ಸೋಮವಾರ, ಮೇ 23, 2022
30 °C

ಸಿನಿಮಾ ವಿಮರ್ಶೆ: ಲಯದ ಮೆರವಣಿಗೆಯಲ್ಲಿ ನಗೆಹಗ್ಗದ ತೊಡರು

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಇನ್‌ಸ್ಪೆಕ್ಟರ್ ವಿಕ್ರಂ (ಕನ್ನಡ)

ನಿರ್ಮಾಣ: ವಿಖ್ಯಾತ್ ವಿ.ಆರ್.

ನಿರ್ದೇಶನ: ಶ್ರೀ ನರಸಿಂಹ

ತಾರಾಗಣ: ಪ್ರಜ್ವಲ್ ದೇವರಾಜ್, ಭಾವನಾ, ರಘು ಮುಖರ್ಜಿ, ಧರ್ಮಣ್ಣ ಕಡೂರ್, ಅವಿನಾಶ್, ಶೋಭರಾಜ್, ದರ್ಶನ್ (ಅತಿಥಿ ಪಾತ್ರ)

1989ರಲ್ಲಿ ದಿನೇಶ್ ಬಾಬು ‘ಇನ್‌ಸ್ಪೆಕ್ಟರ್ ವಿಕ್ರಂ’ ಎಂಬ ಹೆಸರಿನದ್ದೇ ಸಿನಿಮಾ ನಿರ್ದೇಶಿಸಿದ್ದರು. ಶಿವರಾಜ್‌ಕುಮಾರ್ ಅದರ ನಾಯಕ. ಅಶ್ವಥ್ ಉನ್ನತ ಪೊಲೀಸ್ ಅಧಿಕಾರಿ. ಕಾವ್ಯಾ ನಾಯಕಿ. ‘ಟಾಮ್ ಅಂಡ್ ಜೆರ‍್ರಿ’ ಜಾನರ್ ಅನ್ನು ಹೊಂದಿಸಿ ತಯಾರಾಗಿದ್ದ ಚಿತ್ರ, ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬ ತಮಾಷೆಯಾಗಿ ವರ್ತಿಸುತ್ತಲೇ ಪ್ರಕರಣಗಳನ್ನು ಬಗೆಹರಿಸುವ ಕಥಾವಸ್ತುವನ್ನು ಒಳಗೊಂಡಿತ್ತು. ಅದರಲ್ಲಿ ಶಿವಣ್ಣ ‘ನಾನು ಕೊಹಿನೂರ್ ಡೈಮಂಡ್’ ಅಂತ ಹೇಳಿಕೊಳ್ಳುತ್ತಿರುತ್ತಾರೆ. ಅದೇ ಸಂಭಾಷಣೆಯನ್ನು ಎತ್ತಿಕೊಂಡು, ‘ನಾನು ಎರಡನೇ ಕೊಹಿನೂರ್ ಡೈಮಂಡ್’ ಎಂದು ಪ್ರಜ್ವಲ್ ಇಲ್ಲಿ ಸಂಭಾಷಣೆ ತುಳುಕಿಸುತ್ತಾರೆ.

ಪಕ್ಕೆಗಳಿಗೆ ಮೃದು ಸ್ಪರ್ಶದಿಂದ ಕಚಗುಳಿ ಇಡಬಹುದು. ತುಸು ಬಲವಂತವಾಗಿ ಕಚಗುಳಿ ಇಡಲು ಹೋದರೆ ಸಂಕಟವಾಗುತ್ತದೆ. ಹೊಸ ‘ಇನ್‌ಸ್ಪೆಕ್ಟರ್ ವಿಕ್ರಂ’ನ ಹಾಸ್ಯದ ಡೋಸು ಅಲ್ಲಲ್ಲಿ ಅಂಥ ಅನುಭವವನ್ನೇ ಕೊಡುತ್ತದೆ.

ತುಂಟ ಸ್ವಭಾವದ ನಾಯಕ. ಜಗಜ್ಜಾಣ. ತಮಾಷೆಯಾಗಿ ಮಾತನಾಡುತ್ತಲೇ ಗಂಭೀರ ಪ್ರಕರಣಗಳನ್ನು ಭೇದಿಸಬಲ್ಲ ಚತುರ. ಅವನ ಕಾರ್ಯಕ್ಷೇತ್ರದಲ್ಲಿ ಇದ್ದುಕೊಂಡೇ ಸವಾಲೊಡ್ಡುವ ಪ್ರತಿನಾಯಕನನ್ನು ಪತ್ತೆಮಾಡುವುದು ಚಿತ್ರಭಿತ್ತಿ. ನಡುವೆ ನಾಯಕಿ ಇದ್ದಾಳೆ. ಚಡ್ಡಿ ದೋಸ್ತ್ ಆದ ಅವಳು ನಾಯಕನ ಪ್ಯಾಂಟ್ ದೋಸ್ತ್ ಯಾಕೆ ಆಗಿರಲಿಲ್ಲ ಎಂಬ ಸಿನಿಮೀಯ ತರ್ಕ ಹೊಳೆದರೆ ಅದು ಪ್ರೇಕ್ಷಕರ ಮೆದುಳಿನ ತಪ್ಪು! ಹಾಡುಗಳೂ ಇವೆ. ಕುಣಿತ ಹಾಕಲೂ ನಾಯಕ ಸೈ. ಪ್ರಾಸಬದ್ಧ ಸಂಭಾಷಣೆಗಳು ಆಗೀಗ ನಗಿಸುವುದುಂಟು. ಬಫೆ ಊಟದ ಕೊನೆಯಲ್ಲಿ ಉಪ್ಪಿನಕಾಯಿಯ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ. ಬಲಬದಿಯಲ್ಲಿ ತಮ್ಮ ಬಿಳಿ ಕುದುರೆ, ಎಡಬದಿಯಲ್ಲಿ ಸುಂದರಿ ಭಾವನಾ ನಿಲ್ಲಿಸಿಕೊಂಡು ಅವರು ಫೈಟ್ ಮಾಡಿದ ಮೇಲೆ ಕೊಡುವ ಪೋಸಿಗೆ ಶಿಳ್ಳೆಗಳು.

ಸಿನಿಮಾಗೆ ಲಯ ಕೊಟ್ಟರೆ ಸಾಕು ಎಂದು ನಿರ್ದೇಶಕರು ನಿರ್ಧರಿಸಿದ್ದಾರೆ. ಹೊಡೆದಾಟದ ನಡುವೆಯೇ ‘ಬ್ರೋಚೇವಾರೆ ವರುರಾ’ ಶಾಸ್ತ್ರೀಯ ಸಂಗೀತ ಹಿನ್ನೆಲೆಯಲ್ಲಿ ಕೇಳುತ್ತದೆ. ನಾಯಕ ದೊಪ್ಪನೆ ಬಿದ್ದ ಹೂಬುಟ್ಟಿಯಿಂದ ಪಕಳೆಗಳು ಹಾರಿ ನಾಯಕಿಯ ಮುಖಕ್ಕೆ ರಾಚುತ್ತವೆ. ಹೊಡೆದಾಟದ ಮುನ್ನುಡಿ, ಪ್ರೇಮಪಲ್ಲವಿಯ ಹಿನ್ನುಡಿ–ಎರಡನ್ನೂ ಕೇಳಿಸಿಕೊಳ್ಳುವಂಥ ಸಶಕ್ತ ಕರ್ಣಗಳು ಇರಬೇಕಷ್ಟೆ. ಭಯಂಕರ ಸಸ್ಪೆನ್ಸ್ ಥ್ರಿಲ್ಲರ್ ಮಾಡಬಹುದಾಗಿದ್ದ ಈ ಚಿತ್ರವನ್ನು ಸ್ಲೋಮೋಷನ್ ಮೆರವಣಿಗೆಗೆ ನಿರ್ದೇಶಕರು ಸೀಮಿತಗೊಳಿಸಿದ್ದಾರೆ.

ನಾಯಕ ಪ್ರಜ್ವಲ್ ಅಭಿನಯೋತ್ಸಾಹಕ್ಕೆ ಅಂಕಗಳನ್ನು ಧಾರಾಳವಾಗಿ ನೀಡಬಹುದು. ಭಾವನಾ ವಿಶಾಲಾಕ್ಷದೊಳಗೆ ಹೃದಯಗಳು ಈಜಾಡಬಲ್ಲವು. ಧರ್ಮಣ್ಣ ನಗಿಸಲು ಪಟ್ಟಿರುವ ಕಷ್ಟಕ್ಕೂ ಉದಾಹರಣೆಗಳು ಉಳಿಯುತ್ತವೆ. ರಘು ಮುಖರ್ಜಿ ಪ್ರತಿನಾಯಕನಾಗಿ ಮೆರೆಯುವಲ್ಲಿ ಹಿನ್ನೆಲೆ ಸಂಗೀತದ ಕಾಣ್ಕೆ ಹೆಚ್ಚೇ ಇದೆ. ಶೋಭರಾಜ್ ಸಂಭಾಷಣೆ ಹಾಗೂ ಆಂಗಿಕ ಅಭಿನಯ ನಗೆ ತರಿಸುತ್ತದೆ.

ನವೀನ್‌ಕುಮಾರ್ ಸಿನಿಮಾಟೊಗ್ರಫಿ ಔಚಿತ್ಯಪೂರ್ಣ. ಅನೂಪ್ ಸೀಳಿನ್ ಹಿನ್ನೆಲೆ ಸಂಗೀತದಲ್ಲಿ ಥೀಮ್ ಎನ್ನುವುದು ಇರದೇಹೋದರೂ ದೃಶ್ಯಗಳನ್ನು ಮೇಲೆತ್ತುವ ಆಮ್ಲಜನಕದ ಅಂಶವಿದೆ. ದರ್ಶನ್ ತರಹದ ಸ್ಟಾರ್ ನಟರು ಇಂತಹ ಪ್ರಯತ್ನಗಳಿಗೆ ಅತಿಥಿ ಪಾತ್ರದ ಮೂಲಕ ಇಂಧನವಾಗಿರುವುದು ಮೆಚ್ಚತಕ್ಕ ಅಂಶ.

ಹಳೆಯ ‘ಇನ್‌ಸ್ಪೆಕ್ಟರ್ ವಿಕ್ರಂ’ನ ಕಚಗುಳಿಗೆ ಹೋಲಿಸಿದರೆ ಇದು ತೂಕದಲ್ಲಿ ಕೆಳಗೆ ನಿಲ್ಲುವುದು ದಿಟ. ಟೈಂಪಾಸ್ ಕೆಟಗರಿಗೆ ಸೇರಿಸಬಹುದಾದ ಸಿನಿಮಾ ಎಂಬ ಕ್ಲೀಷೆಯನ್ನೇ ಪುನರುಚ್ಚರಿಸಲು ಅಡ್ಡಿಯಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು