ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬಡವ ರಾಸ್ಕಲ್' ಸಿನಿಮಾ ವಿಮರ್ಶೆ: ಹಳೆ ಕಥೆಗೆ ಹೊಸ ಭಾವದ್ರವ್ಯ

Last Updated 24 ಡಿಸೆಂಬರ್ 2021, 10:09 IST
ಅಕ್ಷರ ಗಾತ್ರ

ಚಿತ್ರ: ಬಡವ ರಾಸ್ಕಲ್ (ಕನ್ನಡ)
ನಿರ್ಮಾಣ: ಸಾವಿತ್ರಮ್ಮ ಅಡವಿಸ್ವಾಮಿ
ನಿರ್ದೇಶನ: ಶಂಕರ್ ಗುರು
ತಾರಾಗಣ: ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ನಾಗಭೂಷಣ್, ತಾರಾ, ಪೂರ್ಣಚಂದ್ರ ಮೈಸೂರು, ರೇಖಾ.

***

ಒಂದು ಕಾಲದಲ್ಲಿ ಕೊರಿಯರ್ ಬಾಯ್ ಆಗಿದ್ದ ಶಂಕರ್ ಗುರು ‘ಬಡವ ರಾಸ್ಕಲ್’ ಸಿನಿಮಾ ಮೂಲಕ ನಿರ್ದೇಶಕರಾಗಿದ್ದಾರೆ. ಮಹತ್ವಾಕಾಂಕ್ಷೆಯಿಂದ ಕ್ರಿಯಾಶೀಲ ಮಾಧ್ಯಮಕ್ಕೆ ಯಾರು ಬೇಕಾದರೂ ಪ್ರವೇಶಿಸಬಹುದೆನ್ನುವುದಕ್ಕೆ ಇದು ಸಾಕ್ಷಿ. ತಮ್ಮ ಹಿನ್ನೆಲೆಯ ಕಾರಣದಿಂದಲೋ ಏನೋ ಅವರು ಬೆಂಗಳೂರಿನ ಮಧ್ಯಮವರ್ಗದ ಶ್ರಮಿಕರ ಕುಟುಂಬಗಳನ್ನೇ ಈ ಚಿತ್ರದ ಪಾತ್ರಗಳನ್ನಾಗಿಸಿದ್ದಾರೆ. ತುಸು ಅತ್ತಿತ್ತಲಾದ ಭಿತ್ತಿಯ ಮೇಲೆ ಭಾವುಕ ಕಥನ ಮೂಡಿಸುವುದರಲ್ಲಿ ಯಶಸ್ವಿಯೂ ಆಗಿದ್ದಾರೆ.

‘ಬಡವ ರಾಸ್ಕಲ್’ ಸರಳರೇಖೆಯಂತಹ ಕಥೆಯ ಸಿನಿಮಾ. ಯಾವುದೂ ಹೊಸತಲ್ಲ. ನಾಯಕ ಎಂಬಿಎ ಪದವೀಧರ. ಸ್ವಂತ ಗಾಡಿಗಳನ್ನು ಇಟ್ಟು ಬದುಕು ನಡೆಸಬೇಕೆಂದು ಕನಸು ಕಟ್ಟಿಕೊಂಡವನು. ಅವನ ತಂದೆ ಆಟೊ ಚಾಲಕ. ತಾಯಿ ಅಪ್ಪಟ ಮಧ್ಯಮ ವರ್ಗದ ಮಾತೆ. ಕುಶಲಕ್ಕೆ, ತರಲೆಗೆ ನಾಯಕನಿಗೆ ದೊಡ್ಡ ಸ್ನೇಹಿತರ ಬಳಗವಿದೆ. ಅವನೇ ಹೇಳಿಕೊಳ್ಳುವಂತೆ, ‘ಸಿಗರೇಟು ಹಚ್ಚಲು ಬೆಂಕಿಪೊಟ್ಟಣ ಕೊಟ್ಟವನನ್ನೂ ಫ್ರೆಂಡ್ ಮಾಡಿಕೊಳ್ಳೋನು’. ಅವನು ಶ್ರೀಮಂತ ರಾಜಕಾರಣಿಯ ಮಗಳನ್ನು ಪ್ರೀತಿಸುತ್ತಾನೆ. ಇದು ಕಥೆಯ ಸಹಜವಾದ ‘ಕಪ್ಪು–ಬಿಳುಪು’ ತಿರುವು. ‘ಮೈನೆ ಪ್ಯಾರ್ ಕಿಯಾ’ ಹಿಂದಿ ಚಿತ್ರದಲ್ಲಿ ನಾಯಕ ಕಲ್ಲು ಹೊಡೆದು ನಾಯಕಿಯ ಬರಸೆಳೆದರೆ, ಇಲ್ಲಿನ ನಾಯಕ ಆಯುಧಗಳನ್ನು ಹಿಡಿದು ಬಂದ ದೊಡ್ಡ ದೇಹದವರನ್ನು ಬಡಿದ ಮೇಲೆ ತಾಳಿ ಕಟ್ಟುತ್ತಾನೆ.

ಕಥಾಹಂದರ ಮಾಮೂಲಿ ಎನಿಸುತ್ತದೆಯಲ್ಲವೇ? ಆದರೆ, ಶಂಕರ್ ಗುರು ಅದನ್ನು ಕೂರಿಸಿಕೊಂಡು ಹೇಳಿರುವ ರೀತಿ ಆಸಕ್ತಿಕರ. ನಾಯಕ ಚಿತ್ರದಲ್ಲಿ ತನ್ನ ಆತ್ಮಕಥೆಯನ್ನು ತಾನೇ ಹೇಳುವ ಸೂತ್ರಧಾರ. ಅವನನ್ನು ಅಪಹರಿಸಿ ತಂದ ರೌಡಿಗಳೆಲ್ಲ ಆ ಕಥೆಯನ್ನು ಕಣ್ ಕಣ್ ಬಿಟ್ಟುಕೊಂಡು ಕೇಳುತ್ತಾರೆ. ಕಥೆ ಹೇಳುವ ಕ್ರಮದಲ್ಲಿ ಎಲ್ಲೆಲ್ಲಿ ಕುತೂಹಲ ಉಳಿಸಿಕೊಳ್ಳಬೇಕೋ ಅವೆಲ್ಲವನ್ನೂ ನಿರ್ದೇಶಕರು ಉಳಿಸಿಕೊಂಡಿದ್ದಾರೆ. ಚಪ್ಪಾಳೆ, ಶಿಳ್ಳೆಗೆಂದೇ ಸಂಭಾಷಣೆಗಳೂ ಇಡುಕಿರಿದಿವೆ. ನಾಯಕನ ಕೈಗೆ ಮದ್ಯದ ಗ್ಲಾಸನ್ನು ಪದೇ ಪದೇ ಕೊಟ್ಟು, ಅಮಲಿನಲ್ಲೂ ನೀತಿಪಾಠ ಮಾಡಿಸಿರುವುದು ಧನಂಜಯ ಅವರ ಇಮೇಜನ್ನು ಉಜ್ಜಿರುವ ಪರಿ. ನಿರೂಪಣೆಯ ತಂತ್ರ ಅಲ್ಲಲ್ಲಿ ಕೈಕೊಟ್ಟಿದ್ದೆಯಾದರೂ ಭಾವದ ಮೆರವಣಿಗೆ ಅದನ್ನು ದಾಟಿಸುತ್ತದೆ. ಹೊಡೆದಾಟದ ದೃಶ್ಯಗಳು ಹಾಗೂ ಹಾಡುಗಳನ್ನು ಹಾಕಿರುವ ಭಾಗಗಳು ಚಿತ್ರದ ಒಟ್ಟಂದದ ಚೌಕಟ್ಟಿನ ಆಚೆಗೇ ಉಳಿದುಬಿಡುತ್ತವೆ.

ಧನಂಜಯ ತಮ್ಮ ಇಮೇಜಿನೊಟ್ಟಿಗೂ ಈ ಸರಳ ಕಥನದಲ್ಲಿ ಹದವರಿತಂತೆ ಅಭಿನಯಿಸಿದ್ದಾರೆ. ರಂಗಾಯಣ ರಘು ನಿಯಂತ್ರಿತ ನಟನಾ ದಾಳಿ, ಅದಕ್ಕೆ ತಾರಾ ನೀಡಿರುವ ಸಾಥ್ ಚೆನ್ನಾಗಿದೆ. ಪೂರ್ಣಚಂದ್ರ, ನಾಗಭೂಷಣ ಅವರಿಗೂ ನಟನೆಯಲ್ಲಿ ಧಾರಾಳವಾಗಿ ಅಂಕಗಳನ್ನು ನೀಡಬಹುದು. ಅಮೃತಾ ಅಯ್ಯಂಗಾರ್ ಪಾತ್ರಾವಕಾಶವೇ ಚಿಕ್ಕದಾಗಿದೆ.

ವಾಸುಕಿ ವೈಭವ್ ಸ್ವರ ಸಂಯೋಜನೆಯ ‘ಉಡುಪಿ ಹೋಟೆಲು’, ‘ಆಗಾಗ ನೆನಪಾಗುತಾಳೆ’ ಗುನುಗುವಂತಿವೆ.

ಅಪ್ಪ–ಅಮ್ಮ–ಮಗ–ಸ್ನೇಹಿತರ ಭಾವುಕ ಸನ್ನಿವೇಶಗಳನ್ನು ಕಟ್ಟಿರುವುದರಲ್ಲಿ ನಿರ್ದೇಶಕರಿಗೆ ಇರುವ ಶ್ರದ್ಧೆ ಚಿತ್ರದ ಹೈಲೈಟ್. ಅದು ‘ರೆಟರಿಕ್’ ಆಗಿ ಪ್ರಕಟಗೊಂಡರೂ ಕೆಲವು ಹುಳುಕುಗಳನ್ನು ಮುಚ್ಚಿಹಾಕುತ್ತದೆನ್ನುವುದೂ ನಿಜ. ಬಾಳೆಎಲೆಯ ಮೇಲೆ ರಸಗವಳ ಬಡಿಸಿ, ಉಪ್ಪಿನಕಾಯಿಯನ್ನು ಅಗತ್ಯಕ್ಕಿಂತ ಹೆಚ್ಚೇ ಹಾಕಿದರೆ ಹೇಗಿರುವುದೋ ಅದನ್ನು ಈ ಚಿತ್ರಕ್ಕೂ ಅನ್ವಯಿಸಬಹುದು. ಇದೇ ಕಥನವನ್ನು ಇನ್ನಷ್ಟು ಒಪ್ಪವಾಗಿ ಹೇಳಬಹುದಿತ್ತಷ್ಟೆ. ಹಾಗಿದ್ದೂ ‘ಬಡವ ರಾಸ್ಕಲ್’ ನಗರ ನಾಗರಿಕತೆಯಲ್ಲಿ ಏಗುತ್ತಿರುವ ಅನೇಕರನ್ನು ಸಮೀಕರಿಸಿಕೊಳ್ಳುವ ಮೂಲಕ ಗುರುತು ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT