4

ಪ್ರಚಾರದ ಹೊಸ ಬಗೆ ‘ಒಂದಲ್ಲಾ ಎರಡಲ್ಲಾ’!

Published:
Updated:
ಒಂದಲ್ಲಾ ಎರಡಲ್ಲಾ

‘ರಾಮಾ ರಾಮಾ ರೇ...’ ಎಂಬ ಚಿತ್ರ ತನ್ನ ತಾಜಾತನ ಮತ್ತು ಮಾನವೀಯ ಕಥನದ ಮೂಲಕವೇ ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು. ಇದೀಗ ಆ ಚಿತ್ರದ ನಿರ್ದೇಶನ ಡಿ. ಸತ್ಯಪ್ರಕಾಶ್ ತಮ್ಮ ಎರಡನೇ ಚಿತ್ರವನ್ನು ಮುಗಿಸಿದ್ದಾರೆ. ಈ ಚಿತ್ರದ ಹೆಸರು ‘ಒಂದಲ್ಲಾ ಎರಡಲ್ಲಾ’. ಮೊದಲ ಪ್ರಯತ್ನದಲ್ಲಿ ಹುಟ್ಟಿಸಿದ್ದ ಭರವಸೆಯನ್ನು ಇನ್ನಷ್ಟು ಗಟ್ಟಿಗೊಳಿಸುವಂಥ ಗಟ್ಟಿ ಕಥೆಯೊಂದಿಗೆ ಸತ್ಯ ಮರಳಿದ್ದಾರೆ. 

ಇತ್ತೀಚೆಗೆ ‘ಒಂದಲ್ಲಾ ಎರಡಲ್ಲಾ’ ಚಿತ್ರತಂಡ ‘ಪೊಸ್ಟರ್ ಬಿಡುಗಡೆ ಮಾಡಿತ್ತು. ಉದ್ದ ಬಾಲ, ದೊಡ್ಡ ಕಿವಿಗಳ ಬಾಲಕನ ಆಕೃತಿ ಇರುವ ಪೋಸ್ಟರ್ ಕುತೂಹಲ ಹುಟ್ಟಿಸಿತ್ತು. ಇದೀಗ ಹೊಸ ಬಗೆಯಲ್ಲಿ ಚಿತ್ರದ ಪ್ರಚಾರ ಕಾರ್ಯವನ್ನು ತಂಡ ಆರಂಭಿಸಿದೆ. ಚಿತ್ರದ ಕುರಿತು ಜನರಲ್ಲಿ ಕುತೂಹಲ ಹುಟ್ಟಿಸಲು ಹಲವು ಹೊಸ ಪ್ರಚಾರತಂತ್ರಗಳನ್ನು ಅನುಸರಿಸುತ್ತಿದೆ. 

‘ಮನರಂಜನೆಯ ಜತೆಗೆ ಮಾಹಿತಿ’ ಎನ್ನುವುದು ಈ ತಂಡದ ಮೊದಲ ಸೂತ್ರ. ಪ್ರತಿದಿನ ಚಿತ್ರದ ಶೀರ್ಷಿಕೆಯ ಜತೆಗೆ ಒಂದೊಂದು ಕುತೂಹಲಕಾರಿ ಮಾಹಿತಿಯನ್ನು ಕೊಟ್ಟು ಪ್ರೇಕ್ಷಕರ ಗಮನ ಸೆಳೆಯಲು ಮುಂದಾಗಿದೆ. ‘ಒಂದಲ್ಲಾ ಎರಡಲ್ಲಾ’ ಸಿನಿಮಾ ಪ್ರಚಾರದ ಜತೆಜತೆಗೆ ಒಂದಿಷ್ಟು ಹೊಸ ವಿಷಯಗಳನ್ನು ನಾವೂ ತಿಳಿದುಕೊಂಡು ನಿಮಗೂ ತಿಳಿಸುವ ಪ್ರಯತ್ನ ಮಾಡುತ್ತೇವೆ’ ಎಂದು ತಂಡ ಹೇಳಿಕೊಂಡಿದೆ. ನಿನ್ನೆಯಿಂದ (ಜೂನ್ 21)ರಿಂದ ಈ ಅಭಿಯಾನವನ್ನು ಆರಂಭಿಸಿದ್ದು, ಮೊದಲ ದಿನ ‘ಒಂದಲ್ಲಾ ಎಡರಲ್ಲಾ ಸತ್ಯಸಂಗತಿ’ ಎಂಬ ಟ್ಯಾಗ್‌ಲೈನ್‌ನ ಅಡಿಯಲ್ಲಿ ‘ಹಲ್ಮಿಡಿ ಶಾಸನದಲ್ಲಿರುವ ಕನ್ನಡ ಪದಗಳ ಸಂಖ್ಯೆ 20’ ಎಂಬ ಮಾಹಿತಿಯನ್ನು ನೀಡಿದ್ದಾರೆ. ಎರಡನೇ ದಿನ ‘ಕರ್ನಾಟಕದಲ್ಲಿರುವ ಹಳ್ಳಿಗಳ ಸಂಖ್ಯೆ ಒಂದಲ್ಲಾ ಎರಡಲ್ಲಾ, 29406’ ಎಂದು ತಿಳಿಸಿದೆ. 

ಮಾಹಿತಿಯೊಂದರಿಂದಲೇ ಅಲ್ಲ, ಅದನ್ನು ನೀಡುವ ವಿನ್ಯಾಸವೂ ಗಮನಸೆಳೆಯುವಂತಿದೆ. 

‘ಎಲ್ಲರೂ ಟ್ರೈಲರ್ ರಿಲೀಸ್, ಸಾಂಗ್ ರಿಲೀಸ್, ಟೀಸರ್ ರಿಲೀಸ್ ಅಂತಲೇ ಪ್ರಚಾರ ಮಾಡುತ್ತಾರೆ. ನಾವು ಹೊಸದೇನಾದರೂ ಮಾಡಬೇಕು ಎಂದುಕೊಂಡೆವು. ಮುಗ್ಧತೆಯೇ ಈ ಚಿತ್ರದ ಜೀವಾಳ. ಮಗುಮನಸ್ಸಿನ ಮುಗ್ಧತೆಯ ಭಿತ್ತಿಯಲ್ಲಿಯೇ ರೂಪುಗೊಂಡಿರುವ ಚಿತ್ರವಿದು. ಹಾಗಾಗಿಯೇ ಮಕ್ಕಳಿಗೆ, ಹಿರಿಯರಿಗೆ ಎಲ್ಲರಿಗೂ ಹೊಸ ಹೊಸ ವಿಷಯಗಳನ್ನು ತಿಳಿಸಬೇಕು ಎಂದು ಈ ರೀತಿ ಪ್ರಚಾರ ಮಾಡಲು ನಿರ್ಧರಿಸಿದೆವು’ ಎನ್ನುತ್ತಾರೆ ನಿರ್ದೇಶಕ ಸತ್ಯಪ್ರಕಾಶ್.

ಚಿತ್ರ ಬಿಡುಗಡೆಯಾಗುವವರೆಗೂ ಪ್ರತಿದಿನ ಇಂಥ ಹೊಸ ವಿಷಯವೊಂದನ್ನು ಹಂಚಿಕೊಳ್ಳುವ ತಯಾರಿಯನ್ನೂ ಅವರು ಮಾಡಿಕೊಂಡಿದ್ದಾರೆ.

‘ಸಾಮಾನ್ಯವಾಗಿ ಸಿನಿಮಾ ಸುದ್ದಿಗಳನ್ನು ಸಿನಿಮಾ ಬಗ್ಗೆ ಆಸಕ್ತಿ ಇರುವವರಷ್ಟೇ ನೋಡುತ್ತಾರೆ. ಆದರೆ ಇಂಥ ಸಾಮಾನ್ಯಜ್ಞಾನದ ಸಂಗತಿಗಳನ್ನು ಕೊಡುತ್ತ ಹೋದರೆ ಅದು ಉಳಿದ ವರ್ಗದವರಿಗೂ ಇಷ್ಟವಾಗುತ್ತದೆ. ಸಿನಿಮಾ ಪ್ರೇಕ್ಷಕರ ಹೊರತಾದ ಬೇರೆ ಹೊಸ ಜನರನ್ನೂ ಇತ್ತ ಸೆಳೆಯುವುದು ನಮ್ಮ ಉದ್ದೇಶ’ ಎಂದು ಸತ್ಯ ಪ್ರಕಾಶ್ ವಿವರಿಸುತ್ತಾರೆ. 

ಈ ಮಾಹಿತಿ ಅಭಿಯಾನದ ಜತೆಜತೆಗೆ ಬೇರೆ ಬೇರೆ ಬಗೆಯ ಪ್ರಚಾರತಂತ್ರಗಳ ಮೂಲಕ ಜನರನ್ನು ತಲುಪಲೂ ತಂಡ ಸಜ್ಜುಗೊಂಡಿದೆ. ಇಂದಿನಿಂದ (ಜುಲೈ 22) ಚಿತ್ರೀಕರಣದಲ್ಲಿ ಉಂಟಾದ ಹಾಸ್ಯಮಯ ಸನ್ನಿವೇಶಗಳನ್ನು ತೋರಿಸುವ ವಿಡಿಯೊ ತುಣುಕುಗಳನ್ನು ಪ್ರತಿದಿನ ಒಂದೊಂದರಂತೆ ಬಿಡುಗಡೆ ಮಾಡುತ್ತಿದೆ. 

ಆಗಸ್ಟ್‌ ತಿಂಗಳಲ್ಲಿ ‘ಒಂದಲ್ಲಾ ಎರಡಲ್ಲಾ’ ತೆರೆಯ ಮೇಲೆ ತೋರಿಸುವ ಯೋಜನೆಯನ್ನು ಅವರು ಹಾಕಿಕೊಂಡಿದ್ದಾರೆ. ಸ್ಮಿತಾ ಉಮಾಪತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !