ಶುಕ್ರವಾರ, ಮೇ 27, 2022
30 °C

ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರ ವಿಮರ್ಶೆ: ಹಲವು ತೊರೆಗಳ ಕಥನ, ಸೈರಣೆ ಬೇಡುವ ದರ್ಶನ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಮ್ಯಾನ್ ಆಫ್‌ ದಿ ಮ್ಯಾಚ್ (ಕನ್ನಡ)
ನಿರ್ಮಾಣ: ಪಿಆರ್‌ಕೆ ಪ್ರೊಡಕ್ಷನ್ಸ್
ನಿರ್ದೇಶನ: ಡಿ. ಸತ್ಯಪ್ರಕಾಶ್
ತಾರಾಗಣ: ನಟರಾಜ್ ಎಸ್. ಭಟ್, ಧರ್ಮಣ್ಣ ಕೆ, ಲಿಖಿತ್ ರಾಜ್ ಅರಸ್, ಸಂತೋಷ್ ಶೆಟ್ಟಿ, ಮಯೂರಿ ನಟರಾಜ್, ಶ್ರೀದತ್ತ, ಸುಂದರ್, ವೀಣಾ ಸುಂದರ್, ಶ್ರೀಧರ್ ರಾಮ್, ಬಿ.ಎಸ್. ಕೆಂಪರಾಜ್,

ಹಲವು ತೊರೆಗಳ ಕಥನ
ಸೈರಣೆ ಬೇಡುವ ದರ್ಶನ

ಇದು ರಿಯಾಲಿಟಿ ಷೋಗಳ ಕಾಲ. ಜನರು ಸಂದರ್ಭಕ್ಕನುಗುಣವಾಗಿ ಹೇಗೆ ವರ್ತಿಸುತ್ತಾರೋ ಆ ಭಾವಗಳ ಮೆರವಣಿಗೆಯದೇ ಮಾರುಕಟ್ಟೆ. ಬಿಕರಿಗಿಟ್ಟ ಭಾವನೆಗಳಿಗೆ ಟಿಆರ್‌ಪಿ ಮುದ್ರೆ. ಇನ್ನೊಂದು ಕಡೆ ಡಿಜಿಟಲ್ ವ್ಯೋಮಲೋಕದಲ್ಲಿ ನಾವು ಮೂಡಿಸಿದ ಹೆಜ್ಜೆಗುರುತುಗಳನ್ನೆಲ್ಲ ಹಿಂಬಾಲಿಸುವ ಕಾಣದ ಕಣ್ಣುಗಳಿಂದಾಗಿ ಖಾಸಗೀತನ ಬರೀ ಹುಸಿ. ಜಗವೇ ನಾಟಕರಂಗ ಎನ್ನುವುದಾದರೆ, ಇಲ್ಲಿನ ಸಮಾಜೋ–ರಾಜಕೀಯದ ದಾಳಗಳು ನಾವೆಲ್ಲ. ಇಂತಹ ಸೂಕ್ಷ್ಮ ಸಾರವನ್ನೆಲ್ಲ ಬಸಿದುಕೊಂಡ ಕಥಾನಾಟಕ ‘ಮ್ಯಾನ್‌ ಆಫ್ ದಿ ಮ್ಯಾಚ್’.

ವಸ್ತು ಹೊರಡಿಸುವ ಧ್ವನಿಯಿಂದಾಗಿ ಆಸಕ್ತಿಕರವಾದ ಸಿನಿಮಾ ಇದು. ಆದರೆ, ದೃಶ್ಯದರ್ಶನದ ವಿಷಯದಲ್ಲಿ ಏಕಶ್ರುತಿ. ನೋಡುಗನಿಂದ ಹೆಚ್ಚೇ ಸೈರಣೆಯನ್ನು ಬೇಡುವ ಪ್ರಯೋಗ. ನಿರೂಪಣೆಯ ಏಕತಾನತೆ ಹಾಗೂ ಹಲವು ಧ್ವನಿಗಳನ್ನು ಹೊರಡಿಸುವ ಪಾತ್ರಗಳ ವಾಚ್ಯ ವರ್ತನೆ ಸಿನಿಮಾದ ಓಘಕ್ಕೆ ತೊಡರುಗಳು.
ನಟರಾಜ್ ಅರ್ಥಾತ್ ನಟ ಸಿನಿಮಾ ತೆಗೆಯಲು ಹೊರಟಿದ್ದಾನೆ. ಅದರ ನಿರ್ಮಾಪಕ ಧರ್ಮಣ್ಣ.

ಆಡಿಷನ್‌ಗೆಂದು ಕೆಲವರನ್ನು ಗುಡ್ಡೆ ಹಾಕಬೇಕು. ಅದಕ್ಕೆ ಅನುವು ಮಾಡಿಕೊಡುವುದು ಗಾಂಧಿ ವೇಷದಲ್ಲಿರುವ, ಧಾರವಾಡ ಶೈಲಿಯಲ್ಲಿ ಮಾತನಾಡುವ ಪ್ರಾಮಾಣಿಕ ವ್ಯಕ್ತಿ. ಗಾಂಧಿ ವೇಷಧಾರಿಯೇ ಆಡಿಷನ್‌ಗೆಂದು ಜನರನ್ನು ಕರೆಸುತ್ತಾನೆ. ಆ ಜನರಲ್ಲಿ 30 ಅಡಿ ಕಟ್‌ಔಟ್‌ ಸಮೇತ ಬರುವ ಮಹತ್ವಾಕಾಂಕ್ಷಿ ಯುವಕನಿದ್ದಾನೆ. ಮನೆಯವರು ಒಲ್ಲದಿದ್ದರೂ ಅಭಿನಯದ ತುಡಿತ ಹೊತ್ತ ಸುಂದರ ಜವ್ವನೆಯೂ ಅವಕಾಶದ ಚಾತಕಪಕ್ಷಿ. ಮದುವೆ ನಿಶ್ಚಯವಾದ ಹುಡುಗಿಯನ್ನು ಆಡಿಷನ್‌ಗೆ ಕರೆದುಕೊಂಡು ಬಂದ ಸಾಫ್ಟ್‌ವೇರ್‌ ಎಂಜಿನಿಯರ್ ಇದ್ದಾನೆ. ವೀಣಾ ಸುಂದರ್ ಜತೆ ದಶಕಗಳ ಹಿಂದೆ ಮೊದಲ ಆಡಿಷನ್‌ಗೆ ಹೋಗಿದ್ದ, ಇದುವರೆಗೆ ಒಂದೂ ಅವಕಾಶ ಸಿಗದೆ ಭಗೀರಥಯತ್ನದಲ್ಲಿರುವ ಮಧ್ಯವಯಸ್ಕನೂ ಇರುವನು.

ಇವರೆಲ್ಲರ ನಡುವೆ ಆಟಗಳನ್ನು ಹುಟ್ಟುಹಾಕುತ್ತಾ, ಅವರ ವರ್ತನೆಯಲ್ಲೇ ಕಥಾನಕಗಳನ್ನು ಮೂಡಿಸುವ ‘ಸ್ಯಾಡಿಸ್ಟ್’ ನಿರ್ದೇಶಕ. ಹಾಗೆ ಮೂಡುವ ಕಥನಗಳನ್ನೆಲ್ಲ ಕ್ಯಾಮೆರಾ ಕಣ್ಣುಗಳು ತುಂಬಿಕೊಳ್ಳುತ್ತಿವೆ. ತತ್‌ಕ್ಷಣವೇ ಸಂಕಲನ ಮಾಡಲು ಕೆಂಪರಾಜ್ ನಿರ್ದೇಶಕನ ಪಕ್ಕದಲ್ಲೇ ಕೂತಿದ್ದಾರೆ. ಪ್ರತಿಕ್ರಿಯಾತ್ಮಕ ಶಾಟ್‌ಗಳಿಗಾಗಿಯೇ ಇದ್ದಾರೆ ವೀಣಾ ಹಾಗೂ ಸುಂದರ್ ದಂಪತಿ.

ಹೀಗೆ ಸಿನಿಮಾದೊಳಗೊಂದು ಸಿನಿಮಾ ಆಗುವ ಕಥನವೇ ‘ಮ್ಯಾನ್ ಆಫ್ ದಿ ಮ್ಯಾಚ್’. ಅಂತ್ಯದಲ್ಲಿ ಆಗುವ ಅದಲು ಬದಲು ಕಂಚಿ ಕದಲು ಆಸಕ್ತಿಕರ.

ಇರುವುದನ್ನು ಇರುವಂತೆಯೇ ತೋರುವ ‘ರಿಯಲಿಸ್ಟಿಕ್’ ಆದ ನಿರೂಪಣೆಯು ಪ್ರಯೋಗದ ದೃಷ್ಟಿಯಿಂದ ಚೆನ್ನಾಗಿದೆ. ಆದರೆ, ಅದು ಹಿಡಿದಿಟ್ಟುಕೊಂಡು ನೋಡಿಸಿಕೊಳ್ಳುವುದಿಲ್ಲ. ‘ಎಕೆ ವರ್ಸಸ್ ಎಕೆ’ ಹಿಂದಿ ಚಿತ್ರದಲ್ಲಿ ಅನುರಾಗ್ ಕಶ್ಯಪ್ ತಮ್ಮನ್ನೇ ಒಂದು ಪಾತ್ರವಾಗಿಸಿಕೊಂಡು, ಇನ್ನೊಂದು ಪಾತ್ರಕ್ಕೆ ನಟ ಅನಿಲ್ ಕಪೂರ್ ಅವರನ್ನು ಯಥಾವತ್ತಾಗಿ ನಿಜ ಬದುಕಿನಲ್ಲಿ ಇರುವಂತೆಯೇ ಒಗ್ಗಿಸಿ ಮಾಡಿದ್ದ ಸಿನಿಪ್ರಯೋಗವನ್ನು ಇಲ್ಲಿ ಉಲ್ಲೇಖಿಸಬಹುದು. ಆ ಸಿನಿಮಾಗೆ ಇದ್ದ ವೇಗ ಹಾಗೂ ನಿರೂಪಣೆಯ ಮಾರ್ಗದ ಸಾಧ್ಯತೆಯನ್ನು ಕನ್ನಡದ ಈ ಚಿತ್ರಕ್ಕೂ ಒಗ್ಗಿಸಬಹುದಿತ್ತು.

ಚಿತ್ರದಲ್ಲಿನ ಗಾಂಧಿ ವೇಷಧಾರಿ (ಚಂದ್ರಶೇಖರ್ ಮಾಡಭಾವಿ ಈ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ) ಪಾತ್ರಪೋಷಣೆಯ ಬರವಣಿಗೆ ಆಸಕ್ತಿಕರವಾಗಿದೆ. ಇಡೀ ಪಾತ್ರ ಸಶಕ್ತ ಸಂಕೇತದಂತೆ ಚಿತ್ರದುದ್ದಕ್ಕೂ ಪ್ರವಹಿಸುತ್ತದೆ. ಕೊನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುವ ಗಾಂಧಿಯ ಊರುಗೋಲು, ಕನ್ನಡಕ ಈ ಹೊತ್ತಿನ ರಾಜಕೀಯ ವಿದ್ಯಮಾನದ ಬಿಂಬವೇ ಹೌದು. ಸ್ಯಾಡಿಸ್ಟ್ ನಿರ್ದೇಶಕ ಬೇಕಾದಾಗ ಗಾಂಧಿಯನ್ನು ಒಳಗೆ ಕರೆಯುವ, ಬೇಡವಾದಾಗ ಹೊರಗೇ ಇರುವಂತೆ ಹೇಳುವ ದೃಶ್ಯಗಳು ಮೌಲ್ಯಪಲ್ಲಟದ ರೂಪಕ.

ಸಿದ್ಧಸೂತ್ರದಿಂದ ಹೊರತೇ ಆದ ಚಿತ್ರಗಳನ್ನು ಮಾಡುವ ಸಂಕಲ್ಪ ಇರುವ ನಿರ್ದೇಶಕ ಸತ್ಯಪ್ರಕಾಶ್. ಈ ವಿಷಯದಲ್ಲಿ ಅವರ ಬದ್ಧತೆಗೆ ‘ರಾಮ ರಾಮ ರೇ’ ಹಾಗೂ ‘ಒಂದಲ್ಲ ಎರಡಲ್ಲ’ ಅತ್ಯುತ್ತಮ ಉದಾಹರಣೆಗಳು. ದೃಶ್ಯವಂತಿಕೆಯ ತುಲನೆಯಲ್ಲಿ ಹಾಗೂ ನಿರೂಪಣಾ ಶಿಲ್ಪದ ವಿಷಯದಲ್ಲಿ ಆ ಎರಡೂ ಚಿತ್ರಗಳಿಗಿಂತ ಇದು ಕೆಳಗಿಳಿಯುತ್ತದೆ. ಕೂಗುಮಾರಿಗಳ ಕಾಲದಲ್ಲಿ ಮಾತಿನ ಮಂಟಪದಲ್ಲೇ ಹಲವು ಸಮಕಾಲೀನ ಸಂಗತಿಗಳನ್ನು ಅರುಹಬೇಕೆಂಬ ನಿರ್ದೇಶಕರ ಕುದಿ ಇದಕ್ಕೆ ಕಾರಣವಿದ್ದಿರಬೇಕು.

ನಿರ್ದೇಶಕನ ಪಾತ್ರದಲ್ಲಿ ನಟರಾಜ ಭಟ್ ಅವರಿಂದ ಏಕಭಾವದ ಅಭಿವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿಯೇ ಸತ್ಯಪ್ರಕಾಶ್ ತೆಗೆಸಿರಬಹುದು. ನೋಡುಗರಿಗೆ ಅದು ಸ್ಪಷ್ಟವಾಗಿ ದಾಟುವುದಿಲ್ಲ. ಧರ್ಮಣ್ಣನ ‘ಹಾಸ್ಯವಲ್ಲರಿ’ ಹೆಚ್ಚು ನಗಿಸುವುದಿಲ್ಲ. ಪ್ರೇಮಿಗಳ ತಲ್ಲಣ, ಹೊಯ್ದಾಟ, ಲಿಂಗ ತಾರತಮ್ಯ ಹೇಳುವ ದೃಶ್ಯಗಳಲ್ಲಿ ಒಂದೇ ಉದ್ದೇಶ ಹಲವು ಸಲ ವ್ಯಕ್ತಗೊಂಡಿದೆ.

ಕೊನೆಯಲ್ಲಿ ಪುನೀತ್ ರಾಜ್‌ಕುಮಾರ್‌ ಹಾಡಿರುವ ಅರ್ಥವಂತಿಕೆಯ ಹಾಡು ಅವರ ನೆನಪನ್ನು ಮೂಡಿಸಿ ಕಣ್ಣಂಚಲ್ಲಿ ನೀರು ತರಿಸುತ್ತದೆ. ರಂಗ ಪ್ರಸ್ತುತಿಯೊಂದನ್ನು ತೆರೆಮೇಲೆ ನೋಡಿದ ಪರಿಣಾಮವೂ ಉಳಿಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು