ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೇಮೊ’ ಸಿನಿಮಾ ವಿಮರ್ಶೆ: ಸದ್ಯದ ಚಿತ್ರರಂಗದ ಪಿಚ್‌ನಲ್ಲಿ ನಡೆಯಲ್ಲ ‘ಗೂಗ್ಲಿ’!

Last Updated 25 ನವೆಂಬರ್ 2022, 11:45 IST
ಅಕ್ಷರ ಗಾತ್ರ

ಸಿನಿಮಾ: ರೇಮೊ(ಕನ್ನಡ)

ನಿರ್ದೇಶನ: ಪವನ್‌ ಒಡೆಯರ್‌

ನಿರ್ಮಾಪಕ: ಸಿ.ಆರ್‌.ಮನೋಹರ್‌

ತಾರಾಗಣ: ಇಶಾನ್‌, ಆಶಿಕಾ ರಂಗನಾಥ್‌, ಅಚ್ಯುತ್‌ ಕುಮಾರ್‌, ಶರತ್‌ ಕುಮಾರ್‌, ರಾಜೇಶ್‌ ನಟರಂಗ ಮತ್ತಿತರರು

‘ಗೂಗ್ಲಿ’ಯಲ್ಲಿ ಲವ್‌ ಸ್ಪಿನ್‌ ಮಾಡಿ ಬಾಕ್ಸ್‌ ಆಫೀಸ್‌ ವಿಕೆಟ್‌ ಕಬಳಿಸಿದ್ದ ನಿರ್ದೇಶಕ ಪವನ್‌ ಒಡೆಯರ್‌ ಅವರು, ಕಳೆದೆರಡು ವರ್ಷದಲ್ಲಿ ಕನ್ನಡ ಚಿತ್ರರಂಗದ ಪಿಚ್‌ ಹಾಗೂ ಪ್ರೇಕ್ಷಕರ ಅಭಿರುಚಿ ಬದಲಾಗಿರುವುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿ ‘ರೇಮೊ’ ಮೂಲಕ ತಾವೇ ಹಿಟ್‌ವಿಕೆಟ್‌ ಆಗಿದ್ದಾರೆ.

‘ಗೂಗ್ಲಿ’ ಪವನ್‌ ಅವರ ಟ್ರೇಡ್‌ ಮಾರ್ಕ್‌. ಪ್ರೇಮಕಥೆ ಹೊಂದಿದ ಸಿನಿಮಾಗಳ ಪೈಕಿ ಈ ಸಿನಿಮಾಗೆ ಅದರದೇ ಆದ ಗುರುತು ಇದೆ. ಇದೇ ಜಾನರ್‌ನಲ್ಲಿದೆ ‘ರೇಮೊ’. ಇಲ್ಲೂ ಪ್ರೀತಿ ಎನ್ನುವುದು ಸ್ಪಿನ್‌ ಆಗುತ್ತಲೇ ಇರುತ್ತದೆ. ಹೀಗಾಗಿ ಹಲವು ತಿರುವುಗಳೂ ಚಿತ್ರಕಥೆಯಲ್ಲಿದೆ. ಆದರೆ ಇದಕ್ಕೆ ಯಾಕೋ ಹೆಚ್ಚಿನ ಪ್ರಮಾಣದಲ್ಲೇ ಮಸಾಲೆ, ಗ್ಲ್ಯಾಮರ್‌ ಸೇರಿಸಿದ್ದಾರೆ ನಿರ್ದೇಶಕರು. ಅದೂ ಒಂದಿಷ್ಟೂ ರುಚಿಸದಷ್ಟು. ಗಟ್ಟಿಯಾದ ಕಥೆ ಇಲ್ಲದೇ ಇರುವುದು, ಕೆಲವೆಡೆ ತರ್ಕಕ್ಕೆ ಸಿಗದ ಸ್ಕ್ರೀನ್‌ಪ್ಲೇ, ಅನವಶ್ಯಕ ದೃಶ್ಯಗಳು ಚಿತ್ರದ ಅವಧಿಯನ್ನು 156 ನಿಮಿಷಕ್ಕೆ ಎಳೆದೊಯ್ದಿದೆ. ಹೀಗಾಗಿ ಚಿತ್ರದುದ್ದಕ್ಕೂ ಪ್ರೇಕ್ಷಕನ ತಾಳ್ಮೆಯ ಪರೀಕ್ಷೆ ಆಗಾಗ ಆಗುತ್ತಲೇ ಇರುತ್ತದೆ.

ಕಥೆ ಹೀಗಿದೆ. ಖ್ಯಾತ ಉದ್ಯಮಿಯ ಪುತ್ರ ‘ರೇಮೊ–ಅಲಿಯಾಸ್‌ ರೇವಂತ್‌’(ಇಶಾನ್‌) ಒಬ್ಬ ರಾಕ್‌ಸ್ಟಾರ್‌. ಆತನಿಗೆ ಲಕ್ಷಾಂತರ ಅಭಿಮಾನಿಗಳು. ಹಣದ ಮದ ತಲೆ ಏರಿದೆ. ತಂದೆಗೇ ಕೈ ಎತ್ತುವಷ್ಟು ಸಿಟ್ಟು, ಸಿಕ್ಕಸಿಕ್ಕ ಹುಡುಗಿಯರ ಜೊತೆ ರೊಮ್ಯಾನ್ಸ್‌, ಮದ್ಯಪಾನ, ಧೂಮಪಾನ, ಡ್ರಗ್ಸ್‌ ಅವನ ನೆಚ್ಚಿನ ಹವ್ಯಾಸ! ರೇಮೊ ತನ್ನ ಮ್ಯೂಸಿಕ್‌ ಬ್ಯಾಂಡ್‌ಗೆ ಹಾಡುಗಾರ್ತಿಯೊಬ್ಬಳನ್ನು ಹುಡುಕುತ್ತಾ ಹೊರಟಾಗ ಸಿಗುವವಳೇ ಸಂಪ್ರದಾಯಸ್ಥ ಮನೆತನದ ‘ಮೋಹನ’(ಆಶಿಕಾ ರಂಗನಾಥ್‌). ಆಕೆಯ ಈ ವಿದ್ಯೆಯನ್ನು ಹಣದಿಂದ ಖರೀದಿಸಲು ಹೊರಟಾಗ ಮೋಹನ ನಿರಾಕರಿಸುತ್ತಾಳೆ. ಆದರೆ ಅನಿವಾರ್ಯವಾಗಿ ಆಕೆ ತಂಡದ ಸದಸ್ಯೆಯಾಗುತ್ತಾಳೆ. ಮ್ಯೂಸಿಕ್‌ ಶೋ ನೀಡುತ್ತಾ ರೇಮೊ ಜೊತೆ ವಿದೇಶದಲ್ಲಿ ಸುತ್ತಾಡುತ್ತಾಳೆ. ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ವಿದೇಶದ ಸುತ್ತಾಟ ಮುಗಿಸಿ ತಾಯ್ನಾಡಿಗೆ ಮರಳುವಾಗ ಮಧ್ಯಂತರ. ಇಲ್ಲಿ ಭ್ರಮಾಲೋಕದ ಅನಾವರಣ. ಇವರ ಪ್ರೀತಿ ಏನಾಗುತ್ತದೆ ಎನ್ನುವುದೇ ಮುಂದಿನ ಕಥೆ.

ಹೀರೊ ತೆರೆಪ್ರವೇಶವೇ ತರ್ಕಕ್ಕೆ ಸಿಗುವುದಿಲ್ಲ. ನಟನೆಯಲ್ಲಿ ಇಶಾನ್‌ ಪ್ರೇಕ್ಷಕರಿಗೆ ಅಷ್ಟೇನು ತೃಪ್ತಿಪಡಿಸುವುದಿಲ್ಲ. ಆದರೆ ಸಾಹಸ ದೃಶ್ಯಗಳಲ್ಲಿ ಅಂಕಗಳಿಸುತ್ತಾರೆ. ಈ ಪಾತ್ರಕ್ಕೆ ಬರೆದ ಒಂದೆರಡು ಸಂಭಾಷಣೆಯಷ್ಟೇ ನಗಿಸುತ್ತದೆ. ಮಧ್ಯಂತರದವರೆಗೂ ಕಥೆಗೆ ಆಮೆವೇಗ. ದ್ವಿತೀಯಾರ್ಧದಲ್ಲೇನಾದರೂ ಇದು ವೇಗ ಪಡೆಯುತ್ತಾ ಎಂದು ನಿರೀಕ್ಷಿಸುವ ಪ್ರೇಕ್ಷಕನಿಗೆ ನಿರಾಸೆ ಖಂಡಿತ. ಹಲವು ದೃಶ್ಯಗಳು ತಾಳ್ಮೆ ಬಯಸುತ್ತವೆ.ಆಶಿಕಾ ತಮ್ಮ ನಟನೆಯ ಮೂಲಕ ತಮ್ಮೆರಡೂ ಶೇಡ್ಸ್‌ಗೆ ಜೀವ ತುಂಬಿದ್ದಾರೆ. ಅವರಿಗೆ ಸಿಕ್ಕಿರುವ ತೆರೆಯ ಅವಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಶರತ್‌ಕುಮಾರ್‌, ರಾಜೇಶ್‌ ನಟರಂಗ, ಅಚ್ಯುತ್‌ ಕುಮಾರ್‌, ಮಧೂ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

‘ಜಗದೋದ್ಧಾರನ..’ ಸೇರಿದಂತೆ ಒಂದೆರಡು ಹಾಡುಗಳಷ್ಟೇ ಕಿವಿಗೆ ಇಂಪು. ಚಿತ್ರದುದ್ದಕ್ಕೂ ಅದ್ಧೂರಿತನಕ್ಕೇನೂ ಕೊರತೆ ಇಲ್ಲ. ದುಬಾರಿ ಸೆಟ್‌ಗಳನ್ನು ಬಳಸಿ ಹೀರೊ ಇಂಟ್ರೊಡಕ್ಷನ್‌ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಪ್ರತಿ ಪಾತ್ರದ ಉಡುಪು ಝಗಮಗಿಸಿವೆ.

ಚಿತ್ರದ ಕೊನೆಯಲ್ಲೊಮ್ಮೆ ‘ಡಿಡಿಎಲ್‌ಜೆ’ ನೆನಪಾದರೂ ಆಗಬಹುದು. ‘ಮದುವೆಯಾದ ಬಳಿಕ ಗಂಡ ಏನಿದ್ದರೂ ಹೆಂಡತಿ ಹಾಕಿದ ರಾಗಕ್ಕೇ ತಾಳ ಹಾಕಬೇಕು’ ಎನ್ನುವ ಸಂದೇಶದಿಂದ ಕೊನೆಗೊಳ್ಳುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT