ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯ ಸಂಬಂಧಗಳ ಅನ್ವೇಷಣೆಯ ಕಥನ

Last Updated 25 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಅಭಿನಯರಂಗದಿಂದ ನಿರ್ದೇಶನ ಕ್ಷೇತ್ರಕ್ಕಿಳಿದಿರುವ ಗೀತು ಮೋಹನ್ ದಾಸ್ ಅವರು, ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಅವರ ನಿರ್ದೇಶನದ 'ಮೂತ್ತೋನ್' ಚಿತ್ರ ವಿಭಿನ್ನ ಕಥಾವಸ್ತುವಿನ ಮೂಲಕ ನಮ್ಮನ್ನು ಚಿಂತನೆಯ ಒರೆಗೆ ಹಚ್ಚುತ್ತದೆ.ಬಿಡುಗಡೆಗೆ ಮುನ್ನವೇ ಟೊರೆಂಟೊ ಮತ್ತು ಮುಂಬೈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿರುವ ಈ ಚಿತ್ರ, ಹಿಂದಿ ಹಾಗೂ ಮಲಯಾಳ ಭಾಷೆಗಳಲ್ಲಿ ಬಿಡುಗಡೆಗೊಂಡಿದೆ.

ಮಲಯಾಳ ಭಾಷೆಯಲ್ಲಿ ‘ಮೂತ್ತೋನ್’ ಎಂದರೆ 'ಹಿರಿಯಣ್ಣ' ಎಂದರ್ಥ. ಹಿರಿಯಣ್ಣನನ್ನು ಹುಡುಕಿಕೊಂಡು ಲಕ್ಷದ್ವೀಪದಿಂದ ಮುಂಬೈಗೆ ತಲುಪುವ ಬಾಲಕನೊಬ್ಬನ ಸುತ್ತ ಇಡೀ ಚಿತ್ರದ ಕಥೆಯು ಸುರುಳಿ ಸುತ್ತುತ್ತದೆ.ಲಕ್ಷದ್ವೀಪದಿಂದ ಆರಂಭವಾಗುವ ಚಿತ್ರದ ಕಥೆಯು ಮುಂಬೈನಲ್ಲಿ ಅಂತ್ಯವಾಗುತ್ತದೆ.

ಹಿಂದಿ ಮತ್ತು ಲಕ್ಷದ್ವೀಪದ ಮಲಯಾಳ ಭಾಷೆಗಳು ಈ ಚಿತ್ರದಲ್ಲಿ ಸಾಕಷ್ಟು ಬಳಕೆಯಾಗಿವೆ. ಹುಡುಕಾಟ ಎಂಬುದು ಇಲ್ಲಿ ಒಂದು ಸಂಕೇತದಂತೆ ಭಾಸವಾಗುತ್ತದೆ. ಸಿನಿಮಾದಲ್ಲಿ ನಾಯಕನ ಎರಡು ವ್ಯಕ್ತಿತ್ವಗಳನ್ನು ವರ್ಣಿಸುವುದರ ಜೊತೆಗೆ ಎರಡು ಪ್ರದೇಶಗಳ ಜನರ ವ್ಯಕ್ತಿತ್ವಗಳ ಮೇಲೂ ನಿರ್ದೇಶಕಿ ಬೆಳಕು ಚೆಲ್ಲಿದ್ದಾರೆ.

ಸಹೋದರನನ್ನು ಹುಡುಕಿಕೊಂಡು ಬರುವ 'ಮುಲ್ಲ' ಹೆಸರಿನ ಬಾಲಕ ಮುಂಬೈನ ಕಾಮಾಟಿಪುರಕ್ಕೆ ತಲುಪುತ್ತಾನೆ. ಅಲ್ಲಿ ಮಕ್ಕಳ ಕಳ್ಳ ಸಾಗಣೆದಾರರ ಕೈಗೆ ಸಿಲುಕಿ ಸಂಕಷ್ಟ ಅನುಭವಿಸುವ ಆತನಿಗೆ 'ಭಾಯಿ' ಹೆಸರಿನ ಗೂಂಡಾನ ಪರಿಚಯವಾಗುತ್ತದೆ. ಮುಂದೆ ಆ ಬಾಲಕನ ಬದುಕು ತಿರುವು ಪಡೆದುಕೊಳ್ಳುತ್ತದೆ‌.

ಎಷ್ಟೇ ಕಷ್ಟಗಳನ್ನು ಅನುಭವಿಸಿದರೂ ಮುಲ್ಲ, ಅಣ್ಣಗಾಗಿ ನಡೆಸುವ ಹುಡುಕಾಟವನ್ನು ಕೊನೆಗಾಣಿಸುವುದಿಲ್ಲ. ಆತನಿಗೆ ಅಣ್ಣ ಸಿಗುತ್ತಾನೊ, ಇಲ್ಲವೋ ಎಂಬುದೇ ಈ ಚಿತ್ರದ ಕಥಾಹಂದರ. ಮುಂಬೈನ ಕಾಮಾಟಿಪುರದ ಜನರ ಬದುಕಿನ ಮೇಲೂ ಈ ಚಿತ್ರ ಬೆಳಕು ಚೆಲ್ಲುತ್ತದೆ. ವೇಶ್ಯಾವಾಟಿಕೆ, ಮಕ್ಕಳ ಕಳ್ಳ ಸಾಗಣೆ, ಮಾದಕ ವಸ್ತುಗಳ ದಂಧೆ ಮೊದಲಾದ ಮುಂಬೈನ ಕತ್ತಲೆ ಜಗತ್ತಿನ ಚಟುವಟಿಕೆಗಳ ಚಿತ್ರಣವೂ ಇದರಲ್ಲಿ ಮೂಡಿ ಬಂದಿದೆ.

ಭಾಯಿ ಪಾತ್ರದಲ್ಲಿ ನಟಿಸಿರುವ ನಿವಿನ್ ಪೌಳಿ ಅನನ್ಯ ಅಭಿನಯ ನೀಡಿದ್ದಾರೆ. ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾದ ಗೆಟಪ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಎರಡು ಛಾಯೆಗಳಿರುವ ಈ ಪಾತ್ರವನ್ನು ನಿವಿನ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಒರಟುತನವೇ ತುಂಬಿರುವ ಭಾಯಿ ಕಥಾಪಾತ್ರದ ಫ್ಲ್ಯಾಶ್ ಬ್ಯಾಕ್ ನ ಮೂಲಕ ದ್ವೀಪದ ಜನರ ಬದುಕಿನ ಚಿತ್ರಣವನ್ನು ನಡು ನಡುವೆ ಕಟ್ಟಿಕೊಡಲಾಗಿದೆ.

ಮಂತ್ರವಾದ, ಧಾರ್ಮಿಕ ವಿಚಾರಗಳಲ್ಲಿ ಅತಿಯಾದ ಶ್ರದ್ಧೆ ಇರುವ ನಾಯಕ ತನ್ನ ಮುಕ್ತ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ಹೇಗೆ ಹೊಸ ವ್ಯಕ್ತಿತ್ವದ ವ್ಯಕ್ತಿಯಾಗಿ ಬದಲಾಗುತ್ತಾನೆ ಎಂಬುದನ್ನೂ ನಿರ್ದೇಶಕಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

ದ್ವೀಪದ ವಿಶಾಲವಾದ ಬದುಕು ಮತ್ತು ಕಾಮಾಟಿಪುರದ ಉಸಿರುಗಟ್ಟಿಸುವ ಜೀವನ, ಭಾಯಿಯ ಮಾನಸಿಕ ತೊಳಲಾಟ, ನಿಸ್ಸಹಾಯಕತೆ ಇವೆಲ್ಲವನ್ನೂ ಈ ಚಿತ್ರವು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ.

ರಾಜೀವ್ ರವಿ ಛಾಯಾಗ್ರಹಣದಲ್ಲಿ ಲಕ್ಷದ್ವೀಪ ಮತ್ತು ಮುಂಬೈ ನಗರದ ದೃಶ್ಯಗಳು ಮನೋಹರವಾಗಿ ಮೂಡಿ ಬಂದಿವೆ‌. ಸಂಜನಾ ದೀಪು, ದಿಲೀಶ್ ಪೋತನ್ , ಶೋಭಿತಾ ಧುಲಿಪಾಲ, ಶಶಾಂಕ್ ಅರೋರ, ಮೆಲಿಸಾ ರಾಜು ಥಾಮಸ್, ರೋಷನ್ ಮ್ಯಾಥ್ಯು ಮತ್ತಿತರರು ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ಗೀತು ಅವರು ತಮ್ಮ ನಿರ್ದೇಶನದ ಮೊದಲ ಚಿತ್ರ 'ಲೈಯರ್ಸ್ ಡೈಸ್' ನಂತೆ ಈ ಚಿತ್ರವನ್ನೂ ಕಲಾತ್ಮಕ ಕೋನಗಳಿಂದ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT