ಬುಧವಾರ, ಆಗಸ್ಟ್ 17, 2022
25 °C

ಹೀರೊ ಸಿನಿಮಾ ವಿಮರ್ಶೆ: ತಲೆಗೆ ಬಿಟ್ಟ ಹುಳಗಳು!

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ನಿರ್ಮಾಣ: ರಿಷಬ್ ಶೆಟ್ಟಿ

ನಿರ್ದೇಶನ: ಎಂ. ಭರತ್ ರಾಜ್

ತಾರಾಗಣ: ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು.

ರಾಮಾಯಣದ ಮರುಕಟ್ಟುವಿಕೆ ನಡೆಯುತ್ತಲೇ ಇರುತ್ತದೆ. ರಾಮ, ಸೀತೆ, ರಾವಣ ಈ ಮೂರೂ ಪಾತ್ರಗಳು ಸ್ಥಿರವಾಗಿದ್ದರೂ ಚರವೂ ಆಗಬಲ್ಲ ಸಂಕೇತಗಳು. ನಿರ್ದೇಶಕ ಭರತ್ ರಾಜ್ ಅವರಿಗೆ ಒಬ್ಬ ರಾವಣ ಬೇಕಿದೆ. ಅವನಿಗೆ ಬಿಲ್ಡಪ್ ಕೊಡಲು ಸಂಸ್ಕೃತದ ಸಾಲುಗಳ ಪಠಿಸುವ ಇನ್ನೊಬ್ಬ ಕಾರ್ಟೂನಿನಂಥ ಭಂಟನ ಅಗತ್ಯವೂ ಉಂಟು. ರಾಮ ಸದ್ಗುಣ ಸಂಪನ್ನನೇನೂ ಆಗಬೇಕಿಲ್ಲ. ಸೀತೆ ಸ್ವಯಂ ಹತ್ಯೆಗೈಯಬಲ್ಲ ಹೊಸಕಾಲದವಳಾದರೂ ನಡೆಯುತ್ತದೆ. ವಾನರ ಸೇನೆ ಯಾವುದು? ಅದು ಇರದಿದ್ದರೂ ಖಳನ ಭಂಟರಿಂದಲೇ ಒಂಚೂರು ಕಪಿಚೇಷ್ಟೆ ಮಾಡಿಸಿದರಾಯಿತು.

ಹೀಗೆ ಹಳೆಕಾಲದ ಸಂಕೇತಗಳನ್ನು ಕಾರ್ಟೂನು ಕ್ಯಾರಿಕೇಚರ್‌ಗಳಂತೆ ಮಾರ್ಪಡಿಸಿ, ರಾಮಾಯಣವಲ್ಲದ ರಾಮಾಯಣವನ್ನು ಭರತ್ ರಾಜ್ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಆಗೀಗ ಫಕ್ಕನೆ ಕಚಗುಳಿ ಇಡುತ್ತದೆ. ಶಿರಾಡಿ ಘಾಟಿಯಂಥ ತಿರುವುಗಳು ಅತಿಯಾದೆಡೆಯಲ್ಲಿ ತುಸು ವಾಂತಿ ಬಂದಂತೆ ಆದೀತು. ನಾಯಕ–ನಾಯಕಿಯತ್ತ ಗುರಿ ಮಾಡಿದ ಬಂದೂಕಿನ ನಳಿಕೆಗಳು. ಅವುಗಳಿಂದ ಹೊಮ್ಮಿದ ಎಲ್ಲಾ ಗುಂಡುಗಳೂ ಮರಕ್ಕೇ ಏಕೆ ತಾಕಬೇಕು ಎಂದು ತರ್ಕಕ್ಕಿಳಿಯಕೂಡದು. ಸುಮ್ಮನೆ ಮಬ್ಬುಬೆಳಕಲ್ಲಿನ ಕಲರ್ ಗ್ರೇಡಿಂಗ್, ಹಿನ್ನೆಲೆ ಸಂಗೀತದ ‘ಎಂಪವರಿಂಗ್’ ನೋಡಬೇಕು–ಕೇಳಬೇಕು.

ತಲೆಬುಡವಿಲ್ಲದಂತೆ ಚಿತ್ರಕಥೆ ಹೆಣೆದು, ರೋಲರ್ ಕೋಸ್ಟರ್ ರೈಡನ್ನಾಗಿಸುವ ನಿರೂಪಣಾ ತಂತ್ರ ಚಲನಚಿತ್ರರಂಗಕ್ಕೆ ಹೊಸತೇನೂ ಅಲ್ಲ. ಘನರೌಡಿಗಳನ್ನು ಕ್ಯಾರಿಕೇಚರ್‌ಗಳಂತೆ ತೋರಿಸಿಯೇ ‘ವೆಲ್‌ಕಮ್’ ತರಹದ ಹಿಂದಿ ಚಿತ್ರ ಗೆದ್ದಿದ್ದು. ಇಲ್ಲಿಯೂ ನಿರ್ದೇಶಕರು ಅಂಥದ್ದೇ ಮನರಂಜನೆಯ ಹಾದಿ ಆರಿಸಿಕೊಂಡಿದ್ದಾರೆ.

ಅಮರಪ್ರೇಮಿಯಂಥವನೂ, ದೇವದಾಸನೂ, ಮದ್ಯ ಕಂಡೊಡನೆ ಜೊಲ್ಲೇಶ್ವರನೂ ಆಗುವ ನಾಯಕನ ಪಾತ್ರದ ರೂಹು ಏನು ಎಂದು ನಾವೆಲ್ಲ ಪದೇ ಪದೇ ತಲೆಕೆರೆದುಕೊಳ್ಳಬೇಕು. ಅವನ ಪ್ರೀತಿಯಿದ್ದೂ ರಾವಣನ ಅಡ್ಡಕ್ಕೆ ನಾಯಕಿ ಹೇಗೆ ಸೇರಿಕೊಂಡಳೋ ಎನ್ನುವುದೂ ರಟ್ಟೇ ಆಗದ ಗುಟ್ಟು. ರಾವಣನ ಮನೆಯ ರೆಡ್‌ಆಕ್ಸೈಡ್ ನೆಲದ ಮೇಲೆ ತೆವಳುವ ಮೊಸಳೆ. ಅದಕ್ಕೆ ಚುಚ್ಚುಮದ್ದು ಕೊಡಲು ಬರುವ ಡಾಕ್ಟರು. ಮನೆಯಲ್ಲಿನ ಹಳವಂಡಗಳನ್ನೆಲ್ಲ ಕಂಡೂ ತನ್ನಪಾಡಿಗೆ ತಾನು ಪಾಕ ಸಿದ್ಧಪಡಿಸುವ ವಾಚಾಳಿ ಅಡುಗೆ ಭಟ್ಟ. ಸಾಕಿಕೊಂಡ ರೌಡಿಗೆ ಒಂದು ಹೆಚ್ಚುವರಿ ಮೊಟ್ಟೆ ಬೇಕೆಂದರೂ ಮನೆಯೊಡನಿಂದ ಸಹಿ ಹಾಕಿಸಿಕೊಂಡು ಬರಬೇಕೆಂದು ತಿಳಿಸುವ ಲೆಕ್ಕದವನು... ಇವರೆಲ್ಲರ ಪಾತ್ರಗಳು ಅರುಹುವುದಾದರೂ ಏನನ್ನು ಎಂದು ಮತ್ತೊಮ್ಮೆ ತಲೆಕೆರೆದುಕೊಳ್ಳಬೇಕು.

ಕಾರ್ಟೂನುಗಳನ್ನು ನೋಡುವಾಗ ಮೆದುಳಿನೊಳಗೆ ಸಂಭವಿಸುವ ರಾಸಾಯನಿಕ ಕ್ರಿಯೆ ಆ ಕ್ಷಣಕ್ಕೆ ಮಜಾ–ಮುದ ಕೊಡುತ್ತದೆ. ಹಾಗೆಯೇ ಈ ಸಿನಿಮಾದಲ್ಲೂ ಅನೇಕ ಸನ್ನಿವೇಶಗಳಲ್ಲಿ ಆಗುತ್ತದೆ. ಅಂದಮಾತ್ರಕ್ಕೆ ಈ ಚಿತ್ರದ ಶಿಲ್ಪ ಗಟ್ಟಿ ಎಂದರ್ಥವಲ್ಲ.

ಅಭಿನಯದಲ್ಲಿ ರಿಷಬ್ ಶೆಟ್ಟಿ ಟೈಮಿಂಗ್ ಮಜಾ ಕೊಡುತ್ತದೆ. ನಾಯಕಿ ಗಾನವಿಯ ಅಳುವಿನಲ್ಲೂ ಮೂಗುತಿ ಮಿಂಚಿನ ಸೌಂದರ್ಯ ಕಂಡರೆ ಪ್ರೇಕ್ಷಕರ ತಪ್ಪಲ್ಲ. ಪ್ರಮೋದ್ ಶೆಟ್ಟಿ ಹೆಣವಾಗಿಯೂ ಚೆನ್ನಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತದ ಹಾಡುಗಳು ಅರ್ಥಪೂರ್ಣವೂ ಕಾಡುವಂತೆಯೂ ಇವೆ. ಹಿನ್ನೆಲೆ ಸಂಗೀತದ ಅವರ ಕಾಣ್ಕೆಯೂ ದೊಡ್ಡದು. ಅರವಿಂದ್ ಕಶ್ಯಪ್ ಸಿನಿಮಾಟೊಗ್ರಫಿ ದೃಶ್ಯತೀವ್ರತೆಯನ್ನು ಹೆಚ್ಚುಮಾಡಿದೆ.

ಇಡೀ ಸಿನಿಮಾ ನೋಡಿದ ಮೇಲೆ ಇದು ಯಾವ ಜಾನರ್ ಎಂಬ ಹುಳ ಕೊರೆಯತೊಡಗುತ್ತದಲ್ಲ; ಅದನ್ನು ‘ಫ್ಯಾಂಟಸಿ’ಯೆಂದೋ, ಜಾನಪದವೆಂದೋ ನಮಗೆ ನಾವೇ ಸಮಾಧಾನಿಸಿಕೊಳ್ಳಬೇಕಷ್ಟೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು