ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ವಿಮರ್ಶೆ: ಚೇತರಿಕೆಗೂ ಅವಕಾಶ ಕೊಡದ ‘ಮಾರಕಾಸ್ತ್ರ’

Published : 13 ಅಕ್ಟೋಬರ್ 2023, 22:42 IST
Last Updated : 13 ಅಕ್ಟೋಬರ್ 2023, 22:42 IST
ಫಾಲೋ ಮಾಡಿ
Comments

ಚಿತ್ರ: ಮಾರಕಾಸ್ತ್ರ

ನಿರ್ದೇಶಕರು: ಗುರುಮೂರ್ತಿ ಸುನಾಮಿ

ನಿರ್ಮಾಣ: ಕೋಮಲ ನಟರಾಜ್‌

ತಾರಾಗಣ: ಮಾಲಾಶ್ರೀ, ಹರ್ಷಿಕಾ ಪೂಣಚ್ಚ, ಆನಂದ್‌ ಆರ್ಯ ಮತ್ತಿತರರು

ಈ ಸಿನಿಮಾ ನಿರ್ಮಾಪಕರ ಪತಿಗೆ ದೊಡ್ಡ ವೇದಿಕೆ ಕಲ್ಪಿಸಲು ಸಿದ್ಧವಾಗಿದೆ ಎನ್ನುವುದು ಮೊದಲ ಫ್ರೇಂನಲ್ಲಿಯೇ ಸ್ಪಷ್ಟವಾಗಿಬಿಡುತ್ತದೆ. ಕಾಲೇಜೊಂದರ ಸಭೆಯಲ್ಲಿನ ಭಾಷಣದಿಂದ ಸಿನಿಮಾ ಪ್ರಾರಂಭವಾಗುತ್ತದೆ. ಅಲ್ಲಿ ಭಾಷಣ ಮಾಡುತ್ತಿರುವ ಶಂಕರಪ್ಪ ಪಾತ್ರಧಾರಿಯೇ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಆ ದೃಶ್ಯದಲ್ಲಿನ ಭಾಷಣ ಮುಗಿಯುತ್ತಿದ್ದಂತೆ ‘ವಿದೇಶಕ್ಕಿಂತ ನಮ್ಮ ದೇಶವೇ ಸೊಗಸು’ ಎಂಬ ಹಾಡು. ಬಾಲಿಶವಾದ ಸಾಹಿತ್ಯ, ಸಂಗೀತ. ಅದಕ್ಕಿಂತ ಕಿರಿಕಿರಿಯಾಗುವುದು ಹಾಡಿಗೆ ಶಂಕರಪ್ಪ ಪಾತ್ರಧಾರಿ ಮಾಡುವ ನೃತ್ಯ. ಬಹುಶಃ ಇದೇ ಕಾರಣಕ್ಕೆ ನಿರ್ದೇಶಕರು ಸಿನಿಮಾದಲ್ಲಿ ಪ್ರತ್ಯೇಕವಾಗಿ ಹಾಸ್ಯದ ದೃಶ್ಯಗಳನ್ನಿಡುವ ಸಾಹಸ ಮಾಡಿಲ್ಲ!

ಬಳ್ಳಾರಿಯಲ್ಲಿ ನಡೆಯುವ ಸರಣಿ ಕೊಲೆ, ಅದರ ಹಿಂದಿನ ಕಾರಣ ಇಡೀ ಚಿತ್ರದ ಕಥೆಯ ಹೂರಣ. ಹಾಗಂತ ಕಥೆಗೂ, ಚಿತ್ರಕಥೆಗೂ ಸಂಬಂಧವಿಲ್ಲ. ಬಂಡವಾಳ ಹಾಕಿರುವ ಶಂಕರಪ್ಪ ಅವರನ್ನು ಓರ್ವ ಮಹಾನ್‌ ವ್ಯಕ್ತಿ ಎಂದು ಬಿಂಬಿಸಲು ನಿರ್ದೇಶಕರು ಅರ್ಧ ಸಿನಿಮಾವನ್ನೇ ಬಳಸಿಕೊಂಡಿದ್ದಾರೆ. ಹೀಗಾಗಿ ಒಂದು ರೀತಿಯ ‘ಪ್ರೊಪಗ್ಯಾಂಡಾ’ ಚಿತ್ರಕಥೆಯ ಸಿನಿಮಾವಿದು.

ಪತ್ರಕರ್ತೆಯಾಗಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ. ಗಟ್ಟಿಯಾದ ನೆಲೆಯೇ ಇಲ್ಲದ ಪಾತ್ರವದು. ಚಿತ್ರದಲ್ಲೊಂದು ಪ್ರೀತಿಯ ಟ್ರ್ಯಾಕ್‌ ಬೇಕು, ನಾಯಕ–ನಾಯಕಿಯ ಕಥೆ ಇರಬೇಕು ಎಂಬ ಕಾರಣಕ್ಕೆ ಈ ಪಾತ್ರವನ್ನು ಸೃಷ್ಟಿಸಿದಂತಿದೆ. ನಾಯಕ ಆನಂದ್‌ ಆರ್ಯ ಅವರ ಧ್ವನಿ ಸ್ವಲ್ಪ ಪುನೀತ್‌ ರಾಜಕುಮಾರ್‌ ಧ್ವನಿಯನ್ನು ಹೋಲುತ್ತದೆ. ಹೀಗಾಗಿ ಇವರು ತಮ್ಮನ್ನು ತಾವು ಜೂನಿಯರ್‌ ಪುನೀತ್‌ ರಾಜ್‌ಕುಮಾರ್‌ ಎಂದು ಭ್ರಮಿಸಿಕೊಂಡು ಅವರನ್ನು ಅನುಕರಿಸಿದ್ದಾರೆ. ಅನವಶ್ಯ ಬಿಲ್ಡಪ್‌ಗಳನ್ನು ಅವರಿಗೆ ನೀಡಿರುವುದು ಕಿರಿಕಿರಿಯ ಬೆಂಕಿಗೆ ಸುರಿದ ತುಪ್ಪ. ಸರಣಿ ಕೊಲೆ ಪತ್ತೆಗಾಗಿ ಪೊಲೀಸ್‌ ಅಧಿಕಾರಿಯಾಗಿ ಮಾಲಾಶ್ರೀ ಮಧ್ಯಂತರಕ್ಕೂ ಸ್ವಲ್ಪ ಮೊದಲು ಬರುತ್ತಾರೆ.

ಮಾಲಾಶ್ರೀ ಪ್ರವೇಶವಾಗುವುದು ಫೈಟ್‌ನಿಂದಲೇ. ಮೊದಲ ಫೈಟೇ ಪೇಲವವಾಗಿದೆ. ಅದರಿಂದ ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಫೈಟ್‌. ಎಂಎಲ್‌ಎ ರಕ್ಷಿಸಲು ನಡೆಯುವ ಈ ಫೈಟ್‌ ಸ್ವಲ್ಪ ವರ್ಣಮಯವಾಗಿ, ನೋಡುವಂತಿದೆ. ಮಾಲಾಶ್ರೀ ತಮ್ಮ ರಗಡ್‌ ನಟನೆಯೊಂದಿಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೈಕೊ ನಾಗರಾಜ್‌ ಎಂಎಲ್‌ಎ ಆಗಿ ಇಷ್ಟವಾಗುತ್ತಾರೆ. ಒಟ್ಟಾರೆ ಕಥೆಯ ಸ್ವರೂಪ ಮಾಸ್‌ ಸಿನಿಮಾಗೆ ಬೇಕಾದಂತೆ ಇತ್ತು. ಆದರೆ ಅದನ್ನು ಚಿತ್ರಕಥೆಯಾಗಿಸುವಲ್ಲಿ, ದೃಶ್ಯಕ್ಕೆ ಸಮರ್ಥವಾಗಿ ಇಳಿಸುವಲ್ಲಿ ನಿರ್ದೇಶಕರು ಇನ್ನಷ್ಟು ಎಚ್ಚರವಹಿಸಬೇಕಿತ್ತು. ಚಿತ್ರದಲ್ಲಿ ಸಾಕಷ್ಟು ಸಮರ್ಥ ನಟರಿದ್ದಾರೆ. ಅವರಲ್ಲಿ ಅನೇಕರಿಗೆ ತಕ್ಕ ಪಾತ್ರಗಳನ್ನು ಕಟ್ಟಿಕೊಟ್ಟಿಲ್ಲ. ಸಂಗೀತ, ಹಿನ್ನೆಲೆ ಸಂಗೀತ, ತೀರ ಬಾಲಿಶವಾದ ಸಾಹಿತ್ಯ ಸಿನಿಮಾದ ಹದಗೆಡಿಸಿದೆ. ಇಷ್ಟೆಲ್ಲದರ ನಡುವೆ ಛಾಯಾಗ್ರಾಹಕ ಅರುಣ್‌ ಸುರೇಶ್‌ ಹಲವು ಕಡೆ ದೃಶ್ಯಗಳನ್ನು ಸುಂದರವಾಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT