಯೇ ಅನುಭವಿಸಬೇಕು.

‘ಅನ್‌ಫ್ರೆಂಡೆಡ್’ ಹಾಗೂ ‘ಸರ್ಚಿಂಗ್’ ಎಂಬ ಇಂಗ್ಲಿಷ್‌ ಚಿತ್ರಗಳು ಇದೇ ನಿರೂಪಣಾ ತಂತ್ರದಿಂದ ಈ ಹಿಂದೆ ಗಮನಸೆಳೆದಿದ್ದವು. ಆದರೆ, ಮಹೇಶ್ ನಾರಾಯಣ್ ತಮ್ಮದೇ ರುಜುವನ್ನು ಈ ಥ್ರಿಲ್ಲರ್‌ನಲ್ಲಿ ಹಾಕಿರುವುದು ಸಂಕಲನದ ಕಸುಬುದಾರಿಕೆಯಿಂದ. ಯಾವ ಹಂತದಲ್ಲೂ ಸಿನಿಮಾ ಕುತೂಹಲದ ಬೀಸನ್ನು ತಣ್ಣಗಾಗಿಸುವುದಿಲ್ಲ.

ಫಹಾದ್ ಎಂದಿನಂತೆ ನಯನಾಭಿನಯದಿಂದ ಹಿಡಿದಿಟ್ಟಿದ್ದಾರೆ. ರೋಷನ್ ಸಂದಿಗ್ಧ, ಆತಂಕದ ಭಾವಗಳನ್ನು ತುಳುಕಿಸಿದರೆ, ನಾಯಕಿ ದರ್ಶನಾ ಪಾತ್ರದ ಭಾವಶಿಲ್ಪವೇ ಹೌದು.

ಲಾಕ್‌ಡೌನ್‌ನ ಮಿತಿಯಲ್ಲೂ ತಂತ್ರಜ್ಞರಿಗೆ ಒಂದಿಷ್ಟು ಕೆಲಸ ಕೊಡುವ ಉಮೇದಿನಿಂದ ಈ ಸಿನಿಮಾ ನಿರ್ಮಿಸಿದ್ದಾಗಿ ಫಹಾದ್ ಹೇಳಿದ್ದರು. ಸೃಜನಶೀಲತೆಗೆ ಯಾವ ಲಾಕ್‌ಡೌನ್‌ ಎಂದು ಈ ಸಿನಿಮಾ ನೋಡಿದಾಗ ಅನ್ನಿಸದೇ ಇರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು