ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ನಾಲ್ಕು ಗೋಡೆಗಳ ಮಧ್ಯೆ ‘ಶಂಕ್ರಣ್ಣ’ನ ಕಥೆ

Last Updated 11 ಫೆಬ್ರುವರಿ 2022, 9:46 IST
ಅಕ್ಷರ ಗಾತ್ರ

ಚಿತ್ರ: ಫೋರ್‌ ವಾಲ್ಸ್‌ ಆ್ಯಂಡ್‌ ಟೂ ನೈಟೀಸ್‌ (ಕನ್ನಡ)

ನಿರ್ಮಾಣ: ಟಿ.ವಿಶ್ವನಾಥ್‌ ನಾಯ್ಕ್‌

ಕಥೆ, ನಿರ್ದೇಶನ: ಸಂಗಮೇಶ ಎಸ್‌. ಸಜ್ಜನರ

ತಾರಾಗಣ: ಅಚ್ಯುತ್‌ ಕುಮಾರ್‌, ದತ್ತಣ್ಣ, ಸುಜಯ್‌ ಶಾಸ್ತ್ರಿ, ಡಾ.ಪವಿತ್ರ, ಡಾ. ಜಾನ್ಹವಿ ಜ್ಯೋತಿ, ರಚನಾ ದಶರತ್‌, ಭಾಸ್ಕರ್‌ ಆರ್‌. ನಾಗಮಂಗಲ

ಚಂದನವನದಲ್ಲಿ ನಟ ಅಚ್ಯುತ್‌ ಕುಮಾರ್‌ ಅವರ ಪಯಣಕ್ಕೆ 22 ವರ್ಷ. ಪಾತ್ರ ಯಾವುದೇ ಇರಲಿ, ಅದಕ್ಕೆ ಜೀವ ತುಂಬುವ ಕಲಾವಿದನಾಗಿಯೇ ಅಚ್ಯುತ್‌ ಅವರು ಗುರುತಿಸಿಕೊಂಡವರು. ‘ಅಮರಾವತಿ’, ‘ದೃಶ್ಯ’, ‘ಲೂಸಿಯಾ’... ಹೀಗೆ ಈ ಮಾತಿಗೆ ಸಾಕ್ಷ್ಯವಾಗಿ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ತಂದೆಯ ಪಾತ್ರದಲ್ಲಂತೂ ಅಚ್ಯುತ್‌ ಅವರು ಒಂದು ಕೈ ಮೇಲೆನ್ನಬಹುದು. ಇದಕ್ಕೆ ಯಶ್‌ ನಟನೆಯ ‘ಮಿ. ಆ್ಯಂಡ್‌ ಮಿಸಸ್‌. ರಾಮಾಚಾರಿ’ಯಲ್ಲಿನ ಅವರ ಪಾತ್ರವೇ ಉದಾಹರಣೆ. ಸಂಗಮೇಶ್‌ ಎಸ್‌. ಸಜ್ಜನರ ನಿರ್ದೇಶನದ ‘ಫೋರ್‌ ವಾಲ್ಸ್‌ ಆ್ಯಂಡ್‌ ಟೂ ನೈಟೀಸ್‌’ ಸಿನಿಮಾದಲ್ಲೂ ಅಚ್ಯುತ್‌ ಅವರದ್ದು ತಂದೆಯ ಪಾತ್ರ. ‘ತಂದೆ’ಯಾಗಿ ಅಚ್ಯುತ್‌ ಇಲ್ಲೂ ಪ್ರತಿ ದೃಶ್ಯದ ಜವಾಬ್ದಾರಿ ಹೊತ್ತಿದ್ದಾರೆ.

ಪೋಸ್ಟರ್‌ ನೋಡಿದಾಗ ಶೀರ್ಷಿಕೆ ಕೊಂಚ ಇರಿಸುಮುರುಸು ತಂದರೂ, ಇದೊಂದು ಕೌಟುಂಬಿಕ ಸಿನಿಮಾ. ಫ್ಲ್ಯಾಶ್‌ಬ್ಯಾಕ್‌ನಿಂದ ಆರಂಭವಾಗುವ ಚಿತ್ರದ ಮೊದಲಾರ್ಧದಲ್ಲಿ ಸರ್ಕಾರಿ ನೌಕರಿಯಲ್ಲಿ ಇರುವ ಶಂಕರ(ಅಚ್ಯುತ್‌ ಕುಮಾರ್‌) ರೆಟ್ರೊ ಕಾಲದ ಯುವಕ. ತಂದೆ–ತಾಯಿ ಇಲ್ಲದೇ ಬೆಳೆದ ಶಂಕರನಿಗೆ ಮಾಮನೇ(ದತ್ತಣ್ಣ) ಪಾಲಕ. ಹುಟ್ಟಿದ ಊರಿನಲ್ಲಿ ಪ್ಯಾಂಟ್‌ ಧರಿಸಿದ ಮೊದಲಿಗ ಎಂಬ ಪಟ್ಟವನ್ನೇರಿದ ಶಂಕರನಿಗೆ ರಂಬೆ–ಮೇನಕೆಯನ್ನು, ಮಾಮ ಮನೆಯಂಗಳಕ್ಕೆ ತಂದು ನಿಲ್ಲಿಸಿದರೂ, ಆತನಿಗೆ ಎದುರುಮನೆ ಪಾರ್ವತಿ(ಡಾ.ಪವಿತ್ರ) ಮೇಲೆ ಪ್ರೀತಿ. ಮದುವೆಯಾದರೆ ಆಕೆಯನ್ನೇ ಎನ್ನುವ ಹಟ. ಈ ಹಟ ಸಾಧಿಸಿ, ಪಾರ್ವತಿಯನ್ನು ಮದುವೆಯಾಗುತ್ತಾನೆ. ನಡುವೆಯೊಂದು ‘ಕಲರ್‌ಫುಲ್‌’ ಹಾಡು. ಆಗೊಮ್ಮೆ–ಈಗೊಮ್ಮೆ ವಾಸ್ತವಕ್ಕೆ ಮರಳುವ ಸ್ಕ್ರೀನ್‌ಪ್ಲೇ. ಗಂಡು ಮಕ್ಕಳ ಆಸೆ ಶಂಕರನಿಗೆ. ಎರಡು ಹೆಣ್ಣುಮಕ್ಕಳಾದಾಗ ದೇವರ ಮೇಲೆ ಕೋಪ. ಮೂರನೇಯದು ಗಂಡು ಮಗುವಾದರೂ, ಮತ್ತೊಂದು ಹೆಣ್ಣು ಮಗುವಾಗುತ್ತದೆ. ಇದಕ್ಕೆ ಕಾರಣವೇನು ಎನ್ನುವುದಕ್ಕೆ ಉತ್ತರ ಸಿನಿಮಾದಲ್ಲೇ ನೋಡಿ ತಿಳಿಯಬೇಕು. ಕೊನೆಯ ಮಗು ಹೆತ್ತ ಪಾರ್ವತಿ ಕೊನೆಯುಸಿರೆಳೆಯುತ್ತಾಳೆ. ಇಲ್ಲಿಂದ ದ್ವಿತೀಯಾರ್ಧ ಆರಂಭ.

ತಾಯಿ ಇಲ್ಲದ ಮಕ್ಕಳನ್ನು ಶಂಕರ ಪ್ರೀತಿಯಿಂದ ಬೆಳೆಸುತ್ತಾನೆ. ಡಿಗ್ರಿ ಮುಗಿದ ಕೂಡಲೇ ಮೂವರೂ ಹೆಣ್ಣುಮಕ್ಕಳನ್ನು ಎರಡು ನೈಟಿ ಕೊಡಿಸಿ ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಇಡುತ್ತಾನೆ. ಪ್ರಾಯವಾದ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡದೇ ಇರುವುದಕ್ಕೆ ಮಗನಿಗೂ–ಶಂಕರನಿಗೂ ಆಗಾಗ ಮಾತಿನ ಚಕಮಕಿ. ಒಂದೆಡೆ ನಿರುದ್ಯೋಗ, ಮತ್ತೊಂದೆಡೆ ಮನೆಯಲ್ಲಿನ ಹೆಣ್ಣುಮಕ್ಕಳು, ಅಪ್ಪನ ಬಗ್ಗೆ ಅವರಿವರ ಚುಚ್ಚುಮಾತುಗಳನ್ನು ಕೇಳಿ ಅಪ್ಪನನ್ನೇ ಕೊಂದು ಆತನ ಸರ್ಕಾರಿ ಕೆಲಸವನ್ನು ತನ್ನದಾಗಿಸಿಕೊಳ್ಳಲು ಹೊರಡುವ ಮಗ. ಕೊನೆಯಲ್ಲಿ, ಅಪ್ಪನನ್ನು ಮಗ ಕೊಲ್ಲುತ್ತಾನಾ? ಹೆಣ್ಣು ಮಕ್ಕಳಿಗೆ ಶಂಕರ ಏಕೆ ಮದುವೆ ಮಾಡಿಸಿಲ್ಲ ಎನ್ನುವ ಪ್ರಶ್ನೆಗೆ ಉತ್ತರವೇ ಚಿತ್ರದ ಕಥೆ.

ಈ ಕಥೆ ನಾಲ್ಕು ಗೋಡೆಗಳ ಮಧ್ಯೆ ನಡೆದರೂ, ಕೊನೆಯಲ್ಲಿ ಪಯಣ ಕೊಂಚ ಆಯಾಸ ತರಿಸುತ್ತದೆ. ಆದರೆ, ಪ್ರತಿ ದೃಶ್ಯದಲ್ಲೂ ಅಚ್ಯುತ್‌ ಕುಮಾರ್‌ ಉಸಿರಿದೆ. ಸಂಗಮೇಶ್‌ ಎಸ್‌. ಸಜ್ಜನರ ಅವರ ಯುವ ತಂಡಕ್ಕೆ ಅಚ್ಯುತ್‌, ದತ್ತಣ್ಣ ಅವರ ಸಾರಥ್ಯ ಇಲ್ಲಿ ಸ್ಪಷ್ಟ. ಇಲ್ಲಿಯವರೆಗೆ ತೆರೆಯ ಮೇಲೆ ಸಹಜವಾಗಿ, ಸರಳವಾಗಿ ಕಂಡ ಅಚ್ಯುತ್‌ ಅವರ ತುಂಟತನ ಈ ಚಿತ್ರದ ಮೊದಲಾರ್ಧದಲ್ಲಿದೆ. ಹಳ್ಳಿಯಲ್ಲಿ ಬೆಳೆದು ಸಿಟಿಗೆ ಬಂದ ಪಾರ್ವತಿಗೆ, ಇಲ್ಲಿನ ರಸ್ತೆಗಳಲ್ಲಿ ಶಂಕರ ‘ನೈಟಿ’ ದರ್ಶನ ಮಾಡಿಸುವ ದೃಶ್ಯ ಇಡೀ ಸಿನಿಮಾದಲ್ಲೇ ಭಿನ್ನ. ಭಾವನೆಗಳ ಪಯಣದಲ್ಲಿದತ್ತಣ್ಣ ಹಾಗೂ ಸುಜಯ್‌ ಶಾಸ್ತ್ರಿ ಅಲ್ಲೊಮ್ಮೆ, ಇಲ್ಲೊಮ್ಮೆ ಕೊಂಚ ನಗುವಿನ ಕಚಗುಳಿ ಇಡುತ್ತಾರೆ. ಮಗ ಸೂರ್ಯನ ಪಾತ್ರದಲ್ಲಿ ಭಾಸ್ಕರ್‌ ನೀನಾಸಂ ನಟನೆ ಅಚ್ಯುತ್‌ ಕುಮಾರ್‌ ಪಾತ್ರಕ್ಕೆ ಪೂರಕವಾಗಿದೆ. ಹೆಣ್ಣು ಮಕ್ಕಳಾಗಿ ಡಾ.ಜಾನ್ವಿ, ಅಂಚಲ್‌ ಹಾಗೂ ಶ್ರೇಯಾ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ವಿ.ದೇವೇಂದ್ರ ರೆಡ್ಡಿ ಅವರ ಕ್ಯಾಮೆರಾ ಕೈಚಳ ಕಣ್ಣಿಗೆ ಹಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT