ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ– ‘ಮಾವು ಬೇವು’| ಕಟ್ಟಿಟ್ಟ ಹಾಡುಗಳಿಗೆ ಕಥಾಕಾಣ್ಕೆಯ ಸಿಕ್ಕು

Published 24 ಏಪ್ರಿಲ್ 2023, 10:27 IST
Last Updated 24 ಏಪ್ರಿಲ್ 2023, 10:27 IST
ಅಕ್ಷರ ಗಾತ್ರ

ವಿಶಾಖ ಎನ್‌.

ಚಿತ್ರ: ಮಾವು ಬೇವು (ಕನ್ನಡ)

ನಿರ್ಮಾಣ: ರಾಜಶೇಖರ ಎಸ್.

ನಿರ್ದೇಶನ: ಕೆ. ಸುಚೇಂದ್ರ ಪ್ರಸಾದ

ತಾರಾಗಣ: ನೀನಾಸಂ ಸಂದೀಪ್, ಚೈತ್ರಾ, ಡ್ಯಾನಿ ಕುಟ್ಟಪ್ಪ, ಶ್ರೀನಿವಾಸಮೂರ್ತಿ, ಸುಂದರಶ್ರೀ, ಸುಪ್ರಿಯಾ ಎಸ್. ರಾವ್, ರಂಜಿತಾ, ಸಿತಾರ ಚಕ್ರವರ್ತಿ.

ಹಾಡುಗಳನ್ನೇ ಪ್ರಧಾನವಾಗಿ ಇಟ್ಟುಕೊಂಡು ಹೆಣೆದ ಚಿತ್ರಕಥೆಗಳು ಕನ್ನಡದಲ್ಲಿ ವಿರಳ. ‘ಮೈಸೂರು ಮಲ್ಲಿಗೆ’ ಅದಕ್ಕೊಂದು ಸಶಕ್ತ ಮಾದರಿ. 1970ರ ದಶಕದಲ್ಲಿ ದೊಡ್ಡರಂಗೇಗೌಡರು ಬರೆದ ಹಾಡುಗಳನ್ನು ‘ಮಾವು–ಬೇವು’ ಹೆಸರಿನಲ್ಲಿ ಆಡಿಯೊ ಕ್ಯಾಸೆಟ್ ರೂಪದಲ್ಲಿ ಹೊರತರಲಾಗಿತ್ತು. ಸಿ. ಅಶ್ವತ್ಥ್, ಎಲ್. ವೈದ್ಯನಾಥನ್ ತರಹದ ಸ್ವರಪುತ್ರರು ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಂತಹ ನಿನಾದ ಶಾರೀರ ಬಳಸಿಕೊಂಡು ಈ ಆಲ್ಬಂ ಸೃಷ್ಟಿಸಿದ್ದರು. ‘ಮೂಡುತ ರವಿ ರಂಗು ಚೆಲ್ಲೈತೆ’, ‘ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು–ಬೆಲ್ಲ’, ‘ಸುಗ್ಗಿ ವ್ಯಾಳೇಗೆ’ ತರಹದ ಹಾಡುಗಳು ಈಗಲೂ ಮನಸ್ಸಿನಲ್ಲಿ ಗುನುಗುವಂತೆ ಮಾಡುವಷ್ಟು ಶಕ್ತ.

ಈ ಹಾಡುಗಳನ್ನೇ ಆಧಾರವಾಗಿಟ್ಟುಕೊಂಡು ಸುಚೇಂದ್ರ ಪ್ರಸಾದ್ ‘ಮಾವು–ಬೇವು’ ಹೆಸರಿನದ್ದೇ ಸಿನಿಮಾ ರಚಿಸಿದ್ದಾರೆ. ಆದರೆ, ಈ ಸಿನಿಮಾದ ಆತ್ಮ ‘ಮೈಸೂರು ಮಲ್ಲಿಗೆ’ಯಂತಹುದಲ್ಲ.

ಸುಚೇಂದ್ರ ಪ್ರಸಾದ್ ಅವರಿಗೆ ಕಟ್ಟುವಿಕೆಯಲ್ಲಿ ದೊಡ್ಡರಂಗೇಗೌಡರ ಸಾಥ್‌ ಕೂಡ ಇದೆ. ದಶಕಗಳ ಹಿಂದೆ ಬರೆದ ಹಾಡುಗಳನ್ನು ಹೀಗೆ ಕಥಾರೂಪಕ್ಕೆ ಒಗ್ಗಿಸುವುದು ಸವಾಲೇ ಸರಿ. ಮುರಿದುಹೋಗುತ್ತಿರುವ ದಾಂಪತ್ಯದ ಮೇಲೆ ಬೆಳಕು ಚೆಲ್ಲುತ್ತಲೇ ಸುಚೇಂದ್ರ ಪ್ರಸಾದ್, ‘ಸಿರಿಭೂವಲಯ’ ಕೃತಿಯ ವ್ಯಾಪಕತೆಯನ್ನು ದಾಟಿಸುವ ಯತ್ನಕ್ಕೆ ಕೈಹಾಕಿದ್ದಾರೆ. ಬಾಲ್ಯದ ಪ್ರೀತಿಯೊಂದಕ್ಕೆ ಒಲವಿನ ಮರುಸಿಂಚನ ಮಾಡುವ ಮತ್ತೊಂದು ಸ್ತರವನ್ನೂ ಸೇರಿಸಿದ್ದಾರೆ.

ಹಿಂದಿ, ಕನ್ನಡ, ಇಂಗ್ಲಿಷ್, ಸಂಸ್ಕೃತ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಪಾತ್ರಗಳು ಬಗೆಬಗೆಯಾಗಿ ಸಂವಹನದಲ್ಲಿ ತೊಡಗುತ್ತವೆ. ಕೇಂದ್ರಪಾತ್ರದ ಅಪ್ಪ–ಅಮ್ಮನ ಸಂಭಾಷಣೆಯಂತೂ ಸಂಪೂರ್ಣ ಗಾದೆಮಯ. ಸಂತಸ, ವಿಷಾದ, ಬೋಧನೆ, ವ್ಯಂಗ್ಯ ಎಲ್ಲ ಭಾವಗಳಿಗೂ ಇದೇ ರೀತಿಯ ಮಾತು.

ಗೀತೆಗಳ ಕಾಣ್ಕೆ ಇಟ್ಟುಕೊಂಡ ಚಿತ್ರಕಥೆ ಹೊಸೆಯುವುದೇ ಹೊರೆ. ಅದನ್ನು ಹೊತ್ತಿರುವ ನಿರ್ದೇಶಕರು ಇನ್ನಷ್ಟು ಗೋಜಲುಗಳ ಭಾರವನ್ನು ಅದಕ್ಕೆ ಸೇರಿಸಿದ್ದಾರೆ. ವಿವಾಹವಾಗದೆ ಒಂದೇ ಸೂರಿನಡಿ ಬದುಕಲು ಹೊರಟ ಗಂಡು–ಹೆಣ್ಣಿನ ಸಂಬಂಧ ಹಳಸಿಕೊಂಡಿದೆ. ಇದರ ಅಭಿವ್ಯಕ್ತಿ ಸಂಪೂರ್ಣ ಕಪ್ಪು–ಬಿಳುಪು. ಹಿಂದಿ ಉಸುರುತ್ತಾ ಆಗೀಗ ಸಿಗರೇಟು ಹೊಗೆಯನ್ನು ಬಿಡುವ ನಾಯಕಿಗೆ ನಾಯಕನ ಸಕಲೇಷ್ಟವೂ ಅಸಹನೀಯ ಎನ್ನಿಸಿಬಿಟ್ಟಿದೆ. ನಾಯಕನ ಸ್ನೇಹಿತನದ್ದು ಸುಖ ದಾಂಪತ್ಯ ಎಂದು ನಾವೆಲ್ಲ ಭಾವಿಸುವ ಹೊತ್ತಿಗೇ ಅದರಲ್ಲೂ ಹುಳಿ. ಕೊನೆಗೆ ನೀತಿಬೋಧೆಗೆ ಅಪಘಾತ ಪ್ರಸಂಗ. ಮೃತ್ಯುವಿನ ಪರಿಪಾಟ. ಎಲ್ಲವನ್ನೂ ‘ನೋಡಿ ಕಲಿ’ ಎನ್ನುವ ಬೋಧನೆ.

ಹಾಡುಗಳನ್ನು ಎಲ್ಲಿಯೂ ಹೇರಿಯಾಗದಂತೆ ಚಿತ್ರೀಕರಿಸಿರುವುದು ಸಿನಿಮಾದ ಆಸಕ್ತಿಕರ ಅಂಶ. ಪಾತ್ರಗಳ ಸುತ್ತ ಕಟ್ಟಿರುವ ಪರಿಸರವೂ ಗಮನಾರ್ಹ. ಆದರೆ, ಅವುಗಳ ಭಾವಾಭಿವ್ಯಕ್ತಿ–ಭಾಷಾಭಿವ್ಯಕ್ತಿ ಸಿಕ್ಕುಸಿಕ್ಕಾಗಿರುವುದು ಕೊರೆ.

ಮುಖ್ಯಪಾತ್ರಗಳಲ್ಲಿ ನೀನಾಸಂ ಸಂದೀಪ್, ಚೈತ್ರಾ ಶ್ರದ್ಧೆಯನ್ನು ಮೆಚ್ಚಬೇಕು. ಶ್ರೀನಿವಾಸಮೂರ್ತಿ, ಸುಂದರಶ್ರೀ ಗಾದೆಗಳ ಜುಗಲ್‌ಬಂದಿಯನ್ನು ಮನರಂಜನೆಯಾಗಿ ಸ್ವೀಕರಿಸಬಹುದು.

ಎಂದೋ ಕಟ್ಟಿಟ್ಟ ಹಾಡುಗಳ ಕಟ್ಟೊಂದಕ್ಕೆ ಕಥನರೂಪ ಒದಗಿಸುವ ಇಂತಹ ಪ್ರಯತ್ನಗಳು ಈ ಕಾಲದಲ್ಲೂ ಆಗುತ್ತಿರುವುದಕ್ಕೆ ಹೆಮ್ಮೆಯನ್ನಂತೂ ಪಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT