ಗುರುವಾರ , ಫೆಬ್ರವರಿ 20, 2020
18 °C

ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಸಿನಿಮಾ ವಿಮರ್ಶೆ: ಚರಿತ್ರೆಯ ನೆನಪಿನ ಹಂಗು

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಸಿನಿಮಾ ವಿಮರ್ಶೆ

ನಿರ್ಮಾಣ: ವೈ.ಎನ್. ಶಂಕರೇಗೌಡ ಹಾಗೂ ಸ್ನೇಹಿತರು

ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್

ತಾರಾಗಣ: ವಸಿಷ್ಠ ಸಿಂಹ, ಮಾನ್ವಿತಾ ಹರೀಶ್‌, ಅನಂತನಾಗ್‌, ಪ್ರಕಾಶ್‌ ಬೆಳವಾಡಿ, ಸುಮಲತಾ ಅಂಬರೀಷ್‌, ಸಾಧುಕೋಕಿಲ

ನಾಗತಿಹಳ್ಳಿ ಚಂದ್ರಶೇಖರ್‌ ಕನ್ನಡ ಚಿತ್ರರಂಗಕ್ಕೆ ಅಮೆರಿಕವನ್ನು ಹತ್ತಿರವಾಗಿಸಿದ ಸಿನಿಮಾ ನಿರ್ದೇಶಕ. ಈಗ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರದ ಮೂಲಕ ಈ ಎರಡೂ ದೇಶಗಳ ಚಾರಿತ್ರಿಕ ಹಿನ್ನೋಟದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

ಅವರ ಇಲ್ಲಿಯವರೆಗಿನ ಸಿನಿಮಾಗಳ ಕಥೆಯಲ್ಲಿ ತಾಯ್ನೆಲದ ಗುಣ ಅಂತರ್ಗತವಾಗಿದೆ. ಈ ಚಿತ್ರದಲ್ಲಿ ಭಾರತ ಮತ್ತು ಇಂಗ್ಲೆಂಡ್‌ನ ಚರಿತ್ರೆಯ ಹೊಳಹುಗಳ ಮೇಲೆ ಕನ್ನಡಿ ಹಿಡಿದಿದ್ದಾರೆ. ಬಿಡಿ ದೃಶ್ಯಾವಳಿಗಳ ಮೂಲಕ ಜೀವನ ಪ್ರೀತಿಯ ಮಹತ್ವವನ್ನೂ ಸಾರಿದ್ದಾರೆ. ಜೊತೆಗೆ, ಎರಡೂ ದೇಶಗಳಿಗೆ ಸಂಬಂಧಿಸಿದ ಚರಿತ್ರೆ ಮತ್ತು ಸಂಸ್ಕೃತಿಯ ಜಿಜ್ಞಾಸೆಯನ್ನು ವರ್ತಮಾನದ ನೆಲೆಯಲ್ಲಿಯೇ ನಿಂತು ಭೂತಗನ್ನಡಿ ಹಿಡಿದು ಹೇಗೆ ನೋಡಬೇಕು ಎನ್ನುವ ಪ್ರಶ್ನೆಗಳನ್ನು ಪ್ರೇಕ್ಷಕರ ಮುಂದಿಟ್ಟಿರುವುದು ಅವರ ಜಾಣ್ಮೆ.

ಎರಡು ರಾಷ್ಟ್ರಗಳ ಇತಿಹಾಸವನ್ನು ಹೇಗೆಲ್ಲಾ ನೋಡಬೇಕು, ನಡೆದಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಈಗೇನು ಮಾಡಬೇಕು ಎಂದು ಅವರೇ ಎತ್ತುವ ತಾರ್ಕಿಕ ಪ್ರಶ್ನೆಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಅಪ್ಪಿತ‍ಪ್ಪಿಯೂ ಅವರು ತಮ್ಮ ಶೈಲಿಯನ್ನು ಬಿಟ್ಟುಕೊಟ್ಟಿಲ್ಲ. ಸಿನಿಮಾದ ಅಂತ್ಯಕ್ಕೆ ಕಥೆಗೆ ಕ್ರೈಮ್‌ ಥ್ರಿಲ್ಲರ್‌ ಲೇಪನ ಹಚ್ಚಿದ್ದಾರೆ. ಜೊತೆಗೆ, ಮಾನವೀಯ ಆಯಾಮವೊಂದನ್ನು ಕಲ್ಪಿಸಿರುವುದು ಚಿತ್ರದ ವಿಶೇಷ.

ಇಂಗ್ಲೆಂಡ್‌ನಲ್ಲಿ ಹರಾಜಿಗೆ ಇಡುವ ನೀಲಿ ವಜ್ರದ ನೈಜತೆ, ಅದರ ಪೂರ್ವ ಇತಿಹಾಸ ಹಾಗೂ ಅದನ್ನು ಲಪಟಾಯಿಸಲು ಹೊರಟವರಿಂದ ನಾಯಕ, ನಾಯಕಿ ಅನುಭವಿಸುವ ಸಂಕಷ್ಟದ ಸರಮಾಲೆಯೇ ಈ ಚಿತ್ರದ ಹೂರಣ. ಪಾಶ್ಚಿಮಾತ್ಯ ಹಾಗೂ ಭಾರತೀಯ ಸಿದ್ಧಾಂತವನ್ನು ನಾಯಕ ಹಾಗೂ ನಾಯಕಿಗೆ ಆರೋಪಿಸಿ ಅವರಿಂದ ಉತ್ತರ ಪಡೆಯುವುದಕ್ಕೆ ನಿರ್ದೇಶಕರು ಪ್ರಯತ್ನಿಸಿದ್ದಾರೆ.   

ಚಿತ್ರದಲ್ಲಿನ ಮೊದಲಾರ್ಧದ ಕೆಲವು ದೃಶ್ಯಗಳು ಪ್ರವಾಸೋದ್ಯಮ ಇಲಾಖೆಯ ಸಾಕ್ಷ್ಯಚಿತ್ರಗಳನ್ನು ನೆನಪಿಸುತ್ತವೆ. ದ್ವಿತೀಯಾರ್ಧದಲ್ಲಿ ಕಥೆಗೊಂದು ತಿರುವು ನೀಡುವ ಮೂಲಕ ಅದನ್ನು ಮರೆಸಲು ಪ್ರಯತ್ನಿಸಿದ್ದಾರೆ. ಸಿನಿಮಾ ಗಂಭೀರವಾಯಿತು ಎನ್ನುವಾಗಲೇ ಸಾಧುಕೋಕಿಲ ಅವರ ಹಾಸ್ಯ ಕಚಗುಳಿ ಇಡುತ್ತದೆ. 

ಛಾಯಾಗ್ರಾಹಕರಾದ ಸತ್ಯ ಹೆಗ್ಡೆ, ಎ.ವಿ. ಕೃಷ್ಣಕುಮಾರ್ ಕ್ಯಾಮೆರಾ ಭಾರತ ಮತ್ತು ಇಂಗ್ಲೆಂಡ್‌ನ ಕೆಲವು ತಾಣಗಳನ್ನು ಮೋಹಕವಾಗಿ ಹಿಡಿದಿಟ್ಟಿದೆ. ಬ್ರಿಟಿಷ್‌ ಬಾರ್ನ್‌ ದೇಸಿ ಹುಡುಗನಾಗಿ ವಸಿಷ್ಠ ಸಿಂಹ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಾನ್ವಿತಾ ಹರೀಶ್‌ ನಟನೆ ಗಮನ ಸೆಳೆಯುತ್ತದೆ. ಪ್ರಕಾಶ್‌ ಬೆಳವಾಡಿ, ಅನಂತನಾಗ್‌, ಸುಮಲತಾ ಅಂಬರೀಷ್‌ ಅವರದು ಅಚ್ಚುಕಟ್ಟಾದ ನಟನೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕೆ ಹೊಸದೇನನ್ನೂ ನೀಡಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು