ಗುರುವಾರ , ಏಪ್ರಿಲ್ 2, 2020
19 °C

ಲವ್ ಮಾಕ್‌ಟೇಲ್‌ ಸಿನಿಮಾ ವಿಮರ್ಶೆ: ಕೃಷ್ಣನ ಪ್ರೀತಿಯ ಮಾಕ್‌ಟೇಲ್‌ ಕಥೆ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Love Mocktale

ಗಂಡು–ಹೆಣ್ಣಿನ ನಡುವಿನ ಪ್ರೀತಿಯನ್ನೇ ಮೂಲದ್ರವ್ಯವನ್ನಾಗಿ ಮಾಡಿಕೊಂಡ ಸಿನಿಮಾಗಳ ಸಂಖ್ಯೆ ಕನ್ನಡದಲ್ಲಿ ಕಡಿಮೆಯೇನೂ ಅಲ್ಲ. ಪ್ರೀತಿ–ಪ್ರೇಮವನ್ನು ಕಥಾವಸ್ತುವನ್ನಾಗಿ ಮಾಡಿಕೊಂಡ ಹತ್ತಾರು ಚಿತ್ರಗಳು ಪ್ರೀತಿಯನ್ನು ಮದುವೆಯ ಬೇಲಿಯೊಳಗೆ ಪ್ರತಿಷ್ಠಾಪಿಸಿ, ಅದರ ಸುತ್ತ ಕಥೆಯನ್ನು ಬೆಳೆಸುವುದು ಹೊಸದೇನೂ ಅಲ್ಲ.

ಆದರೆ, ಗಂಡು–ಹೆಣ್ಣಿನ ಪ್ರೀತಿಯನ್ನೇ ಮೂಲದ್ರವ್ಯ ಆಗಿಸಿಕೊಂಡು, ಮದುವೆಯನ್ನೂ ಕಥೆಯ ಕ್ಯಾನ್ವಾಸ್‌ನಲ್ಲಿ ಇರಿಸಿಕೊಂಡೇ ಭಿನ್ನ ರೂಪದಲ್ಲಿ ವೀಕ್ಷಕರ ಮುಂದೆ ಅನಾವರಣಗೊಳ್ಳುವ ಕಥೆ ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್‌ಟೇಲ್‌’ ಚಿತ್ರದಲ್ಲಿ ಇದೆ.

ಚಿತ್ರದ ಕಥೆಯು ಒಂದು ಅಥವಾ ಎರಡು ದಶಕಗಳನ್ನು ಆವರಿಸಿಕೊಂಡಿದೆ. ಉಡುಪಿಯ ಕಡಲ ತಡಿಯತ್ತ ಒಬ್ಬಂಟಿಯಾಗಿ ಹೊರಡುವ ಕಥಾನಾಯಕ (ಆದಿ) ಚಾರ್ಮಾಡಿ ಸಮೀಪವೋ, ಕುದುರೆಮುಖದ ಸಮೀಪವೋ ಅಪರಿಚಿತ ಯುವತಿಯೊಬ್ಬಳನ್ನು ಭೇಟಿಯಾಗುತ್ತಾನೆ. ಕಥಾನಾಯಕ ಆಕೆಯ ಬಳಿ ತನ್ನ ಪ್ರೀತಿಯ ಕಥೆಗಳನ್ನು ಹೇಳಲಾರಂಭಿಸುತ್ತಾನೆ. ಆ ಮೂಲಕ ಚಿತ್ರದ ಕಥೆ ವೀಕ್ಷಕನೆದುರು ತೆರೆದುಕೊಳ್ಳುತ್ತದೆ.

ಕಥಾನಾಯಕನಲ್ಲಿ ತುಂಟತನಕ್ಕೆ ಕೊರತೆಯೇನೂ ಇಲ್ಲ. ಶಾಲೆಯ ದಿನಗಳಿಂದಲೂ ಹುಡುಗಿಯರ ಹಿಂದೆ ಇದ್ದವ ಈತ. ಈತನ ಮೊದಲ ಪ್ರೀತಿ ಶುರುವಾಗುವುದು ಶಾಲಾ ದಿನಗಳ ಅವಧಿಯಲ್ಲಿ. ಶಾಲೆಯ ದಿನಗಳ ತುಂಟ ಪ್ರೀತಿಯ ದೃಶ್ಯಗಳು ವೀಕ್ಷಕರನ್ನು ನಾಸ್ಟಾಲ್ಜಿಕ್‌ ಆಗಿಸಲು ಸಾಕು. ‘ಪ್ರೀತಿ’ ಎಂದು ಭಾವಿಸಲಾಗುವ ಪುಟ್ಟ ಪುಟ್ಟ ಕ್ರಷ್‌ಗಳನ್ನು ಚಿತ್ರಿಸಿರುವ ಬಗೆ ವೀಕ್ಷಕರಲ್ಲಿ ಮಂದಹಾಸ ಮೂಡಿಸದೆ ಇರದು.

ಕಾಲೇಜು ದಿನಗಳ ಪ್ರೀತಿಯನ್ನು ದೃಶ್ಯರೂಪದಲ್ಲಿ ಕಟ್ಟಿಕೊಟ್ಟ ಬಗೆ ಕೂಡ ಚೆಂದವಾಗಿದೆ. ಈಗ ವೃತ್ತಿ ಬದುಕಿನಲ್ಲಿ ಮುಳುಗಿರುವ, ಕಾಲೇಜು ದಿನಗಳ ಅವಧಿಯಲ್ಲಿ ಅದೇ ಮೊದಲ ಬಾರಿಗೆ ಫೀಚರ್ ಫೋನ್‌ಗಳನ್ನು ಹಿಡಿದುಕೊಂಡು, ಎಸ್‌ಎಂಎಸ್‌ಗಳ ಮೂಲಕ ಪ್ರೀತಿ–ಪ್ರೇಮದ ಮಾತುಗಳನ್ನು ಆಡುತ್ತಿದ್ದವರಿಗೆ ಹಳೆಯ ದಿನಗಳನ್ನು ನೆನಪಿಸಲಿಕ್ಕೆ ಈ ದೃಶ್ಯಗಳು ಸಾಕು. ಆದರೆ, ಈ ಹಂತದಲ್ಲಿ ಸಿನಿಮಾ ತುಸು ವೇಗ ಕಳೆದುಕೊಂಡಂತೆ ಅನಿಸುತ್ತದೆ.

ವಾಸ್ತವಕ್ಕೆ ಹತ್ತಿರವಾಗಿರುವಂತೆ ಚಿತ್ರಿತವಾಗಿರುವ ನಾಯಕನ ಪ್ರೀತಿಯ ಕಥೆಗಳಿಗೆ ತಿರುವು ಸಿಗುವುದು, ಆತ ವೃತ್ತಿ ಬದುಕಿನಲ್ಲಿ ಮೇಲೆ ಬರಲು ಆರಂಭಿಸಿದ ನಂತರ. ಈ ಹಂತದಲ್ಲಿ ಚಿತ್ರದ ಓಟಕ್ಕೆ ಅನಿರೀಕ್ಷಿತ ತಿರುವು ನೀಡಿರುವ ನಿರ್ದೇಶಕರು, ಚಿತ್ರವನ್ನು ಭಾವುಕಗೊಳಿಸುವ ಯತ್ನ ನಡೆಸಿದ್ದಾರೆ. ಕಥೆಯನ್ನು ಆರಂಭಿಸಿದ, ಅದನ್ನು ಕಟ್ಟಿದ ಹಾಗೂ ವಿಸ್ತರಿಸಿದ ಬಗೆಯು ಮಿಲೆನಿಯಲ್‌ಗಳ ಬದುಕನ್ನು ಪ್ರತಿಫಲಿಸುವಂತೆ ಇದೆ.

ಪಾತ್ರಗಳ ವ್ಯಕ್ತಿತ್ವವನ್ನು ಕಟ್ಟಿರುವ ರೀತಿಯು ರೊಮ್ಯಾಂಟಿಕ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಮೆಚ್ಚುಗೆಯಾಗದೆ ಇರದು. ಕೃಷ್ಣ, ಮಿಲನ ನಾಗರಾಜ್, ಅಮೃತಾ ಅಯ್ಯಂಗಾರ್ ಅವರ ಅಭಿನಯ ಮನಸ್ಸಿನಲ್ಲಿ ಉಳಿಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು