ನಯಾಗರವಲ್ಲ, ಬೀಜಿಂಗ್‌ನಲ್ಲಿ ನಗರದೊಳಗೇ ಜಲಪಾತ

7

ನಯಾಗರವಲ್ಲ, ಬೀಜಿಂಗ್‌ನಲ್ಲಿ ನಗರದೊಳಗೇ ಜಲಪಾತ

Published:
Updated:

ನಗರವಾಸಿಗಳಿಗೆ ಅದರಲ್ಲೂ ಮುಖ್ಯವಾಗಿ ಬೆಂಗಳೂರು, ಮುಂಬೈನಂತಹ ದೊಡ್ಡ ನಗರಗಳಲ್ಲಿ ಹಸಿರು ನೋಡುವುದೇ ಅಪರೂಪವಾಗುತ್ತಿದೆ. ಇಲ್ಲಿನ ವಾಸಿಗಳು ಜಲಪಾತ  ನೋಡಬೇಕೆಂದರೆ ನೂರಾರು ಕಿ.ಮೀ ಪ್ರಯಾಣಿಸಬೇಕು. ಕೆಲಸಕ್ಕೆ ರಜೆ ಕೂಡ ಹಾಕಬೇಕು. ಈ ಕಾರಣದಿಂದಾಗಿಯೇ, ಬಹುತೇಕರು, ನಗರದಲ್ಲಿ ಒಂದಾದರೂ ಜಲಪಾತ ಇರಬಾರದಿತ್ತೇ ಎಂದು ಹತಾಶೆ ವ್ಯಕ್ತಪಡಿಸುತ್ತಾರೆ.

ಇದೇ ಯೋಚನೆ ಚೀನಾದ ಕಟ್ಟಡ ನಿರ್ಮಾಣ ಸಂಸ್ಥೆಯೊಂದಕ್ಕೆ ಕಾಡಿತು. ನಗರದಲ್ಲೇ ಜಲಪಾತವನ್ನು ಏಕೆ ಸೃಷ್ಟಿಸಬಾರದು ಎಂಬ ಆಲೋಚನೆ ಬಂತು. ಇಷ್ಟಕ್ಕೂ ಹರಿಯುತ್ತಿರುವ ನೀರು, ಸುರಿಯುತ್ತಿರುವ ಮಳೆ ಅಥವಾ ಜಲಪಾತಗಳನ್ನು ನೋಡುತ್ತಿದ್ದರೆ ಮಾನಸಿಕ ಒತ್ತಡ ನಿಯಂತ್ರಿಸಬಹುದು. ಆಹ್ಲಾದಕರ ವಾತಾವರಣ ಉಂಟು ಮಾಡಬಹುದು. ನೀರು ಹರಿಯುವ, ಧುಮ್ಮಿಕ್ಕುವ ಸದ್ದು ಜನರಿಗೆ ಸಂತಸದ ಅನುಭೂತಿ ನೀಡುತ್ತದೆ. ಇದೇ ಕಾರಣಕ್ಕೆ ಚೀನಾದ ಸಂಸ್ಥೆ ಗಗನಚುಂಬಿ ಕಟ್ಟಡದಲ್ಲಿ ಬೃಹತ್‌ ಜಲಪಾತ ಸೃಷ್ಟಿಸಿ ಗಮನಸೆಳೆದಿದೆ. 

ಚೀನಾದ ಗುಯಂಗ್ ನಗರದಲ್ಲಿ ಲುಧಿ ಎಂಬ ಕಟ್ಟಡ ನಿರ್ಮಾಣ ಸಂಸ್ಥೆ ಬಹುಪಯೋಗಿ ಗಗನ ಚುಂಬಿ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಿತ್ತು. ಆದರೆ ಉಳಿದ ಎಲ್ಲ ಕಟ್ಟಡಗಳಿಗಿಂತ ಭಿನ್ನವಾಗಿ ಮತ್ತು ಎಲ್ಲರ ಗಮನ ಸೆಳೆಯುವಂತಹ ಆಕರ್ಷಕ ಕಟ್ಟಡ ತಮ್ಮದಾಗಬೇಕು ಎಂದು ಯೋಚಿಸಿತು. ಇದಕ್ಕಾಗಿ ಶ್ರಮ ವಹಿಸಿ ತಮ್ಮ ಕಟ್ಟಡದಲ್ಲೇ ನಯನ ಮನೋಹರ ಜಲಪಾತ ಸೃಷ್ಟಿಸಿತು. 

ಕಟ್ಟಡ ನಿರ್ಮಾಣ ಸಂಪೂರ್ಣವಾಗಿ ಮುಗಿಯದಿದ್ದರೂ, ಈಗಾಗಲೇ ಜಲಪಾತ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಸದಾ ಸಂಚಾರ ದಟ್ಟಣೆ, ಬಿಡುವಿಲ್ಲದ ಕೆಲಸ ಇತ್ಯಾದಿ ಸಮಸ್ಯೆಗಳಿಂದ ಹೈರಾಣಾಗಿರುವ ನಗರವಾಸಿಗಳಿಗೆ ಇದು ಇಷ್ಟವಾಗಲಿದೆ ಎಂಬುದು ಸಂಸ್ಥೆಯ ಅಭಿಪ್ರಾಯ. ಇದು ವಿಶ್ವದಲ್ಲೇ ಅತೀ ಎತ್ತರದ ಕೃತಕ ಜಲಪಾತವಾಗಿದೆ.

ಆದರೆ ಸಂಸ್ಥೆಯ ಈ ಪ್ರಯೋಗ ಜನರ ಮೆಚ್ಚುಗೆ ಗಳಿಸಲು ವಿಫಲವಾಗಿದೆ. ಬಹುತೇಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಇದರಿಂದ ಹಣ ಮತ್ತು ನೀರು ಪೋಲಾಗುವುದು ಬಿಟ್ಟರೆ, ಬೇರೆ ಯಾವ ಸಾಧನೆಯೂ ಇಲ್ಲ ಎಂದು ಟೀಕಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !