’ಓದು ತಲೆಗತ್ತಲಿಲ್ಲ, ಸಂಗೀತ ಕೈ ಹಿಡಿಯಿತು’

7
ಅತ್ಯಾಧುನಿಕ ರೆಕಾರ್ಡಿಂಗ್ ಸೌಲಭ್ಯದ ರವಿತೇಜಾ ಸ್ಟುಡಿಯೊ 

’ಓದು ತಲೆಗತ್ತಲಿಲ್ಲ, ಸಂಗೀತ ಕೈ ಹಿಡಿಯಿತು’

Published:
Updated:
Deccan Herald

ಬಾಗಲಕೋಟೆ: ‘ಅಪ್ಪ ಹನುಮಂತ ಹಾದಿಮನಿ ಬೆಂಗಳೂರಿನಲ್ಲಿ ಬಿಎಸ್‌ಎನ್‌ಎಲ್‌ ಉದ್ಯೋಗಿಯಾದ್ದರು. ಹಾಗಾಗಿ ಬಾಲ್ಯ ಅಲ್ಲಿಯೇ ಕಳೆಯಿತು. ಚಿಕ್ಕಂದಿನಲ್ಲಿ ಓದುವುದರಲ್ಲಿ ಹಿಂದುಳಿದಿದ್ದೆ. ಬಾತ್‌ರೂಂನಲ್ಲಿ ಕುಳಿತು ಹಾಡು ಗುನುಗುವುದು ಕಂಡು ಓದಂತೂ ತಲೆಗೆ ಹತ್ತುವುದಿಲ್ಲ ಸಂಗೀತವನ್ನಾದರೂ ಕಲಿ ಎಂದು ಅಲ್ಲಿನ ಐದನೇ ತರಗತಿಯಲ್ಲಿದ್ದಾಗಲೇ ವಿಜಯಾ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಕರೆದೊಯ್ದು ಸಂಗೀತ ಶಾಲೆಗೆ ಹಾಕಿದರು’.

ಹೀಗೆಂದು ಬಾಲ್ಯದಲ್ಲಿ ಸಂಗೀತದ ಓನಾಮ ಕಲಿಕೆ ದಿನಗಳನ್ನು ಇಲ್ಲಿನ ನವನಗರದ ಆರ್‌.ಟಿ.ರೆಕಾರ್ಡಿಂಗ್ ಸ್ಟುಡಿಯೊದ ಮಾಲೀಕ ರವಿತೇಜಾ ನೆನಪಿಸಿಕೊಂಡರು. ಅತ್ಯಾಧುನಿಕ ಧ್ವನಿಗ್ರಹಣ ಉಪಕರಣಗಳೊಂದಿಗೆ ಸಜ್ಜುಗೊಂಡಿರುವ ಆರ್‌.ಟಿ.ಸ್ಟುಡಿಯೊ ಈಗ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರನಿರ್ಮಾಪಕರ ಸ್ನೇಹಿ ಎನಿಸಿದೆ. ದೂರದ ದಾವಣಗೆರೆಯಿಂದ ತಮ್ಮ ’ಹುಲಿ ಘರ್ಜನೆ’ ಚಿತ್ರದ ಸಂಗೀತದ ಧ್ವನಿಮುದ್ರಣಕ್ಕೆ ಬಂದಿದ್ದ ನಿರ್ದೇಶಕ ಕೆ.ಅಮಾನುಲ್ಲಾ ಅದನ್ನು ಅನುಮೋದಿಸಿದರು. 

ವಿಜಯಾ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಗೀತ ಕಲಿಕೆ ಆರಂಭಿಸಿದರೂ ಸಪ್ತ ಸ್ವರದ ತಲಸ್ಪರ್ಶಿ ಜ್ಞಾನ ದೊರೆತದ್ದು ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಅವರ ಶಿಷ್ಯತ್ವದಿಂದ ಎಂದು ಹೇಳುವ ರವಿತೇಜ, ಸಂಗೀತದ ಒಲವಿನ ಕಾರಣ ಎಸ್‌ಎಸ್‌ಎಲ್‌ಸಿ ಕಷ್ಟಪಟ್ಟು ಪೂರ್ಣಗೊಳಿಸಿದೆ. ಮುಂದೆ ಓದಲಿಲ್ಲ. ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಗಂಧರ್ವ ಮೆಲೋಡಿಸ್ ಹೆಸರಿನಲ್ಲಿ ಆರ್ಕೆಸ್ಟ್ರಾ ಮಾಡಿ 9 ವರ್ಷ ನಡೆಸಿದೆ ಆದರೆ ಅದು ಬದುಕಿಗೆ ದಾರಿಯಾಗಲಿಲ್ಲ. ಸಂಗೀತ ನಿರ್ದೇಶಕನಾಗಬೇಕು ಎಂಬ ಕನಸು ನನಸಾಗಲು ಸಾಧ್ಯವಾಗಲಿಲ್ಲ. ಹಾಗಾಗಿ ಸ್ವಂತ ಸ್ಟುಡಿಯೊ ಮಾಡಿ ಅದನ್ನು ಬದುಕಿಗೆ ದಾರಿಯಾಗಿಸಿಕೊಳ್ಳುವ ಜೊತೆಗೆ ಸಂಗೀತ ನಿರ್ದೇಶಿಸುವ ಕಾರ್ಯಕ್ಕೆ ಮುಂದಾದೆ ಎನ್ನುತ್ತಾರೆ.

‘ಅದೊಮ್ಮೆ ಸ್ಪ್ಲೆಂಡರ್ ಬೈಕ್ ಖರೀದಿಗೆಂದು ಹೊರಟಿದ್ದೆ. ಆಗ ಅಮ್ಮ ರೇಣುಕಾ, ಬೈಕ್ ಬೇಡ ಅದೇ ದುಡ್ಡಿನಲ್ಲಿ ಕಂಪ್ಯೂಟರ್ ಕೊಂಡುಕೊಳ್ಳುವಂತೆ ಹೇಳಿದರು. ಆಗ ಖರೀದಿಸಿದ ಕಂಪ್ಯೂಟರ್ ನನಗೆ ಸಂಗೀತ ಸಂಯೋಜನೆಗೆ ನೆರವಾಯಿತು. ಕ್ರಮೇಣ ಒಂದೊಂದೇ ಧ್ವನಿಗ್ರಹಣ ಯಂತ್ರ ಕೊಳ್ಳತೊಡಗಿದೆ. ಆಗ ಸ್ವಂತ ಸ್ಟುಡಿಯೊ ಮಾಡುವ ಕನಸು ಕುಡಿಯೊಡೆಯಿತು. ಅಪ್ಪ ಒಂದಷ್ಟು ಹಣ ಕೊಟ್ಟರು. ದುಡಿದು ಕೂಡಿಟ್ಟಿದ್ದ ಒಂದಷ್ಟು ಹಣ, ಬ್ಯಾಂಕ್‌ ಸಾಲ ಸೇರಿಸಿ ₹15 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸ್ಟುಡಿಯೊ ಸಜ್ಜುಗೊಳಿಸಿದೆ. ಬೆಂಗಳೂರಿನ ಬದಲು ಅಪ್ಪ–ಅಮ್ಮನ ಊರು ಬಾಗಲಕೋಟೆಯಲ್ಲಿಯೇ ಸಂಗೀತ ಸೇವೆ ಆರಂಭಿಸಿದೆ. ಸ್ವರ ಸಂಯೋಜನೆ ಹಾಗೂ ರೆಕಾರ್ಡಿಂಗ್‌ಗೆ ಸಂಬಂಧಿಸಿದ ಎಲ್ಲಾ ಉಪಕರಣಗಳು ಇಲ್ಲಿವೆ’ ಎಂದು ಹೇಳುತ್ತಾರೆ.

ಸಿನಿಮಾ ಸಂಗೀತ, ಜಾನಪದ, ಭಾವಗೀತೆ, ಭಕ್ತಿಗೀತೆಗಳ ಧ್ವನಿಸುರಳಿ ರೆಕಾರ್ಡಿಂಗ್‌, ಕರೋಕೆ ಹಾಡುಗಾರಿಕೆಯ ಮುದ್ರಣಕ್ಕೆ  ಬೆಂಗಳೂರಿಗೆ ಎಡತಾಕುವ ಅಗತ್ಯವಿಲ್ಲ. ಅಲ್ಲಿ ₹1 ರೂಪಾಯಿ ಖರ್ಚು ಮಾಡಿದರೆ ಆಗುವ ಕೆಲಸ ಅಷ್ಟೇ ಗುಣಮಟ್ಟದಲ್ಲಿ ಇಲ್ಲಿ 50 ಪೈಸೆಗೆ ಆಗುತ್ತದೆ ಎಂದು ಹೇಳುವ ರವಿತೇಜಾ, ತಿಂಗಳಿಗೆ ₹40ರಿಂದ 50 ಸಾವಿರ ದುಡಿಯುತ್ತಿದ್ದಾರೆ. ಜೊತೆಗೆ ಸ್ವತಂತ್ರವಾಗಿ ಸಂಗೀತ ನಿರ್ದೇಶಿಸುವ ಕನಸನ್ನು ಕೈಗೂಡಿಸಿಕೊಂಡು ನಾಲ್ಕೂವರೆ ವರ್ಷಗಳಲ್ಲಿ 11 ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ.

ಹೊಸಬರಿಗೆ ಅವಕಾಶ:

ರವಿತೇಜಾ ನಿರ್ದೇಶನದಲ್ಲಿ ಸ್ಟುಡಿಯೊಗೆ ಇಲ್ಲಿಯವರೆಗೆ 150ಕ್ಕೂ ಹೆಚ್ಚು ಮಂದಿ ಬಂದು ಹಾಡಿದ್ದಾರೆ. ‘ಹೊಸಬರಿಗೆ ಹೆಚ್ಚು ಅವಕಾಶ ನೀಡಿರುವೆ. ನಾನು ಸಂಗೀತ ನೀಡಿದ್ದ ’ಖೊಟ್ಟಿ ಪೈಸೆ’ ಸಿನಿಮಾ 50 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈಗ ಮಕ್ಕಳ ಚಿತ್ರ ’ಕೈರೊಟ್ಟಿ’ ಬಿಡುಗಡೆಗೆ ಸಿದ್ಧವಾಗಿದೆ. ಆರ್.ಟಿ.ಸ್ಟುಡಿಯೊದಲ್ಲಿ ಮೊದಲ ಬಾರಿಗೆ ಹಾಡಿದ್ದ ವೈದ್ಯೆ ಡಾ.ಅಶ್ವಿನಿ ಹಳ್ಳದ ಅವರಿಗೆ ಮುಂದೆ ಪಾನಿಪುರಿ ಹೆಸರಿನ ದೊಡ್ಡ ಸಿನಿಮಾದಲ್ಲಿ ಹಾಡಲು ಅವಕಾಶ ಸಿಕ್ಕಿತ್ತು’ ಎನ್ನುತ್ತಾರೆ.

‘ಇಲ್ಲಿ ಸ್ಟುಡಿಯೊ ಮಾಡಿದಾಗ ಹಲವರು ನಕ್ಕರು. ಸಿನಿಮಾದವರು ಧ್ವನಿಗ್ರಹಣಕ್ಕೆ ಬೆಂಗಳೂರು, ಹುಬ್ಬಳ್ಳಿ ಬದಲಿಗೆ ಇಲ್ಲಿಗೇಕೆ ಬರುತ್ತಾರೆ ಎಂದು ವ್ಯಂಗ್ಯವಾಡಿದರು. ಕೆಲಸ ಚೆನ್ನಾಗಿದೆ. ಗುಣಮಟ್ಟದ ಸೇವೆ ಕೊಡುತ್ತಾರೆ ಎಂದರೆ ಎಲ್ಲಿದ್ದರೂ ಹುಡುಕಿಕೊಂಡು ಬರುತ್ತಾರೆ ಹಾಗಾಗಿ ಹಗಲು–ರಾತ್ರಿ ಕಷ್ಟಪಟ್ಟು ಎಲ್ಲರೂ ಗುರುತಿಸುವಂತೆ ಮಾಡಿದ್ದೇನೆ’ ಎಂದು ಹೇಳುವ ರವಿತೇಜ, ಕನ್ನಡ, ಹಿಂದಿ ಹಾಗೂ ಲಂಬಾಣಿ ಭಾಷೆಯಲ್ಲಿ ಸಂಗೀತ ನಿರ್ದೇಶನ ಹಾಗೂ ರೆಕಾರ್ಡಿಂಗ್ ಕೆಲಸ ಮಾಡುತ್ತಾರೆ. ರವಿತೇಜಾ ಸಂಪರ್ಕ ಸಂಖ್ಯೆ: 8660154223.

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !