ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಯೋಗ ಸಿನಿಮಾ ವಿಮರ್ಶೆ: ಸಹಜ ಹಾಸ್ಯದ ಕಚಗುಳಿ

Published 17 ನವೆಂಬರ್ 2023, 12:44 IST
Last Updated 17 ನವೆಂಬರ್ 2023, 12:44 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ರಾಜಯೋಗ
ನಿರ್ದೇಶಕ:ಲಿಂಗರಾಜ ಉಚ್ಚಂಗಿದುರ್ಗ
ಪಾತ್ರವರ್ಗ:ಧರ್ಮಣ್ಣ ಕಡೂರು ನಿರೀಕ್ಷಾ ರಾವ್‌ ನಾಗೇಂದ್ರ ಶಾ ಮತ್ತಿತರರು

ನಿರ್ಮಾಣ: ಶ್ರೀರಾಮರತ್ನ ಪ್ರೊಡಕ್ಷನ್ಸ್

ಕೆಲವು ಸಿನಿಮಾಗಳು ಸದ್ದುಗದ್ದವಿಲ್ಲದೆ ತೆರೆಗೆ ಬಂದು ಅನಿರೀಕ್ಷಿತವಾಗಿ ಅಚ್ಚರಿ ಮೂಡಿಸುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ‘ರಾಜಯೋಗ’ವನ್ನೂ ಸೇರಿಸಬಹುದು. ಸಾಕಷ್ಟು ಇತಿಮಿತಿಗಳ ನಡುವೆ ನಗುವನ್ನೇ ಪ್ರಧಾನವಾಗಿಸಿಕೊಂಡು, ಸಣ್ಣ ತಿರುವುಗಳೊಂದಿಗೆ ಕೊನೆಗೊಂದು ಸಂದೇಶ ನೀಡುವ ಅಚ್ಚುಕಟ್ಟಾದ ಚಿತ್ರವಿದು. ನಾಯಕ ಧರ್ಮಣ್ಣ ಕಡೂರು, ನಾಗೇಂದ್ರ ಶಾ ಅಭಿನಯ, ಹಾಸ್ಯದ ಸನ್ನಿವೇಶಗಳೇ ಚಿತ್ರದ ಜೀವಾಳ.

ನಾಯಕ ‘ಪ್ರಾಣೇಶ್‌’ ಮೂಲ ನಕ್ಷತ್ರದಲ್ಲಿ ಹುಟ್ಟಿದವನೆಂಬ ಕಾರಣಕ್ಕೆ ತಂದೆಯಿಂದ ಹಿಡಿದು ಊರಿನ ಎಲ್ಲರೆದುರು ಅವಮಾನಕ್ಕೆ ಒಳಗಾಗುತ್ತಾನೆ. ವಿಪರೀತ ಓದಿಕೊಂಡಿರುವ ಈತ ಆಗಾಗ ಸಾಧಕರ ಮಾತುಗಳನ್ನು ನೆನಪಿಸಿಕೊಳ್ಳುತ್ತ, ಕೈಯಲ್ಲಿರುವ ಪುಸ್ತಕದಿಂದ ಒಂದಷ್ಟು ಸಾಲುಗಳನ್ನು ಹೇಳುತ್ತ ತನಗಾದ ಅವಮಾನವನ್ನು ನುಂಗಿಕೊಳ್ಳುತ್ತಾನೆ. ಯಾರೆಷ್ಟೇ ಉಗಿದರೂ ಒರೆಸಿಕೊಂಡು ಹೋಗುವ ಜಾಯಮಾನ ತನ್ನದು ಎಂಬಂತೆ ಬದುಕುತ್ತಿರುವ ಈತನಿಗೆ ಕೆಎಎಸ್‌ ಪರೀಕ್ಷೆ ಬರೆದು ಅದೇ ಊರಿಗೆ ತಹಶೀಲ್ದಾರನಾಗಿ ಬರಬೇಕೆಂಬ ಕನಸು. ಆತನ ಕನಸು ಈಡೇರುತ್ತದೆಯೋ ಇಲ್ಲವೋ ಎಂಬುದೇ ಚಿತ್ರದ ಒಟ್ಟಾರೆ ಕಥೆ.

ಹಳ್ಳಿಯಲ್ಲಿ ನಡೆಯುವ ಕಥೆಗೆ ಸೂಕ್ತವಾದ ಪಾತ್ರಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಕೆಲವಷ್ಟು ಹೊಸ ಬಗೆಯ ಹಾಸ್ಯದ ಸನ್ನಿವೇಶಗಳು ಮುದ ನೀಡುತ್ತವೆ. ಅವಕ್ಕೆ ಪೂರಕವಾದ ಸಂಭಾಷಣೆ ಇದೆ. ಸನ್ನಿವೇಶಕ್ಕೆ ತಕ್ಕಂತೆ ಆ ಮಾತುಗಳನ್ನು ದಾಟಿಸುವ ಧರ್ಮಣ್ಣ ಹಾಗೂ ನಾಯಕನ ತಂದೆಯ ಪಾತ್ರಧಾರಿ ನಾಗೇಂದ್ರ ಶಾ ತಮ್ಮ ಅಭಿನಯದಿಂದಲೇ ಸಿನಿಮಾವನ್ನು ಜೀವಂತವಾಗಿಸಿರುತ್ತಾರೆ. ನಾಯಕಿ ನಿರೀಕ್ಷಾ ಅಭಿನಯ ಕೂಡ ಸಹಜವಾಗಿದೆ.

ಸನ್ನಿವೇಶಗಳಲ್ಲಿ ಸಹಜವಾಗಿಯೇ ಹಾಸ್ಯ ಬೆರೆತಿದೆ. ದ್ವಂದಾರ್ಥದ ಹಾಸ್ಯಗಳಿಲ್ಲ. ಆದಾಗ್ಯೂ ಕೆಲವೆಡೆ ಇರುವ ಹಳ್ಳಿಗಾಡಿನ ಒರಟು ಭಾಷೆಯನ್ನು ಒಂಚೂರು ಮೃದುವಾಗಿಸಬಹುದಿತ್ತು. ಇಡೀ ಚಿತ್ರಕ್ಕೆ ಅವಧಿಯೇ ಭಾರ. ಸಂಕಲನವನ್ನು ಇನ್ನಷ್ಟು ಮೊನಚಾಗಿಸಿ, ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವ ಕೆಲವಷ್ಟು ದೃಶ್ಯಗಳನ್ನು ಕತ್ತರಿಸಿ, ಒಟ್ಟಾರೆ ಅವಧಿಯನ್ನು ಇನ್ನೂ ಅರ್ಧಗಂಟೆಯಷ್ಟು ಇಳಿಸುವ ಎಲ್ಲ ಅವಕಾಶ ನಿರ್ದೇಶಕರಿಗಿತ್ತು. ಕಥೆಗೆ ಅವಶ್ಯವಿಲ್ಲದ, ನೆನಪಿನಲ್ಲಿಯೂ ಉಳಿಯದ ಮೂರು ಹಾಡುಗಳನ್ನು ಕತ್ತರಿಸಿದ್ದರೆ ಚಿತ್ರ ಇನ್ನಷ್ಟು ಹಿತವೆನಿಸುತ್ತಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT