ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟಿಗಾಗಿ ಹಣ–ಲಿಕ್ಕರ್‌–ನಿಕ್ಕರ್‌–ಸೀರೆ ಹಂಚಲು ರೆಡಿ: ಆಯೋಗದ ಅನುಮತಿ ಕೋರಿದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ

ಆಯೋಗದ ಅನುಮತಿ ಕೋರಿದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ
Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜಯನಗರ ಕ್ಷೇತ್ರದ ಮತದಾರರಿಗೆ ಒಂದು ವೋಟಿಗೆ ₹ 2,888, ಕುಕ್ಕರ್‌, ಸೀರೆ ಹಾಗೂ ನಿಕ್ಕರ್‌ ಹಂಚಲು ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ’ ಎಂದು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಆಯೋಗ ವಿಫಲವಾಗಿದೆ. ಹಣ–ಲಿಕ್ಕರ್‌–ಕುಕ್ಕರ್‌–ನಿಕ್ಕರ್‌–ಸೀರೆ–ಮಾಂಸ–ಟೋಕನ್ ಹಂಚಿ ಮತ ಖರೀದಿ ರಾಜಾರೋಷವಾಗಿ ನಡೆಯುತ್ತಿದೆ. ಹೀಗಾಗಿ, ನಾನು ಆಯೋಗದ ಅನುಮತಿ ಪಡೆದೇ ಇವುಗಳನ್ನು ಹಂಚುತ್ತೇನೆ. ಒಂದು ವೇಳೆ ಆಯೋಗ ಉತ್ತರ ನೀಡದಿದ್ದರೆ ಮೌನಂ ಸಮ್ಮತಿ ಲಕ್ಷಣ ಎಂದು ಭಾವಿಸುತ್ತೇನೆ. ಜೂನ್‌ 2ರಂದು ಬೆಳಿಗ್ಗೆ 11 ಗಂಟೆಗೆ ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಇವುಗಳನ್ನು ಹಂಚುತ್ತೇನೆ’ ಎಂದರು.

‘ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಗುಟ್ಟಾಗಿ ಹಂಚುತ್ತಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮುಖಂಡರೊಬ್ಬರು 25 ಸಾವಿರ ಸೀರೆಗಳನ್ನು ಹಂಚಿದ್ದರು. ನನಗೆ ಅಂತಹ ಭಯ ಇಲ್ಲ. ಉಡುಗೊರೆಗಳನ್ನು ಪಡೆಯಲು ಮತದಾರರು ಪ್ರಾಮಾಣಿಕವಾಗಿ ಬರಬೇಕು. ₹ 28 ಲಕ್ಷ ಚುನಾವಣಾ ವೆಚ್ಚದ ಮಿತಿಯಲ್ಲೇ ಉಡುಗೊರೆಗಳನ್ನು ನೀಡುತ್ತೇನೆ. ಮತದಾರರ ಗುರುತಿನ ಚೀಟಿ ತೋರಿಸಿ ಇವುಗಳನ್ನು ಪಡೆಯಬೇಕು’ ಎಂದರು.

‘222 ಕ್ಷೇತ್ರಗಳಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆದಿರುವುದು ಅನುಮಾನ. ನೀತಿಸಂಹಿತೆ ಘೋಷಣೆಯಾದ ದಿನದಿಂದ ಮೇ 10ರವರೆಗೆ ₹ 87 ಕೋಟಿ ನಗದು, ₹ 24 ಕೋಟಿ ಮೌಲ್ಯದ ನಗದು, ₹ 110 ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ, ₹ 39 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಆಯೋಗ ವಶಪಡಿಸಿಕೊಂಡಿತ್ತು. ಇದರ ಜತೆಗೆ, ಬೆಂಗಳೂರಿನಲ್ಲಿ ಮೇ 7ರಂದು 25 ಸಾವಿರ ಚಡ್ಡಿಗಳು ಜಪ್ತಿಯಾಗಿದ್ದವು. ನಗಣ್ಯ ಎನ್ನುವಷ್ಟು ವಸ್ತುಗಳನ್ನು ಆಯೋಗ ಜಪ್ತಿ ಮಾಡಿದೆ’ ಎಂದರು.

‘ಚುನಾವಣೆಯ ಹಿಂದಿನ ದಿನದವರೆಗೂ ಮತದಾರರಿಗೆ ನಾನಾ ಬಗೆಯ ಆಮಿಷಗಳನ್ನು ಒಡ್ಡಲಾಗಿದೆ. ಅಧಿಕಾರಿಗಳಿಗೆ ಚುನಾವಣೆಯ ಹಿಂದಿನ ಎರಡು ದಿನಗಳು ಮತದಾನಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸಮಯ ಸಾಲುವುದಿಲ್ಲ. ಗೆದ್ದಿರುವ ಬಹುತೇಕ ಮಂದಿ ₹ 5 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದ್ದಾರೆ. ಕೆಲವರಂತೂ ₹ 50 ಕೋಟಿ ವರೆಗೆ ಖರ್ಚು ಮಾಡಿದ್ದಾರಂತೆ. ಆಯೋಗದ ಸಿಬ್ಬಂದಿಯ ಸಹಕಾರ ಇಲ್ಲದೇ ಈ ರೀತಿ ಹಣ ಹಂಚಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಗಂಡಸರಿಗೆ ಲಿಕ್ಕರ್‌ ಇಲ್ಲ!

ಸರ್ಕಾರದ ಹಲವು ಜನಕಲ್ಯಾಣ ಯೋಜನೆಗಳ ಹೊರತಾಗಿಯೂ ರಾಜ್ಯದ ಗ್ರಾಮೀಣ ಭಾಗದಲ್ಲಿ ಬಡತನ ಮುಂದುವರಿಕೆಗೆ ಮದ್ಯಪಾನವೇ ಪ್ರಮುಖ ಕಾರಣ. ಮದ್ಯನಿಷೇಧ ಜಾರಿಯಾಗಬೇಕು ಎಂದು ಒತ್ತಾಯಿಸಿ ನಡೆದ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಜತೆಗೆ, ಇಲ್ಲಿಯವರೆಗೆ ಮದ್ಯಪಾನ ಮಾಡಿಲ್ಲ ಹಾಗೂ ಯಾರಿಗೂ ಮದ್ಯ ಕೊಡಿಸಿಲ್ಲ. ಅದೇ ತತ್ವಾದರ್ಶದ ಹಿನ್ನೆಲೆಯಲ್ಲಿ ವೋಟಿಗಾಗಿಯೂ ‘ಗಂಡಸರಿಗೆ ಲಿಕ್ಕರ್‌ ಕೊಡುತ್ತಿಲ್ಲ’ ಎಂದು ರವಿಕೃಷ್ಣಾ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT