ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಡ್‌ಬುಷ್‌ ಸಿನಿಮಾ ವಿಮರ್ಶೆ: ರಾಜಧಾನಿ ಭೂಗತ ಲೋಕದಲ್ಲಿ ‘ಡಾಲಿ ಸುತ್ತು’

Last Updated 21 ಅಕ್ಟೋಬರ್ 2022, 11:22 IST
ಅಕ್ಷರ ಗಾತ್ರ

ಚಿತ್ರ: ಹೆಡ್‌ಬುಷ್‌ – ದಿ ರೈಸ್‌ ಆ್ಯಂಡ್‌ ರೈಸ್‌ ಆಫ್‌ ಬೆಂಗಳೂರು ಅಂಡರ್‌ವರ್ಲ್ಡ್‌ (ಕನ್ನಡ)
ನಿರ್ಮಾಣ: ಡಾಲಿ ಪಿಕ್ಚರ್ಸ್‌ ಆ್ಯಂಡ್‌ ಸೋಮಣ್ಣ ಟಾಕೀಸ್‌
ನಿರ್ದೇಶನ: ಶೂನ್ಯ
ಕಥೆ: ಅಗ್ನಿ ಶ್ರೀಧರ್‌
ತಾರಾಗಣ: ಡಾಲಿ ಧನಂಜಯ, ಪಾಯಲ್‌ ರಜಪೂತ್‌
ಸಂಗೀತ: ಚರಣ್‌ರಾಜ್‌
ಛಾಯಾಗ್ರಹಣ: ಸುನೋಜ್‌ ವೇಲಾಯುಧನ್‌

ವಿಧ್ವಂಸಕ ಶಕ್ತಿಗಳನ್ನು ಸೃಷ್ಟಿಸಿದ್ದೂ ಪ್ರಭುತ್ವವೇ. ಕೈ ಮೀರಿದಾಗ ಅದನ್ನು ನಾಶ ಮಾಡುವುದೂ ಪ್ರಭುತ್ವವೇ. ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಕಾಲದಲ್ಲಿ ನಡೆದದ್ದೂ ಇದೇ. ಇಂದು ಹೊಸ ಹೆಸರಿನಲ್ಲಿ ನಡೆಯುತ್ತಿರುವುದೂ ಅದೇ. ಆದರೆ ಬಲಿಯಾಗುತ್ತಿರುವುದು ಮಾತ್ರ ಹೆಸರು, ಆಸೆ, ಅಹಂ ಸಾಧನೆಯ ಬೆನ್ನು ಹತ್ತಿದ ಸಾಮಾನ್ಯ ಹುಡುಗರು.

ಇದನ್ನೇ ಒಂದು ಕಾಲದ ರೌಡಿ ಜಯರಾಜ್‌ ಎಂಬ ‘ನಾಯಕ’ನ ಮೂಲಕ ಹೇಳಲು ಹೊರಟಿದೆ ಹೆಡ್‌ಬುಷ್‌. ಪ್ರಭುತ್ವದ ಚಾಣಾಕ್ಷ ನಡೆಗಳನ್ನು ಹೇಳುತ್ತಾ, ಅಂದಿನಿಂದ ಇಂದಿನವರೆಗೂ ಇರುವ ಆಳುವ ‘ಅರಸರನ್ನು’ ದೇವರು ಎಂದು ಹೊಗಳುತ್ತಲೇ ಅವರೊಳಗಿನ ವಿಚ್ಛಿದ್ರಕಾರಿ ಮನಸ್ಥಿತಿಯನ್ನು ಹೊರಗೆಳೆಯುವ ಪ್ರಯತ್ನ ಇಲ್ಲಿ ನಡೆದಿದೆ.

‘ಇಂದಿರಾ ಬ್ರಿಗೇಡ್‌’ ಅನ್ನು ಕಟ್ಟಿ ಗಟ್ಟಿಗೊಳಿಸಲು ಪ್ರಭುತ್ವವೇ ಕಟ್ಟುವ ರೌಡಿಪಡೆ ಕೊನೆಗೆ ವಿಧ್ವಂಸಕ ಶಕ್ತಿಯಾಗಿ ಬೆಳೆಯುವುದು, ಕೊನೆಗೆ ಇಂದಿರಾ ಗಾಂಧಿಯವರೇ ಈ ಬ್ರಿಗೇಡ್‌ಅನ್ನು ಬರಖಾಸ್ತುಗೊಳಿಸಲು ಸೂಚನೆ ನೀಡುವವರೆಗೆ ಜಯರಾಜ್‌ ಬದುಕಿನ ರಕ್ತಸಿಕ್ತ ಸಾಮ್ರಾಜ್ಯದ ಕಥನ ಈ ಚಿತ್ರದಲ್ಲಿದೆ.

ಚಿತ್ರದಲ್ಲಿ ಜಯರಾಜ್‌ ಪಾತ್ರದ ನಾಯಕ ಡಾಲಿ ಧನಂಜಯ ತಮ್ಮ ಪಾತ್ರಕ್ಕೆ ಗತ್ತು, ಗಾಂಭೀರ್ಯ ತುಂಬಿದ್ದಾರೆ. ನಾಯಕಿ ಪಾಯಲ್‌ ರಜಪೂತ್‌, ಸಹಚರ ಗಂಗಾ ಪಾತ್ರದ ಲೂಸ್‌ ಮಾದ ಯೋಗೇಶ್‌, ಮುಖ್ಯಮಂತ್ರಿ ದೇವರಾಜ ಅರಸು ಪಾತ್ರದಲ್ಲಿ ದೇವರಾಜ್, ಕೋತ್ವಾಲ್‌ ರಾಮಚಂದ್ರನಾಗಿ ವಸಿಷ್ಠ ಸಿಂಹ, ಕಮಿಷನರ್‌ ಆಗಿ ಪ್ರಕಾಶ್‌ ಬೆಳವಾಡಿ, ಎಂಡಿಎನ್‌ ಆಗಿ ರಘು ಮುಖರ್ಜಿ ಈ ಎಲ್ಲರೂ ಅವರವರ ಪಾತ್ರಕ್ಕೆ ಶಕ್ತಿ ತುಂಬಿದ್ದಾರೆ. 1980ರ ದಶಕದ ಬೆಂಗಳೂರು ಕರಗ ಮತ್ತು ಅದರ ವೈಭವ, ತಿಗಳರ ಪೇಟೆ ದೃಶ್ಯಾವಳಿಗಳು ಕ್ಯಾಮೆರಾ ಕಣ್ಣಲ್ಲಿ ಚೆನ್ನಾಗಿವೆ.

ಪ್ರೊಫೆಸರ್‌ ಆಗಿ ಬರುವ ರವಿಚಂದ್ರನ್‌ ಬೆರಕೆಗಷ್ಟೇ ಇದೆ. ಅರಸು ಅವರ ಪುತ್ರಿಯ (ಶ್ರುತಿ ಹರಿಹರನ್‌) ಪಾತ್ರದ ಮಹತ್ವ ಗೊತ್ತಾಗದು. ಅಹಂ ಕಾರಣದಿಂದ ಬೇರೆಯಾಗುವ ಸಹಚರ ಗಂಗಾ, ಜಯರಾಜ್‌ನ ಕೊಲೆ ಯತ್ನಗಳು, ಪ್ರತೀಕಾರವಾಗಿ ಗಂಗಾನ ಮೇಲೆ ನ್ಯಾಯಾಲಯದ ಒಳಗೇ ಮಾರಣಾಂತಿಕ ಹಲ್ಲೆ ಇತ್ಯಾದಿ ಆ ಕಾಲದ ರೌಡಿಗಳ ಭೀಕರತೆಯನ್ನು ಸಾಕ್ಷೀಕರಿಸಿವೆ. ಆ ಕಾಲದ ಯುವಜನತೆ ರೌಡಿಸಂ ಕಡೆಗೆ ಆಕರ್ಷಿತರಾಗುವ ಬಗೆಯನ್ನೂ ಪರಿಣಾಮಕಾರಿಯಾಗಿ ಹೇಳಲು ಯತ್ನಿಸಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಪ್ರಭುತ್ವದ ಕುಟಿಲತೆಯನ್ನೂ ವಿವರಿಸಿದೆ. ಇಂದಿರಾ ಪಾತ್ರ ಕೇವಲ ಮೂರೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಮನಸ್ಸಿನಲ್ಲಿ ಉಳಿಯುತ್ತದೆ.

ಆದರೆ... ಆಗಿ ಹೋದ ರೌಡಿಗಳ ಕಥಾ ಸರಕು ಸಾಕಷ್ಟು ಚಿತ್ರಗಳಲ್ಲಿ ಬಂದಿವೆ. ಇದೂ ಅವುಗಳಲ್ಲಿ ಒಂದು ಅಷ್ಟೆ. ಅಗ್ನಿ ಶ್ರೀಧರ್‌ ಅವರು ಬರೆದ ‘ಆ ದಿನಗಳು’, ‘ಕಳ್ಳರ ಸಂತೆ’ಯಂಥ ನೈಜ ಘಟನೆಗಳ ಹಿನ್ನೆಲೆಯ ಚಿತ್ರಗಳನ್ನು ನೋಡಿದವರಿಗೆ ಹೆಡ್‌ಬುಷ್‌ ನಿರಾಸೆ ಮೂಡಿಸುತ್ತದೆ.

ಬಾಲ್ಯದಲ್ಲಿ ಹೆಡ್‌–ಬುಷ್‌ (ನಾಣ್ಯ ಚಿಮ್ಮಿಸುವ ಆಟ) ಜೂಜನ್ನೇ ಆಡುತ್ತಾ ಬೆಳೆಯುವ ಪೈಲ್ವಾನ್‌ ಜಯರಾಜ್‌, ಹದಿವಯಸ್ಸಿನಲ್ಲೇ ರೌಡಿಗಳನ್ನು ಎದುರು ಹಾಕಿಕೊಳ್ಳುವುದು, ಪೊಲೀಸರೊಂದಿಗಿನ ಸಂಘರ್ಷ, ಆಕ್ರೋಶ, ಪತ್ರಿಕೆ ನಡೆಸುವುದು ಎ‌ಲ್ಲವನ್ನೂ ವಿವರಿಸುವ ಯತ್ನ ನಡೆದಿದೆ. ಆದರೆ, ಆ ವಿವರಗಳು ಕಥೆ ಬೆಳೆಯುತ್ತಾ ಹೋದಂತೆ ಸಾವಯವವಾಗಿ ಬೆರೆಯದೆ ಪ್ರೇಕ್ಷಕನನ್ನು ಗೊಂದಲದಲ್ಲಿ ಕೆಡವುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT